ಜೀವನದಲ್ಲಿ ಸಮಸ್ಯೆಗೆ ಹೆದರದಿರಿ..!

ಜೀವನದಲ್ಲಿ ಸಮಸ್ಯೆಗೆ ಹೆದರದಿರಿ..!

Jan 06, 2017 09:38:04 AM (IST)

ನಾವೆಲ್ಲರೂ ಪ್ರತಿಕ್ಷಣವೂ ಖುಷಿಯಾಗಿ, ನಗುನಗುತ್ತಾ ಬದುಕಬೇಕು ಹೀಗೆ ಬದುಕುವುದೇ ಆರೋಗ್ಯವಂತ ಜೀವನ. ಪ್ರತಿಯೊಬ್ಬ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತವೆ. ಆ ಸಮಸ್ಯೆ ಬಗ್ಗೆಯೇ ಚಿಂತಿಸುತ್ತಾ ಕೂರುವ ಬದಲು ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಇದುವೇ ನಿಜವಾದ ಬದುಕಿನ ಲಕ್ಷಣ.

ಈಗಿನ ಬದುಕು ಸದಾ ಒತ್ತಡದ ಬದುಕು. ಹಾಗಾಗಿ ಒಂದಲ್ಲ್ಲ ಒಂದು ಸಮಸ್ಯೆಯನ್ನು ನಾವು ಎದುರಿಸಲೇ ಬೇಕು. ಈ ಸಮಸ್ಯೆಗಳಿಗೂ ಕೊನೆಯಿಲ್ಲ. ಒಂದು ಪರಿಹರಿಸಿದರೆ ಮತ್ತೊಂದು ಸದ್ದಿಲ್ಲದೆ ಎದ್ದು ನಿಲ್ಲುತ್ತದೆ. ಇದರಿಂದ ಸಮಸ್ಯೆಯನ್ನು ಬಗೆಹರಿಸುತ್ತಾ, ಬಗೆಹರಿಸುತ್ತಾ ಕೆಲವೊಮ್ಮೆ ಬದುಕೇ ಸಮಸ್ಯೆಯಾಗಿ ಬಿಡುವ ಮಟ್ಟಕ್ಕೆ ಹೋಗಿಬಿಡುತ್ತದೆ. ಈಗಿನ ಜನಜೀವನದಲ್ಲಿ ಸಮಸ್ಯೆ ಇಲ್ಲದೆ ಬದುಕನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ನಮ್ಮ ವೈಯಕ್ತಿಕ ಬದುಕಿರಬಹುದು ಅಥವಾ ಉದ್ಯೋಗರಂಗ ಇರಬಹುದು. ಸಮಸ್ಯೆ ತಪ್ಪಿದಲ್ಲ. ಇಷ್ಟಕ್ಕೂ ಸಮಸ್ಯೆ ಇಲ್ಲದ ಬದುಕು ಅದು ಬದುಕೇ ಅಲ್ಲ. ಆದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ ಎಂಬ ಸತ್ಯವನ್ನು ನಾವು ಅರಿಯಬೇಕು. ಆಗ ಸಮಸ್ಯೆಗೆ ಹೆದರಿ ಅಮೂಲ್ಯ ಜೀವ ಕಳೆದುಕೊಳ್ಳುವ ಪ್ರಮೇಯ ಬರಲಾರದು.


