ದೀಪಾವಳಿ ಸಂಭ್ರಮದಲ್ಲಿ ನೀವು ದೇಹದ ಬಗ್ಗೆಯೂ ಯೋಚಿಸಿ!

ದೀಪಾವಳಿ ಸಂಭ್ರಮದಲ್ಲಿ ನೀವು ದೇಹದ ಬಗ್ಗೆಯೂ ಯೋಚಿಸಿ!

LK   ¦    Nov 06, 2018 12:43:57 PM (IST)
ದೀಪಾವಳಿ ಸಂಭ್ರಮದಲ್ಲಿ ನೀವು ದೇಹದ ಬಗ್ಗೆಯೂ ಯೋಚಿಸಿ!

ದೀಪಾವಳಿ ಕತ್ತಲಿನಿಂದ ಬೆಳಕಿಗೆ ನಮ್ಮನ್ನು ಕೊಂಡೊಯ್ಯುವ ಹಬ್ಬ ಎಂದು ಕೂಡ ಹೇಳಲಾಗುತ್ತದೆ. ಆದರೆ ಪಟಾಕಿ ಸಿಡಿಸುವ ವೇಳೆ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳದ ಕಾರಣದಿಂದಾಗಿ ಪಟಾಕಿ ಹಲವರ ಪ್ರಾಣ ತೆಗೆದಿದೆ. ಜತೆಗೆ ಹಲವರನ್ನು ಅಂಗವಿಕಲರನ್ನಾಗಿ, ಅಂಧರನ್ನಾಗಿ ಮಾಡಿರುವ ಉದಾಹರಣೆಗಳು ಬೇಕಾದಷ್ಟಿವೆ. ಹೀಗಾಗಿ ಪಟಾಕಿ ಸಿಡಿಸುವುದನ್ನು ಆದಷ್ಟು ಕಡಿಮೆ ಮಾಡಿ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಅನುಕೂಲ ಮಾಡಿಕೊಡಿ.

ಇನ್ನು ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸೋ ಭರದಲ್ಲಿ ಎಚ್ಚರ ತಪ್ಪಿ ತಮ್ಮ ಬದುಕನ್ನು ಕತ್ತಲೆಗೆ ತಳ್ಳಿಕೊಳ್ಳಬೇಡಿ. ಪಟಾಕಿ ಸಿಡಿಸಲೇ ಬೇಕೆಂದು ಹೊರಡುವವರು ತಮ್ಮ ಆರೋಗ್ಯ ಮತ್ತು ದೇಹದ ಕಡೆಗೆ ಜತೆಗೆ ಪಕ್ಕದಲ್ಲಿರುವವರ ಬಗ್ಗೆಯೂ ನಿಗಾವಹಿಸಿ. ಪಟಾಕಿ ಸಿಡಿಸುವ ಮುನ್ನ ಕೆಳಗಿನ ಒಂದಷ್ಟು ಅಂಶಗಳನ್ನು ಮನದಟ್ಟು ಮಾಡಿಕೊಳ್ಳೋದನ್ನು ಮರೆಯಬೇಡಿ.

ಗುಣಮಟ್ಟದ ಪಟಾಕಿ ಹಾಗೂ ಪರವಾನಗಿ ಹೊಂದಿದವರಿಂದಲೇ ಖರೀದಿಸಿ. ಪಟಾಕಿ ಸಿಡಿಸಲು ಹೊರಡುವವರು ಹತ್ತಿ ಬಟ್ಟೆಯನ್ನು ಧರಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಹಬ್ಬದ ಜೋಶ್‍ನಲ್ಲಿ ಪಟಾಕಿಯನ್ನು ಕೈಯ್ಯಲ್ಲಿಡಿದು ಬೆಂಕಿ ಹಚ್ಚುವ, ಬೇರೆಯವರ ಮೇಲೆ ಎಸೆಯುವ ಪ್ರಯತ್ನ ಮಾಡಬೇಡಿ. ಪಟಾಕಿ ಸಿಡಿಯಲಿಲ್ಲವೆಂದು ಅದನ್ನು ಕೈಯ್ಯಲ್ಲಿಡಿದು ಮೇಲಿನ ಪೇಪರ್ ಸುಲಿದು ಬೆಂಕಿ ಹಚ್ಚುವ ಯತ್ನ ಮಾಡಬೇಡಿ. ಕೆಲವೊಮ್ಮೆ ತಡವಾಗಿ ಸಿಡಿಯುವ ಸಾಧ್ಯತೆಯೂ ಇರುತ್ತದೆ. ಪಟಾಕಿ ಸಿಡಿಸುವಾಗ ಕಿವಿಗೆ ಹತ್ತಿ ಹಾಗೂ ಮೂಗಿಗೆ ಮಾಸ್ಕ್ ಹಾಕಿಕೊಳ್ಳಿ. ಭಾರೀ ಸದ್ದು ಮಾಡುವ ಪಟಾಕಿಗಳಿಂದ ದೂರ ಸರಿಯಿರಿ ಇಲ್ಲಾಂದ್ರೆ ಕಿವಿಯ ತಮಟೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಣ್ಣಿಗೆ ಕನ್ನಡಕ ಧರಿಸುವುದು ಕೂಡ ಒಳ್ಳೆಯದು.

