ಜ್ವರದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ !

ಜ್ವರದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ !

LK   ¦    Oct 21, 2018 12:36:50 PM (IST)
ಜ್ವರದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ !

ಈಗ ಅಲ್ಲಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಜನ ಜ್ವರನಾ ಮಾತ್ರೆ ತೆಗೆದುಕೊಂಡರಾಯಿತು ಎಂದು ನಿರ್ಲಕ್ಷ್ಯ ಮಾಡದೆ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಕಾರಣ ಇದೀಗ ಹೆಚ್1ಎನ್1 ಕೆಲವಡೆ ಕಾಣಿಸಿಕೊಳ್ಳುತ್ತಿದ್ದು ಮೃತಪಟ್ಟ ಬಗ್ಗೆ ವರದಿಗಳು ಕೇಳಿ ಬರುತ್ತಿವೆ.

ಸಾಮಾನ್ಯವಾಗಿ ವಾತಾವರಣದ ವೈಪರೀತ್ಯವಾದಾಗ ಶೀತ, ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ ಇದು ಕೆಲವೊಮ್ಮೆ ಬೇಗ ವಾಸಿಯಾಗಿ ಬಿಡುತ್ತದೆ. ಇನ್ನು ಕೆಲವೊಮ್ಮೆ ಜ್ವರ ಬೇರೆ ಬೇರೆಯಲಿ ಕಾಣಿಸಿಕೊಂಡು ಇನ್ಯಾವುದೋ ರೋಗಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಈಗಿನ ಪರಿಸ್ಥಿತಿಯಲ್ಲಿ ಜ್ವರ ಎಂದು ನಿರ್ಲಕ್ಷ್ಯ ವಹಿಸಿದೆ ಚಿಕಿತ್ಸೆ ಪಡೆಯುವುದು ಬಹುಮುಖ್ಯವಾಗಿದೆ. ಸದ್ಯದ ಸ್ಥಿತಿಯನ್ನು ಗಮನಿಸಿದರೆ ಇದೀಗ ಇನ್‍ಫ್ಲ್ಯೂಯೆಂ-ಎ, ಹೆಚ್1ಎನ್1, ಹೆಚ್3ಎನ್2, ಇನ್‍ಫ್ಲ್ಯೂಯೆಂ ಬಿ ಎಲ್ಲೆಡೆ ಕಂಡುಬರತೊಡಗಿದ್ದು ಎಚ್ಚರಿಕೆ ವಹಿಸುವುದು ಬಹುಮುಖ್ಯವಾಗಿದೆ.

ಉಸಿರಾಟದ ಸೋಂಕು ಬಾಧಿಸುತ್ತಿದ್ದರೆ ಅದು ಇನ್‍ಫ್ಲ್ಯೂಯೆಂ ಆಗಿರಬಹುದು ಆದ್ದರಿಂದ ವೈದ್ಯರನ್ನು ಸಂಪರ್ಕಿಸಿ ವೈದ್ಯಕೀಯ ತಪಾಸಣೆ ಮಾಡಿಕೊಳ್ಳುವ ಮೂಲಕ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ.

ಇನ್‍ಫ್ಲ್ಯೂಯೆಂ ಸಣ್ಣ ಮಕ್ಕಳಲ್ಲಿ ಮತ್ತು ಅರವತ್ತೈದು ವರ್ಷ ಮೀರಿದ ವಯಸ್ಕರನ್ನು ಹೆಚ್ಚಾಗಿ ಬಾಧಿಸುತ್ತದೆ. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೇ ಆದರೆ ಅಪಾಯ ತಪ್ಪಿದಲ್ಲ. ಈಗಾಗಲೇ ರೋಗ ನಿರೋಧಕ ಶಕ್ತಿ ಕುಗ್ಗಿರುವ ಕ್ಯಾನ್ಸರ್, ಶ್ವಾಸಕೋಶದ ಸೋಂಕು, ಹೃದಯ, ಯಕೃತ್, ಮೂತ್ರಪಿಂಡದ ತೊಂದರೆ ಅನುಭವಿಸುತ್ತಿರುವ, ಮಧುಮೇಹದ ರೋಗಿಗಳಲ್ಲಿ ಸೋಂಕಿನ ಸಂಭಾವ್ಯತೆ ಹೆಚ್ಚಾಗಿರುವುದರಿಂದ ಇನ್‍ಫ್ಲ್ಯೂಯೆಂ ರೋಧಕ ಲಸಿಕೆಯನ್ನು ಪಡೆಯಬಹುದು.

ಕಡಿಮೆ ಜ್ವರ, ಕೆಮ್ಮು, ಗಂಟಲು ನೋವು ಇರುವ ರೋಗಿಗಳು. ಟ್ಯಾಮಿ ಫ್ಲೂ ಔಷಧಿ ಅಗತ್ಯವಿಲ್ಲ. ಜ್ವರ ಕಡಿಮೆಯಾಗದಿದ್ದಲ್ಲಿ 2 ದಿನಗಳ ನಂತರ ಮತ್ತೆ ವೈದ್ಯಕೀಯ ತಪಾಸಣೆಗೊಳಗಾಗುವುದು. ಹೆಚ್1ಎನ್1 ಪರೀಕ್ಷೆಯ ಅವಶ್ಯಕತೆಯಿರುವುದಿಲ್ಲ. ರೋಗಿಯು ಮನೆಯಲ್ಲಿಯೇ ಉಳಿದು ವಿಶ್ರಾಂತಿ ಪಡೆಯುವುದು. ಸಾರ್ವಜನಿಕ ಸ್ಥಳಗಳಿಂದ ದೂರ ಉಳಿಯುವುದು.

