ಬೇಸಿಗೆಯಲ್ಲಿ ಬರುವ ರೋಗಗಳ ಬಗ್ಗೆ ಎಚ್ಚರ!

ಬೇಸಿಗೆಯಲ್ಲಿ ಬರುವ ರೋಗಗಳ ಬಗ್ಗೆ ಎಚ್ಚರ!

LK   ¦    Mar 07, 2018 02:31:30 PM (IST)
ಬೇಸಿಗೆಯಲ್ಲಿ ಬರುವ ರೋಗಗಳ ಬಗ್ಗೆ ಎಚ್ಚರ!

ಸಾಮಾನ್ಯವಾಗಿ ಹೆಚ್ಚಿನ ರೋಗಗಳು ಕಾಣಿಸಿಕೊಳ್ಳುವುದು ಬೇಸಿಗೆಯ ದಿನಗಳಲ್ಲೇ. ಈ ದಿನಗಳಲ್ಲಿ ಹೆಚ್ಚಾಗಿ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆ. ಕುಡಿಯುವ ನೀರು, ಕಚ್ಚುವ ಸೊಳ್ಳೆ, ಅಶುಚಿತ್ವ ಹೀಗೆ ಎಲ್ಲವೂ ಒಂದಲ್ಲ ಒಂದು ರೀತಿಯ ಕಾಯಿಲೆಯನ್ನು ಹರಡಿ ನಮ್ಮ ಪ್ರಾಣಕ್ಕೂ ಸಂಚಕಾರ ತಂದರೆ ಅಚ್ಚರಿಪಡಬೇಕಾಗಿಲ್ಲ.

ಬೇಸಿಗೆಯ ದಿನಗಳಲ್ಲಿ ಅದರಲ್ಲೂ ಪಟ್ಟಣಗಳಲ್ಲಿ ಶುಚಿತ್ವದ ಕೊರತೆಯಿಂದಾಗಿ ಸೊಳ್ಳೆಗಳು ಹೆಚ್ಚಾಗುತ್ತವೆ. ಈ ಸೊಳ್ಳೆಗಳು ಕಚ್ಚಿದರೆ ಯಾವ ಕಾಯಿಲೆಗಳು ಬೇಕಾದರೂ ನಮಗೆ ತಗಲಬಹುದು. ಇನ್ನು ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವುದರಿಂದಾಗಿ ಕೆಲವೊಮ್ಮೆ ಕಲುಷಿತ ನೀರು ಮಿಶ್ರವಾಗಿ ಅವು ನಮ್ಮನ್ನು ಹಾಸಿಗೆ ಹಿಡಿಯುವಂತೆ ಮಾಡಲುಬಹುದು. ಬೇಸಿಗೆಯಲ್ಲಿ ನೀರಿನಿಂದ ಹರಡುವ ಕಾಯಿಲೆಯಲ್ಲಿ ಫ್ಲೋರೊಸಿಸ್ ಗೆ ಅಗ್ರಸ್ಥಾನವಿದೆ. ಇದು ಕುಡಿಯುವ ನೀರಿನಿಂದ, ಸೇವಿಸುವ ವಿವಿಧ ಬಗೆಯ ಆಹಾರ ಹಾಗೂ ಕಾರ್ಖಾನೆಗಳು ಉಗುಳುವ ತ್ಯಾಜ್ಯಗಳಿಂದ ಹೆಚ್ಚಾಗಿ ಹರಡುತ್ತಿದೆ. ಇಷ್ಟಕ್ಕೂ ಈ ರೋಗ ಏಕೆ ಮತ್ತು ಹೇಗೆ ಹರಡುತ್ತದೆ ಎಂಬುದನ್ನು ನೋಡಿದರೆ ಈ ರೋಗದ ಕುರಿತಂತೆ ಮಾಹಿತಿಗಳು ಲಭ್ಯವಾಗುತ್ತವೆ.

ವೈದ್ಯರು ಹೇಳುವಂತೆ ಇದೊಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು, ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಜಾಸ್ತಿ ಇರುವ ಕಡೆ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದ ಮೂರು ಬಗೆಯ ಕಾಯಿಲೆ ಹರಡುವ ಲಕ್ಷಣ ಗೋಚರವಾಗುತ್ತದೆ. ಹಲ್ಲುಗಳು ಕಂದು ಬಣ್ಣಕ್ಕೆ ತಿರುಗಿ ಸಣ್ಣಸಣ್ಣರಂಧ್ರಗಳು ನಿರ್ಮಾಣವಾಗಬಹುದು. ಮೂಳೆ, ಕೀಲು ನೋವು ಹಾಗೂ ಜಡತ್ವ ಹೆಚ್ಚುವುದು. ಕೈಕಾಲುಗಳ ಊನತೆ ಉಂಟಾಗುತ್ತದೆ. ಫ್ಲೋರೊಸಿಸ್ ಕಾಯಿಲೆ ವಾಸಿಮಾಡಲು ಸಾಧ್ಯವಾಗದ ಶಾಶ್ವತ ಕಾಯಿಲೆಯಾಗಿರುವುದರಿಂದ ಪ್ರತಿಯೊಬ್ಬರೂ ಇದರತ್ತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ತಾವು ತಿನ್ನುವ ಆಹಾರ, ಕುಡಿಯುವ ನೀರು ಶುದ್ಧವೋ ಎಂದು ಪರಿಶೀಲಿಸಿ ನೋಡುವ ತಾಳ್ಮೆಯೂ ಇಲ್ಲದೆ ಎಲ್ಲೆಂದರಲ್ಲಿ ಸಿಕ್ಕ ಪದಾರ್ಥಗಳನ್ನು ತಿನ್ನುವ ಕೆಟ್ಟ ಅಭ್ಯಾಸ ಇರುವವರಿಗೆ, ನೀರಿನ ಶುದ್ಧತೆಯನ್ನು ನೋಡದೆ ಕುಡಿಯುವವರಿಗೆ ಈ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಕಾಯಿಲೆಯ ಬಗ್ಗೆ ಎಚ್ಚರ ವಹಿಸಬೇಕಲ್ಲದೆ, ಆಹಾರ ಮತ್ತು ನೀರನ್ನು ಸೇವಿಸುವಾಗ ಜಾಗ್ರತೆ ವಹಿಸುವುದು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಲೇ ಬೇಕಾದ ವಿಚಾರವಾಗಿದೆ.

