ನಿಯಮಿತ ನಿದ್ದೆಯಿಂದ ಉತ್ತಮ ಆರೋಗ್ಯ ಸಾಧ್ಯ

ನಿಯಮಿತ ನಿದ್ದೆಯಿಂದ ಉತ್ತಮ ಆರೋಗ್ಯ ಸಾಧ್ಯ

LK   ¦    Dec 17, 2018 03:28:00 PM (IST)
ನಿಯಮಿತ ನಿದ್ದೆಯಿಂದ ಉತ್ತಮ ಆರೋಗ್ಯ ಸಾಧ್ಯ

ಮೊದಲೆಲ್ಲ ಜನರು ನಿದ್ದೆಗೆಟ್ಟು ಕೆಲಸ ಮಾಡುತ್ತಿದ್ದರು. ಇವತ್ತಿಗೂ ರಾತ್ರಿ ನಿದ್ದೆಗೆಟ್ಟು ದುಡಿಯುವ ಕೆಲಸ ಕಾರ್ಯಗಳಿವೆ. ಆದರೆ ಅಂತಹವರಿಗೆ ಹಗಲಿನಲ್ಲಿ ನಿದ್ದೆ ಮಾಡುವ ಅವಕಾಶವಿರುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ನಡು ರಾತ್ರಿಯಾದರೂ ನಿದ್ದೆ ಮಾಡದೆ ಮೊಬೈಲ್ನ ಲ್ಲಿ ಕಾಲ ಕಳೆಯುತ್ತಿರುತ್ತಾರೆ. ಇದರಿಂದ ನಿದ್ದೆ ಮಾಡಬೇಕಾದ ಅಮೂಲ್ಯ ಸಮಯವು ವ್ಯರ್ಥವಾಗಿ ಕಳೆದು ಹೋಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಹೆಚ್ಚಿನವರಿಗೆ ಗೊತ್ತೇ ಆಗುತ್ತಿಲ್ಲ.

ಹಾಗೆ ನೋಡಿದರೆ ನಾವು ಸೇವಿಸುವ ಆಹಾರದೊಂದಿಗೆ ನಿಯಮಿತ ನಿದ್ದೆಯೂ ಅವಶ್ಯಕವಾಗಿರುತ್ತದೆ. ಒಂದು ವೇಳೆ ನಿದ್ದೆಯಲ್ಲಿ ಏರುಪೇರಾದರೆ ಅದರ ಪರಿಣಾಮ ನೇರವಾಗಿ ನಮ್ಮ ಆರೋಗ್ಯದ ಮೇಲೆ ಬೀರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಇಂದಿನ ದಿನಗಳಲ್ಲಿ ವಿಶ್ರಾಂತಿಯಿಲ್ಲದೆ ನಿದ್ದೆಗೆಟ್ಟು ದುಡಿಯುವುದರಿಂದಾಗಿ ನಮ್ಮ ಆರೋಗ್ಯದಲ್ಲಿ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಮಾಮೂಲಿಯಾಗಿದೆ.

ಸಾಮಾನ್ಯವಾಗಿ ನಿದ್ದೆ ಕಡಿಮೆ ಮಾಡುವವರಲ್ಲಿ ಖಿನ್ನತೆ, ಉದ್ವೇಗ, ಅಶಾಂತಿ ತಾಂಡವವಾಡುತ್ತಿರುತ್ತದೆ. ಮತ್ತೊಂದೆಡೆ ಸ್ವಾಭಾವಿಕ ನಿದ್ದೆ ದೇಹದಿಂದ ದೂರವಾಗಿ ನಿದ್ರೆ ಮಾತ್ರೆಯ ಮೂಲಕ ನಿದ್ದೆ ಮಾಡುವಂತಹ ಪರಿಸ್ಥಿತಿಯೂ ಬಂದೊದಗುತ್ತದೆ. ನಿದ್ದೆಯಿಂದ ದೇಹಕ್ಕೆ ವಿಶ್ರಾಂತಿ ದೊರೆಯುತ್ತದೆ. ಆಳವಾದ ನಿದ್ದೆಯಿಂದ ಒಬ್ಬ ವ್ಯಕ್ತಿಯು ಉದ್ವೇಗದಿಂದ ಮುಕ್ತಿ ಪಡೆಯುತ್ತಾನೆ. ಏಕೆಂದರೆ ಮೆದುಳು ಮತ್ತು ಶರೀರಗಳಿಗೆ ಸಂಪೂರ್ಣವಾದ ವಿಶ್ರಾಂತಿ ನಿದ್ದೆಯಿಂದ ದೊರೆಯುತ್ತದೆ.

