ಕಣ್ಣನ್ನು ಗ್ಲಾಕೋಮಾ ಕಾಡಬಹುದು…

ಕಣ್ಣನ್ನು ಗ್ಲಾಕೋಮಾ ಕಾಡಬಹುದು…

LK   ¦    Aug 09, 2017 04:25:00 PM (IST)
ಕಣ್ಣನ್ನು ಗ್ಲಾಕೋಮಾ ಕಾಡಬಹುದು…

ಮೊದಲಿಗೆ ಹೋಲಿಸಿದರೆ ಇತ್ತೀಚೆಗಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುವವರೇ ಜಾಸ್ತಿಯಾಗಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿದ್ದು ವೈದ್ಯರ ಬಳಿಗೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ. ಕಣ್ಣಿನಲ್ಲಿ ಪೊರೆ ಬರುವುದು, ದೃಷ್ಠಿ ದೋಷ ಕಾಣಿಸುವುದು, ಉರಿ ಊತ, ನೋವು ಹೀಗೆ ಹತ್ತಾರು ಸಮಸ್ಯೆಗಳು ಮನುಷ್ಯನ ಕಣ್ಣನ್ನು ಕಾಡುತ್ತಿದ್ದು ಚಿಕಿತ್ಸೆಯ ಮೊರೆ ಹೋಗುತ್ತಿದ್ದಾನೆ. ಸಂಘ ಸಂಸ್ಥೆಗಳು ವೈದ್ಯಕೀಯ ಸಂಸ್ಥೆಗಳ ಸಹಕಾರರೊಂದಿಗೆ ಹಲವು ಕಡೆಗಳಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಿ ಉಚಿತ ಚಿಕಿತ್ಸೆಯನ್ನು ಕೂಡ ನೀಡುತ್ತಿರುವುದನ್ನು ಕಾಣಬಹುದು. ಇವತ್ತಿನ ದಿನಗಳಲ್ಲಿ ನಾವು ಕಣ್ಣಿಗೆ ಹೆಚ್ಚಿನ ಒತ್ತಡವನ್ನು ನೀಡುತ್ತಿದ್ದೇವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಾವು ವಿಶ್ರಾಂತಿ ಪಡೆಯಬೇಕೆಂದು ಮಲಗಿದಾಗಲೂ ನಮ್ಮ ಕಣ್ಣು ಮೊಬೈಲ್ ಮೇಲಿರುತ್ತದೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಮನೆಗೆ ಬಂದ ಮೇಲೂ ಟಿವಿ ಮೇಲೆ ಕಣ್ಣುಹಾಯಿಸುತ್ತಾ ಇರುತ್ತಾರೆ. ಕೆಲಸದ ನಡುವೆ ಒಂದಷ್ಟು ಕಣ್ಣಿಗೆ ವಿಶ್ರಾಂತಿ ನೀಡುವತ್ತ ಗಮನಹರಿಸುವುದೇ ಇಲ್ಲ. ಹೀಗಾಗಿ ಕಣ್ಣಿಗೆ ಹೆಚ್ಚು ಶ್ರಮವಾಗುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಕಣ್ಣಿನ ವಿಚಾರದಲ್ಲಿ ನಾವು ಸದಾ ಜಾಗರೂಕರಾಗಿರಬೇಕು. ಏಕೆಂದರೆ ಕೊಂಚ ಉದಾಸೀನ ತಾಳಿದರೂ ಧತ್ವಕ್ಕೊಳಗಾಗಬೇಕಾದ ಸ್ಥಿತಿ ಬಂದೊದಗಬಹುದು. ಹೀಗಾಗಿ ಕಣ್ಣಿನ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆ ಕಾಣಿಸಿಕೊಂಡರೂ ತಕ್ಷಣ ನೇತ್ರ ತಜ್ಞರನ್ನು ಕಂಡು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಅಷ್ಟೇ ಅಲ್ಲ ಇತರರ ಸಲಹೆ ಪಡೆದು ಡ್ರಾಪ್ಸ್ ಹಾಕುವುದು ಮತ್ತೇನೋ ಸ್ವಯಂ ಚಿಕಿತ್ಸೆ ಮಾಡಲು ಹೋಗುವುದು ತೊಂದರೆಗೆ ಎಡೆ ಮಾಡಿಕೊಟ್ಟಂತೆಯೇ ಎಂಬುದನ್ನು ಮರೆಯಬಾರದು.ದೃಷ್ಠಿದೋಷಗಳು, ಪೊರೆ ಬೆಳೆಯುವುದು ಮಾಮೂಲಿ ಸಮಸ್ಯೆಯಾಗಿದ್ದರೂ ಇತ್ತೀಚೆಗೆ ಗ್ಲಾಕೊಮಾ ಎಂಬ ಕಾಯಿಲೆ ಹೆಚ್ಚಾಗಿ ಕಾಡತೊಡಗಿದೆ. ಇದು ದೇಶದಲ್ಲಿ ಅಂಧತ್ವ ಹೆಚ್ಚಲು ಬಹುಮುಖ್ಯ ಕಾರಣವಾಗಿದೆ. 35 ವರ್ಷ ದಾಟಿದ ವಯಸ್ಕರಲ್ಲಿ ಹೆಚ್ಚು ಗ್ಲಾಕೊಮಾ ಕಂಡುಬರುತ್ತಿದೆ.
ಅಕ್ವಿಯೆಸ್ ಹ್ಯುಮರ್ ಎಂದು ಹೇಳಲಾಗುವ ದ್ರವವು ಕಣ್ಣಿನಲ್ಲಿ ನಿರಂತರವಾಗಿ ಸ್ರವಿಸುತ್ತದೆ. ಕಣ್ಣಿನ ಒಳಗೆ ಸ್ರವಿಸಿ ಕಣ್ಣಿನ ಹೊರಭಾಗದಿಂದ ಹರಿದು ಹೋಗುತ್ತದೆ. ಗ್ಲಾಕೊಮಾ ಕಾಯಿಲೆ ಕಾಣಿಸಿಕೊಂಡಾಗ ದ್ರವವು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗಿ ಕಣ್ಣಿನ ಒತ್ತಡ ಹೆಚ್ಚುತ್ತದೆ, ಹೀಗೆ ಹೆಚ್ಚಾದ ಕಣ್ಣಿನ ಒತ್ತಡವು ಆಫಿಕ್ನರ್ವನ ಮೇಲೆ ಹೆಚ್ಚಿನ ಒತ್ತಡ ಹೇರಿ ರಕ್ತ ಸಂಚಾರವನ್ನು ನಿಲ್ಲಿಸಿ ಆಫಿಕ್ನರ್ವನ ಹಾಳುಮಾಡುತ್ತದೆ ಇದರಿಂದ ದೃಷ್ಟಿದೋಷ ಉಂಟಾಗುತ್ತದೆ.

