ನಮಗೆ ನಾವೇ ತಂದುಕೊಳ್ಳುವ ಮಾನಸಿಕ ತಲೆನೋವು..!

ನಮಗೆ ನಾವೇ ತಂದುಕೊಳ್ಳುವ ಮಾನಸಿಕ ತಲೆನೋವು..!

LK   ¦    Apr 29, 2019 01:04:23 PM (IST)
ನಮಗೆ ನಾವೇ ತಂದುಕೊಳ್ಳುವ ಮಾನಸಿಕ ತಲೆನೋವು..!

ಮನುಷ್ಯನಿಗೆ ತಲೆನೋವು ಹಲವು ಕಾರಣಗಳಿಗೆ ಬರಬಹುದು. ದೈಹಿಕ ಕಾರಣಗಳಿಗೆ ಬರುವ ತಲೆನೋವು ಒಂದೆಡೆಯಾದರೆ ಮಾನಸಿಕವಾಗಿಯೂ ತಲೆನೋವು ಕಾಡಬಹುದು.

ಇತ್ತೀಚೆಗಿನ ದಿನಗಳಲ್ಲಿ ತಲೆನೋವನ್ನು ನಾವೇ ನಮ್ಮ ಕೈಯ್ಯಾರೆ ತಂದು ಕೊಳ್ಳುತ್ತಿದ್ದೇವೆ. ಇದಕ್ಕೆ ಕಾರಣ ಶಿಸ್ತುಬದ್ಧವಿಲ್ಲದ ಯಾಂತ್ರಿಕ ಜೀವನ, ಸದಾ ಜನ ಜಂಗುಳಿ ನಡುವೆ ಒತ್ತಡದ ಬದುಕು, ಪೈಪೋಟಿಯ ಬದುಕು, ಮಾಡಲೇ ಬೇಕಾದ ಕೆಲಸದ ಅನಿವಾರ್ಯತೆ, ದೈಹಿಕ ಶ್ರಮಕ್ಕಿಂತಲೂ ಹೆಚ್ಚಾಗಿ ಮಾನಸಿಕ ಶ್ರಮ, ಜತೆಗೆ ಸದಾ ಮೊಬೈಲ್, ಟಿವಿ ನೋಡುವುದು ಹೀಗೆ ಹತ್ತಾರು ಕಾರಣಗಳಿಂದ ಮಾನಸಿಕವಾಗಿ ತಲೆನೋವು ನಮ್ಮನ್ನು ಬಾಧಿಸಬಹುದು.

ಇನ್ನು ಯಾವುದಾದರೊಂದು ವಿಷಯದ ಬಗ್ಗೆಯೇ ಹೆಚ್ಚು ಚಿಂತೆ ಮಾಡುವುದು. ಅದರ ಸುತ್ತಲೂ ಇಲ್ಲ ಸಲ್ಲದ ಕಲ್ಪನೆ ಮಾಡಿಕೊಂಡು ನರಳುವುದು, ನಿದ್ದೆಗೆಡುವುದು ಕೂಡ ತಲೆನೋವಿಗೆ ಕಾರಣವಾಗಬಹುದು.

ಮಾನಸಿಕ ಒತ್ತಡದಿಂದ ಬರುವ ತಲೆನೋವಿಗೆ ಮುಖ್ಯವಾಗಿ ವಿಶ್ರಾಂತಿ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಮನಸ್ಸನ್ನು ಹಗುರವಾಗಿಸುವ ಉಪಾಯವನ್ನು ಕಂಡುಕೊಳ್ಳಬೇಕು. ಯಾವುದಾದರೊಂದು ವಿಚಾರಗಳು ನಮ್ಮನ್ನು ಕಾಡುತ್ತಿದ್ದರೆ ಅಥವಾ ಸಮಸ್ಯೆಯಿಂದ ಬಳಲುತ್ತಿದ್ದರೆ ಅದನ್ನು ಪರಿಹರಿಸುವ ಪ್ರಯತ್ನ ಮಾಡಬೇಕೇ ವಿನಃ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಚಿಂತಿಸುತ್ತಾ ಕೂರುವುದು ಒಳ್ಳೆಯದಲ್ಲ. ಇದು ಮಾನಸಿಕ ತಲೆನೋವನ್ನು ಇನ್ನಷ್ಟು ಹೆಚ್ಚು ಮಾಡಬಹುದು.

