ನೆನಪಿರಲಿ ಆರೋಗ್ಯವೇ ಭಾಗ್ಯ...

ನೆನಪಿರಲಿ ಆರೋಗ್ಯವೇ ಭಾಗ್ಯ...

LK   ¦    Sep 19, 2017 02:53:48 PM (IST)
ನೆನಪಿರಲಿ ಆರೋಗ್ಯವೇ ಭಾಗ್ಯ...

ನಮ್ಮ ಮುಂದೆ ಯಾವುದೇ ಐಶ್ವರ್ಯವನ್ನು ತಂದು ಗುಡ್ಡೆ ಹಾಕಿದರೂ ಆರೋಗ್ಯ ಕೆಟ್ಟು ಹೋಯಿತಂದ್ರೆ ಅದರೆಲ್ಲವೂ ಗೌಣವಾಗಿಬಿಡುತ್ತದೆ.

ಇವತ್ತು ನಾವೆಲ್ಲರೂ ಒಂದಲ್ಲ ಒಂದು ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಬಹಳಷ್ಟು ಜನಕ್ಕೆ ತಮಗೆ ತಗುಲಿರುವ ಕಾಯಿಲೆ ಯಾವುದೆಂಬುದು ತಿಳಿಯಲು ಬಹಳಷ್ಟು ಸಮಯ ಕಳೆದುಹೋಗಿರುವುದರಿಂದ ಅವರು ಅದನ್ನು ನಿಯಂತ್ರಿಸಲು ಪರದಾಡುವಂತಾಗಿದೆ. ಸದ್ಯಕ್ಕೆ ಅವರಿಗೆ ಕಾಯಿಲೆಯಿಂದ ಗುಣಮುಖನಾದರೆ ಸಾಕು ಯಾವ ಶ್ರೀಮಂತಿಕೆಯೂ ಬೇಡ ಎಂಬಂತಹ ಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ.

ಮೊದಲೆಲ್ಲ ವಯಸ್ಸಾದ ಬಳಿಕ ಕಾಯಿಲೆಗಳು ಬರುತ್ತಿದ್ದವು. ಈಗ ಹುಟ್ಟಿದ ಮಗುವಿನಿಂದಲೇ ಒಂದಲ್ಲ ಒಂದು ರೀತಿಯ ತೊಂದರೆಗಳು ಕಾಣಿಸುತ್ತಿವೆ. ಇತ್ತೀಚೆಗಿನ ಒತ್ತಡದ ಬದುಕು ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಗೆ ಮುನ್ನುಡಿ ಬರೆಯುತ್ತಿವೆ.
ಇನ್ನು ಕೆಲವರು ಕುಡಿತ, ಸಿಗರೇಟ್ ಸೇವನೆ, ಗುಟ್ಕಾ, ತಂಬಾಕು ಸೇವನೆ ಮಾಡುವ ಮೂಲಕವೂ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ. ಜತೆಗೆ ಪೌಷ್ಠಿಕ ಆಹಾರ ಸೇವಿಸದೆ ಯಾವುದೋ ಒಂದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಅಭ್ಯಾಸವೂ ಆರೋಗ್ಯಕ್ಕೆ ಮಾರಕವಾಗಿ ಬಿಡುತ್ತದೆ.

ಇತ್ತೀಚೆಗೆ ಮನೆಯಲ್ಲಿನ ಅಡುಗೆಗಿಂತ ಹೋಟೆಲ್, ಬೇಕರಿ, ರಸ್ತೆ ಬದಿಯ ಪಾಸ್ಟ್ಫುಡ್ ಗಳಿಗೆ ಜೋತು ಬಿದ್ದಿರುವ ಜನ ಬಾಯಿರುಚಿಗಾಗಿ ತಮ್ಮ ದೇಹಕ್ಕೆ ಹಿಡಿಸದ ಪದಾರ್ಥವನ್ನು ಕೂಡ ತಿಂದು ತೊಂದರೆ ಅನುಭವಿಸುತ್ತಾರೆ. ಶ್ರಮದ ಕೆಲಸ ಮಾಡುವವರಿಗೆ ಕೆಲವೊಂದು ಆಹಾರವನ್ನು ಕರಗಿಸುವ ಶಕ್ತಿಯಿರುತ್ತದೆ. ಆದರೆ ಹಗುರ ಕೆಲಸ ಮಾಡುವ, ಕೂತಲ್ಲೇ ಇರುವ ವ್ಯಕ್ತಿಗಳು ಕೆಲವು ಪಾಶ್ಚಿಮಾತ್ಯರ ಆಹಾರಗಳನ್ನು ಸೇವಿಸಲು ಮುಂದಾದರೆ ತೊಂದರೆ ತಪ್ಪಿದಲ್ಲ.

