ಅನುವಂಶೀಯತೆಯಿಂದಲೂ ಬೊಜ್ಜು ಬರಬಹುದು!

ಅನುವಂಶೀಯತೆಯಿಂದಲೂ ಬೊಜ್ಜು ಬರಬಹುದು!

LK   ¦    Sep 29, 2018 02:28:07 PM (IST)
ಅನುವಂಶೀಯತೆಯಿಂದಲೂ ಬೊಜ್ಜು ಬರಬಹುದು!

ದೈಹಿಕ ಶ್ರಮವಿಲ್ಲದ ದುಡಿಮೆ, ವ್ಯಾಯಾಮ, ವಾಕಿಂಗ್ ಮಾಡದೆ ಹೆಚ್ಚು ಹೊತ್ತು ಒಂದೇ ಕಡೆ ಕುಳಿತುಕೊಳ್ಳುವುದು, ಟಿವಿ ನೋಡುತ್ತಾ ಆಗಾಗ್ಗೆ ಕುರುಕು ತಿಂಡಿಗಳನ್ನು ತಿನ್ನುವುದು ಸೇರಿದಂತೆ ದೇಹ ದಂಡನೆಯಿಲ್ಲದ, ಚಟುವಟಿಕೆಯಿಲ್ಲದ ವ್ಯಕ್ತಿಗಳು ಬೊಜ್ಜು ಸಮಸ್ಯೆಯಿಂದ ಬಳಲುತ್ತಾರೆ ಎಂಬುದಾಗಿ ಹೇಳಲಾಗುತ್ತದೆಯಾದರೂ ಬೊಜ್ಜು ಬರಲು ಇನ್ನೊಂದು ಮುಖ್ಯವಾದ ಕಾರಣವೂ ಇದೆ ಎನ್ನುತ್ತಾರೆ ವೈದ್ಯರು.

ಅದ್ಯಾವುದು ಎಂಬ ಕುತೂಹಲ ಎಲ್ಲರನ್ನು ಕಾಡಬುದು. ಅದು ಬೇರಾವುದೂ ಅಲ್ಲ ಅನುವಂಶೀಯತೆ. ವೈದ್ಯರು ಹೇಳುವ ಪ್ರಕಾರ ಬೊಜ್ಜು ಸಮಸ್ಯೆಯಿಂದ ಒಬ್ಬ ವ್ಯಕ್ತಿ ಬಳಲುತ್ತಿದ್ದಾನೆ ಎಂದರೆ ಅದು ಆತನಿಗೆ ಅನುವಂಶೀಯತೆಯಿಂದಲೂ ಬಂದಿರಬಹುದಂತೆ. ಇದು ನಿಜವೂ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಾಗೆ ನೋಡಿದರೆ ಪ್ರತಿಯೊಬ್ಬರು ಸುಂದರ ಮತ್ತು ಆಕರ್ಷಕವಾಗಿ ಕಾಣಬೇಕೆಂದು ಬಯಸುವುದು ಸಹಜ ಆದರೆ ಕೆಲವೊಮ್ಮೆ ನೋಡುನೋಡುತ್ತಿದ್ದಂತೆಯೇ ಬೊಜ್ಜು ಬೆಳೆಯಲಾರಂಭಿಸಿ ಅಸಹ್ಯ ಎನ್ನಿಸತೊಡಗುತ್ತದೆ. ಹೀಗಾಗಿ ಕೆಲವರು ಆ ಸಂದರ್ಭ ದೇಹವನ್ನು ದಂಡಿಸುತ್ತಾರೆ. ಆಹಾರದಲ್ಲಿ ಪಥ್ಯ ಅಳವಡಿಸಿಕೊಳ್ಳುತ್ತಾರೆ. ಇಲ್ಲಿ ಮುಖ್ಯವಾಗಿ ಬೊಜ್ಜು ಬಂದ ಮೇಲೆ ಕಠಿಣ ಪಥ್ಯಗಳನ್ನು ಮಾಡುವ ಬದಲು ಮೊದಲೇ ಒಂದಷ್ಟು ಬೊಜ್ಜು ತಡೆಗೆ ಇರುವ ಕ್ರಮಗಳನ್ನು ತಮ್ಮ ನಿತ್ಯದ ಬದುಕಿನಲ್ಲಿ ರೂಢಿಸಿಕೊಂಡರೆ ಒಳ್ಳೆಯದು.