ಮಾನಸಿಕ ಒತ್ತಡದಿಂದ ಹೊರಬರಬೇಕು ಎನ್ನುವ ಸಲಹೆಯನ್ನು ಕೊಡುವುದು ಸುಲಭ ಆದರೆ ಹೇಗೆ ಬರುವುದು ಎಂಬುದೇ ಎಲ್ಲರನ್ನು ಕಾಡುವ ಪ್ರಶ್ನೆಯಾಗಿದೆ ಎಂದರೆ ತಪ್ಪಾಗಲಾರದು. ಮನೆಯೊಳಗೆ ಅಥವಾ ಏಕಾಂಗಿಯಾಗಿದ್ದಾಗಲೇ ನಮ್ಮನ್ನು ಮಾನಸಿಕವಾಗಿ ಹಲವು ವಿಚಾರಗಳು ಕಾಡುತ್ತವೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ನಾವು ಜನರೊಂದಿಗೆ ಬೆರೆಯುವುದನ್ನು ಕಲಿತುಕೊಳ್ಳಬೇಕು. ನಮ್ಮದೇನು? ನಮಗಿಂತಲೂ ಕಷ್ಟದಲ್ಲಿರುವವರು ಇದ್ದಾರೆ ಎಂಬ ಧೈರ್ಯವನ್ನು ತಂದುಕೊಳ್ಳಬೇಕು. ನಮ್ಮ ಯೋಚನಾ ಲಹರಿಯ ದಿಕ್ಕನ್ನು ಆದಷ್ಟು ಬೇರೆ ಕಡೆಗೆ ತಿರುಗಿಸುವ ಪ್ರಯತ್ನ ಮಾಡಬೇಕು. ಅನಾವಶ್ಯಕ, ಅನಪೇಕ್ಷಿತ ವಿಚಾರಗಳಿಂದ ದೂರವಿರುವುದನ್ನು ಕಲಿಯಬೇಕು.

ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ಆಹಾರ ಸೇವಿಸುವ ಮುನ್ನ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಡಿಲವಾದ ಉಡುಪನ್ನು ಧರಿಸಿ ನೆಲದ ಮೇಲೆ ಕಂಬಳಿಯನ್ನು ಹಾಸಿ ಅದರ ಮೇಲೆ ಕುಳಿತುಕೊಳ್ಳಬೇಕು. ಬೇರೆ ಎಲ್ಲ ಯೋಚನೆಗಳನ್ನು ಬದಿಗೆ ಸರಿಸಿ ಏಕಾಗ್ರತೆಯಿಂದ ಮನಸ್ಸನ್ನು ತಿಳಿಯಾಗಿಸಿಕೊಳ್ಳಬೇಕು. ಆ ನಂತರ ಆಳವಾಗಿ ಅಥವಾ ಕ್ರಮಬದ್ಧವಾಗಿ ಉಸಿರಾಟ ಮಾಡಬೇಕು. ಉಸಿರಾಟ ಸ್ಥಾಯಿಯಾದ ಬಳಿಕ ಮನಸ್ಸಿನಲ್ಲಿ ಒಂದೊಳ್ಳೆಯ ಯೋಚನೆ ಅದು ಭಗವನ್ ನಾಮಸ್ಮರಣೆಯಾದರೆ ಇನ್ನೂ ಒಳ್ಳೆಯದು. ಬೇರೆ ಎಲ್ಲ ಆಲೋಚನೆಗಳನ್ನು ಬದಿಗೊತ್ತಿ  ಒಂದೊಳ್ಳೆಯ ದೇವರ ನಾಮಸ್ಮರಣೆಯಲ್ಲಿ ತೊಡಗಿದ್ದೇ ಆದರೆ ಒಂದಿಷ್ಟು ಮಾನಸಿಕ ರಗಳೆಗಳು ದೂರವಾಗಿ ಹಗುರವಾಗುತ್ತದೆ.

