ಜನತೆಯನ್ನು ಬೆಚ್ಚಿ ಬೀಳಿಸಿದ ನಿಫಾ ವೈರಸ್

ಜನತೆಯನ್ನು ಬೆಚ್ಚಿ ಬೀಳಿಸಿದ ನಿಫಾ ವೈರಸ್

YK   ¦    May 24, 2018 02:06:57 PM (IST)
ಜನತೆಯನ್ನು ಬೆಚ್ಚಿ ಬೀಳಿಸಿದ ನಿಫಾ ವೈರಸ್

ಇದೀಗ ನಿಫಾ ವೈರಸ್ ಬೆಚ್ಚಿ ಬೀಳಿಸಿದೆ. ಎಲ್ಲೆಡೆಯೂ ಅದರ ಬಗ್ಗೆಯೇ ಮಾತು ಶುರುವಾಗಿದೆ. ಅಷ್ಟೇ ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ ಕಟ್ಟು ನಿಟ್ಟಿನ ಎಚ್ಚರಿಕೆ ವಹಿಸಲಾಗಿದೆ. ಈ ರೋಗದ ಬಗ್ಗೆ ವದಂತಿಗಳು ಹರಡುತ್ತಿರುವುದರಿಂದ ಜನ ಕೂಡ ಭಯದಿಂದ ಬದುಕುವಂತಾಗಿದೆ.

ಇದೀಗ ಜ್ವರ ಬಂದಂತೆ ಆದರೂ ನಿಫಾ ಇರಬೇಕೆಂಬ ಭಯದಿಂದ ಆಸ್ಪತ್ರೆಗೆ ದೌಡಾಯಿಸುವಂತಾಗಿದೆ. ಅಷ್ಟೇ ಅಲ್ಲ ಜ್ವರ ಅಂತ ಉದಾಸೀನ ಮಾಡುವಂತೆಯೂ ಇಲ್ಲ. ಹೀಗಾಗಿ ಒಟ್ಟಾರೆ ಎಲ್ಲರಲ್ಲೂ ಭಯ ಕಾಡುತ್ತಿರುವುದಂತು ಸತ್ಯ.

ದಿಢೀರ್ ಆಗಿ ಜ್ವರ ಕಾಣಿಸಿಕೊಳ್ಳುವುದು. ತಲೆನೋವು, ಮಾಂಸಖಂಡಗಳ ನೋವು, ತಲೆ ಸುತ್ತುವಿಕೆ. ವಾಂತಿ, ಅತಿಯಾದ ಸುಸ್ತು ಇದೆಲ್ಲವೂ ನಿಫಾ ವೈರಸ್ ನ ಗುಣ ಲಕ್ಷಣಗಳಾಗಿದ್ದು, ಬಹುಶಃ ಈ ಲಕ್ಷಣಗಳು ಕಂಡು ಬಂದರೆ ತಡ ಮಾಡದೆ ಆಸ್ಪತ್ರೆಗೆ ತೆರಳಿ ವೈದ್ಯರಿಗೆ ತೋರಿಸುವುದು ಒಳ್ಳೆಯದು. ಈ ಲಕ್ಷಣ ಇದ್ದ ಮಾತ್ರಕ್ಕೆ ನಿಫಾ ಜ್ವರವೇ ಆಗಬೇಕೆಂದಿಲ್ಲ. ಆದರೆ ಪರೀಕ್ಷಿಸಿ ನಿಫಾ ಅಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಒಳ್ಳೆಯದು.

ಇದು ಮೊದಲ ಬಾರಿಗೆ ಮಲೇಶಿಯಾದಲ್ಲಿ ಕಂಡು ಬಂದಿದ್ದು, ಅಲ್ಲಿಂದ ನಿಧಾನವಾಗಿ ಎಲ್ಲೆಡೆಗೆ ಹರಡಿದೆ. ಇದೀಗ ಕೇರಳದಲ್ಲಿ ಕಾಣಿಸಿಕೊಂಡಿದ್ದು, ಈ ರಾಜ್ಯದ ಅಕ್ಕಪಕ್ಕದ ರಾಜ್ಯಗಳನ್ನು ಭಯಕ್ಕೆ ನೂಕುವಂತೆ ಮಾಡಿದೆ. ಇದಕ್ಕೆ ಸೂಕ್ತ ಔಷಧಿಗಳು ಸದ್ಯಕ್ಕೆ ಇಲ್ಲದ ಕಾರಣ ಮತ್ತು ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಹೆಚ್ಚಿನ ಭೀತಿ ಆರಂಭವಾಗಿದೆ.

