ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲೇನು ಮಾಡಬೇಕು?

ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲೇನು ಮಾಡಬೇಕು?

LK   ¦    Oct 04, 2018 12:01:55 PM (IST)
ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲೇನು ಮಾಡಬೇಕು?

ಮಧುಮೇಹ ರೋಗ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಕಾಡುತ್ತಿದೆ. ಅದನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗದೆ ಕೆಲವರು ಹಲವು ಸಮಸ್ಯೆಗೆ ತಮ್ಮನ್ನು ತಳ್ಳಿಕೊಳ್ಳುತ್ತಿದ್ದಾರೆ.

ತಮ್ಮ ದಿನಚರಿಯಲ್ಲಿ ಒಂದಷ್ಟು ಬದಲಾವಣೆ, ಊಟದಲ್ಲಿ ಹೆಚ್ಚಿನ ಹೆಚ್ಚಿನ ಪಥ್ಯ, ವ್ಯಾಯಾಮ, ವಾಕಿಂಗ್‍ನತ್ತ ಆಸಕ್ತಿ ಹೀಗೆ ಕೆಲವೊಂದು ವಿಧಾನಗಳನ್ನು ಬಳಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ಜೀವನವನ್ನು ಉತ್ತಮವಾಗಿ ಸಾಗಿಸಲು ಸಾಧ್ಯವಿದೆ.

ವ್ಯಾಯಾಮ, ವಾಕಿಂಗ್‍ನತ್ತ ಅಸಡ್ಡೆ, ಸಿಕ್ಕಿದನೆಲ್ಲ ತಿನ್ನಬೇಕೆಂಬ ಚಪಲ, ವೈದ್ಯರು ಹೇಳಿದ ಕ್ರಮಗಳನ್ನು ಅಳವಡಿಸಿಕೊಳ್ಳದಿರುವುದು ಹೀಗೆ ಕೆಲವೊಂದು ನಿರ್ಲಕ್ಷ್ಯಗಳನ್ನು ವಹಿಸದೇ ಇರುವುದರಿಂದಲೇ ಬಹಳಷ್ಟು ಮಧುಮೇಹಿ ರೋಗಿಗಳು ಆರೋಗ್ಯ ಸಮಸ್ಯೆಯನ್ನು ಉಲ್ಭಣಗೊಳಿಸಿಕೊಂಡು ಪರದಾಡುತ್ತಿರುತ್ತಾರೆ.

ತಮಗೆ ಮಧುಮೇಹ ಇರುವುದು ಖಾತರಿಯಾಗುತ್ತಿದ್ದಂತೆಯೇ ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಿ ಒಂದಷ್ಟು ಆಹಾರ ಕ್ರಮಗಳನ್ನು ಅನುಸರಿಸಿದರೆ ಖಂಡಿತಾ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡು ಜೀವನ ಸಾಗಿಸಲು ಸಾಧ್ಯವಾಗುತ್ತದೆ.

ಒಂದು ವೇಳೆ ಮಧುಮೇಹ ಕಾಯಿಲೆ ಉಲ್ಬಣಗೊಂಡು ಆಹಾರ, ವ್ಯಾಯಾಮ, ಮಾತ್ರೆಗಳಿಂದಲೂ ನಿಯಂತ್ರಣಕ್ಕೆ ತರುವುದು ಅಸಾಧ್ಯ ಎಂಬ ಮಟ್ಟಿಗೆ ಬಂದಾಗ ಇನ್ಸುಲಿನ್ ತಾತ್ಕಾಲಿಕವಾಗಿ ಬಳಸಬೇಕಾಗುತ್ತದೆ. ಇಂತಹ ಪರಿಸ್ಥಿತಿಗೆ ತಮ್ಮನ್ನು ತಾವು ತಂದುಕೊಳ್ಳದೆ ವೈದ್ಯರು ಹೇಳುವ ಪ್ರಕಾರ ಕನಿಷ್ಟ 30 ನಿಮಿಷಗಳ ಕಾಲ ವ್ಯಾಯಾಮ, ವಾಯುವಿಹಾರ, ಯೋಗ ಮೊದಲಾದವುಗಳನ್ನು ರೂಢಿಸಿಕೊಳ್ಳಬೇಕು. ಒತ್ತಡದ ಬದುಕಿನಿಂದ ಹೊರ ಬಂದು ಕೆಲವು ಸಮಯವನ್ನು ನಿಶ್ಚಿಂತೆಯಿಂದ ಕಳೆಯಬೇಕು. ಎಲ್ಲವನ್ನೂ ಸಮಾಧಾನದಿಂದ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಅಯ್ಯೋ ನನಗೆ ಮಧುಮೇಹವಿದೆ ಎಂದು ಯೋಚಿಸುವುದನ್ನು ಬಿಟ್ಟು ಎಲ್ಲರೂ ಸೇವಿಸುವ ಸಾಮಾನ್ಯ ಆಹಾರವನ್ನೇ ಒಂದು ಸರಳ ಮತ್ತು ಆರೋಗ್ಯಕರ ರೀತಿಯಲ್ಲಿ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ನಮ್ಮ ಸುತ್ತಮುತ್ತ ಇರುವ ಮಧುಮೇಹಿ ರೋಗಿಗಳ ಪೈಕಿ ಕೆಲವರು ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಏನು ಕ್ರಮಗಳನ್ನು ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಯೋಚಿಸದೆ ಕಾಯಿಲೆಯ ಬಗ್ಗೆಯೇ ಚಿಂತೆ ಮಾಡುತ್ತಾರೆ. ಇದರಿಂದ ಕಾಯಿಲೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ನಾವು ಚಿಂತೆಯನ್ನು ಬಿಟ್ಟು ಅದನ್ನು ಗೆಲ್ಲಲು ಯಾವ ಔಷಧಿಯಿದೆ ಮತ್ತು ಬದುಕಿನಲ್ಲಿ ಏನನ್ನು ಬದಲಾಯಿಸಿಕೊಂಡರೆ ಆರೋಗ್ಯವಾಗಿರಲು ಸಾಧ್ಯವಿದೆ ಎಂಬುದರ ಬಗ್ಗೆ ಚಿಂತಿಸಿದರೆ ಒಳ್ಳೆಯದು.

