ಆರೋಗ್ಯಕರ ಬದುಕಿಗೆ ಮನೆ-ಮನ ಶುಚಿಯಾಗಿರಲಿ!

ಆರೋಗ್ಯಕರ ಬದುಕಿಗೆ ಮನೆ-ಮನ ಶುಚಿಯಾಗಿರಲಿ!

Jan 11, 2017 11:44:49 AM (IST)

ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಪರಿಶುದ್ಧವಾಗಿಟ್ಟುಕೊಳ್ಳದೆ ಹೋದರೆ ಸೊಳ್ಳೆ ಸೇರಿದಂತೆ ಕ್ರಿಮಿಕೀಟಗಳು ಹುಟ್ಟಿಕೊಂಡು ಇಡೀ ಪರಿಸರ ಗಬ್ಬು ನಾರುವುದರೊಂದಿಗೆ ಸಾಂಕ್ರಾಮಿಕ ರೋಗಗಳು ಹರಡಿ ಆರೋಗ್ಯಕ್ಕೆ ಆಪತ್ತು ತಂದು ಬಿಡುತ್ತವೆ.

ನಮ್ಮ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣ ಶುಚಿಯಾಗಿದ್ದರೆ  ಅಲ್ಲಿ ವಾಸಿಸಲು ನಮಗೆ ಖುಷಿಯಾಗುತ್ತದೆ. ಜತೆಗೆ ನೆಮ್ಮದಿಯಾಗಿರುತ್ತೇವೆ. ನಮ್ಮ ಸುತ್ತಲಿನ ಪರಿಸರ ಶುದ್ಧವಾಗಿರಬೇಕಾದರೆ ನಾವು ಮೊದಲಿಗೆ ಪರಿಶುದ್ಧರಾಗಿರಬೇಕು.ಇಷ್ಟಕ್ಕೂ ಆರೋಗ್ಯವಂತ ಬದುಕು ಎನ್ನುವುದು ಕೇವಲ ಕಾಯಿಲೆಯಿಲ್ಲದೆ ಬದುಕುವುದಲ್ಲ. ಅದನ್ನು ಮೀರಿದ್ದೂ ಇದೆ. ಅದೇನೆಂದರೆ ನೈತಿಕ ಜೀವನ ಸಾಗಿಸುವುದು, ಇನ್ನೊಬ್ಬರಿಗೆ ಕೆಡುಕನ್ನು ಮಾಡದಿರುವುದು, ಸಾಧ್ಯವಾದರೆ ಉಪಕಾರ ಮಾಡುವುದು, ಸಾತ್ವಿಕ ಆಹಾರ ಸೇವನೆ, ಉತ್ತಮ ಹವ್ಯಾಸ ಬೆಳೆಸಿಕೊಳ್ಳುವುದು, ಅಹಂ ತ್ಯಜಿಸುವುದು. ಇದಲ್ಲದೆ ನಿರರ್ಥಕ ವಿವಾದಗಳಲ್ಲಿ ತೊಡಗುವ ಅಭ್ಯಾಸವುಳ್ಳ, ಇನ್ನೊಬ್ಬರ ಖಾಸಗಿ ವಿಚಾರಗಳಲ್ಲಿ ಮೂಗು ತೂರುವ  ಪರರ ದೋಷಗಳನ್ನು ಹುಡುಕುವುದರಲ್ಲಿ ಕಾಲ ತಳ್ಳುವುದನ್ನು ಬಿಟ್ಟು ಬದುಕುವುದು ಕೂಡ ಆರೋಗ್ಯವಂತ ಜೀವನವೇ.

ಇನ್ನು ಅನಗತ್ಯ ದೇಹ ದಂಡನೆ, ವ್ಯರ್ಥ ಉದ್ದೇಶಗಳಿಗೆ ಶಕ್ತಿ ವ್ಯಯ ಮಾಡುತ್ತಾ ಸ್ವಪ್ರತಿಷ್ಠೆ ಮೆರೆಯುವುದು ಕೂಡ ಆರೋಗ್ಯವಂತ ಬದುಕಿಗೆ ಒಳ್ಳೆಯದಲ್ಲ. ಹಾಸಿಗೆ ಇದ್ದಷ್ಟೆ ಕಾಲು ಚಾಚುವ, ಮತ್ತೊಬ್ಬರ ಏಳಿಗೆಯನ್ನು ಕಂಡು ಖುಷಿಪಡುವ, ಎಲ್ಲರೊಂದಿಗೆ ಬೆರೆತು ಬದುಕುವ, ಒಳ್ಳೆಯದನ್ನು ಮಾಡಿದವರ ಬೆನ್ನುತಟ್ಟುವ, ಪ್ರೋತ್ಸಾಹಿಸುವ ಗುಣ ಬೆಳೆಸಿಕೊಳ್ಳುವುದು ಕೂಡ ಆರೋಗ್ಯವಂತ ಬದುಕಿನ ಲಕ್ಷಣಗಳಾಗಿವೆ.

ನಾವು ಸದಾ ಒಳ್ಳೆಯದನ್ನೇ ಬಯಸುತ್ತಿದ್ದರೆ ನಮ್ಮ ಮನಸ್ಸು ಕೂಡ  ಒಳ್ಳೆಯದನ್ನೇ ಯೋಚಿಸುತ್ತಿರುತ್ತದೆ. ಶ್ರಮದಿಂದ ದುಡಿಯುವ, ತಾಳ್ಮೆ, ಬುದ್ದಿವಂತಿಕೆ ಇವುಗಳೊಂದಿಗೆ ಮನಸ್ಸು, ಮಾತು, ಕೃತಿಯಲ್ಲಿ ಇನ್ನೊಬ್ಬರಿಗೆ ಹಿತವನ್ನು ಬಯಸುತ್ತಾ  ಸದಾ ದೇವರ ಬಗ್ಗೆ ಸ್ಮರಣೆ ಮಾಡುತ್ತಾ ಒಳ್ಳೆ ಬುದ್ದಿಕೊಡಪ್ಪಾ ಎಂದು ಬೇಡಿಕೊಳ್ಳುತ್ತಾ ಬದುಕುವುದು ಕೂಡ ನಾವು ಮಾತ್ರವಲ್ಲದೆ ಸಮಾಜವೂ ಆರೋಗ್ಯಕರವಾಗಿರಲು ಸಾಧ್ಯವಾಗುತ್ತದೆ.