ಚಳಿಗಾಲದಲ್ಲಿ ಬಿರುಕು ಬಿಡುವ ಚರ್ಮದತ್ತ ನಿಗಾವಿರಲಿ!

ಚಳಿಗಾಲದಲ್ಲಿ ಬಿರುಕು ಬಿಡುವ ಚರ್ಮದತ್ತ ನಿಗಾವಿರಲಿ!

LK   ¦    Nov 29, 2017 02:11:24 PM (IST)
ಚಳಿಗಾಲದಲ್ಲಿ ಬಿರುಕು ಬಿಡುವ ಚರ್ಮದತ್ತ ನಿಗಾವಿರಲಿ!

ಬಹಳಷ್ಟು ಮಂದಿ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಆತಂಕಕ್ಕೀಡಾಗುತ್ತಾರೆ ಕಾರಣ ಕಾಲು, ಹಿಮ್ಮಡಿ, ತುಟಿ ಹೀಗೆ ಮೈಯ್ಯಲ್ಲಿನ ಚರ್ಮದಲ್ಲಿ ಬಿರುಕು ಕಾಣಿಸಿಕೊಂಡು ಮುಜುಗರ ತರುತ್ತದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳಗ್ಗೆ ಮತ್ತು ಸಂಜೆ ಮೈ ಕೊರೆಯುವ ಚಳಿಯಾದರೆ ಮಧ್ಯಾಹ್ನ ನೆತ್ತಿ ಸುಡುವ ಬಿಸಿಲು. ಇದರ ನಡುವೆ ನಮ್ಮ ದೇಹದಲ್ಲಿಯೂ ಒಂದಷ್ಟು ಏರು ಪೇರಾಗುತ್ತಿದೆ. ಅದರ ಪರಿಣಾಮಗಳು ತುಟಿ, ಕೈಕಾಲು, ಚರ್ಮಗಳಲ್ಲಿ ಕಾಣ ಸಿಗುತ್ತವೆ.

ಮುಖಕ್ಕೆ ಎಷ್ಟು ಅಲಂಕಾರ ಮಾಡಿಕೊಂಡರೂ ಚರ್ಮ ಬಿರುಕು ಬಿಟ್ಟು ಅಸಹ್ಯ ಎನಿಸುತ್ತಿದೆ. ಯಾರಾದರೂ ನೋಡಿ ಬಿಟ್ಟಾರು ಎಂಬ ಮುಜುಗರ ಕಾಡುತ್ತದೆ. ಇದನ್ನು ಹೋಗಲಾಡಿಸುವ ಸಲುವಾಗಿಯೇ ಬಹಳಷ್ಟು ಮಂದಿ ಮಾರುಕಟ್ಟೆಯಲ್ಲಿ ಸಿಗುವ ಚರ್ಮ ಬಿರುಕು ಬಿಡದಂತೆ ರಕ್ಷಿಸುವ ಸೌಂದರ್ಯವರ್ಧಕ ಉತ್ಪನ್ನಗಳಿಗೆ ಮಾರು ಹೋಗುತ್ತಾರೆ. ಕೆಲವರಿಗೆ ಅದು ಫಲ ನೀಡಬಹುದು. ಮತ್ತೆ ಕೆಲವರಿಗೆ ಫಲ ನೀಡದೆಯೂ ಇರಬಹುದು.

ನಾವು ಬಳಸುವ ಕ್ರೀಮ್ ಚರ್ಮದ ಬಿರುಕನ್ನು ಮುಚ್ಚುವಲ್ಲಿ ವಿಫಲವಾಯಿತೆಂದು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಕಾರಣ ನಮ್ಮ ಆಹಾರ ಸೇವನೆಯಲ್ಲಿನ ಕೆಲವು ಪದಾರ್ಥಗಳು ದೇಹದ ಚರ್ಮದ ಮೇಲೆ ಪರಿಣಾಮ ಬೀರಲೂ ಬಹುದು. ಅತಿ ಹೆಚ್ಚು ಉಷ್ಣದ ಗುಣಾಂಶ ಹೊಂದಿರುವ ಆಹಾರ ಪದಾರ್ಥ ಅಥವಾ ನಾವು ಕಾರ್ಯನಿರ್ವಹಿಸುವ ಸ್ಥಳಗಳು ಕೂಡ ಚರ್ಮದ ಮೇಲೆ ಪರಿಣಾಮ ಬೀರಿದರೂ ಅಚ್ಚರಿ ಪಡಬೇಕಾಗಿಲ್ಲ.

ಒಣ ಚರ್ಮ ಹೊಂದಿರುವವರು ಹೆಚ್ಚಾಗಿ ಮುಖ ತೊಳೆಯಬಾರದು. ಮಾರುಕಟ್ಟೆಯಲ್ಲಿ ಸಿಗುವ ಉತ್ತಮ ಗುಣಮಟ್ಟದ ಮಾಯಿಶ್ಚರೈಸಿಂಗ್ ಕ್ರೀಮ್ ನ್ನು ಬಳಸಬೇಕು ಹೀಗೆ ಮಾಡುವುದರಿಂದ ತ್ವಚೆಯ ಮೇಲಿರುವ ಕೊಬ್ಬಿನ ಪದರವನ್ನು ರಕ್ಷಿಸಲು ಸಾಧ್ಯವಾಗುತ್ತದೆ ಮತ್ತು ತೇವಾಂಶ ಉಳಿಯುತ್ತದೆ.