ಆಧುನಿಕ ಜಗತ್ತಿನಲ್ಲಿ ಎಲ್ಲವೂ ಮೊದಲಿನಂತಿಲ್ಲ. ಕ್ಷಣಕ್ಷಣಕ್ಕೂ ಬದಲಾವಣೆ ಕಾಣುತ್ತಿದೆ. ಈ ಬದಲಾವಣೆಗೆ ಹೊಂದಿಕೊಂಡು ಹೋಗುವುದು ಅನಿವಾರ್ಯವಾಗುತ್ತಿದೆ. ಕೆಲಸ ಸಿಕ್ಕಿದೆ ಎಂಬ ಮಾತ್ರಕ್ಕೆ ಖುಷಿಪಡಲು, ಬದುಕಿನಲ್ಲಿ ನೆಲೆ ನಿಂತೆ ಎಂದುಕೊಳ್ಳಲಾಗುವುದಿಲ್ಲ. ಮಾಡುವ ಕೆಲಸದೊಂದಿಗೆ ಅದನ್ನು ಕ್ಷಣ ಕ್ಷಣಕ್ಕೂ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಕೆಲಸ ಮಾಡುವಾಗ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು. ಆದರೆ ನಮ್ಮ ವೈಯಕ್ತಿಕ ಬದುಕಿನಲ್ಲಿ ಎದುರಾಗುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು, ನಂತರದಾದರೂ ಮೊದಲಿನ ಸಮಸ್ಯೆ ಬರದಂತೆ ನೋಡಿಕೊಳ್ಳುವುದನ್ನು ಕಲಿತುಕೊಳ್ಳಬೇಕು.

ಇವತ್ತು ಯಾವುದೂ ನಾಲ್ಕು ಗೋಡೆ ಮಧ್ಯೆ ಗೌಪ್ಯವಾಗಿ ಉಳಿಯುತ್ತಿಲ್ಲ. ಅದು ಬಹಿರಂಗವಾಗುತ್ತಿದೆ. ಹೀಗಿರುವಾಗ ಸಾರ್ವಜನಿಕವಾಗಿ ಬದುಕುವ ನಾವು ಮಾಡುವ ಯಾವುದೇ ಕಾರ್ಯಗಳಿರಲಿ ಅದು ಹೇಗಾದರು ಹೊರಗೆ ಬಂದೇ ಬರುತ್ತೆ. ಸದಾ ಒಳ್ಳೆಯದನ್ನೇ ಮಾಡುತ್ತಾ ಹೋದರೆ ನಮಗೆ ಯಾರ ಭಯವೂ ಇಲ್ಲ. ಜೀವನದಲ್ಲಿ ಹಣ ಸಂಪಾದಿಸುವುದು ಅದರಿಂದ ಐಷಾರಾಮಿ ವಸ್ತುಗಳನ್ನು ಖರೀದಿಸಿ ನೋಡುವವರ ಮುಂದೆ ಶ್ರೀಮಂತರಂತೆ ಬದುಕಿದ ತಕ್ಷಣ ಯಶಸ್ವಿ  ಬದುಕು ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಆದರೆ ಬದುಕೆಂದರೆ ಹಣ, ಕಾರು, ಬಂಗಲೆ ಎಂದು ನಂಬಿರುವ ಹಲವರು ಹಣ ಸಂಪಾದನೆ ಮಾಡುವ ಒಂದೇ ಒಂದು ಉದ್ದೇಶದಿಂದ ಇಲ್ಲ ಸಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಕೆಲವು ಸಮಸ್ಯೆಗಳಿಗೆ ನಮ್ಮಲ್ಲೇ ಪರಿಹಾರವಿದ್ದರೂ ಪ್ರತಿಷ್ಠೆಗಾಗಿ ಹೋರಾಡುತ್ತೇವೆ. ಈ ಪ್ರತಿಷ್ಠೆ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಬದಲಾಗಿ ಹೆಚ್ಚಿಸುತ್ತದೆ. ಎಲ್ಲಿ ಸಮಸ್ಯೆ ಆರಂಭವಾಗಿದೆ ಎಂಬುವುದನ್ನು ಹುಡುಕಿ ಆದಷ್ಟು ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಆಗ ಮಾತ್ರ ಬದುಕಿನಲ್ಲಿ ನೆಮ್ಮದಿ, ಸುಖ ಕಾಣಲು ಸಾಧ್ಯವಾಗುತ್ತದೆ.