ರಕ್ತದಾನದ ತಪ್ಪು ಕಲ್ಪನೆ ನಿವಾರಿಸಿ, ಇನ್ನೊಬ್ಬರ ಪ್ರಾಣ ಉಳಿಸಿ

ರಕ್ತದಾನದ ತಪ್ಪು ಕಲ್ಪನೆ ನಿವಾರಿಸಿ, ಇನ್ನೊಬ್ಬರ ಪ್ರಾಣ ಉಳಿಸಿ

LK   ¦    Oct 19, 2017 10:38:51 AM (IST)
ರಕ್ತದಾನದ ತಪ್ಪು ಕಲ್ಪನೆ ನಿವಾರಿಸಿ, ಇನ್ನೊಬ್ಬರ ಪ್ರಾಣ ಉಳಿಸಿ

ಇವತ್ತು ಹಲವು ಅನಿವಾರ್ಯ ಸಂದರ್ಭಗಳಲ್ಲಿ ಗಾಯಾಳು ರಕ್ತ ದೊರೆಯದೆ ಪ್ರಾಣವನ್ನೇ ಕಳೆದುಕೊಂಡ ನಿದರ್ಶನಗಳಿವೆ. ರಕ್ತದಾನ ಮಾಡುವುದರ ಹಿಂದೆ ಹಲವು ತಪ್ಪುಕಲ್ಪನೆಗಳಿರುವುದರಿಂದ ಹೆಚ್ಚಿನವರು ರಕ್ತದಾನ ಮಾಡಲು ಮುಂದಾಗುತ್ತಿಲ್ಲ.

ರಕ್ತದಾನ ಮಾಡುವುದರ ಬಗ್ಗೆ ಮತ್ತು ರಕ್ತವನ್ನು ಪಡೆದುಕೊಳ್ಳುವುದರ ಕುರಿತಂತೆ ಹಲವು ರೀತಿಯ ಆಧಾರ ರಹಿತ ಮಾತುಗಳು ಜನವಲಯದಲ್ಲಿದೆ. ಅವು ಸಂಪೂರ್ಣ ಅಂತೆಕಂತೆ ಸುದ್ದಿಗಳು. ಅವುಗಳನ್ನೇ ನಂಬುವ ಹಲವು ಜನ ರಕ್ತದಾನ ಎಂದರೆ ಭಯಪಡುತ್ತಾರೆ. ರಕ್ತದಾನವೇ ಮಹಾದಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಮತ್ತೊಂದು ಪ್ರಾಣವನ್ನು ಉಳಿಸಲು ಸಾಧ್ಯವಿದೆ.

ರಕ್ತದಾನ ಮಾಡುವ ಬಗ್ಗೆ ಕೆಲವು ತಪ್ಪು ಕಲ್ಪನೆಯಿರುವುದರಿಂದ ಆ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಪಡೆದು ಮುನ್ನಡೆಯುವುದು ಒಳ್ಳೆಯದು. 18 ರಿಂದ 60 ವರ್ಷದೊಳಗಿನ 45 ಕೆ.ಜಿ.ಗಿಂತಲೂ ಹೆಚ್ಚು ತೂಕವಿರುವ, 12.5 ಗ್ರಾಂ.ಗಿಂತಲೂ ಹೆಚ್ಚು ಹಿಮೋಗ್ಲೋಬಿನ್ ಅಂಶ ಹೊಂದಿರುವ ಎಲ್ಲ ಆರೋಗ್ಯವಂತರೂ ರಕ್ತದಾನ ಮಾಡಬಹುದಾಗಿದೆ.

ದೇಶದಲ್ಲಿ ಪ್ರತಿ 2 ಸೆಕೆಂಡಿಗೆ ಒಬ್ಬ ರೋಗಿಗೆ ರಕ್ತದ ಅವಶ್ಯಕತೆ ಇರುವುದಾಗಿ ಸಮೀಕ್ಷೆಯೊಂದು ಹೇಳಿದೆ. ನಮ್ಮ ದೇಶದಲ್ಲಿ ರಕ್ತದ ಬೇಡಿಕೆ ಸುಮಾರು 4 ಕೋಟಿ ಯೂನಿಟ್ ಗಳಾಗಿದ್ದು, ಕೇವಲ 5 ಲಕ್ಷ ಯೂನಿಟ್ ಗಳಷ್ಟು ಮಾತ್ರ ರಕ್ತದ ಪೂರೈಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5 ರಿಂದ 6 ಲೀಟರ್ನಷ್ಟು ರಕ್ತ ಇರುತ್ತದೆ. ರಕ್ತ ಕೊಡುವ ವ್ಯಕ್ತಿಯಿಂದ ಕೇವಲ 350 ಮಿಲಿಯಷ್ಟೇ ರಕ್ತವನ್ನು ದಾನಿಯಿಂದ ತೆಗೆದುಕೊಳ್ಳುವುದರಿಂದ ಯಾವುದೇ ಅಪಾಯವಾಗುವುದಿಲ್ಲ. ಆದ್ದರಿಂದ ಎಲ್ಲ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ನಿರಾತಂಕವಾಗಿ ರಕ್ತದಾನ ಮಾಡಬಹುದು. ಸಾಮಾನ್ಯವಾಗಿ ದಾನಿಯಿಂದ ಪಡೆದ ರಕ್ತವನ್ನು 35 ದಿನಗಳವರೆಗೆ ಅದು ಯಾವುದೇ ರೀತಿಯಲ್ಲಿಯೂ ಹಾಳಾಗದಂತೆ ವಿಶೇಷ ರೆಫ್ರಿಜಿರೇಟರ್ ಗಳಲ್ಲಿ ಶೇಖರಿಸಿಟ್ಟು ಉಪಯೋಗಿಸಲಾಗುತ್ತದೆ.

