ಮನುಷ್ಯನನ್ನು ಕಾಡುವ ಮೂತ್ರಾಂಗ ರೋಗ ಮತ್ತು ಪಥ್ಯಗಳು

ಮನುಷ್ಯನನ್ನು ಕಾಡುವ ಮೂತ್ರಾಂಗ ರೋಗ ಮತ್ತು ಪಥ್ಯಗಳು

LK   ¦    May 07, 2018 12:26:56 PM (IST)
ಮನುಷ್ಯನನ್ನು ಕಾಡುವ ಮೂತ್ರಾಂಗ ರೋಗ ಮತ್ತು ಪಥ್ಯಗಳು

ನಾವು ಎಷ್ಟೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೂ ಕಾಯಿಲೆಗಳು ಒಂದಲ್ಲ ಒಂದು ರೀತಿಯಿಂದ ಬಂದೇ ಬರುತ್ತವೆ. ಬಹಳಷ್ಟು ಮಂದಿಗೆ ತಮಗೆ ಇರುವ ಕಾಯಿಲೆ ಯಾವುದು ಎಂಬುದು ಗೊತ್ತಾಗುವ ವೇಳಗೆ ಅದು ಉಲ್ಭಣಗೊಂಡು ವಾಸಿ ಮಾಡಲು ಸಾಧ್ಯವಾಗದ ಹಂತವನ್ನು ತಲುಪಿ ಬಿಡುತ್ತದೆ.

ಇದನ್ನು ತಪ್ಪಿಸಬೇಕಾದರೆ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಾದ ತಪಾಸಣೆ ಮಾಡಿಕೊಂಡು ಅದಕ್ಕೆ ತಕ್ಕಂತೆ ಚಿಕಿತ್ಸೆ ಪಡೆಯುವುದು ಜಾಣತನ. ಮನುಷ್ಯನನ್ನು ಹತ್ತಾರು ಕಾಯಿಲೆಗಳು ಕಾಡುತ್ತವೆ. ಯಾರಿಗೆ ಯಾವಾಗ ಯಾವ ಕಾಯಿಲೆ ಅಂಟಿಕೊಳ್ಳುತ್ತದೆ ಎನ್ನುವುದನ್ನು ಹೇಳಲಾಗುವುದಿಲ್ಲ. ಆದರೂ ಒಂದಷ್ಟು ಜಾಗರೂಕರಾಗಿರಬೇಕು. ಬಹಳಷ್ಟು ಸಂದರ್ಭದಲ್ಲಿ ದೇಹದ ಆರೋಗ್ಯದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಕಂಡು ಬಂದಾಗಲೆಲ್ಲ ತಮಗೆ ತೋಚಿದ ಮಾತ್ರೆಗಳನ್ನು ವೈದ್ಯರ ಸಲಹೆಯಿಲ್ಲದೆ ಪಡೆಯುತ್ತಾ ಹೋಗುತ್ತೇವೆ. ಇದು ಒಳ್ಳೆಯದಲ್ಲ. ಏಕೆಂದರೆ ಕೆಲವು ಸಮಸ್ಯೆಗಳಾದ ಕಾಲು ಮತ್ತಿತರ ಶರೀರದ ಭಾಗಗಳು ಊದಿಕೊಳ್ಳುವುದು, ವಿಪರೀತ ರಕ್ತದೊತ್ತಡ, ರಕ್ತಹೀನತೆಯಿಂದ ಬಿಳಿಚಿಕೊಳ್ಳುವುದು, ದುರ್ಬಲತೆ, ಕಡಿಮೆ ಅಥವಾ ಸಾಮಾನ್ಯ ಪ್ರಮಾಣದ ಮೂತ್ರ, ವಾಕರಿಕೆ, ಒಣಗಿದ ನವೆಯಾದ ಚರ್ಮ, ಹಸಿವಿಲ್ಲದಿರುವಿಕೆ, ಪಾದಗಳಲ್ಲಿ ಹೆಚ್ಚು ಬಿರುಕು, ಮುಖದಲ್ಲಿ ಅದರಲ್ಲೂ ಕಣ್ಣುರೆಪ್ಪೆಯ ಕೆಳಭಾಗದಲ್ಲಿ ಊದಿಕೊಳ್ಳುವುದು. ಇಂತಹ ಲಕ್ಷಣಗಳು ಕಂಡು ಬಂದಾಗ ಅಯ್ಯೋ ಆಸ್ಪತ್ರೆಗೆ ಏಕೆ ಎನ್ನುತ್ತಾ ಅದರ ಶಮನಕ್ಕೆ ಯಾವುದಾದರೂ ಮಾತ್ರೆ ನುಂಗಿ ತೆಪ್ಪಗಿರುವ ಬದಲಿಗೆ ವೈದ್ಯರ ಬಳಿಗೆ ಹೋಗಲೇ ಬೇಕು. ಏಕೆಂದರೆ ಈ ಎಲ್ಲ ಲಕ್ಷಣಗಳು ಮೂತ್ರಾಂಗ ರೋಗದ ಲಕ್ಷಣಗಳಾಗಿರುತ್ತವೆ.

