ಮಾನಸಿಕ ಆರೋಗ್ಯಕ್ಕೆ ಶಿಸ್ತುಬದ್ಧ ಜೀವನ ಅಗತ್ಯ

ಮಾನಸಿಕ ಆರೋಗ್ಯಕ್ಕೆ ಶಿಸ್ತುಬದ್ಧ ಜೀವನ ಅಗತ್ಯ

LK   ¦    Jan 31, 2020 01:51:22 PM (IST)
ಮಾನಸಿಕ ಆರೋಗ್ಯಕ್ಕೆ ಶಿಸ್ತುಬದ್ಧ ಜೀವನ ಅಗತ್ಯ

ಇವತ್ತು ನಮಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯ. ಏಕೆಂದರೆ ಆರೋಗ್ಯ ಇದ್ದರಷ್ಟೆ ದುಡಿಯಲು ಸಾಧ್ಯ. ದುಡಿದರಷ್ಟೆ ಒಂದಷ್ಟು ಸಂಪಾದಿಸಲು ಸಾಧ್ಯ. ಸಂಪಾದಿಸಿದರೆ ಮಾತ್ರ ಅಗತ್ಯ ವಸ್ತುಗಳನ್ನು ಕೊಂಡು ಜೀವನ ಸಾಗಿಸಬಹುದಾಗಿದೆ.

ಇವತ್ತು ನಾವ್ಯಾರು ಬಿಡುವಾಗಿಲ್ಲ. ಒಂದಲ್ಲ ಒಂದು ರೀತಿಯ ಕೆಲಸಗಳನ್ನು ಮೈಗೆ ಅಂಟಿಸಿಕೊಂಡು ಸದಾ ಒಂದಲ್ಲ ಒಂದು ರೀತಿಯ ಒತ್ತಡದಿಂದ ಬಳಲುತ್ತಿರುತ್ತೇವೆ. ಹೀಗಾಗಿ ರೋಗಗಳು ಬಹುಬೇಗ ನಮ್ಮ ಮೇಲೆ ದಾಳಿ ಮಾಡುತ್ತವೆ. ರೋಗಗಳಿಂದ ಮುಕ್ತವಾಗ ಬೇಕಾದರೆ ಚಿಕಿತ್ಸೆ ಪಡೆಯಬೇಕು. ಚಿಕಿತ್ಸೆ ಪಡೆಯಬೇಕಾದರೆ ಹಣವಂತು ಬೇಕೇ ಬೇಕು. ಹೀಗಿರುವಾಗ ಕಷ್ಟಪಟ್ಟು ದುಡಿದ ಹಣವನ್ನು ನಮ್ಮ ಆರೋಗ್ಯಕ್ಕೆ ಸುರಿಯುವುದಾದರೆ ಶ್ರಮವಹಿಸಿ ದುಡಿಯುವುದಾದರೂ ಏಕೆ? ಹೀಗೆಂಬ ಪ್ರಶ್ನೆಗಳು ನಮ್ಮಲ್ಲಿ ಮೂಡದಿರದು.

ಇವತ್ತು ನಾವು ಮಾನಸಿಕ ಮತ್ತು ದೈಹಿಕವಾಗಿ ಬಳಲುತ್ತಿದ್ದೇವೆ. ಇದರಿಂದ ನಮಗೆ ಗೊತ್ತಿಲ್ಲದಂತೆ ಕಾಯಿಲೆಗಳು ಅಡರಿಕೊಳ್ಳುತ್ತಿವೆ. ಏಕೆ ಹೀಗಾಗುತ್ತಿದೆ ಎಂಬುದನ್ನು ನೋಡುವುದಾದರೆ ಮುಖ್ಯವಾಗಿ ನಮ್ಮಲ್ಲಿನ ಮಾನಸಿಕ ಶಿಸ್ತಿನ ಕೊರತೆಯೇ ಕಾರಣ ಎಂದರೆ ತಪ್ಪಾಗಲಾರದು.

ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯುವಂತೆ ಚಂಚಲವಾಗಿ ಅಂಡಲೆಯುವ ಮನಸ್ಸಿಗೂ ಒಂದು ಕ್ರಮ ಬದ್ಧವಾದಂತಹ ಶಿಸ್ತು ಅಳವಡಿಸಿಕೊಳ್ಳಬೇಕು ಆಗ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಉದಾಹರಣೆಗೆ ಹೇಳುವುದಾದರೆ ಮನಸ್ಸಿಗೊಂದು ಶಿಸ್ತು ಇಲ್ಲದೆ ಹೋದರೆ ಮನಸ್ಸಿಗನುಗುಣವಾಗಿ ಹೇಗೆ ಬೇಕಾದರೂ ವರ್ತಿಸಬಹುದು. ಬೇಕು, ಬೇಡದೆಲ್ಲವನ್ನು ಸೇವಿಸಿ ಆರೋಗ್ಯವನ್ನು ಕೆಡಿಸಿಕೊಳ್ಳಬಹುದು. ಆದರೆ ಶಿಸ್ತನ್ನು ಅಳವಡಿಸಿಕೊಂಡಿದ್ದೇ ಆದರೆ ಬಹಳಷ್ಟು ಸಮಸ್ಯೆಗಳನ್ನು ನಾವೇ ತಡೆದುಕೊಳ್ಳಬಹುದಾಗಿದೆ.

ಹಾಗೆ ನೋಡಿದರೆ ನಮ್ಮ ಮನಸ್ಸನ್ನು ಹಿಡಿತಕ್ಕೆ ತರಬೇಕಾದರೆ ಆಧ್ಯಾತ್ಮದ ಮೂಲಕವೇ ಸಾಧ್ಯ ಎನ್ನುವುದನ್ನು ಚಿಂತಕರು ಮಾಡಿತೋರಿಸಿದ್ದಾರೆ. ದೇವರ ಬಗ್ಗೆ ಯಾರಿಗೆ ನಂಬಿಕೆಯಿದೆಯೋ ಅವರು ಸುಲಭವಾಗಿ ಮನಸ್ಸನ್ನು ಹಿಡಿತಕ್ಕೆ ತರಬಹುದು. ಮನಸ್ಸು ದುರ್ಮಾಗದತ್ತ ಸೆಳೆಯುತ್ತಿದೆ ಎಂಬುದು ನಮ್ಮ ಅನುಭವಕ್ಕೆ ಬಂದಾಗ ತಕ್ಷಣ ದೇವರ ಧ್ಯಾನದಲ್ಲಿ ತೊಡಗಿದ್ದೇ ಆದರೆ ಮನಸ್ಸು ಆ ಕಡೆಯಿಂದ ಹಿಂತಿರುಗಿ ಬಿಡುತ್ತದೆ ಎಂಬುದು ಆಧ್ಯಾತ್ಮಿಕ ಚಿಂತಕರ ಅಭಿಪ್ರಾಯವಾಗಿದೆ.

ಮನುಷ್ಯ ತನ್ನ ಮನಸ್ಸನ್ನು ಹತೋಟಿಗೆ ತರುವಲ್ಲಿ ಎರಡು ರೀತಿಯ ಆಂತರಿಕ ಶಿಸ್ತುಗಳನ್ನು ರೂಢಿಸಿಕೊಳ್ಳಬಹುದಾಗಿದೆಯಂತೆ. ಅವುಗಳೆಂದರೆ ಮೊದಲನೆಯದಾಗಿ ಸ್ಥಾಯಿಯಾದ ಮೂಲಭೂತ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು. ಎರಡನೆಯದಾಗಿ ಅತ್ಯಂತ ಪ್ರಬಲವಾದ ನಿರೋಧಕಗಳನ್ನು ಅಣಿಗೊಳಿಸುವುದು.