ಮಧುಮೇಹ ಇರುವ ವ್ಯಕ್ತಿಗಳು ಔಷಧಿಯೊಂದಿಗೆ ಕೆಲವೊಂದು ಆಹಾರ ಕ್ರಮಗಳನ್ನು ಕೂಡ ಅಳವಡಿಸಿಕೊಳ್ಳಬೇಕಾಗುತ್ತದೆ. ವೈದ್ಯರು ಯಾವುದನ್ನು ತ್ಯಜಿಸ ಬೇಕೆಂದು ಹೇಳುತ್ತಾರೋ ಅದನ್ನು ತ್ಯಜಿಸುವುದು ಅನಿವಾರ್ಯ. ಅದರ ಜೊತೆಗೆ ವ್ಯಾಯಾಮ ಮಾಡುವುದು ಅಷ್ಟೇ ಅಗತ್ಯ. ಮುಂಜಾನೆ ಸವಿ ನಿದ್ದೆಯನ್ನು ತ್ಯಜಿಸಿ ಹೊರಗೆ ವಾಕಿಂಗ್ ಮಾಡುವುದು ಹೆಚ್ಚಿನವರಿಗೆ ಕಷ್ಟವಾಗಬಹುದು. ಅದರಲ್ಲೂ ಇತ್ತೀಚೆಗೆ ಸರಗಳ್ಳರು, ಪುಂಡರು, ಪೋಕರಿಗಳು ಹೆಚ್ಚಿರುವ ಸಮಯದಲ್ಲಿ ಹೇಗಪ್ಪಾ ಎಂದು ಮಹಿಳೆಯರು ತಲೆಕೆಡಿಸಿಕೊಳ್ಳಬಹುದು. ಇದಕ್ಕೆ ಪರಿಹಾರ ಏನೆಂದರೆ ಹೆಚ್ಚಿನ ಜನ ಓಡಾಡುವ ಪ್ರದೇಶದಲ್ಲೇ ವಾಕಿಂಗ್ ಮಾಡುವುದು, ಚಿನ್ನಾಭರಣಗಳನ್ನು ಧರಿಸದೆ ಮನೆಯಲ್ಲೇ ಇಟ್ಟು ಹೋಗುವುದು ಉತ್ತಮ.

ಮಧುಮೇಹ ಪೀಡಿತರು ವ್ಯಾಯಾಮ ಹೇಗೆ ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಅವರ ಪ್ರಕಾರ ಪ್ರತಿದಿನ ಕನಿಷ್ಠ ಮೂವತ್ತು ನಿಮಿಷಗಳಾದರೂ ವ್ಯಾಯಾಮ ಮಾಡಲೇ ಬೇಕಂತೆ. ಒಂದು ನಿರ್ದಿಷ್ಟ ಸಮಯದಲ್ಲಿ ವ್ಯಾಯಾಮ ಮಾಡುವುದು ಕಷ್ಟವಾದರೆ ದೈನಂದಿನ ಚಟುವಟಿಕೆಗಳಾದ ನಡಿಗೆ ಅಥವಾ ಮೆಟ್ಟಿಲುಗಳನ್ನು ಹತ್ತಿ ಇಳಿಯುವ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡುವುದು ಒಳ್ಳೆಯದು. ಒಬ್ಬರೇ ಹೇಗಪ್ಪಾ ಎಂದು ಯೋಚಿಸದೆ ಸ್ನೇಹಿತ(ತೆ)ರ ಜತೆ ಸೇರಿ ಗುಂಪಾಗಿ ವ್ಯಾಯಾಮ ಮಾಡುವುದು ಇನ್ನೂ ಒಳ್ಳೆಯದು.

