ಮುಂಜಾನೆಯ ವಾಯುವಿಹಾರ ಆರೋಗ್ಯಕ್ಕೆ ಆಹ್ಲಾದಕರ!

ಮುಂಜಾನೆಯ ವಾಯುವಿಹಾರ ಆರೋಗ್ಯಕ್ಕೆ ಆಹ್ಲಾದಕರ!

LK   ¦    Nov 28, 2018 10:38:00 AM (IST)
ಮುಂಜಾನೆಯ ವಾಯುವಿಹಾರ ಆರೋಗ್ಯಕ್ಕೆ ಆಹ್ಲಾದಕರ!

ಮುಂಜಾನೆಯ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಒಂದಷ್ಟು ದೂರ ನಡೆದು ಆಲ ಅಥವಾ ಅತ್ತಿಮರಕ್ಕೆ ಪ್ರದಕ್ಷಿಣೆ ಬಂದರೆ ದೈಹಿಕ ಮತ್ತು ಮಾನಸಿಕವಾಗಿ ಒಂದಷ್ಟು ಆಹ್ಲಾದತೆಯನ್ನು ಪಡೆಯಲು ಸಾಧ್ಯವಿದೆ. 

ಇತ್ತೀಚೆಗೆ ಮುಂಜಾನೆಯೇ ಹಾಸಿಗೆಯಿಂದ ಏಳುವುದು ಬಹಳಷ್ಟು ಮಂದಿಗೆ ಸಾಧ್ಯವಾಗದಾಗಿದೆ. ಅದಕ್ಕೆ ಕಾರಣವೂ ಇದೆ. ಉದ್ಯೋಗದ ನಿಮಿತ್ತವೋ? ಅಥವಾ ಟಿವಿ ಮತ್ತಿತರ ಕಾರಣಗಳಿಂದ ನಡು ರಾತ್ರಿಯವರೆಗೆ ಎಚ್ಚರವಾಗಿರುವ ಮಂದಿ ತಡವಾಗಿ ಏಳುತ್ತಾರೆ. ಆ ನಂತರ ನಿತ್ಯ ಕರ್ಮ ಮುಗಿಸಿ ಕೆಲಸಕ್ಕೆ ತೆರಳುತ್ತಾರೆ. ಇದು ಮಾಮೂಲಿ ಜೀವನ ಕ್ರಮವಾಗಿ ಹೋಗಿರುತ್ತದೆ. ಇಂತಹವರು ಮುಂಜಾನೆಯ ರಸಮಯ ಕ್ಷಣಗಳನ್ನು ತಮ್ಮ ಬದುಕಿನಲ್ಲಿ ಕಳೆದುಕೊಳ್ಳುತ್ತಾರೆ. 

ರಾತ್ರಿ ಬೇಗ ಮಲಗಿ ಮುಂಜಾನೆ ಬೇಗ ಏಳಬೇಕು ಎಂಬ ಮಾತಿದೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ನಾವು ಮುಂಜಾನೆ ಬೇಗ ಏಳುತ್ತೇವೆ. ಅದನ್ನು ಹೊರತುಪಡಿಸಿ ತಡವಾಗಿ ಏಳುವ ಮಂದಿಯೇ ಜಾಸ್ತಿ. 

ಇಷ್ಟಕ್ಕೂ ಮುಂಜಾನೆ ಅದರಲ್ಲೂ ಬ್ರಾಹ್ಮಿ ಮುಹೂರ್ತದಲ್ಲೇಕೆ ಏಳಬೇಕು ಎಂಬುದನ್ನು ನೋಡಿದ್ದೇ ಆದರೆ ಅದು ಒಳ್ಳೆಯ ಸಮಯ ಇಡೀ ವಾತಾವರಣ ನಿರ್ಮಲವಾಗಿರುತ್ತದೆ. ಮತ್ತು ಆ ಸಮಯದಲ್ಲಿ ಒಂದಷ್ಟು ದೂರ ನಡೆಯುವುದರಿಂದ ದೇಹಕ್ಕೆ ವ್ಯಾಯಾಮವಾದರೆ, ಮನಸ್ಸಿಗೆ ಒಂದಿಷ್ಟು ಶಾಂತಿ ಸಿಗುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ಒಂದು ಒಳ್ಳೆಯ ಪರಿಣಾಮವನ್ನು ಬೀರುತ್ತದೆ. 

ಇನ್ನು ಆಧ್ಯಾತ್ಮದಲ್ಲಿಯೂ ಪ್ರತಿಯೊಬ್ಬ ಮನುಷ್ಯನು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕಾರ್ಯ ಪ್ರಾರಂಭಿಸಿದರೆ ಶುಭದಾಯಕವಾಗಿರುತ್ತದೆ ಎಂದು ಹೇಳಲಾಗಿದೆ. ಬ್ರಾಹ್ಮಿ ಕಾಲದಲ್ಲಿ ಎದ್ದು ಒಂದಷ್ಟು ಹೊತ್ತು ನಡೆದಾಡಿ ಬಂದರೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅನುಕೂಲವಾಗುತ್ತದೆ. ಡಯಾಬಿಟಿಸ್ ಸೇರಿದಂತೆ ರಕ್ತದೊತ್ತಡ ಮೊದಲಾದ ಕಾಯಿಲೆಯಿಂದ ಬಳಲುವವರಿಗೂ ಇದು ಒಳ್ಳೆಯದೇ. ಇವತ್ತಿನ ದಿನಗಳಲ್ಲಿ ಜನಜಂಗುಳಿ, ವಾಹನ ಸಂಚಾರವಿಲ್ಲದೆ ನೀರವ ವಾತಾವರಣ ಬ್ರಾಹ್ಮಿಮುಹೂರ್ತದಲ್ಲಿ ಮಾತ್ರ ಸಾಧ್ಯ ಎಂದರೆ ತಪ್ಪಾಗಲಾರದು. 