ಈ ರೀತಿಯಾಗಿ ಆಫಿಕ್ನರ್ವ ದುರ್ಬಲಗೊಂಡು ಕಣ್ಣಿನದೃಷ್ಟಿಯನ್ನು ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ತಮ್ಮ ಕಣ್ಣಿಗೆ ಆಗಿರುವ ಸಮಸ್ಯೆಯಾದರೂ ಏನು ಎಂಬುದು ತಿಳಿದುಕೊಳ್ಳುವ ವೇಳೆಗೆ ಗ್ಲಾಕೋಮಾ ಕಾಡಿ ಬಿಡಬಹುದು. ಹೀಗಾಗಿ ಒಂದಷ್ಟು ಸೂಚನೆಗಳು ನಮಗೆ ಗೊತ್ತಾಗುತ್ತಿದ್ದಂತೆಯೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.ಇದಕ್ಕೂ ಮೊದಲು ಕಣ್ಣನ್ನು ಬಾಧಿಸಿ ನಮ್ಮನ್ನು ಅಂಧರಾಗಿ ಮಾಡುವಂತಹ ಗ್ಲಾಕೊಮಾದ ಬಗ್ಗೆ ಒಂದಷ್ಟು ತಿಳಿದುಕೊಳ್ಳುವುದು ಕೂಡ ಅತ್ಯಗತ್ಯ. ಗ್ಲಾಕೊಮಾದಲ್ಲಿ ಆಗಾಗ್ಗೆ ಸಮೀಪ ದೃಷ್ಟಿಯ ಕನ್ನಡಕವನ್ನು ಬದಲಿಸುವುದು ಮತ್ತು ತೃಪ್ತಿ ಹೊಂದದೇ ಇರುವುದು. ಬೆಳಕಿನ ಸುತ್ತ ಕಾಮನಬಿಲ್ಲಿನ ಬಣ್ಣ ಮೂಡುವುದು, ಮಂದವಾದ ಅಥವಾ ಅಸ್ಪಷ್ಟ ಚಿತ್ರ ಕಾಣಿಸುವುದು, ಚಿತ್ರ ಮೂಲೆಗಳು ಗೋಚರವಾಗದೇ ಇರುವುದ ಗ್ಲಾಕೊಮಾದ ಲಕ್ಷಣಗಳು ಎಂದು ಹೇಳಬಹುದಾಗಿದೆ.ಆದರೆ ಇದಿಷ್ಟೇ ಸೂಚನೆಗಳಿಂದಲೂ ಗ್ಲಾಕೊಮಾ ಎಂಬ ನಿರ್ಧಾರಕ್ಕೆ ಬರಬೇಕಾಗಿಲ್ಲ. ಒಂದಷ್ಟು ಸಮಸ್ಯೆಗಳು ಕಾಣಿಸಿಕೊಂಡಾಗ ವೈದ್ಯರನ್ನು ಕಂಡು ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು. ಕಣ್ಣಿನ ವಿಚಾರದಲ್ಲಿ ಉದಾಸೀನ ತಾಳಿದಷ್ಟು ಆಪತ್ತು ಹೆಚ್ಚು. ಏನೇ ಸಮಸ್ಯೆಗಳಿದ್ದರೂ ನಾಳೆ ತೋರಿಸಿದರಾಯಿತು ಎಂದು ಮುಂದೂಡುವ ಬದಲು ತಕ್ಷಣವೇ ಪರಿಹಾರ ಕಂಡು ಕೊಳ್ಳುವುದು ಒಳ್ಳೆಯದು.ಕಣ್ಣಿಗೆ ಪೋಷಕ ಶಕ್ತಿಯನ್ನು ಒದಗಿಸುವ ಹಣ್ಣು ತರಕಾರಿ, ಕ್ಯಾರೆಟ್ ಇನ್ನಿತರ ತಿನಿಸುಗಳನ್ನು ಸೇವಿಸುವುದು ಉತ್ತಮ.