ವಾರಕ್ಕೆ ಕನಿಷ್ಠ ಮೂರು ದಿನವಾದರೂ ಸುಮಾರು 30 ನಿಮಿಷಗಳ ನಡಿಗೆಯನ್ನು ಮಾಡಿ. ಇದಕ್ಕೊಂದು ಗುರಿಯಿರಲಿ. ಮನೆಯಲ್ಲಿ ವ್ಯಾಯಾಮ ಮಾಡುವುದು ಕಷ್ಟವಾದರೆ ವ್ಯಾಯಾಮ ಶಾಲೆಗೆ ಸೇರಿಕೊಳ್ಳುವುದು ಒಳ್ಳೆಯದು. ಬಿಡುವಿಲ್ಲದ ಕೆಲಸ ಕಾರ್ಯಗಳಲ್ಲಿ ಹೇಗಪ್ಪಾ ವ್ಯಾಯಾಮ, ವಾಕಿಂಗ್ ಮಾಡುವುದು ಎಂದು ಯೋಚಿಸುತ್ತಾ ಕೂರದೆ ಅದಕ್ಕೆ ಒಂದಷ್ಟು ಸಮಯವನ್ನು ಮೀಸಲಿಡುವುದು ಒಳಿತು.

ಮಧು ಮೇಹದಿಂದ ಬಳಲುವವರು ಯಾವ ಆಹಾರ ಸೇವಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಯಾವ ಆಹಾರ ಸೇವಿಸಬಾರದು ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಕೇಕ್, ಫೇಸ್ಟ್ರಿ, ಸಿಹಿ ಬಿಸ್ಕೆಟ್, ಸಕ್ಕರೆ, ಐಸ್‍ಕ್ರೀಂ, ಕ್ಯಾಂಡಿ, ಚಾಕೋಲೆಟ್, ಜೇನುತುಪ್ಪ, ಗ್ಲೂಕೋಸ್, ಬೆಲ್ಲ, ಡ್ರೈಫ್ರೂಟ್ಸ್, ತಂಪುಪಾನೀಯ ಮತ್ತು ಸಿಹಿಯುಕ್ತ ಜ್ಯೂಸ್‍ಗಳು, ಹಾರ್ಲಿಕ್ಸ್, ಬೂಸ್ಟ್, ಮಾಲ್ಟ್, ಇನ್ನು ಹಣ್ಣುಗಳಲ್ಲಿ ಪಚ್ಚಬಾಳೆ, ಸಪೋಟಾ, ಹಲಸಿನಹಣ್ಣು, ಮಾವಿನಹಣ್ಣು, ಕಿತ್ತಳೆ, ತರಕಾರಿಗಳಲ್ಲಿ ಆಲೂಗೆಡ್ಡೆ, ಸಿಹಿಗೆಣಸು, ಮರಗೆಣಸು, ಸಿಹಿಕುಂಬಳ, ಬೇಯಿಸಿದ ಕ್ಯಾರೆಟ್, ಬೀಟ್‍ರೂಟ್, ಕೊಬ್ಬಿನಂಶವಿರುವ ತುಪ್ಪ, ಬೆಣ್ಣೆ, ವನಸ್ಪತಿ, ಡಾಲ್ಡಾ, ಕೊಬ್ಬರಿ ಎಣ್ಣೆ, ಚೀಸ್, ಪನ್ನೀರು, ಗಿಣ್ಣು ಕೋವಾ, ಸಂಸ್ಕರಿಸಿದ ರಿಫೈನ್ಡ್ ಅಥವಾ ಮೈದಾದಿಂದ ತಯಾರಿಸಿದ ಬಿಸ್ಕೆಟ್, ಬ್ರೆಡ್, ನಾನ್, ರೋಟಿ, ನೂಡಲ್ಸ್ ಮೊದಲಾದವುಗಳನ್ನು ದೂರವಿಡಿ. ಉಪ್ಪಿನ ಸೇವನೆ ಕಡಿಮೆ ಮಾಡಿ, ಧೂಮಪಾನ, ಮದ್ಯಪಾನಕ್ಕೆ ಇತಿಶ್ರೀ ಹಾಡಿಬಿಡಿ. ನನಗೆ ಕಾಯಿಲೆಯಿದೆ ಎಂಬುದನ್ನು ಮರೆತು ಬದುಕುವುದನ್ನು ಕಲಿಯಿರಿ. ಹೀಗೆ ಮಾಡುತ್ತಾ ಹೋದಂತೆ ಮಧುಮೇಹ ನಿಮ್ಮ ನಿಯಂತ್ರಣದಲ್ಲಿರುತ್ತದೆ.