ಮಹಿಳೆಯರ ಪಾಲಿನ ದುಸ್ವಪ್ನ ಸ್ತನ ಕ್ಯಾನ್ಸರ್!

ಮಹಿಳೆಯರ ಪಾಲಿನ ದುಸ್ವಪ್ನ ಸ್ತನ ಕ್ಯಾನ್ಸರ್!

LK   ¦    Dec 27, 2017 12:28:33 PM (IST)
ಮಹಿಳೆಯರ ಪಾಲಿನ ದುಸ್ವಪ್ನ ಸ್ತನ ಕ್ಯಾನ್ಸರ್!

ಹೆಣ್ಣು ಮಕ್ಕಳ ಸೌಂದರ್ಯ ಹೆಚ್ಚಿಸುವ, ಸೌಂದರ್ಯವತಿಯರಂತೆ ಕಾಣಲು ಕಾರಣರಾಗಿರುವ ಸ್ತನಗಳತ್ತ ಕಾಳಜಿ ವಹಿಸುವುದು ಅಗತ್ಯವಾಗಿದೆ. ಕಾರಣ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು, ಮಹಿಳೆಯರನ್ನು ಇನ್ನಿಲ್ಲದಂತೆ ಕಾಡತೊಡಗಿದೆ.

ಬಹಳಷ್ಟು ಹೆಣ್ಣು ಮಕ್ಕಳು ಸ್ತನಗಳಲ್ಲಿ ಕ್ಯಾನ್ಸರಿನ ಗುಣ ಕಾಣಿಸಿಕೊಂಡ ತಕ್ಷಣವೇ ತಜ್ಞ ವೈದ್ಯರಲ್ಲಿ ತಪಾಸಣೆ ಮಾಡಿಸುವಲ್ಲಿ ಹಿಂದೇಟು ಹಾಕುತ್ತಾ ಉಲ್ಭಣಗೊಂಡ ಬಳಿಕ ವೈದ್ಯರಿಗೆ ತೋರಿಸುತ್ತಾರೆ. ಇದರಿಂದ ಗುಣಪಡಿಸಬಹುದಾದ ಕಾಯಿಲೆ ಉಲ್ಭಣವಾಗಿ ಸಾವಿಗೂ ಕಾರಣವಾಗುವ ಸಾಧ್ಯತೆ ಹೆಚ್ಚಾಗುವ ಸಂಭವವಿರುತ್ತದೆ.

ಗ್ರಾಮೀಣ ಪ್ರದೇಶದಲ್ಲಿರುವ ಹೆಚ್ಚಿನ ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರಿನ ಅರಿವೇ ಇಲ್ಲ. ತಮ್ಮ ಸ್ತನದಲ್ಲಿ ಒಂದಷ್ಟು ರೋಗದ ಬದಲಾವಣೆಗಳು ಕಂಡು ಬಂದರೂ ಅದನ್ನು ಗೌಪ್ಯವಾಗಿಟ್ಟುಕೊಂಡು ಬಿಡುತ್ತಾರೆ. ಕೊನೆಗೆ ಇನ್ನೇನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ವೈದ್ಯರ ಬಳಿಗೆ ತೆರಳುತ್ತಾರೆ. ಆ ವೇಳೆಗೆ ಚಿಕಿತ್ಸೆ ಸಾಧ್ಯವಾಗದೆ ಶಸ್ತ್ರ ಚಿಕಿತ್ಸೆ ಮೂಲಕ ಸ್ತನವನ್ನೇ ತೆಗೆದು ಹಾಕಬೇಕಾದ ಪರಿಸ್ಥಿತಿ ನಿಮರ್ಾಣವಾಗಿ ಬಿಡುತ್ತದೆಯಲ್ಲದೆ, ಸಾವಿಗೂ ಹತ್ತಿರವಾಗ ಬೇಕಾಗುತ್ತದೆ.