ಈಗಾಗಲೇ ಈ ಫ್ಲೋರೋಸಿಸ್ ಎಂಬ ಕಾಯಿಲೆ ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದು, ಹಾಸನದ ಅರಸೀಕೆರೆ ತಾಲೂಕಿನಲ್ಲಿ ಕಳೆದ ವರ್ಷ ಕಂಡು ಬಂದಿತ್ತು. ಇದಕ್ಕೆ ಮುಖ್ಯ ಕಾರಣ ಕುಡಿಯುವ ನೀರು ಎಂಬುದು ದೃಢವಾಗಿತ್ತು.

ವೈದ್ಯರು ಹೇಳುವ ಪ್ರಕಾರ ತ್ಯಾಜ್ಯಗಳು, ಮಲ ಮೂತ್ರಗಳು ಕೆಲವೊಮ್ಮೆ ಕುಡಿಯುವ ನೀರಿನಲ್ಲಿ ಮಿಶ್ರವಾಗಿ ಸಾಂಕ್ರಾಮಿಕ ರೋಗದ ಕೀಟಾಣುಗಳು ದೇಹವನ್ನು ಸೇರಿ ಕಾಯಿಲೆ ಬಾಧಿಸಬಹುದು. ಕಾಯಿಲೆ ಬಂದ ಬಳಿಕ ಅದು ನಮಗೆ ಫ್ಲೋರೋಸಿಸ್ ಎಂಬುದು ಗೊತ್ತಾಗುವ ಹೊತ್ತಿಗೆ ಕೆಲವು ಸಮಯ ಹಿಡಿಯಬಹುದು. ತಡವಾಗಿ ವೈದ್ಯರ ಬಳಿಗೆ ತೆರಳಿದರೆ ಚಿಕಿತ್ಸೆ ನೀಡಿ ಉಳಿಸಿಕೊಳ್ಳುವುದು ಕಷ್ಟದ ಕೆಲಸವಾಗಿ ಪರಿಣಮಿಸುವ ಸಾಧ್ಯತೆಯಿದೆ. ಫ್ಲೋರೋಸಿಸ್ ಕಾಯಿಲೆ ವಾಸಿಯಾಗದ ಕಾಯಿಲೆಯಾಗಿದ್ದು, ನಿಯಂತ್ರಣ ಮಾಡಲಷ್ಟೇ ಸಾಧ್ಯವಿರುವುದರಿಂದ ಪ್ರತಿಯೊಬ್ಬರೂ ಇದರತ್ತ ಎಚ್ಚರ ವಹಿಸುವುದು ಅಗತ್ಯ.

ಆದ್ದರಿಂದ ಕುಡಿಯುವ ನೀರು ಶುದ್ಧವಾಗಿದೆಯೋ? ಆಹಾರವೂ ಶುಚಿಯಾಗಿದೆಯೋ ಎಂಬುದನ್ನು ಮನದಟ್ಟು ಮಾಡಿಕೊಂಡು ಸೇವಿಸಬೇಕು. ರಸ್ತೆಬದಿಯ ಆಹಾರ ಸೇವನೆಯನ್ನು ನಿಲ್ಲಿಸಬೇಕು. ಶುದ್ಧೀಕರಿಸಿದ ನೀರನ್ನು ಕುಡಿಯಬೇಕು. ಮನೆಯಲ್ಲಿ ನೀರನ್ನು ಕುದಿಸಿ ಆರಿಸಿ ಸೇವಿಸಬೇಕು. ಮನೆಗೆ ಸರಬರಾಜಾಗುವ ನೀರನ್ನು ನೇರವಾಗಿ ಸೇವಿಸುವುದನ್ನು ನಿಲ್ಲಿಸಬೇಕು. ಹೀಗೆ ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಫ್ಲೋರೋಸಿಸ್ ಬರದಂತೆ ತಡೆಯಲು ಸಾಧ್ಯವಾಗುತ್ತದೆ.

ದುಡಿಮೆಗೆ ಹೆಚ್ಚಿನ ಆದ್ಯತೆ ನೀಡುವ ನಾವು. ನಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನಹರಿಸಲೇ ಬೇಕಾಗುತ್ತದೆ. ಸ್ವಲ್ಪ ಎಡವಿದರೂ ಕಾಯಿಲೆಗಳು ಬಾಧಿಸುವುದಂತು ಖಚಿತ. ಈ ಬಾರಿ ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯನ್ನು ಹವಮಾನ ಇಲಾಖೆ ಪ್ರಕಟಿಸಿದೆ. ಮಳೆ ಸಕಾಲದಲ್ಲಿ ಬಾರದೆ ಹೋದರೆ ಸಮಸ್ಯೆ ತಪ್ಪಿದಲ್ಲ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದತ್ತ ಎಚ್ಚರವಾಗಿರುವುದು ಒಳಿತು.