ತಲೆನೋವೆಂದು ಉದಾಸೀನತೆ ತೋರದಿರಿ..!

ತಲೆನೋವೆಂದು ಉದಾಸೀನತೆ ತೋರದಿರಿ..!

LK   ¦    Sep 11, 2018 12:46:08 PM (IST)
ತಲೆನೋವೆಂದು ಉದಾಸೀನತೆ ತೋರದಿರಿ..!

ತಲೆನೋವು ಬಹಳಷ್ಟು ಮಂದಿಯನ್ನು ಕಾಡುತ್ತಿರುತ್ತದೆ. ಕೆಲವರಿಗೆ ಯಾವಾಗ ಬರುತ್ತೆ ಎಂದು ಹೇಳಲಾಗುವುದಿಲ್ಲ. ಸ್ವಲ್ಪ ಟೆನ್ಷನ್ ಮಾಡಿಕೊಂಡರೆ, ನಿದ್ದೆಗೆಟ್ಟರೆ ಹೀಗೆ ಹಲವು ಕಾರಣಗಳಿಗೆ ಬಾಧಿಸಿಬಿಡುತ್ತದೆ.

ಕೆಲವರು ತಲೆನೋವಿಗೆ ಮನೆ ಮದ್ದು ಮಾಡಿಕೊಂಡೋ, ನೋವು ನಿವಾರಕ ಮಾತ್ರೆ ಸೇವಿಸಿಯೋ ಹೇಗೋ ಒಟ್ಟಾರೆ ತಲೆನೋವನ್ನು ಶಮನ ಮಾಡಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಈ ತಲೆನೋವು ಬಹು ಬೇಗ ಮಾಯವಾಗಿ ರಿಲ್ಯಾಕ್ಸ್ ಆಗಬಹುದು. ಆದರೆ ಇನ್ನು ಕೆಲವೊಮ್ಮೆ ಇನ್ನಿಲ್ಲದಂತೆಯೂ ಕಾಡಬಹುದು.

ಇಷ್ಟಕ್ಕೂ ಈ ತಲೆನೋವನ್ನು ನಾವು ಇತ್ತೀಚೆಗಿನ ದಿನಗಳಲ್ಲಿ ಹಗುರವಾಗಿ ಪರಿಗಣಿಸುವಂತಿಲ್ಲ ಕಾರಣ ನಮ್ಮನ್ನು ಆಗಾಗ್ಗೆ ಕಾಡುವ ತಲೆನೋವು ಮೈಗ್ರೇನ್ ಆಗಿದ್ದರೂ ಅಚ್ಚರಿ ಪಡಬೇಕಾಗಿಲ್ಲ.

ಅಧ್ಯಯನ ಪ್ರಕಾರ ವಿಶ್ವದ ಶೇ.10ರಷ್ಟು ಮಂದಿ ಇವತ್ತು ಮೈಗ್ರೇನ್‍ನಿಂದ ಬಳಲುತ್ತಿದ್ದಾರಂತೆ. ಮೈಗ್ರೇನ್ ಬಂದರೆ ಬರೀ ತಲೆನೋವು ಮಾತ್ರವಲ್ಲದೆ ವಾಂತಿ, ಕಾಲುಗಳಲ್ಲಿ ಜುಮುಗುಟ್ಟುವಿಕೆ ಹೀಗೆ ಬೇರೆ ಬೇರೆ ತೊಂದರೆ ಕಾಣಿಸಬಹುದು. ಜತೆಗೆ ಮೈಗ್ರೇನ್‍ನ ನೋವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಲೂ ಬಹುದು. ಕೆಲವರಿಗೆ ಕೆಲ ಗಂಟೆಗಳ ಕಾಲ ನೋವು ಕಾಣಿಸಿಕೊಂಡು ಶಮನವಾಗಬಹುದು. ಇನ್ನು ಕೆಲವರಿಗೆ ದಿನಪೂರ್ತಿ ಇದ್ದರೂ ಇರಬಹುದು.