ಸಾಮಾನ್ಯವಾಗಿ ಯಾವುದಾದರೊಂದು ಕಾಯಿಲೆಯಿಂದ ಬಳಲುತ್ತಿರುವವರು ತಮಗೆ ವೈದ್ಯರು ಹೇಳಿದ ಆಹಾರ ಪದಾರ್ಥವನ್ನು ಮಾತ್ರ ಸೇವಿಸಬೇಕು. ಅಷ್ಟೇ ಅಲ್ಲ ತಮ್ಮ ಆರೋಗ್ಯಕ್ಕೆ ಪೂರಕವಾದ ತಿನಿಸನ್ನು ಮಾತ್ರ ಸ್ವೀಕರಿಸಬೇಕು. ಅದನ್ನು ಹೊರತುಪಡಿಸಿ ತಮ್ಮ ಆರೋಗ್ಯಕ್ಕೆ ಅದು ಸರಿ ಹೊಂದಲ್ಲ ಎಂಬುದು ಗೊತ್ತಿದ್ದೂ ಸೇವಿಸಿದರೆ ತೊಂದರೆ ತಪ್ಪಿದಲ್ಲ.

ಆರೋಗ್ಯದ ವಿಚಾರದಲ್ಲಿ ಒಂದು ಹಂತದಲ್ಲಿ ನಾವಂದುಕೊಂಡಂತೆ ಎಲ್ಲವೂ ನಡೆಯುತ್ತದೆ. ಆದರೆ ಅದು ಹೆಚ್ಚು ದಿನ ಹಾಗೆಯೇ ಉಳಿಯಲಾರದು. ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿ ಇರುವ ತನಕ ಏನೂ ತೊಂದರೆಗಳು ಬಾಧಿಸುವುದಿಲ್ಲ. ಆದರೆ ನಮ್ಮ ಆಹಾರ ಪದ್ಧತಿಯಲ್ಲಿ ಸ್ವಲ್ಪ ಎಡವಟ್ಟಾದರೂ ಕಾಯಿಲೆಗಳು ಅಡರಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಆದುದರಿಂದ ನಮ್ಮ ಆಹಾರದ ಕ್ರಮಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಮತ್ತು ಅವು ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು.

ಆಹಾರ ಸೇವನೆಗೂ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ ಅದರಂತೆ ಸೇವನೆ ಮಾಡಬೇಕು. ತುಂಬಾ ಹಸಿದ ಬಳಿಕ ಊಟ ಮಾಡುವುದು, ಅಯ್ಯೋ ಮತ್ತೆ ಮಾಡಿದರಾಯಿತು ಎಂದು ಉದಾಸೀನ ತೋರುವುದು ಸಲ್ಲದು. ಅಷ್ಟೇ ಅಲ್ಲದೆ ಬಾಯಿಗೆ ರುಚಿಯಾಯಿತೆಂದು ಹೆಚ್ಚು ತಿಂದು, ಇತರೆ ಸಮಯಗಳಲ್ಲಿ ತಿನ್ನದೆ ಕಾಲ ಕಳೆಯುವುದು ಕೂಡ ಒಳ್ಳೆಯ ಅಭ್ಯಾಸವಲ್ಲ. ಆದ್ದರಿಂದ ನಾವು ಆದಷ್ಟು ಆಹಾರ ಸೇವನೆಯತ್ತ ನಿಗಾ ವಹಿಸಿ, ಸ್ವಚ್ಛತೆಗೆ ಆದ್ಯತೆ ನೀಡಿ, ದುರಾಭ್ಯಾಸಗಳನ್ನು ಬದಿಗೊತ್ತಿದರೆ ಆರೋಗ್ಯವಂತ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ತೊಂದರೆ ತಪ್ಪಿದಲ್ಲ...