ಮಧುಮೇಹ ನಿಯಂತ್ರಣಕ್ಕೆ ಮಾಡೋದೇನು?

ಮಧುಮೇಹ ನಿಯಂತ್ರಣಕ್ಕೆ ಮಾಡೋದೇನು?

LK   ¦    Feb 21, 2019 11:52:25 AM (IST)
ಮಧುಮೇಹ ನಿಯಂತ್ರಣಕ್ಕೆ ಮಾಡೋದೇನು?

ಮಧುಮೇಹ ಈಗ ಎಲ್ಲರನ್ನೂ ಕಾಡುವ ಸಾಮಾನ್ಯ ರೋಗವಾಗಿದ್ದು, ಮೊದಲಿಗೆ ಹೋಲಿಸಿದರೆ ಇತ್ತೀಚೆಗೆ ಇದು ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಇದಕ್ಕೆ ಕಾರಣಗಳು ಅನೇಕವಾಗಿದ್ದು, ಅದರಲ್ಲಿ ನಮ್ಮ ಲೈಫ್ ಸ್ಟೈಲ್ ಕೂಡ ಒಂದಾಗಿದೆ ಎಂದರೆ ತಪ್ಪಾಗಲಾರದು.

ದೈಹಿಕ ಶ್ರಮಕ್ಕಿಂತ ಮಾನಸಿಕ ಶ್ರಮ, ಸದಾ ಉದ್ವೇಗದ ಕೆಲಸ, ಆಹಾರ ಸೇವನೆಯಲ್ಲಿನ ಅಶಿಸ್ತು, ಜಂಕ್ ಫುಡ್ಗ್ಳತ್ತ ಒಲವು ಅಷ್ಟೇ ಅಲ್ಲ ಅನುವಂಶೀಯವಾಗಿಯೂ ಇದು ಬರಬಹುದು. ಮಧುಮೇಹ ಕಾಯಿಲೆ ಬಂತೆಂದು ತಲೆಕಡಿಸಿಕೊಳ್ಳುವ ಬದಲು ಅದನ್ನು ತಡೆಗಟ್ಟಲು ಅಥವಾ ನಿಯಂತ್ರಣದಲ್ಲಿಡಲು ಏನೇನು ಕ್ರಮಗಳಿವೆಯೋ ಅದನ್ನು ಅನುಸರಿಸುವತ್ತ ಗಮನಹರಿಸುವುದು ಮುಖ್ಯವಾಗಿದೆ.

ಈಗೀಗ ಮಧುಮೇಹ ಚಿಕ್ಕ ವಯಸ್ಸಿನಲ್ಲಿಯೇ ಕಾಡುತ್ತಿದ್ದು, ಯಾರಿಗೆ ಯಾವಾಗ ಅಟಕಾಯಿಸಿ ಬಿಡುತ್ತದೆಯೋ ಎಂದು ಹೇಳಲಾಗುವುದಿಲ್ಲ. ಹೀಗಿರುವಾಗ ಕಾಯಿಲೆ ಬಂದ ಬಳಿಕವೂ ಜೀವನ ಮಾಡಲು ನಾವು ಉದ್ಯೋಗ ಮಾಡುವುದು ಅನಿವಾರ್ಯವಾಗಿದೆ. ಹೀಗಿರುವಾಗ ನಾವು ಯಾವ ರೀತಿಯ ಕೆಲಸವನ್ನು ಮಾಡುತ್ತೇವೆಯೋ ಅದಕ್ಕೆ ತಕ್ಕಂತೆ ಒಂದಷ್ಟು ಜಾಗ್ರತಾ ಕ್ರಮಗಳನ್ನು ನಾವು ಅಳವಡಿಸಿಕೊಂಡಿದ್ದೇ ಆದರೆ ಮಧುಮೇಹವನ್ನು ದೂರವಿಟ್ಟು ಜೀವನ ಮಾಡಲು ಸಾಧ್ಯವಾಗುತ್ತದೆ.