ಈ ಎರಡು ಪ್ರಕಾರದ ಶಿಸ್ತುಗಳಲ್ಲಿ ಮೊದಲನೆಯದು ಮನಸ್ಸಿಗೆ ಆರೋಗ್ಯ ಪೂರ್ಣವಾದ ನಿರ್ದೇಶನವನ್ನು ಒದಗಿಸಿದರೆ, ಎರಡನೆಯದು ತುರ್ತುಪರಿಸ್ಥಿತಿಗಳಲ್ಲಿ ಮನಸ್ಸನ್ನು ದಿಕ್ಕೆಡದಂತೆ ಕಾಪಾಡುತ್ತದೆ. ಈ ಎರಡು ಅತ್ಯುತ್ತಮವಾಗಿದ್ದು, ಮೊದಲನೆಯ ಪ್ರಕಾರದ ಶಿಸ್ತನ್ನು ರೂಢಿಸಿಕೊಳ್ಳದಿದ್ದರೆ, ಎರಡನೆಯದನ್ನು ರೂಢಿಸಿಕೊಳ್ಳಲು ಸಾಧ್ಯವಾಗದು. ಮೊದಲನೆಯದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳದಿದ್ದರೆ ಎರಡನೆಯದಕ್ಕೆ ಅಗತ್ಯವಾದ ಶಕ್ತಿ ಸಾಮಥ್ರ್ಯ ದೊರೆಯಲಾರದು. ಇದೆರಡು ಒಂದಕ್ಕೊಂದು ಸಂಬಂಧಿಸಿದ್ದಾಗಿರುವುದರಿಂದ ಎರಡನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವುದು ಬಹು ಮುಖ್ಯವಾಗಿದೆ.

ಮನಸಿಗೆ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ಮನಸನ್ನು ಹತೋಟಿಗೆ ತರಬೇಕಾದರೆ ಸ್ಥಾಯಿಯಾದ ಮತ್ತು ಮೂಲಭೂತವಾದ ಕೆಲವು ವಿಧಾನಗಳನ್ನು ರೂಪಿಸಿಕೊಳ್ಳುವಲ್ಲಿ ನಮ್ಮ ಬದುಕನ್ನು ಒಂದು ರಚನಾತ್ಮಕ ಚಿಂತನೆಯ ಚೌಕಟ್ಟಿನೊಳಕ್ಕೆ ತಂದುಕೊಳ್ಳಬೇಕು. ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಪೂರ್ವಾಪರ ವಿವೇಚನೆಯಿಂದ ಕೂಡಿದ ಒಂದು ವ್ಯವಸ್ಥೆಯಿರುವಂತೆ ನೋಡಿಕೊಳ್ಳಬೇಕು ಮತ್ತು ಒಂದು ನೈತಿಕ ಹೊಣೆಗಾರಿಕೆಯಿಂದ ನಿರ್ದೇಶಿತವಾಗಿರಬೇಕು.

ಮನಸ್ಸು ಅಷ್ಟು ಸುಲಭಕ್ಕೆ ನಮ್ಮ ಹಿಡಿತಕ್ಕೆ ಸಿಲುಕುವುದಿಲ್ಲ. ಅದು ಎಲ್ಲೆಲ್ಲೋ ಅಲೆಯುತ್ತಲೇ ಇರುತ್ತದೆ. ಹೀಗಾಗಿ ನಾವು ಅನುಭವಿಸುವ ಕಷ್ಟನಷ್ಟಗಳಿಗೆ ನಮ್ಮ ಮನಸ್ಸು ಕೂಡ ಕಾರಣವಾಗಿ ಬಿಡುತ್ತದೆ. ಹೀಗಾಗಿ ಅದರತ್ತ ಸದಾ ಎಚ್ಚರವಾಗಿರಬೇಕು. ಮನಸ್ಸನ್ನು ಹಿಡಿತಕ್ಕೆ ತಂದುಕೊಳ್ಳಬೇಕಾದರೆ ಮನಸ್ಸಿನ ಮಾಮೂಲಿ ಸ್ವಭಾವವಾದ ಚಾಂಚಲ್ಯವನ್ನು ತಡೆಗಟ್ಟುವುದು ಅಗತ್ಯ. ಈ ಬಗ್ಗೆ ಸ್ವಾಮಿ ವಿವೇಕಾನಂದರು ತಮ್ಮ ರಾಜಯೋಗದಲ್ಲಿ ಮನಸ್ಸಿನ ಚಂಚಲ ಸ್ವಭಾವದ ಬಗ್ಗೆ ತುಂಬಾ ಅರ್ಥಪೂರ್ಣವಾಗಿ ವರ್ಣಿಸಿದ್ದಾರೆ.

