ಅಸ್ತಮಾ ರೋಗದತ್ತ ನಿರ್ಲಕ್ಷ್ಯ ಬೇಡ!

ಅಸ್ತಮಾ ರೋಗದತ್ತ ನಿರ್ಲಕ್ಷ್ಯ ಬೇಡ!

LK   ¦    Jan 08, 2018 01:46:15 PM (IST)
ಅಸ್ತಮಾ ರೋಗದತ್ತ ನಿರ್ಲಕ್ಷ್ಯ ಬೇಡ!

ಬಹಳಷ್ಟು ಜನ ಅಸ್ತಮಾ ರೋಗದಿಂದ ಬಳಲುತ್ತಿದ್ದಾರೆ. ಇಂತಹವರು ತಮ್ಮ ಜೀವನ ಕ್ರಮದಲ್ಲಿ ಸ್ವಲ್ಪ ಅಸಡ್ಡೆ ಮಾಡಿದರೂ ಅದು ಉಲ್ಭಣವಾಗಿ ಕಾಡಬಹುದು. ಆದ್ದರಿಂದ ಇದರತ್ತ ನಿರ್ಲಕ್ಷ್ಯ ಮಾಡದೆ ಎಚ್ಚರ ವಹಿಸುವುದು ಅಗತ್ಯವಾಗಿದೆ.

ಈಗ ಚಳಿಗಾಲ ಹೀಗಾಗಿ ಅಸ್ತಮಾ ರೋಗದಿಂದ ಬಳಲುವವರು ತುಂಬಾ ಮುಂಜಾಗ್ರತಾ ಕ್ರಮವನ್ನು ವಹಿಸುವುದು ಅಗತ್ಯವಾಗಿದೆ. ಅದರಲ್ಲೂ ಮಹಿಳೆಯರು ತೇವಯುಕ್ತ ಕೂದಲನ್ನು ಚೆನ್ನಾಗಿ ಟವೆಲ್ ನಿಂದದ ಒರೆಸಿ ತೇವ ತೆಗೆಯಬೇಕು. ಕೂದಲಿನಲ್ಲಿ ತೇವದ ಅಂಶ ನಿಲ್ಲದಂತೆ ನೋಡಿಕೊಳ್ಳುವುದು ಬಹು ಮುಖ್ಯವಾಗಿದೆ. ಹಾಗೆ ನೋಡಿದರೆ ಅಸ್ತಮಾ ಎನ್ನುವ ಕಾಯಿಲೆ ಚಿಕ್ಕವರಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನು ಕಾಡುವ ರೋಗವಾಗಿದೆ ಆದ್ದರಿಂದ ಇದರ ಬಗ್ಗೆ ರೋಗಿಗಳು ಎಚ್ಚರಿಕೆಯಿಂದ ಇರುತ್ತೇವೆಯೋ ಅಷ್ಟೇ ಒಳ್ಳೆಯದಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಸ್ತಮಾ ರೋಗವನ್ನು ಕೆಲವೊಮ್ಮೆ ಸಂಪೂರ್ಣ ವಾಸಿಯಾಗದಿದ್ದರೆ ಅದನ್ನು ನಿಯಂತ್ರಣದಲ್ಲಿರಿಸಲು ಏನು ಮಾಡಬೇಕು? ಹೇಗಿರಬೇಕು? ನಮ್ಮ ಜೀವನ ಶೈಲಿಯನ್ನು ಹೇಗೆ ರೂಢಿಸಿಕೊಳ್ಳಬೇಕು? ಮುಂತಾದವುಗಳ ಬಗ್ಗೆ ವೈದ್ಯರು ಕೆಲವೊಂದು ಸಲಹೆಗಳನ್ನು ನೀಡಿದ್ದು ಅದು ಹೀಗಿದೆ.

ಮಲಗುವ ಕೋಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಬೂಸ್ಟ್ ಮತ್ತು ಧೂಳು ರಗ್ಗುಗೆ ಹಿಡಿಯುವುದರಿಂದ ಅದನ್ನು ದೂರವಿಟ್ಟು, ಸ್ವಚ್ಛವಾಗಿರುವ ಹೊದಿಕೆಗಳನ್ನು ಬಳಸಬೇಕು. ಮಂಚದ ಹಾಸಿಗೆ, ದಿಂಬು, ಕುರ್ಚಿ, ಇನ್ನಿತರ ಪೀಠೋಪಕರಣಗಳಲ್ಲಿ ಧೂಳುಗಳು ಶೇಖರಣೆಯಾಗುತ್ತವೆ. ಹೀಗಾಗಿ ಇವುಗಳನ್ನು ನಿತ್ಯ ಸ್ವಚ್ಛಗೊಳಿಸಬೇಕು. ಬೆಕ್ಕು, ನಾಯಿಗಳನ್ನು ಜತೆಯಲ್ಲಿ ಮಲಗಿಸಿಕೊಳ್ಳುವುದು ಒಳ್ಳೆಯದಲ್ಲ. ಧೂಮಪಾನ ಇನ್ನಿತರ ಹೊಗೆ ಬರದಂತೆ ನೋಡಿಕೊಳ್ಳಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ತೊಳೆಯಬೇಕು.