ಕೆಲವರು ಬೇಕು ಬೇಕಂತಲೇ ರಗಳೆಗಳನ್ನು ಮೈಮೇಲೆ ಎಳೆದು ಕೊಳ್ಳುತ್ತಾರೆ. ಆ ನಂತರ ಆ ವಿಚಾರಕ್ಕೆ ಸಂಬಂಧಿಸಿದಂತೆ ತಲೆಕೆಡಿಸಿಕೊಳ್ಳುತ್ತಾರೆ. ಇದು ಮಾನಸಿಕವಾಗಿ ಅವರನ್ನು ಕಾಡುತ್ತದೆ. ಅದು ತಲೆ ನೋವಿಗೂ ಕಾರಣವಾಗಿ ಬಿಡಬಹುದು. ದೈಹಿಕವಾಗಿ ಬರುವ ತಲೆನೋವುಗಳಿಗೆ ಔಷಧಿಗಳಿಂದ ಪರಿಹಾರ ನೀಡಬಹುದು. ಆದರೆ ಮಾನಸಿಕವಾಗಿ ಬರುವ ತಲೆನೋವುಗಳಿಗೆ ಔಷಧಿಗಳನ್ನು ನಾವೇ ಮಾಡಿಕೊಳ್ಳಬೇಕು.

ಕೆಲವರು ಓದುವುದು, ಇನ್ನೇನಾದರೂ ಕೆಲಸ ಮಾಡುವುದರಲ್ಲಿ ಬಿಡುವಿನ ಸಮಯವನ್ನು ಕಳೆಯುತ್ತಾರೆ. ಇನ್ನು ಕೆಲವರು ಹಾಗಿರುವುದಿಲ್ಲ. ಅವರು ಸುಖಾ ಸುಮ್ಮನೆ ಬೇರೆಯವರ ವಿಚಾರದಲ್ಲಿ ಮೂಗು ತೂರಿಸುತ್ತಾ ಅವರಿವರ ವಿಚಾರಗಳನ್ನು ಮಾತನಾಡುತ್ತಾ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೇಳುತ್ತಾ ಸಂಬಂಧಗಳಿಗೆ ಹುಳಿ ಹಿಂಡುತ್ತಾರೆ. ಅದು ಅವರಿಗೆ ವಿಕೃತ ಸುಖ ಕೊಡುತ್ತದೆ. ಆದರೆ ಅದನ್ನೇ ಗಂಭೀರವಾಗಿ ತೆಗೆದುಕೊಳ್ಳುವವರಿಗೆ ಮಾತ್ರ ಶಿಕ್ಷೆ ಎನ್ನುವುದಂತು ಸತ್ಯ.

ಬಹಳಷ್ಟು ಸಲ ನಮ್ಮ ಬಗ್ಗೆ ಬೇರೆ ಯಾರಾದರೂ ಏನಾದರು ನಕರಾತ್ಮಕವಾಗಿ ಮಾತನಾಡಿದರು ಎಂಬ ವಿಚಾರ ನಮ್ಮ ಕಿವಿಗೆ ಬೀಳುತ್ತಿದ್ದಂತೆಯೇ ಮನಸ್ಸು ಗೊಂದಲಕ್ಕೀಡಾಗುತ್ತದೆ. ಆ ವಿಚಾರಕ್ಕೆ ಸಂಬಂಧಿಸಿದಂತೆ ಯಾರು ಹೇಳಿದರೋ ಆ ವ್ಯಕ್ತಿಯನ್ನು ಕೇಳುವ ತನಕ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಅದೇ ವಿಷಯಗಳು ನಮ್ಮನ್ನು ಕೊರೆಯುತ್ತಾ ನಮ್ಮ ಮನಸ್ಸನ್ನು ಆವರಿಸಿ ಎಲ್ಲದರಲ್ಲೂ ನಿರಾಸಕ್ತಿಯನ್ನುಂಟು ಮಾಡುತ್ತದೆ. ಇದೊಂದು ರೀತಿಯ ತಲೆನೋವಿಗೂ ಕಾರಣವಾಗಿಬಿಡುತ್ತದೆ.