ವೈದ್ಯರು ಹೇಳುವ ಪ್ರಕಾರ ಸ್ತನ ಕ್ಯಾನ್ಸರ ನ್ನುಆರಂಭದಲ್ಲಿಯೇ ಪತ್ತೆ ಹಚ್ಚಿದರೆ ಗುಣಪಡಿಸಬಹುದಂತೆ. ಈಗಾಗಲೇ ಸ್ತನ ಕ್ಯಾನ್ಸರ್ ಗೆ ಅತ್ಯಾಧುನಿಕ ಚಿಕಿತ್ಸಾ ಕ್ರಮಗಳು ಬಂದಿರುವುದರಿಂದ ಗುಣಪಡಿಸುವುದು ಕಷ್ಟವೇನಲ್ಲ. ಭಯಪಡುವ ಅಗತ್ಯವೂ ಇಲ್ಲ. ಆದರೆ ಕಾಯಿಲೆ ಉಲ್ಭಣ ಸ್ಥಿತಿಗೆ ತಲುಪಿಬಿಟ್ಟರೆ ಚಿಕಿತ್ಸೆ ಯಶಸ್ವಿಯಾಗುವುದು ಕಷ್ಟಸಾಧ್ಯ.

ಯುವತಿಯರು ಮತ್ತು ಮಹಿಳೆಯರು ಸ್ತನದ ಆರೋಗ್ಯದತ್ತ ಕಾಳಜಿ ವಹಿಸಬೇಕು. ಕೆಲವೊಂದು ಬದಲಾವಣೆಗಳು, ನೋವು ಕ್ಯಾನ್ಸರ್ ಗುಣ ಲಕ್ಷಣಗಳು ಅಲ್ಲದೆಯೂ ಇರಬಹುದು. ಆದರೂ ಏನಾದರೊಂದು ತೊಂದರೆ ಕಾಣಿಸಿಕೊಂಡಾಗ ಮುಜುಗರ ಪಡದೆ ವೈದ್ಯರ ಬಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಮೊದಲಿಗೆ ಸ್ತನದ ಗಾತ್ರ ಅಥವಾ ಆಕಾರದಲ್ಲಿ ಅಸಾಮಾನ್ಯ ಬದಲಾವಣೆ ಕಂಡು ಬಂದರೆ, ಗುಳ್ಳೆಗಳು ಕಂಡು ಬರುವುದು, ಕೆಂಪಾಗಿರುವುದು, ತೊಟ್ಟಿನಿಂದ ಸ್ರಾವವಾಗುತ್ತಿದ್ದರೆ ಅಥವಾ ತೊಟ್ಟುಗಳು ಗಡಸಾಗಿದ್ದರೆ, ತೊಟ್ಟು ಒಳಕ್ಕೆ ಬಾಗಿದ್ದರೆ ಹೀಗೆ ಏನಾದರೊಂದು ಬದಲಾವಣೆಗಳು ಕಂಡು ಬಂದಿದ್ದರೆ, ಒಂದು ವೇಳೆ ಈ ಬದಲಾವಣೆ ಕ್ಯಾನ್ಸರ್ ಅಲ್ಲದೆಯೂ ಇರಬಹುದು, ಬೇರೆ, ಬೇರೆ ಕಾರಣಗಳಿಗೂ ಬಂದಿರಬಹುದು. ಆದರೆ ಆ ಬಗ್ಗೆ ಉದಾಸೀನ ಮಾಡದೆ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಕ್ಯಾನ್ಸರ್ ಇದೆಯೇ? ಇಲ್ಲವೋ ಎಂಬುದನ್ನು ಖಾತರಿ ಮಾಡಿಕೊಳ್ಳುವುದು ಒಳ್ಳೆಯದು.