ಮನೆಯ ಹಿರಿಯರು ಮಕ್ಕಳನ್ನು ಅವರಿಷ್ಟದಂತೆ ಪಟಾಕಿ ಸಿಡಿಸಲು ಬಿಡಬೇಡಿ ನೀವು ಕೂಡ ಜೊತೆಗಿದ್ದು ಅವರ ಬಗ್ಗೆ ನಿಗಾ ವಹಿಸಿ ಜೊತೆಗೆ ಸಲಹೆ ನೀಡಿ. ಮಕ್ಕಳ ವಯಸ್ಸಿಗೆ ತಕ್ಕದಾದ ಪಟಾಕಿಗಳನ್ನೇ ಖರೀದಿಸಿ ತನ್ನಿ. ಭಾರೀ ಶಬ್ದ ಬರುವ ಪಟಾಕಿಗಳನ್ನು ನೀಡಬೇಡಿ. ಹೂಕುಂಡ(ಫ್ಲವರ್‍ಪಾಟ್)ಗಳಿಗೆ ಬೆಂಕಿ ಹಚ್ಚುವಾಗ ಅಂತರ ಕಾಪಾಡಿ. ಕೈಯ್ಯಿಂದ ಹಚ್ಚುವುದು ಒಳ್ಳೆಯದಲ್ಲ. ಹೂಕುಂಡಗಳು ಸಿಡಿದು ಕೈ,ಕಣ್ಣು ಕಳೆದುಕೊಂಡಿರುವ ಉದಾಹರಣೆಗಳು ಬಹಳಷ್ಟಿವೆ.

ಇನ್ನು ಎಲ್ಲೋ ಗಮನಹರಿಸುತ್ತಾ ಪಟಾಕಿಗೆ ಬೆಂಕಿ ಹಚ್ಚುವುದು ಅಪಾಯಕಾರಿ. ಕೆಲವರು ಫೋನ್‍ನಲ್ಲಿ ಮಾತನಾಡುತ್ತಲೋ, ಮತ್ತೇನೋ ಮಾಡುತ್ತಾ ಬೆಂಕಿ ಹಚ್ಚುವವರು ಇದ್ದಾರೆ. ಅಂತಹವರು ದಯವಿಟ್ಟು ಪಟಾಕಿಯತ್ತ ಗಮನವಿಟ್ಟು ಬೆಂಕಿ ಹಚ್ಚಿ. ರಾಕೆಟ್ ಬಿಡುವಾಗ ಬಾಟಲಿಯನ್ನು ಉಪಯೋಗಿಸಿ. ಅಷ್ಟೇ ಅಲ್ಲ ಆಕಾಶದ ಕಡೆಗೆ ಚಿಮ್ಮುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಕೆಲವೊಮ್ಮೆ ತಮ್ಮತ್ತಲೋ, ಪಕ್ಕದ ಮನೆಗೋ ನುಗ್ಗುವ ಸಾಧ್ಯತೆಯಿರುತ್ತದೆ. ಇನ್ನು ಪ್ರಾಣಿಗಳ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚುವ ವಿಕೃತ ಕೆಲಸವನ್ನು ದಯವಿಟ್ಟು ಮಾಡಬೇಡಿ. ಪಟಾಕಿಯ ಹೊಗೆಯಲ್ಲಿ ಹೆಚ್ಚು ಹೊತ್ತು ಇರಬೇಡಿ. ಪಟಾಕಿ ಹಚ್ಚಿದ ಕೈಯ್ಯನ್ನು ಚೆನ್ನಾಗಿ ತೊಳೆದು ಆಹಾರ ಸೇವಿಸಿ.