ದೊಡ್ಡಪತ್ರೆ ಸೊಪ್ಪಿನ ದೊಡ್ಡಗುಣ ಗೊತ್ತಾ?

ದೊಡ್ಡಪತ್ರೆ ಸೊಪ್ಪಿನ ದೊಡ್ಡಗುಣ ಗೊತ್ತಾ?

LK   ¦    Apr 16, 2018 01:40:53 PM (IST)
ದೊಡ್ಡಪತ್ರೆ ಸೊಪ್ಪಿನ ದೊಡ್ಡಗುಣ ಗೊತ್ತಾ?

ಜ್ವರ, ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ಕಾಣಿಸಿಕೊಂಡಾಗ ತಮ್ಮ ಮನೆಯ ಹಿತ್ತಲಿನಲ್ಲಿದ್ದ ಗಿಡವನ್ನೇ ಮದ್ದಾಗಿ ಬಳಸಿಕೊಂಡು ವಾಸಿ ಮಾಡಿಕೊಳ್ಳುತ್ತಿದ್ದ ಕಾಲವಿತ್ತು. ಆದರೆ ಈಗ ಹಾಗಿಲ್ಲ. ಹೆಚ್ಚಿನವರಿಗೆ ಹಿತ್ತಲಲ್ಲಿ ಇರುವ ಗಿಡಗಳ ರೋಗ ನಿರೋಧಕ ಮತ್ತು ಆರೋಗ್ಯದ ಗುಣಗಳ ಬಗ್ಗೆಯೇ ತಿಳಿದಿಲ್ಲ ಎನ್ನಬೇಕು.

ಹಾಗೆನೋಡಿದರೆ ಇವತ್ತಿಗೂ ಮನೆಯ ಹಿತ್ತಲಲ್ಲಿ ಹೂವಿನ ಗಿಡಗಳ ಮಧ್ಯೆ ದೊಡ್ಡಪತ್ರೆ ಗಿಡಗಳಿರುವುದನ್ನು ನಾವು ಕಾಣಬಹುದು. ಇದು ಔಷಧೀಯ ಗಣಿಯಾಗಿದೆ. ಆದರೆ ಆಧುನಿಕ ಔಷಧಿಗಳಿಗೆ ಮಾರು ಹೋಗಿರುವ ನಾವು ಅದರತ್ತ ನಿರ್ಲಕ್ಷ್ಯ ವಹಿಸಿದ್ದೇವೆ. ಆದರೂ ಅದರ ಗುಣಲಕ್ಷಗಳು ಬದಲಾಗಿಲ್ಲ ಬಿಡಿ.

ಹಿಂದಿನ ಕಾಲದಲ್ಲಿ ಕಾಲಾರದಂತಹ ರೋಗವನ್ನೇ ಹತೋಟಿಗೆ ತರಲು ಬಳಸುತ್ತಿದ್ದರೆಂದರೆ ಇದರ ಶಕ್ತಿಯೇನು ಎಂಬುದು ಗೊತ್ತಾಗಿ ಬಿಡುತ್ತದೆ. ಇದನ್ನು ಸಂಬಾರಬಳ್ಳಿ, ಸಾವಿರ ಸಂಬಾರ(ಅಜವಾನದೆಲೆ), ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು ಹೆಸರುಗಳಿಂದ ಕರೆಯುವುದನ್ನು ನಾವು ಕಾಣಬಹುದು. ಇದು ನೆಲದ ಮೇಲೆ ಪೊದೆಯಾಗಿ ಬೆಳೆಯುತ್ತದೆ. ಎಲೆಗಳು ಹಸಿರಾಗಿ, ದಪ್ಪವಾಗಿರುತ್ತದೆ. ಅಷ್ಟೇ ಅಲ್ಲ ಎಲೆಗಳಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಎಲೆಗಳನ್ನು ಕೊಯ್ದು ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ ಹಿಂಡಿದರೆ ನೀರು ಸಿಗುತ್ತದೆ. ಈ ನೀರಿನಲ್ಲಿ ಔಷಧಿಯ ಗುಣವಿದೆ.

ಸುವಾಸನೆ ಹೊಂದಿರುವ ದೊಡ್ಡಪತ್ರೆ ವಿಟಿಸ್ ಇಂಡಿಕಾ ಎಂಬ ಸಸ್ಯವರ್ಗಕ್ಕೆ ಸೇರಿದೆ. ಭಾರತದಲ್ಲಿ ಸುಮಾರು ಹದಿಮೂರು ಬಗೆಗಳಿದ್ದು ಅವುಗಳಲ್ಲಿ ಕೆರೆನೋಷಸ್ವಾಲ್(Caronosus wall) ಎಂಬ ವರ್ಗ ಹೆಚ್ಚು ಜನಪ್ರಿಯವಾಗಿದೆ. ದೊಡ್ಡಪತ್ರೆಯ ಉಪಯೋಗವನ್ನು ನೋಡುವುದಾದರೆ, ಇದನ್ನು ಮಕ್ಕಳಲ್ಲಿ ಕಂಡು ಬರುವ ಉಬ್ಬಸ ಕಫಗಳ ನಿವಾರಣೆಗೆ ಬಳಸಬಹುದಂತೆ ಅದು ಹೇಗೆಂದರೆ? ಗಿಡದಿಂದ ಎಲೆಗಳನ್ನು ಕೊಯ್ದು ಚೆನ್ನಾಗಿ ತೊಳೆದು ಕಂಬೂದಿಯಲ್ಲಿ ಅಥವಾ ಬೆಂಕಿಯಲ್ಲಿ ಬಾಡಿಸಿಕೊಂಡು ಮಕ್ಕಳ ಎದೆಗೆ ಶಾಖ ಕೊಡಬೇಕು.