ಇದಕ್ಕೆ ಸುಲಭೋಪಾಯ ಏನೆಂದರೆ ಅವರಿವರು ನಿಮ್ಮ ಬಗ್ಗೆ ಮಾತನಾಡಿದರು ಎಂಬ ಬಗ್ಗೆ ನಿಮ್ಮ ಬಳಿ ಬಂದು ಹೇಳುವ ವ್ಯಕ್ತಿಗಳಿಂದ ದೂರವಿರಿ. ಅವರು ನಿಮ್ಮ ಬಗ್ಗೆ ಹೇಳುತ್ತಿದ್ದಾರೆ ಎಂಬುದು ಗೊತ್ತಾದ ತಕ್ಷಣ ಮಾತನ್ನು ಬದಲಿಸಿ, ಉದಾಸೀನತೆ ತಾಳಿ, ಅವರಿಂದ ದೂರಬನ್ನಿ ಅಥವಾ ನೀವು ಹೇಳುತ್ತಿರುವ ವಿಷಯದಲ್ಲ್ಲಿ ಆಸಕ್ತಿಯಿಲ್ಲ. ಯಾರೂ ಏನೂ ಹೇಳಿದರೂ ತೊಂದರೆಯಿಲ್ಲ. ಅದನ್ನು ಬಿಟ್ಟು ಬೇರೆಯದನ್ನು ಮಾತನಾಡಿ ಎಂಬುದನ್ನು ಅವರಿಗೆ ನೇರವಾಗಿ ಹೇಳಿ ಬಿಡಿ. ಮತ್ತೆ ಅವರು ಆ ರೀತಿಯ ವಿಚಾರಗಳನ್ನು ನಿಮ್ಮ ಬಳಿ ಮಾತನಾಡುವುದಿಲ್ಲ.

ಸಮಾಜದಲ್ಲಿ ಎಲ್ಲರ ಬಗ್ಗೆಯೂ ಎಲ್ಲರೂ ಹಿಂದಿನಿಂದ ಮಾತನಾಡುತ್ತಲೇ ಇರುತ್ತಾರೆ. ಅದರಲ್ಲೂ ಸಕರಾತ್ಮಕ ವಿಚಾರಕ್ಕಿಂತ ನಕರಾತ್ಮಕ ವಿಚಾರಗಳ ಬಗ್ಗೆ ಜನ ಹೆಚ್ಚು ಆಸಕ್ತಿಯಿಂದ ಮಾತನಾಡುತ್ತಾರೆ. ಹೀಗಿರುವಾಗ ಹಿಂದಿನಿಂದ ಮಾತನಾಡುವ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿರುವುದಿಲ್ಲ. ಹಾಗೆನೋಡಿದರೆ ಎಲ್ಲರೂ ಒಂದೇ ರೀತಿಯಿರುವುದಿಲ್ಲ. ಕೆಲವರು ಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ. ಅವರು ತಮ್ಮ ಬಗ್ಗೆ ಬರುವ ನಕರಾತ್ಮಕ ವಿಚಾರಗಳ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳುತ್ತಾರೆ. ಅಂಥವರು ಚಿಕ್ಕ ಚಿಕ್ಕ ವಿಚಾರಗಳಿಗೆ ಹೆಚ್ಚು ತಲೆಕೆಡಿಸಿಕೊಂಡು ತಲೆನೋವನ್ನು ತಂದುಕೊಳ್ಳುತ್ತಾರೆ.

ಇಂತಹ ತಲೆನೋವುಗಳಿಗೆ ಯಾವುದೇ ಔಷಧಿಯಿಲ್ಲ. ಇದಕ್ಕಿರುವ ಒಂದೇ ಔಷಧಿ ಎಲ್ಲವನ್ನೂ ಸಮಾನಾಗಿ ಸ್ವೀಕರಿಸುವ ಸಾಮಥ್ರ್ಯ ಬೆಳೆಸಿಕೊಳ್ಳುವುದು ಮತ್ತು ಒಳ್ಳೆಯದನ್ನು ತಮ್ಮ ಬಳಿಯಿಟ್ಟುಕೊಂಡು ಕೆಟ್ಟದನ್ನು ತೂರಿ ಬಿಡುವುದು. ಸದಾ ಮಾನಸಿಕ ಒತ್ತಡದಿಂದ ಮುಕ್ತರಾಗಿರುವಂತೆ ನೋಡಿಕೊಳ್ಳುವುದು...