ಸ್ತನದಲ್ಲಿ ಗೆಡ್ಡೆಯಾಗಿರುವುದು, ಕಂಕುಳಲ್ಲಿ ಹೊಸದಾಗಿ ಗೆಡ್ಡೆಯಾಗಿರುವುದು ಕಂಡು ಬಂದರೆ ಅಂತಹವರು ತಡಮಾಡದೆ ತಪಾಸಣೆಗೊಳಪಡಬೇಕು. ಈ ಗಂಟುಗಳನ್ನು ಮುಟ್ಟಿ ನೋಡುವುದರಿಂದ ಅರಿತುಕೊಳ್ಳಬಹುದು. ಇನ್ನು ಮುಖ್ಯವಾಗಿ ಗಮನಿಸಬೇಕಾಗಿರುವ ವಿಚಾರ ಏನೆಂದರೆ? ಕುಟುಂಬದಲ್ಲಿ ಈ ಹಿಂದೆ ಯಾರಿಗಾದರು ಸ್ತನ ಕ್ಯಾನ್ಸರ್ ಇದ್ದಿದ್ದರೆ, ಈಗಲೂ ಇದ್ದರೆ ಕೆಲವೊಮ್ಮೆ ಅನುವಂಶೀಯವಾಗಿ ಇತರರಿಗೂ ಬರುವ ಸಾಧ್ಯತೆಯೂ ಇಲ್ಲದಿಲ್ಲ.

ಹೀಗಾಗಿ ಅಂತಹ ಕುಟುಂಬದ ಮದುವೆಯಾಗದಿರುವ ಯುವತಿಯರು, ಮದುವೆಯಾಗಿ ಮಕ್ಕಳಿರುವ ಮಹಿಳೆಯರು, 50ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ವೈದ್ಯರಲ್ಲಿ ತೋರಿಸಿ ತಪಾಸಣೆಗೊಳಪಡುವುದು ಅಗತ್ಯ.

ಮೊದಲೆಲ್ಲ ಕ್ಯಾನ್ಸರ್ ಎಂದರೆ ಅಪರೂಪವಾಗಿತ್ತಾದರೂ ಇದೀಗ ಅದರ ವ್ಯಾಪ್ತಿ ವಿಸ್ತಾರವಾಗಿದೆ. ಕ್ಯಾನ್ಸರ್ ರೋಗವಿದೆ ಎಂಬುದು ಗೊತ್ತಾದ ತಕ್ಷಣ ಆತಂಕ ಪಡುವ ಅಗತ್ಯವಿಲ್ಲ. ಕೆಲವು ಚಿಕಿತ್ಸಾ ಕ್ರಮಗಳಿಂದ ಗುಣಪಡಿಸುವ ಸಾಧ್ಯತೆಯೂ ಇದೆ. ಮುಖ್ಯವಾಗಿ ಧೈರ್ಯಬೇಕು ಕ್ಯಾನ್ಸರ್ ನ್ನು ಗೆದ್ದುಬಂದ ಬಹಳಷ್ಟು ಮಂದಿ ನಮ್ಮ ಮುಂದಿದ್ದಾರೆ. ಆದರೆ ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡರೆ ಯಾವುದೇ ತೊಂದರೆಯಿಲ್ಲ ಎಂಬುದನ್ನು ಮರೆಯಬಾರದು.

ಈಗೀಗ ನಮ್ಮ ಜೀವನ ಕ್ರಮಗಳಲ್ಲಿನ ಕೆಲವೊಂದು ಬದಲಾವಣೆ ಸೇರಿದಂತೆ ಹಲವು ರೀತಿಯಲ್ಲಿ ಸ್ತನ ಕ್ಯಾನ್ಸರ್ ತಮಗೆ ಗೊತ್ತಿಲ್ಲದಂತೆ ದಾಳಿ ಮಾಡಬಹುದು ಆದರಿಂದ ಎಚ್ಚರಿಕೆ, ಕಾಳಜಿ ಅಗತ್ಯ. ಅದಕ್ಕಿಂತ ಹೆಚ್ಚಾಗಿ ಏನಾದರೊಂದು ಬದಲಾವಣೆ, ಏನೋ ಒಂದು ತೊಂದರೆ ಕಾಣಿಸುತ್ತಿದೆ ಎಂಬುದು ಗೊತ್ತಾದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಂಶಯ ನಿವಾರಣೆ ಮಾಡಿಕೊಳ್ಳುವುದು ಜಾಣತನ.