ವೃದ್ಧಾಪ್ಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ವೃದ್ಧಾಪ್ಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

LK   ¦    Nov 26, 2017 10:34:05 AM (IST)
ವೃದ್ಧಾಪ್ಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ವಯಸ್ಸಾದಂತೆಲ್ಲ ನಮ್ಮ ದೇಹದಲ್ಲಿ ಒಂದಷ್ಟು ಬದಲಾವಣೆಯಾಗುವುದು ಸಹಜ. ಸ್ವಲ್ಪ ನಡೆದರೂ ಸುಸ್ತು. ಊಟ ಮಾಡಿದರೂ ಅದು ಜೀರ್ಣವಾಗದ ಸಮಸ್ಯೆ. ಆಗಿಂದಾಗ್ಗೆ ತಗಲುವ ರೋಗಗಳು. ಹೀಗೆ ಹಲವು ಸಮಸ್ಯೆಗಳು ಕಾಡುವುದು ಸಹಜ.

ಹಾಗೆ ನೋಡಿದರೆ ಸಾವಿನ ಮುನ್ಸೂಚನೆಯೇ ಮುಪ್ಪು ಎನ್ನಲಾಗುತ್ತದೆ. ಹೀಗಾಗಿ ಮನುಷ್ಯ ವಯಸ್ಸಾಗುತ್ತಾ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತಾ ಹೋಗುತ್ತಾನೆ. ಹೀಗಾಗಿ ಮುಪ್ಪಿನ ಕಾಲದಲ್ಲಿ ಇದ್ದಷ್ಟು ದಿನ ಒಂದಷ್ಟು ಆರೋಗ್ಯವಾಗಿ ಬದುಕಬೇಕಾದರೆ ಒಂದಷ್ಟು ಎಚ್ಚರಿಕೆ, ಮತ್ತೊಂದಷ್ಟು ಆರೋಗ್ಯಕಾರಿ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ.

ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲ ರೀತಿಯ ಹಂತಗಳನ್ನು ದಾಟಿ ಮುನ್ನಡೆಯುತ್ತಾ ಮುಪ್ಪಿನತ್ತ ಸಾಗಲೇ ಬೇಕು. ಮುಪ್ಪಿನ ಕಾಲದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ ಅಷ್ಟೇ ಒಳ್ಳೆಯದು. ಆದ್ದರಿಂದ ಇದ್ದಷ್ಟು ದಿನ ಆರೋಗ್ಯಕರ, ಉತ್ಸಾಹಭರಿತ ಮತ್ತು ಸ್ವ್ವಾತಂತ್ರ್ಯ ಜೀವನ ನಡೆಸಬೇಕಾದರೆ  ಕೆಲವೊಂದು ಆರೋಗ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.

ಶಾರೀರಿಕವಾಗಿ ಮತ್ತು ದೇಹದಲ್ಲಿ ನಡೆಯುವ ಕ್ರಿಯೆಗಳಲ್ಲಿ ಒಂದಷ್ಟು ಬದಲಾವಣೆಯಾಗುವುದರಿಂದ ಆಹಾರ ಕ್ರಮಗಳತ್ತವೂ ಎಚ್ಚರಿಕೆಯಿಂದ ಇರಬೇಕು. ನಮ್ಮ ದೇಹಕ್ಕೆ ಹೊಂದುವ ಆಹಾರ ಪದಾರ್ಥವನ್ನು ಮಾತ್ರ ಸೇವಿಸಬೇಕು.

ವಯಸ್ಸಾದವರಲ್ಲಿ ಮೂಳೆಗಳ ದೌರ್ಬಲ್ಯ ಕಂಡುಬರುತ್ತದೆ. ಹೆಂಗಸರಲ್ಲಿ ಋತುಚಕ್ರ ನಿಂತ ಬಳಿಕ ಶರೀರರದಲ್ಲಿ ಈಸ್ಟ್ರೋಜನ್ ಉತ್ಪಾದನೆ ಕಡಿಮೆಯಾಗುವುದು ಮೂಳೆ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಕರುಳಿನಲ್ಲಿ ಕ್ಯಾಲಿಯಂ ಹೀರುವಿಕೆ ಡಿ ಜೀವಸತ್ವದ ಉತ್ಪಾದನೆ ಹಾಗೂ ಶಾರೀರಿಕ ಚಟುವಟಿಕೆಗಳು ಕಡಿಮೆಯಾಗುವುದು ಕೂಡ ಮೂಳೆಗಳು ಸವೆಯಲು ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆ ಪಡೆದು ಕ್ಯಾಲ್ಸಿಯಂ ಹಾಗೂ ಡಿ ಜೀವಸತ್ವವಿರುವ ಮಾತ್ರೆಗಳನ್ನು ಸೇವಿಸ ಬಹುದಾಗಿರುತ್ತದೆ.

ಇನ್ನು ಜೀವಕೋಶಗಳ ಆಂತರಿಕ ಕ್ರಿಯೆ ಕುಗ್ಗುವುದರಿಂದ ದೈಹಿಕ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಖನಿಜಾಂಶದ ಕೊರತೆಯಿಂದ ಮೂಳೆಗಳು ಶಕ್ತಿ ಕಳೆದುಕೊಳ್ಳುತ್ತವೆ. ಹಲ್ಲು ಮತ್ತು ವಸಡುಗಳು ದುರ್ಬಲಗೊಳ್ಳುತ್ತವೆ. ಇದರಿಂದ ಹಲ್ಲು ಉದುರುತ್ತದೆ. ಇನ್ನು ಬಾಯಲ್ಲಿ ಜೊಲ್ಲು ರಸದ ಉತ್ಪಾದನೆಯೂ ಹೆಚ್ಚಿನ ಪ್ರಮಾಣದಲ್ಲಿ ಆಗದೆ ಬಾಯಿ ಒಣಗುತ್ತಿರುತ್ತದೆ. ಇದರಿಂದ ಆಹಾರವನ್ನು ಅಗೆಯಲು ಮತ್ತು ನುಂಗಲು ಕಷ್ಟವಾಗುತ್ತದೆ.