ಎಲೆಗಳಿಂದ ಕಷಾಯ ಮಾಡಿ ಕುಡಿದರೆ ಕೆಮ್ಮು, ಉಬ್ಬಸ ಕಡಿಮೆಯಾಗುತ್ತದೆ. ಎಲೆಗಳಲ್ಲಿ ಕ್ಲೇಷ್ಮ ಬಿಡಿಸುವ ಗುಣವಿರುವುದರಿಂದ ಕಫ, ನೆಗಡಿಯಾಗಿ ಮೂಗು ಕಟ್ಟಿದರೆ ಎಲೆಗಳನ್ನು ಬಿಸಿ ಬೂದಿ ಇರುವ ಒಲೆಯಲ್ಲಿ ಹಾಕಿಬಾಡಿಸಿ ಬಳಿಕ ಎಲೆಯನ್ನು ಹಿಂಡಿ ಅದರಿಂದ ಬರುವ ಮೂರ್ನಾಲ್ಕು ತೊಟ್ಟು ರಸವನ್ನು ಜೀರಿಗೆ ಕಷಾಯದಲ್ಲಿ ಹಾಕಿ ಕುಡಿದರೆ ಒಳ್ಳೆಯದಾಗುತ್ತದೆ. ಶೀತದಿಂದಾಗಿ ಮಕ್ಕಳಿಗೆ ಮಲಬದ್ಧತೆಯಾದರೆ ಎಲೆಗಳ ರಸದಲ್ಲಿ ಜೇನುತುಪ್ಪ ಬೆರೆಸಿ ಕುಡಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

ಎಳ್ಳೆಣ್ಣೆಗೆ ದೊಡ್ಡಪತ್ರೆ ರಸವನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ತಲೆ ತಂಪಾಗುತ್ತದೆ. ಅಷ್ಟೇ ಅಲ್ಲ ಕಣ್ಣುರಿಯೂ ಕಡಿಮೆಯಾಗುತ್ತದೆ. ಇನ್ನು ಬೇಸಿಗೆ ಸಮಯದಲ್ಲಿ ಬಿಗಿಯಾದ ಬಟ್ಟೆ ತೊಡುವುದರಿಂದ ಬೆವರಿನಿಂದ ತುರಿಕೆ, ಕಜ್ಜಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ದೊಡ್ಡಪತ್ರೆ ಎಲೆ, ಅರಶಿನ ಪುಡಿ ಸೇರಿಸಿ ಸೇರಿಸಿ ಬೆಣ್ಣೆಯಲ್ಲಿ ಅರೆದು ಚೆನ್ನಾಗಿ ಕಲೆಸಿ ಮುಲಾಮು ಮಾಡಿಟ್ಟುಕೊಂಡು ದಿನಕ್ಕೆ ಒಂದೆರಡು ಬಾರಿ ಹಚ್ಚುತ್ತಾ ಬಂದರೆ ತುರಿಕೆ ಮಾಯವಾಗುತ್ತದೆ.

ಇನ್ನು ಎಲೆಗಳ ರಸವನ್ನು ತೆಗೆದು ಗಂಟೆಗೊಮ್ಮೆ ಒಂದು ಚಮಚದಷ್ಟು ಕಾಯಿಸಿ ಆರಿಸಿದ ನೀರಿನಲ್ಲಿ ಹಾಕಿ ಕುಡಿದರೆ ಕಾಲಾರಾ ಹತೋಟಿಗೆ ಬರುವುದು. ಶೀತ, ಕೆಮ್ಮಿಗೆ ಕಬ್ಬಿನ ರಸದೊಂದಿಗೆ ಎಲೆಗಳ ರಸವನ್ನು ಬೆರೆಸಿ ಕುಡಿಯಬಹುದಾಗಿದೆ.

ತೆಂಗಿನ ಹಾಲಿನೊಂದಿಗೆ ಡೊಡ್ಡಪತ್ರೆ ಬೇರಿನ ರಸವನ್ನು ಬೆರೆಸಿ ಕುಡಿದರೆ ಅಲ್ಸರ್ ಗುಣವಾಗುತ್ತದೆ ಎನ್ನಲಾಗಿದೆ. ಇನ್ನು ಕುರುನಂತ ವೃಣಗಳಾದಾಗ ಬೇರನ್ನು ಜಜ್ಜಿ ಎಣ್ಣೆ ಮತ್ತು ತೆಂಗಿನ ಹಾಲಿನೊಂದಿಗೆ ಬೆರೆಸಿ ಹಚ್ಚಬೇಕು. ಇನ್ನು ಎಲೆಗಳನ್ನು ಚಟ್ನಿ, ತಂಬುಳಿ ಮೊದಲಾದವುಗಳನ್ನು ಸೇವಿಸಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