ಕೆಲವರಿಗೆ ದೇಹದ ತೂಕವೇ ಸಮಸ್ಯೆ!

ಕೆಲವರಿಗೆ ದೇಹದ ತೂಕವೇ ಸಮಸ್ಯೆ!

BL   ¦    Apr 12, 2018 03:24:25 PM (IST)
ಕೆಲವರಿಗೆ ದೇಹದ ತೂಕವೇ ಸಮಸ್ಯೆ!

ಹೆಚ್ಚಿನವರಿಗೆ ತಮ್ಮ ದೇಹದ ತೂಕವನ್ನು ನಿಯಂತ್ರಿಸುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ ಅವರ ಚಿಂತೆಗೂ ಇದೇ ಕಾರಣವಾಗಿದೆ. ಬೇಡ ಬೇಡವೆಂದರೂ ಹಿಗ್ಗುವ ದೇಹದಿಂದಾಗಿ ಮುಜುಗರ, ನೋವು, ಸಂಕಟ ಅನುಭವಿಸುತ್ತಿರುವವರು ನಮ್ಮ ಮುಂದೆ ಬಹಳಷ್ಟು ಜನರಿದ್ದಾರೆ.

ಎಲ್ಲರದೂ ಹಾಳಾದ ಈ ಶರೀರದಿಂದಾಗಿ ಬೇಸರವಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಸಣ್ಣ ಆಗೋದಿಲ್ಲ ಎಂದು ಗೊಣಗುತ್ತಿರುತ್ತಾರೆ. ಇವತ್ತಿನ ಆಹಾರ ಪದ್ಧತಿಯಲ್ಲಿನ ಅಶಿಸ್ತು, ಜಂಕ್ ಫುಡ್, ಸಿಕ್ಕಿದೆಲ್ಲವನ್ನು ತಿನ್ನಬೇಕೆಂಬ ಅತಿಯಾಸೆ, ದೇಹ ದಂಡಿಸುವ ಕೆಲಸ ಮಾಡದಿರುವುದು ಹೀಗೆ ಹತ್ತಾರು ಕಾರಣಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಕೆಲವರು ಹೇಳುತ್ತಿರುತ್ತಾರೆ ನಾನು ಹೆಚ್ಚು ತಿನ್ನುವುದಿಲ್ಲ. ಆಗಾಗ್ಗೆ ಊಟ ಬಿಡುತ್ತೇನೆ ಆದರೂ ಸಣ್ಣಗಾಗುತ್ತಿಲ್ಲ. ಒಂದು ಹೊತ್ತು ಊಟ ಬಿಟ್ಟು ಮತ್ತೊಂದು ಹೊತ್ತು ಅದರ ಎರಡರಷ್ಟು ಊಟ ಮಾಡಿದರೆ ಏನು ಪ್ರಯೋಜನ?.

ಇಷ್ಟಕ್ಕೂ ದೇಹದ ತೂಕ ಹೆಚ್ಚಲು ಹಲವು ಕಾರಣ ಏನು ಎಂಬುದನ್ನು ನೋಡುವುದಾದರೆ, ದೇಹಕ್ಕೆ ಶ್ರಮವಾಗುವಂತಹ ಕಠಿಣ ರೀತಿಯ ಕೆಲಸ ಮಾಡದಿರುವುದು, ದೇಹದ ಮೇಲೆ ನಿಗಾ ವಹಿಸದಿರುವುದು. ಆಹಾರದ ಬಗ್ಗೆ ಕಾಳಜಿ ವಹಿಸದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ವೈದ್ಯರು ಹೇಳುವ ಪ್ರಕಾರ ಎಣ್ಣೆ, ಬೆಣ್ಣೆ, ಜಿಡ್ಡಿನ ಪದಾರ್ಥಗಳಷ್ಟೇ ಅಲ್ಲದೆ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ ಕಾರ್ಬೋಹೈಡ್ರೇಟ್ ‍ಗಳು, ಪ್ರೋಟೀನ್ ಗಳು ದೇಹದ ತೂಕವನ್ನು ಹೆಚ್ಚಿಸುತ್ತವೆಯಂತೆ. ನಾವು ಮುಂಜಾನೆ ವಾಯುವಿಹಾರ ನಡೆಸುವುದು, ವ್ಯಾಯಾಮ ಮಾಡುವುದು ಜತೆಗೆ ಒಂದಿಷ್ಟು ಶಿಸ್ತುಬದ್ಧ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ.

