ಕಿಡ್ನಿಯ ಆರೋಗ್ಯದತ್ತ ಕಾಳಜಿಯಿರಲಿ...

ಕಿಡ್ನಿಯ ಆರೋಗ್ಯದತ್ತ ಕಾಳಜಿಯಿರಲಿ...

LK   ¦    Mar 14, 2019 04:39:05 PM (IST)
ಕಿಡ್ನಿಯ ಆರೋಗ್ಯದತ್ತ ಕಾಳಜಿಯಿರಲಿ...

ಮಾರ್ಚ್ 14ನ್ನು ವಿಶ್ವ ಕಿಡ್ನಿ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಇವತ್ತಿನ ದಿನಗಳಲ್ಲಿ ಅತಿ ಹೆಚ್ಚಾಗಿ ಕಿಡ್ನಿಗೆ ಸಂಬಂಧಿಸಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ಸವಾಲು ಆಗಿದೆ.

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಬೆನ್ನುಹುರಿಯ ಅಕ್ಕಪಕ್ಕದಲ್ಲಿ ಎರಡು ಹುರುಳಿಕಾಳಿನಾಕಾರದ ಮುಷ್ಠಿಗಾತ್ರದ ಮೂತ್ರಪಿಂಡ(ಕಿಡ್ನಿ)ಗಳಿರುತ್ತವೆ. ಈ ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿ ಬದುಕಲು ಸಾಧ್ಯವಾಗುತ್ತದೆ. ನಮ್ಮ ಶರೀರಕ್ಕೆ ಆಹಾರದ ಮೂಲಕ ಬಂದಿರುವ ವ್ಯರ್ಥ ಪದಾರ್ಥಗಳನ್ನು ಶೋಧಿಸಿ ಅವುಗಳನ್ನು ಶರೀರದಿಂದ ಮೂತ್ರದ ಮೂಲಕ ಉತ್ಪಾದಿಸಿ ಹೊರಹಾಕುವ ಕೆಲಸವನ್ನು ಮಾಡುತ್ತಿರುತ್ತವೆ. ಅಷ್ಟೇ ಅಲ್ಲದೆ ಶರೀರಕ್ಕೆ ಅಗತ್ಯ ಪ್ರಮಾಣದಲ್ಲಿ ಬೇಕಾಗುವ ಸೋಡಿಯಂ, ಪೊಟ್ಯಾಸಿಯಂ ಮತ್ತು ನೀರಿನಾಂಶವನ್ನು ಕಾಪಾಡುವ ಕೆಲಸವನ್ನು ಕೂಡ ಮೂತ್ರಪಿಂಡಗಳು ಮಾಡುತ್ತಿರುತ್ತವೆ. ರಕ್ತದ ಒತ್ತಡವನ್ನು ಸಮತೋಲನವಾಗಿರಿಸುವುದು, ಕೆಂಪು ರಕ್ತಕಣಗಳನ್ನು ನಿರ್ಮಾಣ ಮಾಡುವುದು, ಮೂಳೆಗಳನ್ನು ಗಟ್ಟಿಗೊಳಿಸುವ ಕಾರ್ಯವನ್ನು ಮಾಡುತ್ತವೆ.

ಇವೆಲ್ಲವೂ ಮೂತ್ರಪಿಂಡಗಳ ಕೆಲಸವಾಗಿದ್ದು, ಇಲ್ಲಿ ಒಂದೇ ಒಂದು ಹೆಚ್ಚು ಕಮ್ಮಿಯಾದರೂ ಅದರ ಪರಿಣಾಮ ಶರೀರದ ಮೇಲೆ ಬೀಳುತ್ತದೆ. ಒಂದು ವೇಳೆ ಮೂತ್ರಪಿಂಡದಲ್ಲಿ ದೋಷ(ಕಾಯಿಲೆ) ಕಂಡುಬಂದರೆ ರಕ್ತದಿಂದ ಸಾಕಷ್ಟು ಪ್ರಮಾಣದಲ್ಲಿ ವ್ಯರ್ಥ ಪದಾರ್ಥಗಳನ್ನು ಶೋಧಿಸಲು ಸಾಧ್ಯವಾಗದೆ ವ್ಯರ್ಥ ಪದಾರ್ಥಗಳು ಮತ್ತು ಎಲೆಕ್ಟ್ರೋಲೈಟ್(ಸೋಡಿಯಂ ಮತ್ತು ಪೊಟ್ಯಾಸಿಯಂ)ಗಳು ರಕ್ತದಲ್ಲಿ ಶೇಖರಣೆಗೊಳ್ಳುತ್ತವೆ. ಇದರಿಂದ ಆರೋಗ್ಯ ಹದಗೆಡುತ್ತದೆ.

