ಸತ್ವಗುಣದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

ಸತ್ವಗುಣದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

Jan 09, 2017 12:10:50 PM (IST)

ಎಲ್ಲ ರೀತಿಯ ಸಂಪತ್ತು ಇದ್ದು ಒಳ್ಳೆಯ ಗುಣ ಇಲ್ಲದೆ ಹೋದರೆ ಆ ವ್ಯಕ್ತಿಯಿಂದ ಮನೆಗಾಗಲೀ ಸಮಾಜಕ್ಕಾಗಲೀ ಯಾವುದೇ ಪ್ರಯೋಜನವಿಲ್ಲ. ಅಷ್ಟೇ ಅಲ್ಲ ಆತ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲಾರ.

ಸಾಮಾನ್ಯವಾಗಿ ನಾವು ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಆತನ ಗುಣದ ಬಗ್ಗೆ ಮಾತನಾಡುತ್ತೇವೆ. ಅದನ್ನು ಆಧರಿಸಿಯೇ ಆತ ಒಳ್ಳೆ ವ್ಯಕ್ತಿ ಎಂಬ ಸರ್ಟಿಫಿಕೇಟ್ ನೀಡುತ್ತೇವೆ. ನಾವೆಲ್ಲರೂ ಗೆಳೆತನ, ಪರಿಚಯ ಮಾಡಿಕೊಳ್ಳುವಾಗ ಶ್ರೀಮಂತಿಕೆ ನೋಡಿ ಮಾಡುವುದಿಲ್ಲ ಗುಣ ನೋಡಿಯೇ ಮಣೆ ಹಾಕುತ್ತೇವೆ. ಇನ್ನು ಒಳ್ಳೆ ವ್ಯಕ್ತಿಯಾಗ ಬೇಕಾದರೆ ನಾವು ಸತ್ವಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಸತ್ವಗುಣ ಹೊಂದಿದವರು ಸಾಧಕರಾಗಿರುತ್ತಾರಂತೆ. ಸತ್ವಗುಣ ನೀರಿನ ಹಾಗೆ ನಿರ್ಮಲವಾಗಿದ್ದು, ಉತ್ತಮ ಸಂಸ್ಕಾರಕ್ಕೆ ಕಾರಣವಾಗಿರುತ್ತದೆ. ಹೀಗಾಗಿ ಒಬ್ಬ ವ್ಯಕ್ತಿ ಸತ್ವಗುಣವನ್ನು ತನ್ನಲ್ಲಿ ಬೆಳೆಸಿಕೊಂಡರೆ ಸಂಸ್ಕಾರವಂತ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂಬುದನ್ನು ಅಧ್ಯಾತ್ಮಿಕ ಚಿಂತಕರು ಹೇಳುತ್ತಾರೆ.

ಪ್ರಸನ್ನತೆ ಆತ್ಮಾನುಭವ, ಪರಮಶಾಂತಿ, ತೃಪ್ತಿ, ಆಹ್ಲಾದ ಪರಮಾತ್ಮನಿಷ್ಠೆ ಇವು ಸತ್ವಗುಣದ ಲಕ್ಷಣಗಳಾಗಿದ್ದು, ಇದೆಲ್ಲವನ್ನೂ ಹೊಂದಿದ ಸತ್ವಗುಣದ ವ್ಯಕ್ತಿ ಸಮಾಜದಲ್ಲಿ ಪ್ರಜ್ವಲಿಸುತ್ತಾನೆ ಎಂಬುವುದರಲ್ಲಿ ಎರಡು ಮಾತಿಲ್ಲ. ಸತ್ವಗುಣವನ್ನು ನಾವು ಹೊಂದುವುದರಿಂದ ನಮ್ಮಲ್ಲಿರುವ ಇತರೆ ರಜೋ, ತಮಸ್ಸು, ಗುಣಗಳು ದೂರವಾಗುತ್ತವೆ. ಈ ಗುಣಗಳು ಯಾವಾಗ ನಮ್ಮಿಂದ ದೂರವಾಗುತ್ತವೆಯೋ ತನ್ನಿಂದ ತಾನಾಗೆ ನಾವು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಸತ್ವ, ರಜ, ತಮ ಎಂಬ ಗುಣಗಳು ಮನಸ್ಸಿಗೆ ಸಂಬಂಧಪಟ್ಟವು ಆಗಿರುವುದರಿಂದ ರಜೋ ಮತ್ತು ತಮೋ ಗುಣಗಳನ್ನು ಮನಸ್ಸಿನಿಂದ ದೂರಮಾಡ ಬೇಕಾದರೆ ಮನಸ್ಸಿನಲ್ಲಿ ಸತ್ವಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆಯಂತೆ.

