ಡಿಹೈಡ್ರೇಷನ್ ತಪ್ಪಿಸಲು ಹಣ್ಣು-ತರಕಾರಿ ಸೇವಿಸಿ

ಡಿಹೈಡ್ರೇಷನ್ ತಪ್ಪಿಸಲು ಹಣ್ಣು-ತರಕಾರಿ ಸೇವಿಸಿ

LK   ¦    Mar 14, 2018 12:52:30 PM (IST)
ಡಿಹೈಡ್ರೇಷನ್ ತಪ್ಪಿಸಲು ಹಣ್ಣು-ತರಕಾರಿ ಸೇವಿಸಿ

ಬೇಸಿಗೆಯಲ್ಲಿ ನೆತ್ತಿ ಸುಡುವ ಬಿಸಿಲಿಗೆ ಇಡೀ ದೇಹ ತಲ್ಲಣಗೊಳ್ಳುವುದು ಸಾಮಾನ್ಯ. ಕುಡಿದಷ್ಟು ಇಂಗದ ದಾಹ ಕೆಲವೊಮ್ಮೆ ನಮ್ಮನ್ನು ನಾಲ್ಕು ಹೆಜ್ಜೆ ಮುಂದೆ ನಡೆಯದಂತೆ ಮಾಡಿ ಬಿಡಬಹುದು. ಹೀಗಿರುವಾಗ ಬಿಸಿಲಲ್ಲಿ ಓಡಾಡುವವರು ಒಂದಷ್ಟು ಜಾಗ್ರತೆ ವಹಿಸುವುದು ಬಹುಮುಖ್ಯವಾಗಿದೆ.

ಬಿಸಿಲಲ್ಲಿ ಓಡಾಡುವಾಗ ಹೆಚ್ಚಿನವರನ್ನು ಡಿಹೈಡ್ರೇಷನ್ ಕಾಡುತ್ತದೆ. ಇದನ್ನು ತಪ್ಪಿಸಬೇಕಾದರೆ ನಮ್ಮ ದೇಹದಲ್ಲಿ ಹೆಚ್ಚಿನ ನೀರಿನಾಂಶ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಹಣ್ಣು, ತರಕಾರಿ, ಸೌತೆಕಾಯಿಯನ್ನು ಹೆಚ್ಚು ಸೇವಿಸುವುದು ಒಳ್ಳೆಯದು. ಇದರಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದಾಹವನ್ನು ಕಡಿಮೆ ಮಾಡುತ್ತದೆ.

ಇನ್ನು ಕಲ್ಲಂಗಡಿ, ಕರ್ಬೂಜ, ಸೊಗದೆಬೇರು, ಜೀರಿಗೆ, ನಿಂಬೆ, ಮೂಸಂಬಿ, ಪುನರ್ ಪುಳಿ ಹೀಗೆ ವಿವಿಧ ಹಣ್ಣಿನ ರಸದಿಂದ ಮಾಡಲಾದ ಪಾನೀಯಗಳನ್ನೇ ಸೇವಿಸುವುದು ಒಳಿತು. ಎಳನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಇದು ಡಿಹೈಡ್ರೇಷನ್ನನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಜತೆಗೆ ಬಿಸಿಲಿಗೆ ಚರ್ಮದ ಮೇಲೆ ಆಗುವ ಪರಿಣಾಮವನ್ನು ಎಳನೀರಿನಲ್ಲಿರುವ ಖನಿಜ, ವಿಟಮಿನ್ ಗಳು ತಡೆಯುತ್ತವೆ ಹಾಗೆಯೇ ಹೊಳಪು ನೀಡಲು ಸಹಾಯ ಮಾಡುತ್ತವೆಯಂತೆ.

ಕಲ್ಲಂಗಡಿಯ ರಸವನ್ನು ಸೇವಿಸುವುದರಿಂದಲೂ ಉತ್ತಮ ಪ್ರಯೋಜನವನ್ನು ಕಾಣಬಹುದು. ಈ ಹಣ್ಣಿನಲ್ಲಿ ಪೊಟಾಷಿಯಂ, ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೋಡಿಯಂ ಹೇರಳವಾಗಿ ಇರುವುದರಿಂದ ಆರೋಗ್ಯವನ್ನು ಕಾಪಾಡುತ್ತದೆ. ಬಿಸಿಲಲ್ಲಿ ಓಡಾಡಿ ಬಂದವರು ನಿಂಬೆ ರಸವನ್ನು ಸೇವಿಸಿದರೆ ವಿಟಮಿನ್ ಸಿ' ಅಂಶ ಇರುವುದರಿಂದ ಡಿಹೈಡ್ರೇಷನ್ ಸಮಸ್ಯೆ ಉಂಟಾಗುವುದಿಲ್ಲ.