ಮನಸ್ಸನ್ನು ಹಿಡಿತಕ್ಕೆ ತರುವುದು ಅದೆಷ್ಟು ಕಷ್ಟ ಎಂಬುದಕ್ಕೆ ಅವರು ಮನಸ್ಸನ್ನು ಹುಚ್ಚು ಹಿಡಿದ ಕೋತಿಗೆ ಹೋಲಿಸಿದ್ದಾರೆ.

ಮನುಷ್ಯನ ಮನಸ್ಸು ಈ ಜನ್ಮತ್ತ ಚಂಚಲವಾದ ಕೋತಿಯ ಹಾಗೆ. ಆಸೆಯ ಹೆಂಡವನ್ನು ಕುಡಿದು, ಅದು ತನ್ನ ತಳಮಳವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತದೆ. ಆಸೆಗಳು ಮನಸ್ಸನ್ನು ಸ್ವಾಧೀನಪಡಿಸಿಕೊಂಡ ಮೇಲೆ ಇತರರ ಅಭ್ಯುದಯವನ್ನು ಕುರಿತು ಕರುಬುವ ಈಷ್ರ್ಯೆ ಎಂಬ ಚೇಳು ಅದನ್ನು ಕುಟುಕುತ್ತದೆ. ಕೊನೆಗೆ ತನಗೆ ಸರಿ ಸಮಾನರು ಯಾರಿದ್ದಾರೆ ಎಂಬ ಅಹಂಕಾರವೆಂಬ ದೆವ್ವ ಅದನ್ನು ಮುತ್ತಿಕೊಳ್ಳುತ್ತದೆ. ಇಂತಹುಗಳಿಗೆ ಸಿಕ್ಕಿ ಹಾಕಿಕೊಂಡ ಮನಸ್ಸನ್ನು ಹಿಡಿತಕ್ಕೆ ತರುವುದು ಕಷ್ಟವಾಗುತ್ತದೆ. ಮನಸ್ಸಿನ ಚಂಚಲತೆಗಳನ್ನು ತಡೆಯುವ ಮೊದಲು ಮನಸ್ಸು ಹೀಗಾಗಲು ಕಾರಣಗಳೇನು ಎಂಬುದನ್ನು ಕುರಿತು ವಿಚಾರ ಮಾಡಬೇಕು. ನಿಜವಾಗಿ ಯೋಚಿಸಿದರೆ ಗೊತ್ತಾಗುತ್ತದೆ ಮನಸ್ಸಿನ ಚಾಂಚಲ್ಯಕ್ಕೆ ಕಾರಣ ಅದರ ಮಾಲಿನ್ಯಗಳೇ ಎಂದು.

ಯಾರಿಗೆ ನೈತಿಕವಾದ ಅಥವಾ ಇನ್ನಾವುದೇ ನಿಯಮಗಳಿಲ್ಲವೋ ಮತ್ತು ಬದುಕಿಗೆ ಒಂದು ವ್ಯವಸ್ಥೆ ಇಲ್ಲವೋ ಅಂತಹವರು ಮನಸ್ಸನ್ನು ಹತೋಟಿಗೆ ತರುವುದು ಅಸಾಧ್ಯವೆಂದು ಹೇಳಿದರೆ ತಪ್ಪಾಗಲಾರದು. ಆದರೂ ಮೊದಲಿಗೆ ನಾವು ಮನಸ್ಸನ್ನು ಪರಿಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಮನಸ್ಸು ಪರಿಶುದ್ಧವಾದರೆ ಶಿಸ್ತು ರೂಢಿಸಿಕೊಳ್ಳುವುದು ನಮಗೆ ಕಷ್ಟವಾಗುವುದಿಲ್ಲ. ಶಿಸ್ತು ನಮ್ಮಲ್ಲಿದ್ದರೆ ಒಂದೊಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಆರೋಗ್ಯಪೂರ್ಣವಾಗಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.