ನಾಲಿಗೆಯ ಮೇಲಿರುವ ರುಚಿಗ್ರಂಥಿಗಳ ಶಕ್ತಿ ಕುಗ್ಗುವುದರಿಂದ ಆಹಾರದಲ್ಲಿರುವ ಉಪ್ಪು, ಹುಳಿ, ಖಾರ ಸೇರಿದಂತೆ ಒಟ್ಟಾರೆ ರುಚಿಯನ್ನು ಗ್ರಹಿಸುವ ಶಕ್ತಿಯೂ ಕಡಿಮೆಯಾಗಿ ಹಸಿವಾಗುವುದಿಲ್ಲ. ಹಸಿವೇ ಇಲ್ಲದಿದ್ದಾಗ ಊಟ ಮಾಡುವುದಾದರೂ ಹೇಗೆ? ಹೀಗಾಗಿ ಆಹಾರ ಸೇವನೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುತ್ತದೆ.

ಬೊಜ್ಜಿನ ಸಮಸ್ಯೆಯೂ ಹೆಚ್ಚಿನವರನ್ನು ಕಾಡುತ್ತದೆ. ಇದಕ್ಕೆ ಕಾರಣ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೆ ಇರುವುದು, ವ್ಯಾಯಾಮ ಮಾಡದಿರುವುದು, ಪಥ್ಯಗಳಿಲ್ಲದ, ಶರೀರಕ್ಕೆ ಹೊಂದದ ಆಹಾರ ಮತ್ತು ಅಗತ್ಯಕ್ಕಿಂತ ಹೆಚ್ಚು ಸೇವನೆಯೂ ಬೊಜ್ಜು ಬರಲು ಸಹಕರಿಸುತ್ತದೆ. ಬೊಜ್ಜು ದೇಹ ಮಧುಮೇಹ ಬರಲು ದಾರಿ ಮಾಡಿಕೊಡುತ್ತದೆ. ಮುಂದೆ ಒಂದು ಕಾಯಿಲೆ ಬಂದರೆ ಅದು ಮತ್ತೊಂದು ಕಾಯಿಲೆ ಬರಲು ಅನುವು ಮಾಡಿಕೊಡಬಹುದು.

ನಿದ್ರೆ ಬಾರದಿರುವುದು, ಸುಸ್ತು, ಏನೋ ಒಂದು ರೀತಿಯ ಕಳವಳ, ಮಲಬದ್ಧತೆ. ರಕ್ತ ಹೀನತೆಯೂ ಕಾಡುತ್ತಿರುತ್ತದೆ. ರಕ್ತ ಹೀನತೆಯಿಂದ ಬಳಲುವವರು ಸಿ ಜೀವಸತ್ವ ಇರುವ ಸೊಪ್ಪು ತರಕಾರಿ, ಕಾಳುಗಳು, ಅತ್ತಿಹಣ್ಣು, ಲಿವರ್, ಮೊಟ್ಟೆ, ಸೋಯಾಬಿನ್ ಮೊದಲಾದವುಗಳನ್ನು ಸೇವಿಸಬೇಕು.

ನಾರಿನ ಅಂಶ ಹೆಚ್ಚಿರುವ ತರಕಾರಿಗಳನ್ನು ಮತ್ತು ಹೆಚ್ಚು ಪ್ರಮಾಣದಲ್ಲಿ ನೀರು ಸೇವಿಸುವುದು ಉತ್ತಮ. ನಿಯಮಿತ ಆಹಾರ ಸೇವನೆ, ವ್ಯಾಯಾಮ ಮಾಡಿದರೆ, ಮಲಬದ್ಧತೆ, ಉಬ್ಬಸ ಮೊದಲಾದವುಗಳನ್ನು ದೂರ ಮಾಡಿ ಲವಲವಿಕೆಯಿಂದ ಇರಲು ಸಾಧ್ಯವಾಗಲಿದೆ.

ವೃದ್ಧಾಪ್ಯದಲ್ಲಿ ಬೇರೆ ಬೇರೆ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂಬ ಬಯಕೆಗಳು ಸಹಜವಾಗಿ ಬರಬಹುದು. ಹಾಗಂತ ಯೌವನದಲ್ಲಿದ್ದಾಗ ಸೇವಿಸಿದಂತೆ ಇಷ್ಟವಾದ ಆಹಾರವನ್ನೆಲ್ಲ ಸೇವಿಸುವುದು ಒಳ್ಳೆಯದಲ್ಲ. ಏಕೆಂದರೆ ಕೆಲವು ಆಹಾರ ಪದಾರ್ಥಗಳು ದೇಹಕ್ಕೆ ಹೊಂದದೆ ಸಮಸ್ಯೆಗಳನ್ನುಂಟು ಮಾಡಬಹುದು. ಆದ್ದರಿಂದ ಅಂತಹ ಆಹಾರಗಳನ್ನು ತ್ಯಜಿಸಿ ಆದಷ್ಟು ದ್ರವ ಪದಾರ್ಥಗಳನ್ನು, ಅಷ್ಟೇ ಅಲ್ಲ ಬೇಗ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಉತ್ತಮ.