ಕಿಡ್ನಿ ಸಮಸ್ಯೆಯಿದೆ ಎಂದಾದರೆ ಅದರ ಲಕ್ಷಣಗಳು ಹೊರ ಕಾಣುತ್ತದೆ. ಅದು ಏನೆಂದರೆ ಕಾಲು ಮತ್ತಿತರ ಶರೀರದ ಭಾಗಗಳು ಊದಿಕೊಳ್ಳುವುದು, ವಿಪರೀತ ರಕ್ತದೊತ್ತಡ, ರಕ್ತಹೀನತೆಯಿಂದ ಬಿಳಿಚಿಕೊಳ್ಳುವುದು, ದುರ್ಬಲತೆ, ಕಡಿಮೆ ಅಥವಾ ಸಾಮಾನ್ಯ ಪ್ರಮಾಣದ ಮೂತ್ರ, ವಾಕರಿಕೆ, ಒಣಗಿದ ನವೆಯಾದ ಚರ್ಮ, ಹಸಿವಿಲ್ಲದಿರುವಿಕೆ, ಪಾದಗಳಲ್ಲಿ ಹೆಚ್ಚು ಬಿರುಕು, ಮುಖದಲ್ಲಿ ಅದರಲ್ಲೂ ಕಣ್ಣುರೆಪ್ಪೆಯ ಕೆಳಭಾಗದಲ್ಲಿ ಊದಿಕೊಳ್ಳುತ್ತದೆ. ಈ ಸಮಸ್ಯೆಗಳು ಕಂಡು ಬಂದಲ್ಲಿ ಅದು ಕಿಡ್ನಿ ಸಮಸ್ಯೆ ಎನ್ನುವುದು ಖಾತ್ರಿಯಾದಂತೆಯೇ.

ಇನ್ನು ಮೂತ್ರಪಿಂಡದ ಕಾಯಿಲೆಗಳನ್ನು ಅಲ್ಪಕಾಲೀನ ಮೂತ್ರಪಿಂಡದ ವಿಫಲತೆ ಮತ್ತು ದೀರ್ಘಕಾಲೀನ ಮೂತ್ರಪಿಂಡದ ವಿಫಲತೆ ಎಂದು ಹೇಳುತ್ತಾರೆ. ಅಲ್ಪಕಾಲೀನ ಮೂತ್ರಪಿಂಡದ ವಿಫಲತೆಗೆ ವಿಪರೀತ ರಕ್ತನಷ್ಟ, ತೀವ್ರತರಹದ ಸುಟ್ಟಗಾಯಗಳು, ವಿಷಪ್ರವೇಶ, ಗಂಭೀರವಾದ ಗಾಯ, ಮೂತ್ರಾಂಗದಲ್ಲಿ ಕಲ್ಲು ಸೇರುವಿಕೆ ಕಾರಣವಾದರೆ ದೀರ್ಘಕಾಲೀನ ಮೂತ್ರಪಿಂಡದ ವಿಫಲತೆಯಲ್ಲಿ ಮಧುಮೇಹ, ಹೆಚ್ಚಿನ ರಕ್ತದೊತ್ತಡ, ಅನುವಂಶೀಯವಾಗಿ ಬಂದ ಮೂತ್ರಪಿಂಡ ಕಾಯಿಲೆ, ಔಷಧಿ ಸೇವನೆ, ಔಷಧಿ ಸೇವನೆಯ ಅಡ್ಡ ಪರಿಣಾಮಗಳು ಕಾರಣವಾಗುತ್ತವೆ.

ಮೂತ್ರಾಂಗ ಕಾಯಿಲೆ ಬಗ್ಗೆ ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಅಂಶವೇನೆಂದರೆ, ಅಲ್ಪಕಾಲದ ಮೂತ್ರಪಿಂಡದ ಕಾಯಿಲೆಗಳನ್ನು ಗುಣಪಡಿಸಬಹುದು. ಆದರೆ ದೀರ್ಘಕಾಲೀನ ಮೂತ್ರಾಂಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ ಒಮ್ಮೆ ಕಾಣಿಸಿಕೊಂಡರೆ ಮತ್ತೆ ಅದು ಆತನ ಸಂಗಾತಿಯಾಗಿ ಬಿಡುತ್ತದೆ. ಆಗ ಅದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಇರುವುದೊಂದೇ ಮಾರ್ಗ ಅದೇನೆಂದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ವೈದ್ಯರು ಶಿಫಾರಸ್ಸು ಮಾಡಿದ ಔಷಧಿಯನ್ನು ಸೇವಿಸುವುದು ಮತ್ತು ಆಹಾರದಲ್ಲಿ ಪಥ್ಯವನ್ನು ಕಾಪಾಡಿಕೊಳ್ಳುವುದು.