ಬಹಳಷ್ಟು ಜನರಿಗೆ ರಾತ್ರಿ ಪಾಳಿಯಲ್ಲಿ ನಿದ್ದೆಗೆಟ್ಟು ಕೆಲಸ ಮಾಡುವುದು ಅನಿವಾರ್ಯವಾಗಿರುತ್ತದೆ. ಇಂತಹವರು ನಾವು ಹೇಗೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು ಎಂಬ ಪ್ರಶ್ನೆಗಳನ್ನು ವೈದ್ಯರಲ್ಲಿ ಕೇಳುತ್ತಿರುತ್ತಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ನಿದ್ರೆ, ಆಹಾರ, ಉದ್ವೇಗ ಒತ್ತಡ ಇರುವುದರಿಂದಾಗಿ ದೇಹದಲ್ಲಿ ಒಂದಷ್ಟು ಅಡಚಣೆಗಳು ಆಗುವುದರಿಂದ ದೇಹದಲ್ಲಿ ಕೆಲವೊಮ್ಮೆ ತೂಕ ಮತ್ತು ಇನ್ಸೂಲಿನ್ ನಿರೋಧಕತೆಗೆ ಕಾರಣವಾಗಿ ಬಿಡುತ್ತದೆ.
ಹಾಗಾದರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಏನೇನು ಮಾಡಿಕೊಳ್ಳಬೇಕು ಎನ್ನುವುದನ್ನು ನೋಡುವುದಾದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಅಳೆಯುವ ಸಾಧನವನ್ನಿಟ್ಟುಕೊಂಡು ಆಗಾಗ್ಗೆ ಸಕ್ಕರೆಯ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು. ಹಸಿವಾದಾಗ ಸೇವಿಸಲು ಅನುಕೂಲವಾಗುವಂತೆ ಲಘು ಉಪಹಾರಗಳನ್ನಿಟ್ಟುಕೊಳ್ಳಬೇಕು. ಕೆಲಸದ ಅವಧಿಯಲ್ಲಿ ತಿನ್ನಲು ಅನುಕೂಲವಾಗುವಂತೆ ಒಣಹಣ್ಣುಗಳನ್ನಿಟ್ಟುಕೊಳ್ಳಬೇಕು.

ಔಷಧಿ, ನೀರು, ಜತೆಗಿರಲಿ. ವಾರದ ಕೆಲಸದ ಅವಧಿಗೆ ತಕ್ಕಂತೆ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಿ, ಇನ್ನು ಮಲಗುವ ಮುನ್ನ ಹೆಚ್ಚು ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ.

ಆದಷ್ಟು ವ್ಯಾಯಾಮಕ್ಕೆ ಆದ್ಯತೆ ನೀಡಿ, ವಾಹನಗಳಿದ್ದರೂ ನಡೆಯುವುದಕ್ಕೆ ಆದ್ಯತೆ ನೀಡಿ, ಇದರಿಂದ ಒಂದಷ್ಟು ದೇಹಕ್ಕೆ ವ್ಯಾಯಾಮವಾಗುತ್ತದೆ. ವೈದ್ಯರು ತಿಳಿಸಿದ ಮತ್ತು ಆರೋಗ್ಯ ಸಹಕಾರಿಯಾಗುವಂತಹ ಪದಾರ್ಥಗಳನ್ನು ಸೇವಿಸುವುದನ್ನು ಮರೆಯಬಾರದು. ಬಾಯಿ ರುಚಿಗೆ ಮನಸೋತು ಕೆಲವು ಸಿಹಿ ಪದಾರ್ಥಗಳನ್ನು ಸೇವಿಸಿ ಆರೋಗ್ಯದ ಮೇಲೆ ಪರಿಣಾಮವಾಗುವ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ.

ಒತ್ತಡದ ಕೆಲಸದ ನಡುವೆಯೂ ಒಂದಷ್ಟು ಸಮಯವನ್ನು ವಿಹಾರಕ್ಕೆ ಮೀಸಲಿಡಿ. ಒಂದಿಷ್ಟು ಪಥ್ಯವನ್ನು ಅನುಸರಿಸಿ ಅಯ್ಯೋ ಮಧುಮೇಹ ಬಂದು ಬಿಡ್ತಲ್ಲ ಎಂದು ತಲೆಕೆಡಿಸಿಕೊಳ್ಳುವ ಬದಲು ಅದರ ನಿಯಂತ್ರಣಕ್ಕೆ ಒತ್ತು ನೀಡಿದರೆ ಯಾವುದೇ ತೊಂದರೆಯಿಲ್ಲದೆ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.