ಬಾವಲಿಗಳಿಂದ ವೈರಸ್ ಹರಡುತ್ತದೆ ಎನ್ನಲಾಗಿದೆ. ಬಾವಲಿಗಳು ತಿಂದ ಹಣ್ಣುಗಳನ್ನು ಸೇವಿಸಿವುದು ರೋಗಕ್ಕೆ ಕಾರಣವಾಗಬಹುದು. ಹಂದಿಯಿಂದಲೂ ಈ ವೈರಸ್ ಹರಡುವುದರಿಂದ ಹಂದಿ ಫಾರಂಗಳಲ್ಲಿ ಕೆಲಸ ಮಾಡುವವರು, ಮನೆಗಳಲ್ಲಿ ಹಂದಿ ಸಾಕಾಣೆ ಮಾಡುವವರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇನ್ನು ಹಂದಿ ಮಾಂಸ ಸೇವಿಸುವವರು ಕೂಡ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಒಳ್ಳೆಯದು. ಅದಕ್ಕಿಂತ ಹೆಚ್ಚಾಗಿ ಒಂದಷ್ಟು ಸಮಯ ಸೇವನೆ ಮಾಡದಿದ್ದರೆ ಇನ್ನೂ ಅನೂಕೂಲ.

ಮಾಸ್ಕ್ ಹಾಕಿಕೊಂಡು ಓಡಾಡುವುದು, ಚೆನ್ನಾಗಿ ಕೈತೊಳೆದು ಆಹಾರ ಸೇವನೆ ಮಾಡುವುದು, ವೈದ್ಯರು ಹೇಳಿದಂತೆ ಔಷಧೋಪಚಾರ ಮಾಡುವುದು ಒಳಿತು. ಒಂದು ವೇಳೆ ನಿಫಾ ವೈರಸ್ ಹರಡಿರುವುದು ಖಚಿತವಾದರೆ ಅಂತಹವರ ಬಗ್ಗೆ ನಿಗಾ ವಹಿಸಬೇಕು. ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಿ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಹಣ್ಣು ಹಂಪಲುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಲು ತಿಳಿಸಬೇಕು. ಇದರಿಂದ ಶರೀರಕ್ಕೆ ಪೋಷಕ ಶಕ್ತಿ ದೊರೆಯುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಗಳು ಹಣ್ಣಿನಲ್ಲಿರುತ್ತವೆ.

ರೋಗ ಬಂದ ಬಳಿಕ ಕಷ್ಟ ಪಡುವ ಬದಲು ರೋಗ ಬರದಂತೆ ನೋಡಿಕೊಳ್ಳುವುದು ಜಾಣತನವಾಗಿದೆ. ಆದ್ದರಿಂದ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹೆಚ್ಚಿನ ನಗರಪ್ರದೇಶಗಳಲ್ಲಿ ಹಂದಿಗಳು ಎಲ್ಲೆಲ್ಲೋ ಓಡಾಡುತ್ತಾ ಪರಿಸರವನ್ನು ಅಶುಚಿತ್ವಗೊಳಿಸುತ್ತವೆ. ಅಂತಹ ಪ್ರದೇಶಗಳಲ್ಲಿ ವಾಸಿಸುವವರು ಹೆಚ್ಚಿನ ನಿಗಾವಹಿಸಬೇಕು. ಮುಖ್ಯವಾಗಿ ಸ್ವಚ್ಛತೆಗೆ ಆದ್ಯತೆ ನೀಡುವುದು ಒಳ್ಳೆಯದು.

ಇದೆಲ್ಲದಕ್ಕಿಂತ ಮುಖ್ಯವಾಗಿ ಜ್ವರನಾ ಎಂದು ಉದಾಸೀನತೆ ತೋರದೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳುವುದು ಅಗತ್ಯವಾಗಿದೆ