ಅಧಿಕ ಜ್ವರ, ಕೆಮ್ಮು, ಗಂಟಲು ನೋವು ಇರುವ ರೋಗಿಗಳು. ವೈದ್ಯರ ಸಲಹೆ ಮೇರೆಗೆ ಟ್ಯಾಮಿ ಫ್ಲೂ ಔಷಧಿ ತೆಗೆದುಕೊಳ್ಳಬೇಕು. ಹೆಚ್1ಎನ್1 ಪರೀಕ್ಷೆಯ ಅವಶ್ಯಕತೆಯಿರುವುದಿಲ್ಲ. ರೋಗಿಯು ಮನೆಯಲ್ಲಿಯೇ ಉಳಿದು ವಿಶ್ರಾಂತಿ ಪಡೆಯುವುದು. ಸಾರ್ವಜನಿಕ ಸ್ಥಳಗಳಿಂದ ದೂರ ಉಳಿಯುವುದು. ವೈದ್ಯರ ಸಲಹೆ ಮೇರೆಗೆ ಟ್ಯಾಮಿ ಫ್ಲೂ ತೆಗೆದುಕೊಳ್ಳುವುದು.

ವರ್ಗ ‘ಎ’ ಮತ್ತು ‘ಬಿ’ಯ ಲಕ್ಷಣಗಳೊಂದಿಗೆ ಉಸಿರಾಟದ ತೊಂದರೆ, ಕಡಿಮೆ ರಕ್ತದ ಒತ್ತಡ, ಎದೆ ನೋವು, ಕಫದಲ್ಲಿ ರಕ್ತ ಉಳ್ಳವರು ಆಹಾರ ಸ್ವೀಕರಿಸದಿರುವ ಸಣ್ಣ ಮಕ್ಕಳು ವೈದ್ಯರ ಸಲಹೆ ಮೇರೆಗೆ ಕೂಡಲೇ ಆಸ್ಪತ್ರೆಗೆ ದಾಖಲಾಗುವುದು. ಟ್ಯಾಮಿ ಫ್ಲೂ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಫ್ಲೂ ಸೋಂಕಿತ ವ್ಯಕ್ತಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ವಾತಾವರಣದಲ್ಲಿ ವೈರಾಣುವಿನ ಕಣಗಳು ಹರಡಿ ದಿನನಿತ್ಯದ ಬಳಕೆಯ ವಸ್ತುವಿನ ಮೇಲೆ ಕೂರುತ್ತವೆ. ಆರೋಗ್ಯವಂತ ವ್ಯಕ್ತಿ ಈ ವಸ್ತುಗಳನ್ನು ಮುಟ್ಟಿದ ಅಥವಾ ಉಪಯೋಗಿಸಿದ ನಂತರ ಕೈಗಳಿಂದ ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದ ಸೋಂಕು ಹರಡುತ್ತದೆ. ಇದರ ನಿಯಂತ್ರಣಕ್ಕಾಗಿ ಸಾರ್ವಜನಿಕ ಪ್ರದೇಶದಲ್ಲಿ ಇದ್ದು ಬಂದ ನಂತರ ಸ್ವಚ್ಛವಾಗಿ ಸೋಪಿನಿಂದ ಕೈಗಳನ್ನು ತಿಕ್ಕಿ ತೊಳೆಯುವುದು ಅಥವಾ ಆಲ್ಕೋಹಾಲ್ ಯುಕ್ತ ಸ್ವಚ್ಛಕಾರಕಗಳನ್ನು ಬಳಸಿ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.

ರೋಗಲಕ್ಷಣವುಳ್ಳ ವ್ಯಕ್ತಿಗಳಿಂದ ಮಾರುದ್ದದ್ದಷ್ಟು ದೂರವಿರಿ, ರೋಗಲಕ್ಷಣಗಳು ಕಂಡುಬಂದಲ್ಲಿ ಉದಾಸೀನ ಮಾಡದೆ ಕೂಡಲೇ ವೈದ್ಯರ ಸಲಹೆ ಪಡೆಯಿರಿ. ಚಿಕಿತ್ಸೆಗೆ ಸರ್ಕಾರದ ವತಿಯಿಂದ ಟ್ಯಾಮಿಪ್ಲೂ ಔಷಧಿ ಲಭ್ಯವಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸಲಹೆ ಮೇರೆಗೆ ಪಡೆಯಬಹುದಾಗಿದೆ.

ಆರೋಗ್ಯವೇ ಭಾಗ್ಯವಾಗಿದ್ದು ಆರೋಗ್ಯವಾಗಿದ್ದರೆ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯ ಹೀಗಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಎಚ್ಚರವಾಗಿದ್ದರೆ ಒಳಿತು.