ತಲೆನೋವಿನತ್ತ ನಿರ್ಲಕ್ಷ್ಯ ಬೇಡ..!

ತಲೆನೋವಿನತ್ತ ನಿರ್ಲಕ್ಷ್ಯ ಬೇಡ..!

LK   ¦    Feb 13, 2018 04:42:04 PM (IST)
ತಲೆನೋವಿನತ್ತ ನಿರ್ಲಕ್ಷ್ಯ ಬೇಡ..!

ಈಗ ತಲೆನೋವನ್ನು ಹಗುರವಾಗಿ ಪರಿಗಣಿಸಲಾಗದು ಏಕೆಂದರೆ ಅದು ಮೈಗ್ರೇನ್ ಆಗಿರಬಹುದು.

ಮೈಗ್ರೇನ್ ಇತ್ತೀಚೆಗೆ ಹೆಚ್ಚಿನ ಜನರನ್ನು ಕಾಡುತ್ತಿದೆ. ಹೊಳೆಯುವ ಬೆಳಕು, ಕುರುಡು ಚುಕ್ಕೆಗಳು, ತೋಳು ಮತ್ತು ಕಾಲುಗಳಲ್ಲಿ ಚುಳುಚುಳುಗುಟ್ಟುವಿಕೆ, ವಾಂತಿ, ಬೆಳಕು ಮತ್ತು ಶಬ್ದಕ್ಕೆ ಅಧಿಕ ಸಂವೇದನಾ ಶೀಲತೆ ಮುಂತಾದ ಇಂದ್ರಿಯ ಸಂಬಂಧಿತ ಎಚ್ಚರಿಕೆಯ ಚಿಹ್ನೆಯ ಬಳಿಕ ಅಥವಾ ಅವುಗಳೊಂದಿಗೆ ಇರಬಹುದಾದ ತೀವ್ರವಾದ ತಲೆನೋವು ಇದರ ಲಕ್ಷಣವಾಗಿದೆ.

ಮೈಗ್ರೇನ್ ನ ನೋವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಲೂ ಸಾಧ್ಯವಿದೆ. ಕೆಲವರಿಗೆ ಕೆಲ ಗಂಟೆಗಳ ಕಾಲ ನೋವು ಕಾಣಿಸಿಕೊಂಡು ಶಮನವಾಗಬಹುದು. ಮತ್ತೆ ಕೆಲವರಿಗೆ ದಿನಪೂರ್ತಿ ಇದ್ದರೂ ಇರಬಹುದು.

ವೈದ್ಯರ ಪ್ರಕಾರ ಮೈಗ್ರೇನ್ ವಾಕರಿಕೆ ಅಥವಾ ವಾಂತಿಯಂತಹ ಇತರೆ ಲಕ್ಷಣಗಳೊಂದಿಗೆ ತಲೆಯ ಒಂದು ಭಾಗದಲ್ಲಿ ತೀವ್ರವಾಗಿ ಮಿಡಿಯುವ ನೋವಾಗಿದ್ದು, ನರಸಂಬಂಧಿತ ಕಾಯಿಲೆಯಾಗಿದೆ.

ಮೈಗ್ರೇನ್ ನನ್ನು ವೈದ್ಯರು ಶಿಫಾರಸ್ಸು ಮಾಡುವ ಸೂಕ್ತ ಚಿಕಿತ್ಸೆಯೊಂದಿಗೆ ಪರಿಸ್ಥಿತಿ ಮತ್ತು ಪ್ರಚೋದಕಗಳ ಉತ್ತಮ ತಿಳುವಳಿಕೆಯಿಂದ ನಿರ್ವಹಿಸಲು ಸಾಧ್ಯವಿದೆಯಂತೆ.

ಮೈಗ್ರೇನ್ ಗೆ ಪ್ರಚೋದನೆ ನೀಡುವ ಬೆಳಕಿನಂತಹ ಸಂವೇದನೆಯ ಉದ್ದೀಪಕ, ಮಾನಸಿಕ ಒತ್ತಡ, ಸ್ತ್ರೀಯರಲ್ಲಿ ಹಾರ್ಮೋನ್ ಬದಲಾವಣೆಗಳು, ಏಳುವ-ಮಲಗುವ ವಿಧಾನಗಳಲ್ಲಿನ ಬದಲಾವಣೆಗಳು, ಶಾರೀರಿಕ ಅಂಶಗಳು, ಪರಿಸರದಲ್ಲಿನ ಬದಲಾವಣೆಗಳು, ಔಷಧಗಳು ಹೀಗೆ ಹಲವು ಅಂಶಗಳನ್ನು ವೈದ್ಯರು ಗುರುತಿಸಿದ್ದು, ಇವು ಮೈಗ್ರೇನ್ ಹೆಚ್ಚಿಸುವಲ್ಲಿ ಪಾತ್ರವಹಿಸುತ್ತವೆ. ಇವು ಬಾಹ್ಯವಾಗಿ ಅಥವಾ ಶಾರೀರಿಕವಾಗಿ ಮೈಗ್ರೇನ್ ಕಾಣಿಸಿಕೊಳ್ಳಲು ಸಹಕರಿಸುವ ಸಾಧ್ಯತೆಯಿರುವುದರಿಂದ ಎಚ್ಚರವಾಗಿರಬೇಕು.