18 ವರ್ಷಕ್ಕಿಂತ ಕಡಿಮೆ ಇರುವ ಲಿವರ್, ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರು, ಗರ್ಭಿಣಿಯರು, ಋತುಸ್ರಾವದಲ್ಲಿರುವ ಮಹಿಳೆಯರು, ಮಗುವಿಗೆ ಹಾಲುಣಿಸುವ ತಾಯಂದಿರು, ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾದವರು, ಒಂದು ವರ್ಷದವರೆಗೆ ರಕ್ತ ವರ್ಗಾವಣೆ ಮಾಡಿಸಿಕೊಂಡವರು, ಆರು ತಿಂಗಳವರೆಗೆ ಯಾವುದಾದರು ಕಾಯಿಲೆಯ ವಿರುದ್ಧ ಲಸಿಕೆಗಳನ್ನು ತೆಗೆದುಕೊಂಡವರು ಮುಂದಿನ ಆರು ತಿಂಗಳವರೆಗೆ ರಕ್ತದಾನ ಮಾಡಬಾರದಾಗಿದೆ.

ಇನ್ನು ರಕ್ತದಾನ ಮಾಡಿದ ವ್ಯಕ್ತಿಗೆ ಹೆಚ್ಚೆಂದರೆ ಒಂದು ತಾಸಿನ ವಿಶ್ರಾಂತಿ ಸಾಕಾಗುತ್ತದೆ. ಜೊತೆಗೆ ಯಾವುದೇ ರೀತಿ ಔಷಧದ ಅಗತ್ಯವಿರುವುದಿಲ್ಲ, ವ್ಯಕ್ತಿಯು ರಕ್ತದಾನ ಮಾಡಿದ ಆ ದಿನ ನೀರನ್ನು ಹೆಚ್ಚಾಗಿ ಕುಡಿಯಬೇಕು. ರಕ್ತದಾನದ ಕೆಲವು ತಾಸುಗಳೊಳಗಾಗಿ ದಾನಿಯ ದೇಹದಲ್ಲಿ ಹೊಸ ರಕ್ತಕಣಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಮುಂದಿನ ಮೂರು ತಿಂಗಳೊಳಗಾಗಿ ದಾನಿಯ ದೇಹದಲ್ಲಿ ಮರು ರಕ್ತ ತಯಾರಾಗುತ್ತದೆ.
ಇನ್ನೂ ರಕ್ತ ವರ್ಗಾವಣೆಯಿಂದ ಯಾವುದಾದರೂ ರೋಗ ಅಥವಾ ಸೋಂಕು ತಗಲುತ್ತದೆ ಎಂಬ ಭಯವೂ ಕೆಲವರಲ್ಲಿದೆ. ರಕ್ತದಾನ ಮಾಡುವ ದಾನಿಯಿಂದ ಸ್ವೀಕರಿಸಿದ ರಕ್ತವನ್ನು ರಕ್ತನಿಧಿಗಳಲ್ಲಿ ಹೆಪಟೈಟಿಸ್ ಬಿ. ಹೆಪಟೈಟಿಸ್ ಸಿ. ಎಚ್ಐವಿ, ಮಲೇರಿಯಾ, ಸಿಫಿಲಿಸ್ ಮುಂತಾದ ಸೂಕ್ಷಾಣುಗಳಿಗಾಗಿ ಪರೀಕ್ಷಿಸಿ. ರೋಗಾಣುಗಳಿಂದ ಮುಕ್ತವಾದ ರಕ್ತವನ್ನು ಮಾತ್ರವೇ ಅವಶ್ಯಕತೆ ಇರುವರಿಗೆ ವರ್ಗಾಯಿಸುತ್ತಾರೆ. ಅಲ್ಲದೆ ದಾನಿಯಿಂದ ರಕ್ತವನ್ನು ಸ್ವೀಕರಿಸುವಾಗಲೂ ಸಂಸ್ಕರಿಸಿದ ಶುದ್ಧವಾದ ಉಪಕರಣಗಳನ್ನು ಬಳಸುತ್ತಾರೆ. ಹಾಗಾಗಿ ರಕ್ತದಾನ ಪ್ರಕ್ರಿಯೆಯಲ್ಲಿ ದಾನಿಗಾಗಲೀ, ರಕ್ತ ವಗಾವಣೆ ಮಾಡಿಸಿಕೊಂಡವರಿಗಾಗಲಿ ಸೋಂಕಿನ ಭಯ ಬೇಡ. ಯಾವುದೇ ಭಯ ಆತಂಕಗಳಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯೂ ಸ್ವ ಇಚ್ಛೆಯಿಂದ ರಕ್ತದಾನವನ್ನು ಮಾಡಬಹುದಾಗಿದೆ.