ಇನ್ನು ಪ್ರತಿದಿನ ಒಂದು ಬಟ್ಟಲು ಬೀಟ್ರೋಟಿನ ರಸವನ್ನು ಸೇವಿಸಿದರೆ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಇನ್ನು ಬೀಟ್ರೋಟಿನಲ್ಲಿರುವ ನೈಟ್ರೇಟ್ ರಕ್ತ ಕಣಗಳನ್ನು ಅಗಲಗೊಳಿಸುತ್ತದೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಹಸಿರು ಸೊಪ್ಪುಗಳು ಮತ್ತು ಬೀಟ್ರೂಟ್ ನಲ್ಲಿ ಜೀರ್ಣವಾಗಿ ನೈಟ್ರೇಟ್ ಪ್ರಮಾಣ ಹೇರಳವಾಗಿದೆ. ಇದು ಹೃದಯದ ಆರೋಗ್ಯವನ್ನು ನಿಸ್ಸಂದೇಹವಾಗಿ ಕಾಪಾಡುತ್ತದೆ. ಬೇಸಿಗೆಯಲ್ಲಿ ಬಿಟ್ರೋಟ್ ನಂತಹ ತರಕಾರಿಗಳು ಹಲವು ರೀತಿಗಳಲ್ಲಿ ಉಪಯೋಗಕ್ಕೆ ಬರುತ್ತವೆ. ಬೇಸಿಗೆಯ ದಿನಗಳಲ್ಲಿ ಗಂಜಿ ಅನ್ನಸೇವನೆ ಇನ್ನಷ್ಟು ಉಪಯೋಗಕರ. ಇದರಿಂದ ಆರೋಗ್ಯ ಮಾತ್ರವಲ್ಲದೆ, ದಾಹ ತಣಿಸಲು ಕೂಡ ಸಾಧ್ಯವಾಗುತ್ತದೆ.

ಈಗಾಗಲೇ ರಣ ಬಿಸಿಲು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಸರಿಯಾಗಿ ಮಳೆಯಾಗದೆ ಇಡೀ ವಾತಾವರಣ ಉಷ್ಣಾಂಶದಿಂದ ಕೂಡಿರುವುದರಿಂದ ಬಿಸಿಲಿನಲ್ಲಿ ಕೆಲಸ ಮಾಡುವುದಿರಲಿ ನಡೆದಾಡುವುದೇ ಕಷ್ಟವಾದಂತಾಗಿದೆ. ಒಂದು ನಾಲ್ಕು ಹೆಜ್ಜೆ ಹಾಕಿದರೂ ಸುಸ್ತಾಗುತ್ತೆ ಬಾಯಾರಿಕೆಯಾಗುತ್ತದೆ. ಜತೆಗೆ ನೀರು, ಜ್ಯೂಸ್ ಕುಡಿಯಬೇಕೆನಿಸುತ್ತಿದೆ. ಹೀಗಾಗಿ ತಕ್ಷಣಕ್ಕೆ ತಂಪಾಗುವ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಆರೋಗ್ಯಕ್ಕೆ ಒಳಿತು ಮಾಡುವ ಪಾನೀಯಗಳನ್ನು ಸೇವಿಸುವುದು ಒಳ್ಳೆಯದು.

ಆಧುನಿಕವಾಗಿ ಸಿಗುವಂತಹ ಬಾಯಿರುಚಿಯ ಪಾನೀಯಗಳು ತಕ್ಷಣಕ್ಕೆ ತಂಪು ನೀಡುತ್ತವೆಯಾದರೂ ನಮ್ಮ ಬಾಯಾರಿಕೆಯನ್ನು ಸಂಪೂರ್ಣವಾಗಿ ನೀಗಿಸಲಾರವು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಇನ್ನು ಬಿಸಿಲು ಇದ್ದಾಗ ಎಷ್ಟು ನೀರನ್ನು ಕುಡಿದರೂ ತೃಪ್ತಿಯಾಗುವುದಿಲ್ಲ. ಬಾಯಾರಿಕೆ ತೀರುವುದೇ ಇಲ್ಲ. ಇದಕ್ಕೆ ಕಾರಣ ನೀರು ಬೆವರಿನ ರೂಪದಲ್ಲಿ ದೇಹದಿಂದ ಹರಿದು ಹೋಗುತ್ತಿರುತ್ತದೆ. ಆದ್ದರಿಂದ ಬೇಸಿಗೆ ದಿನಗಳಲ್ಲಿ ನಮ್ಮ ದೇಹದಲ್ಲಿ ನೀರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