ಮೈಗ್ರೇನ್ ಪೀಡಿತರು ಒಂದು ಡೈರಿಯನ್ನು ಉಪಯೋಗಿಸಬೇಕು ಮತ್ತು ಅದರಲ್ಲಿ ತಲೆನೋವಿನ ತೀವ್ರತೆ, ಅದು ಇದ್ದ ಕಾಲಾವಧಿ, ತಲೆನೋವು ಕಾಣಿಸಿಕೊಂಡಾಗ ಶರೀರದಲ್ಲಿನ ಇನ್ನಿತರ ಲಕ್ಷಣಗಳು, ವೈದ್ಯರು ಶಿಫಾರಸ್ಸು ಮಾಡಿದ ಔಷಧಿಯನ್ನು ತೆಗೆದುಕೊಂಡ ವಿವರಗಳನ್ನು ನಮೂದಿಸಬೇಕು. ಹೀಗೆ ಸುಮಾರು ಎಂಟು ವಾರಗಳ ಕಾಲ ಡೈರಿಯನ್ನು ನಿರ್ವಹಿಸುತ್ತಾ ಬಂದರೆ, ಮೈಗ್ರೇನ್ ನ ನಿರ್ಧಿಷ್ಟ ವಿಧಾನ ತಿಳಿದುಕೊಂಡು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂಬುದು ವೈದ್ಯರ ಸಲಹೆಯಾಗಿದೆ.

ಇನ್ನು ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ದೆಮಾಡುವುದು, ನಿಯಮಿತ ಆಹಾರ ಸೇವನೆ ಮಾಡುವುದು, ಪ್ರಕಾಶಮಾನ ಬೆಳಕು ಹಾಗೂ ದಟ್ಟವಾದ ಸುವಾಸನೆಯಿಂದ ದೂರವಿರುವುದು, ಧೂಮಪಾನ ತ್ಯಜಿಸುವುದು, ಆದಷ್ಟು ಮಾನಸಿಕ ಒತ್ತಡವಾಗದಂತೆ ಎಚ್ಚರವಹಿಸುವುದು, ಮೈಗ್ರೇನ್ ಪ್ರಚೋದಿಸುವಂತಹ ಆಹಾರ ಪದಾರ್ಥಗಳನ್ನು ದೂರವಿಡುವುದು. ವೈದ್ಯರು ನೀಡುವ ಔಷಧಿಗಳನ್ನು ಉಪಯೋಗಿಸುವುದು ಅಗತ್ಯವಾಗಿದೆ.

ತೀವ್ರ ತಲೆನೋವು ಕಾಣಿಸಿಕೊಂಡಾಗ ಕೋಲ್ಡ್ ಪ್ಯಾಕ್ ಅಥವಾ ಐಸ್ ಚೀಲವನ್ನು ಸುತ್ತಿ ಅದನ್ನು ಹತ್ತು ನಿಮಿಷಗಳ ಕಾಲ ನೋವು ಇರುವ ಜಾಗದ ಮೇಲೆ ಅಥವಾ ಕತ್ತಿನ ಹಿಂಭಾಗ ಇರಿಸಬೇಕು.

ಕಣ್ಣನ್ನು ನೇರ ಬೆಳಕಿಗೆ ಒಡ್ಡದೆ, ಕತ್ತಲೆ ಕೋಣೆ, ಶಾಂತವಾದ ಸ್ಥಳದಲ್ಲಿ ಮಲಗಬೇಕು. ದ್ರವ ಪದಾರ್ಥವನ್ನು ಹೆಚ್ಚು ಸೇವಿಸಬೇಕು, ವಾಕರಿಕೆ ತಡೆಗೆ ಫ್ಲಾಟ್ ಸೋಡಾವನ್ನು ಸೇವಿಸಬೇಕು.

ತೋರು ಬೆರಳು ಮತ್ತು ಹೆಬ್ಬೆರಳಿನಿಂದ ನೋವಿರುವ ಜಾಗಕ್ಕೆ ವೃತ್ತಾಕಾರದಲ್ಲಿ ಒತ್ತಡ ಹಾಕಬೇಕು. ಹೀಗೆ ಒತ್ತಡವನ್ನು ಸುಮಾರು 7ರಿಂದ15 ಸೆಕೆಂಡುಗಳ ಕಾಲ ಹಾಕಿ ಮತ್ತೆ ಬಿಡಬೇಕು. ಇದೇ ರೀತಿ ಮತ್ತೆ, ಮತ್ತೆ ಮಾಡಬೇಕು.

ಮೈಗ್ರೇನ್ ಕಾಣಿಸಿಕೊಂಡಾಗ ಅದನ್ನು ಶಮನಗೊಳಿಸುವ ಒಂದಷ್ಟು ಪರಿಹಾರವನ್ನು ನಾವು ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಹಾಗೆಯೇ ವೈದ್ಯರು ಸಲಹೆ ಮತ್ತು ಔಷಧಿಗಳನ್ನು ಸೇವಿಸುವುದು ಅಗತ್ಯವಾಗಿದೆ