ನಮ್ಮಲ್ಲಿ ರಜೋ ಮತ್ತು ತಮೋ ಗುಣಗಳು ಜಾಸ್ತಿಯಾದಾಗ ಸಮಾಜದ ದೃಷ್ಠಿಯಲ್ಲಿ ಕೆಟ್ಟ ವ್ಯಕ್ತಿಯಾಗಿ ಬಿಂಬಿತವಾಗುತ್ತೇವೆ. ವಿಕೃತ ನಡೆ, ನುಡಿ ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಆಗ ನಾವು ನಮಗೆ ಗೊತ್ತಿಲ್ಲದೆ ಕೆಟ್ಟ ಕಾರ್ಯಗಳನ್ನು ಮಾಡಿ ಮನೆ ಮತ್ತು ಸಮಾಜಕ್ಕೆ ಭಾರವಾಗುತ್ತೇವೆ. ಇದೆಲ್ಲವನ್ನು ತೊಡೆದು ಹಾಕಬೇಕಾದರೆ ನಾವು ನಮ್ಮಲ್ಲಿ ಸತ್ವ ಗುಣವನ್ನು  ಬೆಳೆಸಿಕೊಳ್ಳಬೇಕು.
ಸತ್ವಗುಣ ಸದಾ ಪರಿಶುದ್ಧತೆಯನ್ನು ಬಯಸುತ್ತದೆ. ಆದರೆ ರಜೋ ಗುಣ ಮತ್ತು ತಮೋ ಗುಣವು ಹಾಗಲ್ಲ. ಅದು ಕ್ಷಣಿಕ ಸುಖ ಮತ್ತು ಅಂಧಕಾರ ಮನುಷ್ಯನನ್ನು ಸುಖವಾಗಿಡುವುದಿಲ್ಲ. ಆದ್ದರಿಂದ ಸತ್ವಗುಣ ನಮ್ಮಲ್ಲಿ ಬೆಳೆಯಿಸಿಕೊಂಡರೆ ಇದ್ದಷ್ಟು ದಿನ ನೆಮ್ಮದಿಯಾಗಿ ಬದುಕಬಹುದು.

ನಮ್ಮಲ್ಲಿ ಸತ್ವಗುಣ ಬೆಳೆಯಬೇಕಾದರೆ ನಾವು ಸಜ್ಜನರ ಸಹವಾಸದಲ್ಲಿರಬೇಕು. ಅಷ್ಟೇ ಅಲ್ಲ ಸಾತ್ವಿಕ ವಸ್ತುಗಳನ್ನೇ ಬಯಸಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಏಕಾಂತ ಸ್ಥಳದಲ್ಲಿ ಧ್ಯಾನ ಮಾಡಬೇಕು. ಕರ್ತವ್ಯ ಹಾಗೂ ನಿಸ್ವಾರ್ಥ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸದಾ ಒಳ್ಳೆಯದನ್ನು ಬಯಸುವವನ ಮನಸ್ಸು ಕೂಡ ಒಳ್ಳೆಯದಾಗಿರುತ್ತದೆ. ಅಷ್ಟೇ ಅಲ್ಲ ಒಳ್ಳೆಯ ಕೆಲಸವನ್ನೇ ಮಾಡುವುದರಿಂದ ಶತ್ರುಗಳು ಕಡಿಮೆಯಾಗುತ್ತಾರೆ. ಮಾನಸಿಕವಾಗಿಯೂ ಸಂತಸವಾಗಿರುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ನಮ್ಮ ಆರೋಗ್ಯವೊಂದು ಚೆನ್ನಾಗಿದ್ದರೆ ಬೇರೆಲ್ಲವನ್ನು ನಾವು ಪಡೆದುಕೊಳ್ಳಬಹುದು, ಅನುಭವಿಸಲೂಬಹುದು. ಆರೋಗ್ಯವೇ ಕೆಟ್ಟು ಹೋದ ಮೇಲೆ ಯಾವುದೇ ಐಶ್ವರ್ಯವಿದ್ದರೂ ಅದು ಕಸವಾಗಿ ಕಾಣತೊಡಗುತ್ತದೆ.

ನಾವು ಆರೋಗ್ಯ ಕೆಟ್ಟಮೇಲೆ ಔಷಧಿಗಳ ಮೂಲಕ ಮತ್ತೆ ಪಡೆದುಕೊಳ್ಳುವ ಮೊದಲು ಕೆಡದಂತೆ ಔಷಧಿಗಳನ್ನು ಹೊರತುಪಡಿಸಿ ನಮ್ಮಿಂದಲೇ ಪಡೆದುಕೊಳ್ಳಬಹುದಾದ ಕೆಲವೊಂದು ಮಾರ್ಗವನ್ನು ಅನುಸರಿಸೋಣ.