ಪ್ರಾತಃಕಾಲದ ಒಂದಷ್ಟು ವಿಧಿಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾನಸಿಕ ಮತ್ತು ದೈಹಿಕವಾಗಿ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು ಎಂಬುದಾಗಿ ಆಧ್ಯಾತ್ಮಿಕ ಚಿಂತಕರು ಹೇಳಿದ್ದಾರೆ. 

ಕೆಲವರು ಬೆಳಿಗ್ಗೆ ಎದ್ದಕೂಡಲೇ ಬೆಡ್ ಕಾಫಿ, ಟೀ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇದು ಆರೋಗ್ಯಕರ ಅಭ್ಯಾಸವಲ್ಲ.  ಬೆಳಿಗ್ಗೆ ಬೇಗನೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಉತ್ತಮ. ಇದರಿಂದ ಆಹಾರ ಜೀರ್ಣಗೊಂಡು ಅಳಿದುಳಿದ ತ್ಯಾಜ್ಯಗಳ ವಿಸರ್ಜನೆಗೆ ಅನುಕೂಲವಾಗುತ್ತದೆ. ಪ್ರಾತಃಕಾಲ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು, ಮಲ ಮೂತ್ರಾದಿಗಳನ್ನು ವಿಸರ್ಜಿಸಿ, ಹಲ್ಲುಜ್ಜಿ ಮುಖ ತೊಳೆದು ಮುಂದಿನ ಕೆಲಸಕ್ಕೆ ತೊಡಗಿಸಿಕೊಳ್ಳಬೇಕು. ಈ ರೀತಿಯ ಪದ್ಧತಿಯ ರೂಢಿಸಿಕೊಂಡರೆ ಜೀವನಕ್ಕೊಂದು ಶಿಸ್ತು ಪಡೆಯಲು ಸಾಧ್ಯವಾಗುತ್ತದೆ. 

ಮುಂಜಾನೆಯ ವಾಯು ವಿಹಾರ ಆರೋಗ್ಯಕ್ಕೆ ಹೇಗೆ ಸಹಕಾರಿ ಎಂಬುದನ್ನು ನೋಡುವುದೇ ಆದರೆ ವಾಯು ಮಾಲಿನ್ಯದ ಸೋಂಕಿಲ್ಲದೆ ನಿರ್ಮಲ ವಾತಾವರಣವಿರುವ ಈ ಸಮಯದಲ್ಲಿ ನಡೆದಾಡುವುದು, ಓಡುವುದು, ವ್ಯಾಯಾಮ, ಯೋಗಾಸನ, ಪ್ರಾಣಾಯಾಮಗಳನ್ನು ಮಾಡುವುದು ಆರೋಗ್ಯ ವರ್ಧನೆಗೆ ಉತ್ತಮ ಹಾದಿಯಾಗಿದೆ. ಇನ್ನು ವಿದ್ಯಾರ್ಥಿಗಳು ಪ್ರಾತಃಕಾಲ ಕ್ರೀಡೆಗಳನ್ನು ಆಡುವುದು ಮತ್ತು ಓದುವುದನ್ನು ಮಾಡಿದರೆ ಒಳ್ಳೆಯದು. 

ವಿದ್ಯಾರ್ಥಿಗಳು ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದು ಓದುವ ಪರಿಪಾಠ ಬೆಳೆಸಿಕೊಂಡರೆ ಉತ್ತಮ. ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಪ್ರಾತಃಕಾಲ ಬಹು ಮುಖ್ಯ ಪಾತ್ರ ವಹಿಸುವುದರಿಂದಲೇ ಪ್ರತಿಯೊಬ್ಬರೂ ಪ್ರಾತಃಕಾಲದ ಸದ್ಭಳಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ. 

ನಮ್ಮ ದಿನ ನಿತ್ಯದ ಜೀವನ ಶೈಲಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲು ಆಶಿಸಿದ್ದರೆ ಮೊದಲಿಗೆ ಪ್ರಾತಃಕಾಲ(ಬ್ರಾಹ್ಮಿಮುಹೂರ್ತ)ದಲ್ಲಿ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬಳಿಕ ಒಂದಷ್ಟು ಹೊತ್ತು ನಡೆದಾಡಿ ಬನ್ನಿ ಆಗ ಅದರ ಮಹತ್ವ ಅರಿವಾಗುತ್ತದೆ. 

ನಮ್ಮ ದೇಹ ಮತ್ತು ಮನಸ್ಸಿಗೆ ಆರೋಗ್ಯ ಮತ್ತು ಶಾಂತಿ, ನೆಮ್ಮದಿ ಸಿಗಬೇಕೆಂದು ಆಶಿಸುವವರು ತಪ್ಪದೆ ಮುಂಜಾನೆಯ ವಾಯುವಿಹಾರ ಮತ್ತು ಅರಳಿ, ಆಲ ಇನ್ನಿತರ ಮರಗಳ ಕೆಳಗೆ ಒಂದಷ್ಟು ಹೊತ್ತನ್ನು ಕಳೆದು ಬರುವುದನ್ನು ರೂಢಿಸಿಕೊಳ್ಳಿ ಇದರಿಂದ ತಮಗೆ ಗೊತ್ತಿಲ್ಲದಂತೆ ಆರೋಗ್ಯದಲ್ಲಿ ಒಂದಷ್ಟು ಬದಲಾವಣೆ ಕಾಣಲು ಸಾಧ್ಯವಾಗುತ್ತದೆ.