ಸುಂದರವಾಗಿ ಕಾಣಬೇಕಾದರೆ ದೇಹದತ್ತ ನಿಗಾವಿರಲಿ!

ಸುಂದರವಾಗಿ ಕಾಣಬೇಕಾದರೆ ದೇಹದತ್ತ ನಿಗಾವಿರಲಿ!

LK   ¦    Nov 07, 2017 12:55:39 PM (IST)
ಸುಂದರವಾಗಿ ಕಾಣಬೇಕಾದರೆ ದೇಹದತ್ತ ನಿಗಾವಿರಲಿ!

ಪ್ರತಿಯೊಬ್ಬರಿಗೂ ಅವರದ್ದೇ ಆದ ಬಣ್ಣ, ಲಕ್ಷಣ, ಸೌಂದರ್ಯ ಎಲ್ಲವೂ ಇದೆ. ಆದರೆ ಅದನ್ನು ಹೇಗೆ ಕಾಪಾಡಿಕೊಳ್ಳಬೇಕೆನ್ನುವುದು ಮುಖ್ಯ. ಕೆಲವೊಮ್ಮೆ ಸೌಂದರ್ಯವಿದ್ದರೂ ನಾವಿರುವ ರೀತಿ, ದೇಹ, ಬಟ್ಟೆ ಮೇಲೆ ತೋರಿಸುವ ನಿರಾಸಕ್ತಿಯೂ ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿ ಬಿಡುತ್ತದೆ.

ನಾವು ನಮ್ಮ ದೇಹದ ಮೇಲೆ ನಿಗಾವಹಿಸಿ, ಮುಖ, ಚರ್ಮ, ಹಲ್ಲು, ಕೂದಲು, ಉಡುಪುಗಳ ಬಗ್ಗೆಯೂ ಒಂದಷ್ಟು ಕಾಳಜಿ ವಹಿಸುವುದರಿಂದ ಆಕರ್ಷಕವಾಗಿ ಕಾಣಲು ಸಾಧ್ಯವಾಗುತ್ತದೆ. ಚಳಿಗಾಲದಲ್ಲಿ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ತುಳಸಿ, ಬೇವಿನ ಫೇಸ್ ಪ್ಯಾಕ್ ಬಳಸುವುದು ಸೂಕ್ತ. ನಂತರ ತಣ್ಣೀರಿನಿಂದ ರೋಸ್ ವಾಟರ್ನಿಂದ ಮುಖ ತೊಳೆದುಕೊಂಡರೆ ಚರ್ಮದ ಕಾಂತಿ ಹೊಳೆಯುತ್ತಿರುತ್ತದೆ. ಇದು ಕೇವಲ ಚರ್ಮಕ್ಕೆ ಕಾಂತಿ ನೀಡುವುದಲ್ಲದೇ, ಮುಖದಲ್ಲಿ ರಕ್ತ ಸಂಚಾರಕ್ಕೂ ಸಹಾಯ ಮಾಡಲಿದೆ.

ಮುಖದ ಜತೆಗೆ ಕೂದಲಿನ ಬಗ್ಗೆಯೂ ಆಸ್ಥೆ ವಹಿಸುವುದು ಅಗತ್ಯ. ಬಿಸಿಲಿನಲ್ಲಿ ಕೂದಲು ಉದುರುವಿಕೆ ಹೆಚ್ಚಿರುತ್ತದೆ. ಆದ್ದರಿಂದ ಕೂದಲನ್ನು ನೀಟಾಗಿ ಬಾಚಿ ಜಡೆ ಹೆಣೆಯುವುದಲ್ಲದೆ, ಕೂದಲಿಗೆ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಎಣ್ಣೆಗಳು ಸಿಗುತ್ತವೆ. ಇದರಲ್ಲಿ ಯಾವುದು ಕೂದಲಿಗೆ ಹೊಂದುತ್ತದೆಯೋ ಅದನ್ನೇ ಬಳಸಬೇಕು. ಶಾಂಪೂ ಕೂಡ. ಆಗಾಗ್ಗೆ ಎಣ್ಣೆ ಮತ್ತು ಶಾಂಪೂವನ್ನು ಬದಲಾಯಿಸುವುದು ಕೂಡ ಕೂದಲು ಉದುರುವಿಕೆಗೆ ಕಾರಣವಾಗಿ ಬಿಡುತ್ತದೆ ಹೀಗಾಗಿ ಎಚ್ಚರಿಕೆ ವಹಿಸುವುದು ಅಗತ್ಯ. ಮಹಿಳೆಯರು ತಮ್ಮ ಉಗುರಿನ ಸೌಂದರ್ಯವನ್ನು ಉಳಿಸಬೇಕೆಂದರೆ ಪಾತ್ರೆ ತೊಳೆಯುವ ವೇಳೆ ಹಾಗೂ ಬಟ್ಟೆ ಒಗೆಯುವ ವೇಳೆ ಕೈಗೆ ಗ್ಲೌಸ್ ಧರಿಸುವುದರಿಂದ ಉಗುರು ಹಾಳಾಗುವುದು, ಉಗುರಿನಲ್ಲಿ ಕೊಳೆ ಕೂರುವುದನ್ನು ತಪ್ಪಿಸಬಹುದು.