ಶಕ್ತಿ(ಕ್ಯಾಲೋರಿ) ಇರುವಂತಹ ಪದಾರ್ಥಗಳಾದ ಗ್ಲೂಕೋಸ್, ಸಕ್ಕರೆ, ಪಿಷ್ಟಪದಾರ್ಥಗಳು, ಕೊಬ್ಬು ಮತ್ತು ಎಣ್ಣೆ,(ಮಧುಮೇಹ ಇರುವವರು ಸಂಪೂರ್ಣವಾಗಿ ಸಿಹಿಯನ್ನು ನಿಲ್ಲಿಸಬೇಕು) ಮೊದಲಾದ ಪದಾರ್ಥಗಳನ್ನು ದೂರವಿಡಬೇಕು. ಪ್ರೊಟೀನ್ ಹೆಚ್ಚಿರುವ ಆಹಾರಗಳಾದ ಹಾಲು ಮತ್ತು ಹಾಲಿನ ಉತ್ಪನ್ನಗಳು, ಸೋಯಾ ಪದಾರ್ಥಗಳು, ಮಾಂಸಾಹಾರಗಳು, ಮೊಟ್ಟೆ ಮತ್ತು ಬೇಳೆಕಾಳುಗಳನ್ನು ನಿರ್ಬಂಧಿಸಬೇಕು. ಇನ್ನು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ರೋಗಿಗಳು ಪ್ರೊಟೀನ್‍ಯುಕ್ತ ಆಹಾರವನ್ನು ಸೇವಿಸಬೇಕಾಗುತ್ತದೆ. ಏಕೆಂದರೆ ಡಯಾಲಿಸಸ್ ಸಮಯದಲ್ಲಿ ಹೆಚ್ಚು ಪ್ರೊಟೀನ್ ನಷ್ಟವಾಗುತ್ತದೆ.

ಸೇವಿಸುವ ಆಹಾರದಲ್ಲಿ ಸೋಡಿಯಂ ಹೆಚ್ಚಾದರೂ ಮೂತ್ರಾಂಗ ರೋಗವಿರುವ ರೋಗಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಉಪ್ಪು, ಅಡುಗೆ ಸೋಡಾ, ಚೀಸ್, ಎಲ್ಲಾ ಬಗೆಯ ಹಪ್ಪಳ, ಸಾಸ್, ಜಾಮ್, ಜೆಲ್ಲಿ, ಕೆಚಪ್‍ಗಳು, ಸೂಪ್ ಕ್ಯೂಬ್ಸ್, ಚೈನೀಸ್ ಸಾಲ್ಟ್, ಒಣಗಿದ ಮೀನು, ಬೇಕಿಂಗ್ ಪೌಡರ್, ಕ್ಯಾನ್‍ನಲ್ಲಿ ಬರುವ ಆಹಾರ ಪದಾರ್ಥಗಳು, ಉಪ್ಪು ಬೆರೆಸಿದ ಚಿಪ್ಸ್, ನಟ್ಸ್, ಬಿಸ್ಕತ್‍ಗಳು, ಉಪ್ಪಿನ ಕಾಯಿ, ಮೃದುಪಾನೀಯಗಳು, ಬೋರ್ನ್‍ವೀಟಾ, ಚಾಕೊಲೆಟ್, ಡ್ರೈಫ್ರೂಟ್ಸ್, ಪುಡ್ಡಿಂಗ್ ಮಿಕ್ಸ್ ಮೊದಲಾದವುಗಳನ್ನು ಸೇವಿಸಬಾರದು.

ಪೊಟಾಶಿಯಂ ಅಂಶವಿರುವ ತರಕಾರಿಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲ ತರಕಾರಿ, ಬೇಳೆಯಲ್ಲಿ ಪೊಟಾಶಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಆದ್ದರಿಂದ ಪೊಟಾಶಿಯಂ ಅಂಶವನ್ನು ಪ್ರತ್ಯೇಕಿಸಿ ಸೇವಿಸಬೇಕಾಗುತ್ತದೆ. ವೈದ್ಯರು ನೀಡುವ ಸಲಹೆಯಂತೆ ಆಹಾರ ಸೇವನೆಯಲ್ಲಿ ನಿಗಾ ವಹಿಸಿದ್ದೇ ಆದಲ್ಲಿ ಮೂತ್ರಾಂಗ ರೋಗ ಕಾಣಿಸಿಕೊಂಡು ಬಳಲುತ್ತಿರುವವರು ನಿಯಂತ್ರಣಕ್ಕೆ ತಂದುಕೊಳ್ಳಲು ಸಾಧ್ಯವಿದೆ.