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಬೆನ್ನುಹುರಿಯ ಅಕ್ಕಪಕ್ಕದಲ್ಲಿ ಎರಡು ಹುರುಳಿಕಾಳಿನಾಕಾರದ ಮುಷ್ಠಿಗಾತ್ರದ ಮೂತ್ರಪಿಂಡಗಳಿರುತ್ತವೆ. ಈ ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿ ಬದುಕಲು ಸಾಧ್ಯವಾಗುತ್ತದೆ. ನಮ್ಮ ಶರೀರಕ್ಕೆ ಆಹಾರದ ಮೂಲಕ ಬಂದಿರುವ ವ್ಯರ್ಥ ಪದಾರ್ಥಗಳನ್ನು ಶೋಧಿಸಿ ಅವುಗಳನ್ನು ಶರೀರದಿಂದ ಮೂತ್ರದ ಮೂಲಕ ಉತ್ಪಾದಿಸಿ ಹೊರಹಾಕುವ ಕೆಲಸವನ್ನು ಮಾಡುತ್ತಿರುತ್ತವೆ. ಅಷ್ಟೇ ಅಲ್ಲದೆ ಶರೀರಕ್ಕೆ ಅಗತ್ಯ ಪ್ರಮಾಣದಲ್ಲಿ ಬೇಕಾಗುವ ಸೋಡಿಯಂ, ಪೊಟ್ಯಾಸಿಯಂ ಮತ್ತು ನೀರಿನಾಂಶವನ್ನು ಕಾಪಾಡುವ ಕೆಲಸವನ್ನು ಕೂಡ ಮೂತ್ರಪಿಂಡಗಳು ಮಾಡುತ್ತಿರುತ್ತವೆ. ರಕ್ತದ ಒತ್ತಡವನ್ನು ಸಮತೋಲನವಾಗಿರಿಸುವುದು, ಕೆಂಪು ರಕ್ತಕಣಗಳನ್ನು ನಿರ್ಮಾಣ ಮಾಡುವುದು, ಮೂಳೆಗಳನ್ನು ಗಟ್ಟಿಗೊಳಿಸುವ ಕಾರ್ಯವನ್ನು ಮಾಡುತ್ತವೆ.

ಇವೆಲ್ಲವೂ ಶೋಧಿಸಲು ಸಾಧ್ಯವಾಗದೆ ವ್ಯರ್ಥ ಪದಾರ್ಥಗಳು ಮತ್ತು ಎಲೆಕ್ಟ್ರೋಲೈಟ್(ಸೋಡಿಯಂ ಮತ್ತು ಪೊಟ್ಯಾಸಿಯಂ)ಗಳು ರಕ್ತದಲ್ಲಿ ಶೇಖರಣೆಗೊಳ್ಳುತ್ತವೆ. ಇದರಿಂದ ಆರೋಗ್ಯ ಹದಗೆಡುತ್ತದೆ.