ಉಗುರಿನ ಸೌಂದರ್ಯವನ್ನು ಉಗುರು ಸುತ್ತಿನ ಚರ್ಮ ಮತ್ತಷ್ಟು ಹಾಳು ಮಾಡುತ್ತದೆ. ಒಂದು ವೇಳೆ ಪೆಡಿಕ್ಯೂರ್ ಅಥವಾ ಮೆನಿಕ್ಯೂರ್ ಮಾಡಿಸುವವರು ಉಗುರು ಸುತ್ತಿನ ಚರ್ಮವನ್ನು ಕೀಳಿಸುವುದನ್ನು ಬಿಟ್ಟುಬಿಡಿ. ಇಂತಹ ಚರ್ಮವನ್ನು ಕತ್ತರಿಸುವುದಕ್ಕಿಂತ ರಿಮೂವರ್ ಜೆಟ್ ಸಹಾಯದಿಂದ ತೆಗೆಯುವುದು ಒಳ್ಳೆಯದು. ಉಗುರನ್ನು ಕತ್ತರಿಸುವಾಗ ಹೇಗೇಗೋ ಕತ್ತರಿಸದೆ ಕ್ರಮಬದ್ಧತೆಯಿಂದ ಕತ್ತರಿಸಿ. ಇದರಿಂದ ಆಕರ್ಷಕ ಕಾಣುವುದಲ್ಲದೆ, ಉಗುರಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ.

ಕೆಲವರು ಉಗುರು ಬೆಳೆಸುವ ಹವ್ಯಾಸ ಹೊಂದಿರುತ್ತಾರೆ. ಇದು ನಿಜಕ್ಕೂ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ. ಉಗುರನ್ನು ಆಗಾಗ್ಗೆ ಕತ್ತರಿಸುತ್ತಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕತ್ತರಿಸದೆ ಇದ್ದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಜತೆಗೆ ಉಗುರುಗಳಲ್ಲಿ ಕೊಳೆ ತುಂಬಿಕೊಂಡು ಅಸಹ್ಯವಾಗಿ ಕಾಣುತ್ತದೆ. ಉಗುರಿಗೆ ಸರಿಹೊಂದುವ ಮತ್ತು ಆಕರ್ಷಕವಾಗಿ ಕಾಣುವ ಬಣ್ಣವನ್ನು ಲೇಪಿಸಬೇಕು. ಉಗುರು ಬಣ್ಣ ಹಚ್ಚಿದ ಮೇಲೆ ನೇಲ್ ಪೇಂಟ್ ಹಚ್ಚುವುದು ಸೂಕ್ತ. ನೇಲ್ ಪೇಂಟನ್ನು ಅಲುಗಾಡಿಸಿ ನಂತರ ಹಚ್ಚಿದರೆ ಉಗುರಿಗೆ ಚೆನ್ನಾಗಿ ಹಿಡಿಯುತ್ತದೆ. ಇನ್ನು ನೀಟಾಗಿ ಡ್ರೆಸ್ ಮಾಡಿಕೊಂಡು ಆಕರ್ಷಕವಾಗಿ ಕಾಣುತ್ತಿದ್ದರೂ ಕೆಲವೊಮ್ಮೆ ನಮ್ಮ ಶರೀರದಿಂದ ಹೊರಬರುವ ದುರ್ಗಂಧ ಬೇರೆಯವರಿಗೆ ಅಸಹ್ಯ ಎನಿಸುವುದಲ್ಲದೆ, ನಮ್ಮನ್ನು ಮುಜುಗರಕ್ಕೀಡು ಮಾಡಿಬಿಡುತ್ತದೆ.