ಇಷ್ಟಕ್ಕೂ ಪ್ರತಿಯೊಬ್ಬರೂ ಅವರ ದೇಹದ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೂ ಕಷ್ಟಪಟ್ಟು ಒಂದಷ್ಟು ವೈದ್ಯರ ಸಲಹೆಯಂತೆ ವ್ಯಾಯಾಮ ಮತ್ತು ಆಹಾರ ಸೇವನೆಯಲ್ಲಿ ಒಂದಷ್ಟು ಹಿತಮಿತ, ಪಥ್ಯಾಕ್ರಮಗಳನ್ನು ಅಳವಡಿಸಿಕೊಂಡರೆ ದೇಹವನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಜತೆಗೆ ಬೊಜ್ಜು ಸಮಸ್ಯೆಯಿಂದಲೂ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಇನ್ನು ಬೊಜ್ಜು ಹೇಗೆ ಬರುತ್ತದೆ ಎಂಬುದಕ್ಕೆ ವೈದ್ಯರು ಕೆಲವೊಂದು ಕಾರಣಗಳನ್ನು ನೀಡುತ್ತಾರೆ. ಅದೇನೆಂದರೆ ಅನುವಂಶೀಯವಾಗಿಯೂ ಬರಬಹುದು. ಇಲ್ಲವೆ ದೇಹದ ಶ್ರಮ ಕಡಿಮೆಯಾಗಿ ಆಹಾರ ಸೇವನೆ ಜಾಸ್ತಿಯಾದರೂ ಬರಬಹುದು. ನಡವಳಿಕೆಯಲ್ಲಿನ ವಿಭಿನ್ನತೆ, ತಿನ್ನುವುದನ್ನು ಪ್ರೇರೇಪಿಸುವುದು, ಕಂಡಿದೆಲ್ಲವನ್ನೂ ತಿನ್ನಬೇಕೆಂಬ ಬಯಕೆ, ಆಗಾಗ್ಗೆ ಆಹಾರ ಸೇವಿಸುವುದು. ಕೊಬ್ಬಿನ ಅಂಶವಿರುವ ಪದಾರ್ಥಗಳನ್ನು ತಿನ್ನುವುದು. ದೈಹಿಕ ಶ್ರಮಕ್ಕೆ ಒತ್ತು ನೀಡದಿರುವುದು ಕೂಡ ಬೊಜ್ಜು ಬರಲು ಕಾರಣವಾಗುತ್ತದೆ.

ಶರೀರದಲ್ಲಿ ಕೊಬ್ಬಿನ ಅಂಶ ಹೆಚ್ಚಾದಾಗ ಶರೀರದ ಗಾತ್ರ ಹಿಗ್ಗುತ್ತದೆ. ಇದನ್ನೇ ಬೊಜ್ಜು ಎಂದು ಹೇಳಲಾಗುತ್ತದೆ. ಬೊಜ್ಜು ಹೆಚ್ಚಾದರೆ ಅದು ಇತರೆ ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ. ಅದು ಯಾವುದೆಂದರೆ ರಕ್ತದೊತ್ತಡ, ಹೃದಯದ ಕಾಯಿಲೆ, ಪಿತ್ತಕೋಶದ ಕಾಯಿಲೆ, ಮೂಳೆ ಸವೆತ, ಕೀಲುಗಳ ಕಾಯಿಲೆ, ಉಸಿರಾಟದ ತೊಂದರೆ, ಸುಸ್ತು, ಆಯಾಸದಂತಹ ಸಮಸ್ಯೆಗಳು ಅವರನ್ನು ಕಾಡುತ್ತದೆ.

ದೈಹಿಕ ಶ್ರಮಕ್ಕಿಂತ ಹೆಚ್ಚು ಆಹಾರ ಸೇವನೆಯಿಂದ ಬೊಜ್ಜು ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ ನಿಯಮಿತ ಆಹಾರ ಮತ್ತು ದೈಹಿಕ ಚಟುವಟಿಕೆಗಳಿಗೆ ಒತ್ತು ನೀಡಬೇಕು. ಇನ್ನು ತೂಕ ಹೆಚ್ಚಾಯಿತೆಂಬ ಕಾರಣಕ್ಕೆ ಒಮ್ಮೆಗೆ ಹೆಚ್ಚು ತೂಕ ಇಳಿಸಿಕೊಳ್ಳುವ ಕಾರ್ಯಕ್ಕೆ ಕೈ ಹಾಕಬಾರದು. ದೇಹದ ತೂಕವನ್ನು ಕಠಿಣ ವ್ಯಾಯಾಮ, ಯೋಗಗಳ ಮೂಲಕ ವಾರಕ್ಕೆ ಅರ್ಧ ಕೆಜಿಯಿಂದ ಒಂದು ಕೆಜಿಯಷ್ಟು ಇಳಿಸಿದರೆ ಸಾಕು.

ತೂಕ ಇಳಿಕೆಗಾಗಿ ಔಷಧಿ, ಮಾತ್ರೆ ಇನ್ನಿತರ ಚಿಕಿತ್ಸೆಗೆ ಮೊರೆ ಹೋಗದೆ ವೈದ್ಯರ ಸಲಹೆ ಪಡೆದು ಮುಂದುವರೆಯುವುದು ಒಳ್ಳೆಯದು. ಮುಂಜಾನೆ ಸುಮಾರು ಮುಕ್ಕಾಲು ಅಥವಾ ಒಂದು ಗಂಟೆಕಾಲ ವೇಗದ ನಡಿಗೆಯೂ ಕೊಬ್ಬಿನ ಅಂಶವನ್ನು ಕರಗಿಸಿ ಬೊಜ್ಜು ತಡೆಯಲು ಸಹಕಾರಿಯಾಗುತ್ತದೆ.