ಮೂತ್ರಾಂಗ ಕಾಯಿಲೆ ಬಗ್ಗೆ ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಅಂಶವೇನೆಂದರೆ, ಅಲ್ಪಕಾಲದ ಮೂತ್ರಪಿಂಡದ ಕಾಯಿಲೆಗಳನ್ನು ಗುಣಪಡಿಸಬಹುದು ಆದರೆ ದೀರ್ಘಕಾಲೀನ ಮೂತ್ರಾಂಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ ಒಮ್ಮೆ ಕಾಣಿಸಿಕೊಂಡರೆ ಮತ್ತೆ ಅದು ಆತನ ಸಂಗಾತಿಯಾಗಿ ಬಿಡುತ್ತದೆ. ಆಗ ಅದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಇರುವುದೊಂದೇ ಮಾರ್ಗ ಅದೇನೆಂದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಾಗಿದೆ.

ಮೂತ್ರಾಂಗ ರೋಗಕ್ಕೆ ಆಹಾರ ಪಥ್ಯಗಳು:

ಮೂತ್ರಾಂಗ ಕಾಯಿಲೆ ಇರುವವರು ಮುಖ್ಯವಾಗಿ ಶಕ್ತಿ(ಕ್ಯಾಲೋರಿ), ಪ್ರೊಟೀನ್, ದ್ರವಹಾರ, ಸೋಡಿಯಂ ಹಾಗೂ ಪೊಟ್ಯಾಸಿಯಂ ನಂತಹ ಪೋಷಕಾಂಶಗಳಿರುವ ಆಹಾರವನ್ನು ಮಾರ್ಪಾಡು ಮಾಡಬೇಕಾಗುತ್ತದೆ.

ಶಕ್ತಿ(ಕ್ಯಾಲೋರಿ) ಇರುವಂತಹ ಪದಾರ್ಥಗಳಾದ ಗ್ಲೂಕೋಸ್, ಸಕ್ಕರೆ, ಪಿಷ್ಟಪದಾರ್ಥಗಳು, ಕೊಬ್ಬು ಮತ್ತು ಎಣ್ಣೆ,(ಮಧುಮೇಹ ಇರುವವರು ಸಂಪೂರ್ಣವಾಗಿ ಸಿಹಿಯನ್ನು ನಿಲ್ಲಿಸಬೇಕು) ಮೊದಲಾದ ಪದಾರ್ಥಗಳನ್ನು ದೂರವಿಡಬೇಕು.

ಪ್ರೊಟೀನ್ ಹೆಚ್ಚಿರುವ ಆಹಾರಗಳಾದ ಹಾಲು ಮತ್ತು ಹಾಲಿನ ಉತ್ಪನ್ನಗಳು, ಸೋಯಾ ಪದಾರ್ಥಗಳು, ಮಾಂಸಹಾರಗಳು, ಮೊಟ್ಟೆ ಮತ್ತು ಬೇಳೆಕಾಳುಗಳನ್ನು ನಿರ್ಬಂಧಿಸಬೇಕು. ಏಕೆಂದರೆ ಆಹಾರದಲ್ಲಿರುವ ಪ್ರೊಟೀನ್ ಜೀರ್ಣವಾಗಿ ಜೀವದ್ರವ್ಯವಾಗಿ ಶರೀರವನ್ನು ಸೇರುತ್ತದೆ. ಈ ಪ್ರೊಟೀನ್ ಜೀರ್ಣ ಪ್ರಕ್ರಿಯೆಯಲ್ಲಿ ಬಿಡುಗಡೆಯಾಗುವ ಕೊನೆಯ ಪದಾರ್ಥವೆಂದರೆ ಮೂತ್ರ ಪಿಂಡಗಳಿಂದ ವಿಸರ್ಜನೆಗೊಳ್ಳುವ ಯೂರಿಯಾ. ಮೂತ್ರಾಂಗ ಸಮಸ್ಯೆ ಇರುವವರಲ್ಲಿ ಮೂತ್ರಪಿಂಡಗಳು ಸಮರ್ಥವಾಗಿ ಕಾರ್ಯನಿರ್ವಹಿಸದೆ ಯೂರಿಯಾ ಮುಂತಾದ ಪದಾರ್ಥಗಳು ರಕ್ತದಲ್ಲಿ ಸಂಗ್ರಹಗೊಂಡು ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಪ್ರೊಟೀನ್ಯುಕ್ತ ಆಹಾರವನ್ನು ದೂರವಿಡಬೇಕಾಗಿರುವುದು ಡಯಾಲಿಸಿಸ್ ಒಳಗಾಗದೆ ಈಗಷ್ಟೆ ಮೂತ್ರಾಂಗದ ಸಮಸ್ಯೆ ಕಾಣಿಸುತ್ತಿರುವ ರೋಗಿಗಳು ಮಾತ್ರ.