ನಾವು ನಮ್ಮ ಬಗ್ಗೆ ಒಂದಷ್ಟು ಆಸಕ್ತಿ ಮತ್ತು ಕಾಳಜಿ ವಹಿಸಿ ಶರೀರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ಇದನ್ನು ತಡೆಯಲು ಮುಂದಾಗಬೇಕು. ನಮ್ಮ ಸೌಂದರ್ಯ, ಆಕರ್ಷಣೆ ಎಲ್ಲವೂ ನಮ್ಮ ಶರೀರ ಬೀರುವ ದುರ್ಗಂಧದ ಮುಂದೆ ಗೌಣವಾಗಿ ಬಿಡುತ್ತದೆ. ಇದನ್ನು ತಡೆಯಬೇಕಾದರೆ ತಜ್ಞರು ನೀಡುವ ಒಂದಷ್ಟು ಸಲಹೆಗಳನ್ನು ಪಾಲಿಸಬೇಕು.

ಅತಿಯಾದ ಬೆವರು ಮುಜುಗರ ತರುತ್ತದೆ. ಮೂಗು, ಕಿವಿ, ಬಾಯಿ, ಚರ್ಮಗಳಿಗೆ ಸಂಬಂಧಿಸಿದಂತೆ ಕಾಯಿಲೆಗಳಿದ್ದರೆ ವೈದ್ಯರಿಗೆ ತೋರಿಸಿ ಅವರು ನೀಡುವ ಸಲಹೆಗಳನ್ನು ಅನುಸರಿಸಬೇಕು. ಹೆಚ್ಚಿನ ಜನರಿಗೆ ಕಂಕುಳಿನಿಂದಲೇ ದುರ್ವಾಸನೆ ಬರುತ್ತದೆ. ಕಾರಣ ಕಂಕುಳಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆಯದಿರುವುದು. ಇದನ್ನು ಆಗಾಗ್ಗೆ ತೆಗೆದು ಸ್ವಚ್ಛಗೊಳಿಸುತ್ತಿರಬೇಕು. ಪ್ರತಿದಿನ ಕನಿಷ್ಟ ಎರಡು ಲೀಟರ್ನಷ್ಟು ನೀರನ್ನು ಕುಡಿಯಬೇಕು. ತಲೆ ಕೂದಲು ಕೂಡ ವಾಸನೆ ಬೀರುತ್ತದೆ. ಸ್ನಾನ ಮಾಡುವಾಗ ಕಂಕುಳು, ಕಿವಿ, ಸೇರಿದಂತೆ ಇನ್ನಿತರ ಭಾಗಗಳನ್ನು ಚೆನ್ನಾಗಿ ಸೋಪು ಬಳಸಿ ತೊಳೆಯಬೇಕು. ವ್ಯಾಯಾಮ, ಮುಂಜಾನೆ ವಾಕಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು.

ಹಲ್ಲಿನ ಅಥವಾ ಒಸಡುಗಳ ತೊಂದರೆಯಿದ್ದರೆ ದಂತ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಅಗತ್ಯ. ಹಲ್ಲಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಕೆಲವು ಚುಯಿಂಗಮ್ ಅಗೆಯುವುದರಿಂದ ಬಾಯಿಯಲ್ಲಿ ಜೊಳ್ಳುರಸದೊಂದಿಗೆ ದುರ್ವಾಸನೆ ಸಮಸ್ಯೆ ಕಡಿಮೆಯಾಗಲು ಸಾಧ್ಯವಾಗುತ್ತದೆ. ಬಾಯಿಯಲ್ಲಿ ಲವಂಗದ ಚೂರುಗಳನ್ನು ಚಪ್ಪರಿಸುವುದರಿಂದ ದುರ್ವಾಸನೆ ತಡೆಯಬಹುದು.