ತಲೆನೋವು ಕಾಣಿಸಿಕೊಂಡಾಗ ವಾಕರಿಕೆ ಬರುವುದು, ಹೊಟ್ಟೆಯಲ್ಲಿ ಅಸ್ವಸ್ಥತೆ, ತಲೆನೋವಿದ್ದಾಗ ಬೆಳಕನ್ನೇ ನೋಡಲಾರದ ಸ್ಥಿತಿ, ತಲೆನೋವು ಕನಿಷ್ಠ ಒಂದು ದಿನದ ನಮ್ಮ ಕೆಲಸ ಅಥವಾ ಅಧ್ಯಯನವನ್ನು ಮಾಡದಂತೆ ನಮ್ಮ ಸಾಮರ್ಥ್ಯ ಕುಗ್ಗಿಸಿದ್ದರೆ ಅದು ಮೈಗ್ರೇನ್‍ನ ಲಕ್ಷಣಗಳಾಗಿರುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಈಗಾಗಲೇ ವೈದ್ಯರು ಮೈಗ್ರೇನ್‍ಗೆ ಕಾರಣಗಳನ್ನು ಹುಡುಕಿದ್ದು ಅದು ಹೀಗಿದೆ. ಮೈಗ್ರೇನ್‍ಗೆ ಪ್ರಚೋದನೆ ನೀಡುವ ಬೆಳಕಿನಂತಹ ಸಂವೇದನೆಯ ಉದ್ದೀಪಕ, ಆಹಾರ ಮತ್ತು ಆಹಾರದ ಎಡಿಟಿವ್‍ಗಳು, ಪೇಯ, ಮಾನಸಿಕ ಒತ್ತಡ, ಸ್ತ್ರೀಯರಲ್ಲಿ ಹಾರ್ಮೋನ್ ಬದಲಾವಣೆಗಳು, ಏಳುವ-ಮಲಗುವ ವಿಧಾನಗಳಲ್ಲಿನ ಬದಲಾವಣೆಗಳು, ಶಾರೀರಿಕ ಅಂಶಗಳು, ಪರಿಸರದಲ್ಲಿನ ಬದಲಾವಣೆಗಳು, ಔಷಧಗಳು ಕಾರಣವಂತೆ.

ಇನ್ನು ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ದೆಮಾಡುವುದು, ನಿಯಮಿತ ಆಹಾರ ಸೇವನೆ ಮಾಡುವುದು, ಪ್ರಕಾಶಮಾನ ಬೆಳಕು ಹಾಗೂ ದಟ್ಟವಾದ ಸುವಾಸನೆಯಿಂದ ದೂರವಿರುವುದು, ಧೂಮಪಾನ ತ್ಯಜಿಸುವುದು, ಆದಷ್ಟು ಮಾನಸಿಕ ಒತ್ತಡವಾಗದಂತೆ ಎಚ್ಚರವಹಿಸುವುದು, ಮೈಗ್ರೇನ್ ಪ್ರಚೋದಿಸುವಂತಹ ಆಹಾರ ಪದಾರ್ಥಗಳನ್ನು ದೂರವಿಡುವುದು. ವೈದ್ಯರು ನೀಡುವ ಔಷಧಿಗಳನ್ನು ಉಪಯೋಗಿಸುವುದು ಅಗತ್ಯವಾಗಿದೆ.

ತೀವ್ರ ತಲೆನೋವು ಕಾಣಿಸಿಕೊಂಡಾಗ ಕೋಲ್ಡ್ ಪ್ಯಾಕ್ ಅಥವಾ ಐಸ್ ಚೀಲವನ್ನು ಸುತ್ತಿ ಅದನ್ನು ಹತ್ತು ನಿಮಿಷಗಳ ಕಾಲ ನೋವು ಇರುವ ಜಾಗದ ಮೇಲೆ ಅಥವಾ ಕತ್ತಿನ ಹಿಂಭಾಗ ಇರಿಸಬೇಕು.

ಕಣ್ಣನ್ನು ನೇರ ಬೆಳಕಿಗೆ ಒಡ್ಡದೆ, ಕತ್ತಲೆ ಕೋಣೆ, ಶಾಂತವಾದ ಸ್ಥಳದಲ್ಲಿ ಮಲಗಬೇಕು. ದ್ರವ ಪದಾರ್ಥವನ್ನು ಹೆಚ್ಚು ಸೇವಿಸಬೇಕು, ವಾಕರಿಕೆ ತಡೆಗೆ ಫ್ಲಾಟ್ ಸೋಡಾವನ್ನು ಸೇವಿಸಬೇಕು.

ತೋರು ಬೆರಳು ಮತ್ತು ಹೆಬ್ಬೆರಳಿನಿಂದ ನೋವಿರುವ ಜಾಗಕ್ಕೆ ವೃತ್ತಾಕಾರದಲ್ಲಿ ಒತ್ತಡ ಹಾಕಬೇಕು. ಹೀಗೆ ಒತ್ತಡವನ್ನು ಸುಮಾರು 7ರಿಂದ15 ಸೆಕೆಂಡುಗಳ ಕಾಲ ಹಾಕಿ ಮತ್ತೆ ಬಿಡಬೇಕು. ಇದೇ ರೀತಿ ಮತ್ತೆ, ಮತ್ತೆ ಮಾಡಬೇಕು. ವೈದ್ಯರಿಗೆ ತೋರಿಸಿ ಅವರು ನೀಡುವ ಚಿಕಿತ್ಸೆ ಮತ್ತು ಸಲಹೆಗಳನ್ನು ಪಾಲಿಸಿಕೊಂಡು ಹೋದರೆ ಮೈಗ್ರೇನ್ ಶಮನಗೊಳಿಸಲು ಸಾಧ್ಯವಿದೆ.