ಸ್ನಾನದ ಮೊದಲು ಕೊಬ್ಬರಿ ಎಣ್ಣೆ ಲೇಪಿಸಿ ಸ್ನಾನ ಮಾಡಿದರೆ ಮೈ ಒಡೆಯುವುದು ಕಡಿಮೆಯಾಗಲು ಸಾಧ್ಯವಾಗುತ್ತದೆ. ಎಣ್ಣೆಯ ಜೊತೆಗೆ ಬೇವಿನ ಪುಡಿ ಅಥವಾ ಅರಿಶಿನ ಸೇರಿಸಿ ಹಚ್ಚಿದರೆ ಚರ್ಮದ ನವೆಯನ್ನು ತಡೆಗಟ್ಟಬಹುದು. ಸ್ನಾನದ ನಂತರ ಕ್ರೀಮ್ ಇರುವ ಮಾಯಿಶ್ಚರೈಸಿಂಗ್ ಉಪಯೋಗಿಸಬೇಕು. ತ್ವಚೆಗೆ ಬರೀ ಲೋಶನ್ ಹಚ್ಚಿದರೆ ಸಾಕಾಗದು. ಹೆಚ್ಚಿನ ನೀರನ್ನು ಕುಡಿಯಬೇಕು. ಉಗುರು ಬೆಚ್ಚಗಿನ ಬಿಸಿ ನೀರನ್ನು ಕುಡಿಯಬೇಕು. ಪ್ರತಿದಿನ 8 ಲೋಟ ನೀರನ್ನು ಕುಡಿಯಲೇ ಬೇಕು.

ವಾಲ್ನಟ್, ಕೆನೋಲಾ ಎಣ್ಣೆ, ಆಗಸೇ ಬೀಜವನ್ನು ಹೆಚ್ಚಾಗಿ ಉಪಯೋಗಿಸಬೇಕು. ಹಸಿ ತರಕಾರಿ, ವಿಟಮಿನ್ ಸಿ ಇರುವ ಹಸಿರು ಎಲೆ ತರಕಾರಿಯನ್ನು ಆಹಾರದಲ್ಲಿ ಉಪಯೋಗಿಸಬೇಕು. ಜಂಕ್ ಆಹಾರ, ಕಾಫಿ, ಸೋಡಾ ಸೇವನೆ ಕಡಿಮೆ ಮಾಡಬೇಕು. ಬಿಸಿ ನೀರು ಸ್ನಾನ ಒಳ್ಳೆಯದು. ಆದರೆ ಬಿಸಿ ನೀರಿಗೆ ಕೊಬ್ಬರಿ ಎಣ್ಣೆ ಒಂದು ತೊಟ್ಟು ಹಾಕಿ ಉಪಯೋಗಿಸಬಹುದು.

ಹಿಮ್ಮಡಿ ಒಡೆಯುವುದನ್ನು ತಡೆಯಲು ಹೂ ಬಿಸಿ ನೀರಿಗೆ ಲ್ಯಾವೆಂಡರ್ ತೈಲದ ಎರಡು ಹನಿ ಸೇರಿಸಿ ಪಾದವನ್ನು ಹತ್ತು ನಿಮಿಷ ಮುಳುಗಿಸಿಡುವುದು. ನಂತರ ಚೆನ್ನಾಗಿ ಉಜ್ಜಿ ತೊಳೆದು ನಿರ್ಜೀವ ಚರ್ಮ ತೆಗೆದು ಮೆತ್ತನೆಯ ಬಟ್ಟೆಯಿಂದ ಪಾದ ಒರೆಸಿಕೊಳ್ಳಬೇಕು. ವ್ಯಾಸಲಿನ್ ಹಚ್ಚಿ ಸಾಕ್ಸ್ ಧರಿಸಿ ಓಡಾಡುವುದರಿಂದಲೂ ಹಿಮ್ಮಡಿ ಮತ್ತು ಪಾದದ ಬಿರುಕು ತಡೆಯಬಹುದು.

ನಮ್ಮ ಒತ್ತಡದ ಜೀವನದ ನಡುವೆ ಕೆಲವೊಮ್ಮೆ ಆರೋಗ್ಯವನ್ನು ನಿರ್ಲಕ್ಷಿಸುತ್ತಾ ಸಾಗುತ್ತೇವೆ ಇದರಿಂದ ಕೆಲವೊಂದು ತೊಂದರೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಕಾಲಕ್ಕೆ ತಕ್ಕಂತೆ ಒಂದಷ್ಟು ಆರೋಗ್ಯಕ್ಕೆ ಸಂಬಂಧಿಸಿದ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.