ಯಾವುದಕ್ಕೂ ಮಧುಮೇಹ ಪರೀಕ್ಷೆ ಮಾಡಿಕೊಳ್ಳಿ!

ಯಾವುದಕ್ಕೂ ಮಧುಮೇಹ ಪರೀಕ್ಷೆ ಮಾಡಿಕೊಳ್ಳಿ!

LK   ¦    Oct 29, 2018 02:26:36 PM (IST)
ಯಾವುದಕ್ಕೂ ಮಧುಮೇಹ ಪರೀಕ್ಷೆ ಮಾಡಿಕೊಳ್ಳಿ!

ಮಧುಮೇಹ ಹೆಚ್ಚಿನ ಜನರನ್ನು ಕಾಡುತ್ತಿರುವ ಒಂದು ರೋಗ. ಇದು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇದಕ್ಕೆ ಕಾರಣವೂ ಅನೇಕ ಇರಬಹುದು. ಆದರೆ ಮಧುಮೇಹ ಬಂತೆಂದು ಭಯಪಡಬೇಕಾಗಿಲ್ಲ. ನಿಮ್ಮ ಜೀವನ ಕ್ರಮದಲ್ಲಿ ಒಂದಷ್ಟು ಅಗತ್ಯ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದರೆ ನಿಯಂತ್ರಣದಲ್ಲಿಡಲು ಸಾಧ್ಯವಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಬಹಳಷ್ಟು ಸಲ ವೈದ್ಯರು ಏನನ್ನು ಮಾಡಬಾರದು ಎಂದು ಹೇಳಿರುತ್ತಾರೆಯೋ ಅದನ್ನೇ ಹೆಚ್ಚಾಗಿ ಮಾಡುವುದರಿಂದ ಕಾಯಿಲೆ ನಿಯಂತ್ರಣಕ್ಕೆ ಬಾರದ ಕೆಲವರು ಒದ್ದಾಡುವುದನ್ನು ನಾವು ಕಾಣಬಹುದಾಗಿದೆ. ಜಗತ್ತಿನಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದ್ದು ಈ ಪೈಕಿ ಮಧುಮೇಹಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ.

ಇನ್ನೊಂದು ಬಹಳಷ್ಟು ಜನಕ್ಕೆ ತಿಳಿಯದ ವಿಷಯವೇನೆಂದರೆ ಮಧುಮೇಹ ತಮಗೆ ಇದೆ ಎಂದು ಗೊತ್ತಾಗುವ ಸುಮಾರು ಹತ್ತು ಹನ್ನೆರಡು ವರ್ಷದ ಮೊದಲೇ ಕಾಯಿಲೆ ದೇಹದಲ್ಲಿರುತ್ತದೆಯಂತೆ. ಆದರೆ ಇದರ ಗುಣ ಲಕ್ಷಣಗಳನ್ನು ಹೊರಹಾಕದ ಕಾರಣಗಳಿಂದಾಗಿ ಕಾಯಿಲೆ ತನಗಿದೆ ಎಂಬುದೇ ಗೊತ್ತಾಗುವುದಿಲ್ಲವಂತೆ.

ತನಗೇನು ಮಧುಮೇಹವಿಲ್ಲ ಎನ್ನುವ ಮಂದಿ ಯಾವುದಕ್ಕೂ ಒಮ್ಮೆ ರಕ್ತಪರೀಕ್ಷೆ ಮಾಡಿಕೊಳ್ಳುವುದು ಒಳ್ಳೆಯದು. ಎಂತಹವರಲ್ಲಿ ಮಧುಮೇಹ ಇರಲೂ ಸಾಧ್ಯವಿದೆ ಎಂಬ ಸಂಶಯ ಬರುತ್ತದೆ ಎಂದರೆ ಈಗಾಗಲೇ ತಂದೆ ತಾಯಿಗೆ ಮಧುಮೇಹವಿದ್ದರೆ, ಅತಿಯಾದ ಬೊಜ್ಜು ಹೊಂದಿರುವವರು. ಇಂತಹವರು ಪರೀಕ್ಷೆ ಮಾಡಿಕೊಳ್ಳುವುದು ಒಳ್ಳೆಯದು.

ಮೂರು ತಿಂಗಳಿಗೊಮ್ಮೆ (ಸರಾಸರಿ ರಕ್ತ ಸಕ್ಕರೆ ಪ್ರಮಾಣವನ್ನು ಅರಿಯಲು) ಎಚ್‍ಬಿಎ1ಸಿ ಪರೀಕ್ಷೆ ಮಾಡಿಕೊಳ್ಳುವುದು ಒಳ್ಳೆಯದು. ಆಗಾಗ್ಗೆ ಪಾದಪರೀಕ್ಷೆ, ವರ್ಷಕ್ಕೊಮ್ಮೆ ರಕ್ತಕೊಬ್ಬಿನಾಂಶ, ಮೂತ್ರದ ಮೈಕ್ರೋ ಅಲ್ಭುಮಿನ್ ಪರೀಕ್ಷೆ ಮಾಡಿಕೊಳ್ಳಬೇಕು, ಬಿಪಿಯನ್ನು ಆಗಾಗ್ಗೆ ಪರೀಕ್ಷಿಸಿಕೊಳ್ಳಬೇಕು. ಇನ್ನು ದೃಷ್ಠಿ ತೊಂದರೆಯಿದ್ದರೆ ಅಥವಾ ವಾರ್ಷಿಕವಾಗಿ ಕಣ್ಣುಪಾಪೆ(ರೆಟಿನಾ)ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ಇದಲ್ಲದೆ ವರ್ಷಕ್ಕೊಮ್ಮೆ ಅಥವಾ ಅವಶ್ಯಕತೆ ಕಂಡು ಬಂದಾಗ ಇಸಿಜಿ, ಟಿಎಂಟಿ ಮತ್ತು ಎಕೋ ಕಾರ್ಡಿಯೋಗ್ರಾಫಿಯನ್ನು ಮಾಡಿಕೊಳ್ಳುವುದು ಅಗತ್ಯವಾಗಿದೆ.

ನಮಗೇನು ಕಾಯಿಲೆ ಇಲ್ಲ ಎಂಬ ಆತ್ಮವಿಶ್ವಾಸದಲ್ಲಿರುವುದು ಒಳ್ಳೆಯದೇ ಆದರೂ ಕೆಲವೊಮ್ಮೆ ನಮಗೆ ಗೊತ್ತಿಲ್ಲದ ಹಾಗೆ ಅದು ಅಡರಿಕೊಳ್ಳಬಹುದು. ಹೀಗಾಗಿ ಪರೀಕ್ಷಿಸಿಕೊಂಡು ತಮಗೆ ಕಾಯಿಲೆ ಇಲ್ಲ ಎಂಬುದು ತಿಳಿದುಕೊಂಡು ಖುಷಿ ಪಡುವುದರಲ್ಲಿ ಅರ್ಥವಿದೆ.

ಒಂದು ವೇಳೆ ಕಾಯಿಲೆಯ ಸೂಕ್ಷ್ಮತೆ ಕಂಡು ಬಂದರೆ ಕೆಲವೊಂದು ವಿಧಾನಗಳಿಂದ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಉದಾಸೀನ ಮನೋಭಾವ ಬಿಟ್ಟು ಪರೀಕ್ಷಿಸಿಕೊಂಡು ಉತ್ತಮ ಜೀವನ ನಡೆಸಲು ಮುಂದಾಗಬೇಕಿದೆ.