ಮನೆಯಲ್ಲಿ ಕಸ ಗುಡಿಸುವುದು, ವ್ಯಾಕ್ಯೂಮ್ ಮಾಡುವುದು, ಧೂಳು ತೆಗೆಯುವುದು, ಪೇಯಿಂಟ್ ಮಾಡುವುದು, ಕೀಟಗಳಿಗೆ ಸ್ಪ್ರೇ ಮಾಡುವುದು, ಇನ್ನಿತರ ತೀಕ್ಷ್ಣ ಕಾರಕ ಆಹಾರ ಪದಾರ್ಥಗಳನ್ನು ಬೇಯಿಸುವುದು, ಒಗ್ಗರಣೆ ಹಾಕುವುದು ಮೊದಲಾದವುಗಳನ್ನು ಅಸ್ತಮಾ ಪೀಡಿತರು ಮಾಡಬಾರದು.

ಮೂರು ಬಾರಿ ಲಘು ಆಹಾರ ಸೇವಿಸುವುದು, ಹಣ್ಣು ಹಂಪಲುಗಳನ್ನು ಸೇವಿಸಬೇಕು. ಸದಾ ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ವೈದ್ಯರು ನೀಡಿದ ಔಷಧಿಗಳನ್ನು ತೆಗೆದುಕೊಳ್ಳಬೇಕು. ಅಸ್ತಮಾವನ್ನು ನಿಯಂತ್ರಿಸುವ ಔಷಧಿಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕು, ಧೂಮಪಾನ, ಅತಿಯಾದ ಆಹಾರಸೇವನೆ ಒಳ್ಳೆಯದಲ್ಲ. ಅಲರ್ಜಿ ಉಂಟು ಮಾಡುವ ಆಹಾರಗಳನ್ನು ಆದಷ್ಟು ವರ್ಜಿಸಬೇಕು. ಹಾಲಿನ ಉತ್ಪನ್ನಗಳು, ಚಾಕೋಲೆಟ್, ರಿಫೈನ್ಡ್ ವೈಟ್ ಫ್ಲೋರ್, ಬ್ರೆಡ್, ಕೇಕ್, ಸಕ್ಕರೆ ಮುಂತಾದ ಆಹಾರ ಪದಾರ್ಥಗಳ ಸೇವನೆಯಿಂದ ದೂರವಿರಬೇಕು.

ಸಾಮಾನ್ಯವಾಗಿ ಅಸ್ತಮಾಗೆ ವೈದ್ಯರು ಔಷಧಿ ನೀಡುವಾಗ ಒಂದಷ್ಟು ಸೂಚನೆಗಳನ್ನು ನೀಡಿರುತ್ತಾರೆ. ಅದನ್ನು ಸದಾ ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಯಾವ ಸಂದರ್ಭದಲ್ಲಿ ಮತ್ತು ಯಾವುದರಿಂದ ಅಸ್ತಮಾ ಉಲ್ಭಣಗೊಳ್ಳುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಂಡು ಅದರಿಂದ ದೂರವಿರುವುದು ಒಳ್ಳೆಯದು. ಮನೆಯಿಂದ ಹೊರಗೆ ಹೋಗುವಾಗ ವೈದ್ಯರು ನೀಡುವ ತ್ವರಿತ ಶಮನ ನೀಡುವ ಔಷಧಿ ಮತ್ತು ಇನ್ನೇಲರ್ ಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬಾರದು.

ಕೊನೆಯದಾಗಿ ಹೇಳುವುದೇನೆಂದರೆ ಅಸ್ತಮಾ ಯಾವಾಗ ಬೇಕಾದರೂ ನಮ್ಮನ್ನು ಕಾಡಬಹುದು. ಹೀಗಾಗಿ ಒಂದಷ್ಟು ಎಚ್ಚರಿಕೆಯಿಂದ ಇರುವುದು ಒಳಿತು. ಅಸ್ತಮಾ ಬಾಧಿತರು ಕೂಡ ಸದಾ ಜಾಗೃತರಾಗಿರಬೇಕು ಎಂಬುದನ್ನು ಮರೆಯಬಾರದು.