ರಾತ್ರಿಯೆಲ್ಲಾ ನಿದ್ದೆ ಮಾಡಿದ್ದೇ ಆದರೆ, ಮುಂಜಾನೆ ಶರೀರ ಹಗುರವಾಗಿ ಉಲ್ಲಾಸ ಮೂಡುತ್ತದೆ. ನಿದ್ದೆಯ ಅಭಾವವಾದರೆ ಮನುಷ್ಯರಲ್ಲಿ ಸಿಡುಕು ಸ್ವಭಾವ ಮೂಡಬಹುದು. ಶರೀರದಲ್ಲಿ ಸ್ನಾಯುಗಳು ದುರ್ಬಲವಾಗಿ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ನಿದ್ದೆ ಬಾರದಿರುವುದು, ರಾತ್ರಿಯೆಲ್ಲಾ ಎಚ್ಚರವಾಗಿರುವುದು ಅಥವಾ ರಾತ್ರಿಯೆಲ್ಲಾ ನಿದ್ದೆಬಾರದೆ ಬೆಳಗಿನ ಜಾವ ತಡವಾಗಿ ನಿದ್ದೆ ಬರುವುದು ಇದು ಇನ್ಸೋರಮ್ನಿಯಾ(ಅನಿದ್ದೆ) ರೋಗದ ಲಕ್ಷಣಗಳಾಗಿವೆ.

ಈ ರೋಗ ಹಲವು ಕಾರಣಗಳಿದ್ದಾಗ ಬರುತ್ತದೆ. ಶರೀರದಲ್ಲಿ ಅತಿಯಾದ ವೇದನೆ, ಹಳೆಯ ಕೆಮ್ಮು, ಮಾನಸಿಕ ವಿಕೃತಿ, ಡಿಪ್ರೆಷನ್ ಮುಂತಾದವು ಅನಿದ್ದೆಗೆ ಕಾರಣವಾಗುತ್ತದೆ. ಅನಿದ್ದೆಯನ್ನು ನಿವಾರಿಸಲು ಉತ್ತಮ ನಿದ್ದೆಯನ್ನು ಪಡೆಯಲು ಯೋಗದಲ್ಲಿ ಕೆಲವು ಕ್ರಮಗಳನ್ನು ವಿವರಿಸಲಾಗಿದೆ. ನಿದ್ದೆ ಬಾರದಿದ್ದಾಗ ಔಷಧಿಗೆ ಶರಣಾಗದೆ ಯೋಗ ವಿಜ್ಞಾನದಲ್ಲಿ ಹೇಳಲಾಗಿರುವ ಕೆಲವು ವಿಶೇಷ ರೀತಿಯ ಆಸನಗಳನ್ನು ಮಾಡುವುದರ ಮೂಲಕ ನಿದ್ದೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ.

ತಜ್ಞರ ಅಭಿಪ್ರಾಯದಂತೆ ಆರೋಗ್ಯವಂತ ಮನುಷ್ಯನಿಗೆ 6ರಿಂದ 8ಗಂಟೆಗಳ ನಿದ್ದೆ ಅವಶ್ಯವಿರುತ್ತದೆ. ಅಷ್ಟೇ ಅಲ್ಲ ವಯಸ್ಸಿಗೆ ಅನುಗುಣವಾಗಿ ನಿದ್ದೆಯು ಬೇಕಾಗುತ್ತದೆ. ಅದರಂತೆ ಒಂದು ತಿಂಗಳ ಮಗುವಿಗೆ 21ಗಂಟೆ, ಆರು ತಿಂಗಳ ಮಗುವಿಗೆ 18ಗಂಟೆ, ಒಂದು ವರ್ಷದ ಮಗುವಿಗೆ 12ಗಂಟೆ, ನಾಲ್ಕು ವರ್ಷದ ಮಗುವಿಗೆ 11ಗಂಟೆ, 12 ವರ್ಷ ಮೇಲ್ಪಟ್ಟವರಿಗೆ 10ಗಂಟೆ, 16ವರ್ಷದವರಿಗೆ 8ಗಂಟೆ, 30ವರ್ಷ ಮೇಲ್ಪಟ್ಟವರಿಗೆ 6ರಿಂದ 8ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆಯಿರುತ್ತದೆ. ಸಾಮಾನ್ಯವಾಗಿ ಶಾರೀರಿಕ ಹಾಗೂ ಮಾನಸಿಕವಾಗಿ ದಣಿಯುವವರಿಗೆ ನಿದ್ದೆಯು ಚೆನ್ನಾಗಿ ಬರುತ್ತದೆ. ನಿದ್ದೆಯಿಂದ ಆರೋಗ್ಯ ದೊರೆಯುತ್ತದೆ. ಹಾಗೆಂದು ಸದಾ ನಿದ್ದೆಯಲ್ಲೇ ತೊಡಗುವುದು ಆಲಸ್ಯ, ಸೋಮಾರಿತನವನ್ನು ಹುಟ್ಟು ಹಾಕುತ್ತದೆ. ಇದು ಆರೋಗ್ಯಕ್ಕೆ ಅಹಿತಕರವಾಗಿ ಪರಿಣಮಿಸುತ್ತದೆ. ಆದುದರಿಂದ ಸದಾ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿ ನಿರ್ದಿಷ್ಟ ಸಮಯವನ್ನು ನಿದ್ದೆಗೆ ತೆಗೆದಿಡಿ. ಸಮಯ ಸಿಕ್ಕಾಗಲೆಲ್ಲಾ ನಿದ್ದೆಗೆ ಜಾರುವುದು ಆರೋಗ್ಯಕರ ಲಕ್ಷಣವಲ್ಲ ಎಂಬುದನ್ನು ಮರೆಯಬೇಡಿ.