ಬೆಳಗ್ಗಿನ ಉಪಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ಅದನ್ನು ತಪ್ಪಿಸಬಾರದು. ರಾತ್ರಿ ವೇಳೆ ಊಟವಾದ ತಕ್ಷಣವೇ ಮಲಗುವುದು ಒಳ್ಳೆಯ ಅಭ್ಯಾಸವಲ್ಲ. ಒಂದಷ್ಟು ಹೊತ್ತು ಅಡ್ಡಾಡಿ ಬಳಿಕ ಮಲಗುವುದು ಒಳ್ಳೆಯದು.

ಟಿವಿ ನೋಡುತ್ತಾ, ಪುಸ್ತಕ ಓದುತ್ತಾ ಊಟ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದರೆ ಅದನ್ನು ಬಿಟ್ಟುಬಿಡುವುದು ಒಳಿತು. ನಿಧಾನವಾಗಿ ಚೆನ್ನಾಗಿ ಅಗಿದು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಗಬಗಬನೆ ತಿಂದು ಎದ್ದು ಹೋಗುವ ಅಭ್ಯಾಸ ಒಳ್ಳೆಯದಲ್ಲ.

ಕೊಬ್ಬಿನ ಅಂಶವನ್ನು ಸಂಪೂರ್ಣ ಕಡಿಮೆ ಮಾಡದೆ ಸಮತೋಲನೆ ಕಾಯ್ದುಕೊಳ್ಳಬೇಕು, ಸಕ್ಕರೆ ಪ್ರಮಾಣ ಕಡಿಮೆಯಿದ್ದಷ್ಟು ಒಳಿತು. ಕೃತಕ, ಸಂಸ್ಕರಿಸಿದ, ಬೇಕರಿಯ ಪದಾರ್ಥಗಳು, ಐಸ್ ಕ್ರೀಮ್, ಫಿಜ್ಹಾ, ಬರ್ಗರ್ ನಂತಹ ತಿನಿಸುಗಳನ್ನು ವರ್ಜಿಸುವುದು ಒಳಿತು.

ಕೊಬ್ಬರಿ, ಎಳ್ಳು, ಕಡ್ಲೆಕಾಯಿ, ಗೋಡಂಬಿ, ಬಾದಾಮಿ ಮೊದಲಾದ ಡ್ರೈಫ್ರೂಟ್ಸ್ ಸೇವನೆ ಕಡಿಮೆ ಮಾಡಬೇಕು. ತುಪ್ಪ, ಚೀಸ್, ಪನ್ನೀರ್ ಸೇವಿಸದೆ ಕೆನೆ ತೆಗೆದ ಹಾಲು, ಕಡೆದ ಮಜ್ಜಿಗೆ ಸೇವಿಸಬೇಕು. ಕೊಬ್ಬಿನ ಅಂಶವಿರುವ ಮಾಂಸ ಸೇವನೆ ಕಡಿಮೆ ಮಾಡಿದಷ್ಟು ಉತ್ತಮ. ಉಪ್ಪಿನ ಅಂಶ ಹೆಚ್ಚಿರುವ ಉಪ್ಪಿನ ಕಾಯಿ, ಸಂಡಿಗೆ, ಹಪ್ಪಳಕ್ಕೂ ಕಡಿವಾಣ ಹಾಕಬೇಕು.

ಬಾಯಿ ರುಚಿಗಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸದೆ ಹಬೆಯಲ್ಲಿ ಬೇಯಿಸಿದ ಪದಾರ್ಥಗಳನ್ನು ಸೇವಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಹಣ್ಣಿನ ಜ್ಯೂಸ್ ಬದಲು ಹಣ್ಣನ್ನೇ ಸೇವಿಸಬೇಕು. ದಿನಕ್ಕೆ ಎಂಟರಿಂದ ಹತ್ತು ಲೋಟ ನೀರು ಕುಡಿಯಬೇಕು. ಊಟಕ್ಕೆ ಮುಂಚಿತವಾಗಿ ಒಂದು ಲೋಟ ನೀರು ಕುಡಿದು ಮತ್ತೆ ಊಟ ಮಾಡಬೇಕು.

ಕೊಬ್ಬಿನ ಅಂಶ ಕಡಿಮೆ ಇರುವ, ನಾರಿನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ಮೊಳಕೆ ಕಟ್ಟಿದ ಕಾಳುಗಳು, ಸೊಪ್ಪು ತರಕಾರಿಗಳು, ಹಣ್ಣುಗಳ ಸೇವನೆ ಮಾಡಬೇಕು.