ಇನ್ನು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ರೋಗಿಗಳು ಪ್ರೊಟೀನ್ಯುಕ್ತ ಆಹಾರವನ್ನು ಸೇವಿಸಬೇಕಾಗುತ್ತದೆ. ಏಕೆಂದರೆ ಡಯಾಲಿಸಸ್ ಸಮಯದಲ್ಲಿ ಹೆಚ್ಚು ಪ್ರೊಟೀನ್ ನಷ್ಟವಾಗುತ್ತದೆ.

ಸೇವಿಸುವ ಆಹಾರದಲ್ಲಿ ಸೋಡಿಯಂ ಹೆಚ್ಚಾದರೂ ಮೂತ್ರಾಂಗ ರೋಗವಿರುವ ರೋಗಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಉಪ್ಪು, ಅಡುಗೆ ಸೋಡಾ, ಚೀಸ್, ಎಲ್ಲಾ ಬಗೆಯ ಹಪ್ಪಳ, ಸಾಸ್, ಜಾಮ್, ಜೆಲ್ಲಿ, ಕೆಚಪ್ಗಳು, ಸೂಪ್ ಕ್ಯೂಬ್ಸ್, ಚೈನೀಸ್ ಸಾಲ್ಟ್, ಒಣಗಿದ ಮೀನು, ಬೇಕಿಂಗ್ ಪೌಡರ್, ಕ್ಯಾನ್ ನಲ್ಲಿ ಬರುವ ಆಹಾರ ಪದಾರ್ಥಗಳು, ಉಪ್ಪು ಬೆರೆಸಿದ ಚಿಪ್ಸ್, ನಟ್ಸ್, ಬಿಸ್ಕತ್ ಗಳು, ಉಪ್ಪಿನ ಕಾಯಿ, ಮೃದುಪಾನೀಯಗಳು, ಬೋರ್ನ್ ವೀಟಾ, ಚಾಕೊಲೆಟ್, ಡ್ರೈಫ್ರೂಟ್ಸ್, ಪುಡ್ಡಿಂಗ್ ಮಿಕ್ಸ್ ಮೊದಲಾದವುಗಳನ್ನು ಸೇವಿಸಬಾರದು.

ಪೊಟ್ಯಾಸಿಯಂ ಅಂಶವಿರುವ ತರಕಾರಿಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲ ತರಕಾರಿ ಬೆಳೆಯಲ್ಲಿ ಪೊಟ್ಯಾಸಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಪೊಟ್ಯಾಸಿಯಂ ಅಂಶವನ್ನು ಪ್ರತ್ಯೇಕಿಸಿ ಸೇವಿಸಬೇಕಾಗುತ್ತದೆ. ವೈದ್ಯರು ನೀಡುವ ಸಲಹೆಯಂತೆ ಆಹಾರ ಸೇವನೆಯಲ್ಲಿ ನಿಗಾ ವಹಿಸಿದ್ದೇ ಆದಲ್ಲಿ ಮೂತ್ರಾಂಗ ರೋಗ ಕಾಣಿಸಿಕೊಂಡು ಬಳಲುತ್ತಿರುವವರು ನಿಯಂತ್ರಣಕ್ಕೆ ತಂದುಕೊಳ್ಳಲು ಸಾಧ್ಯವಿದೆ.