ಮನುಷ್ಯನನ್ನು ಕಾಡುವ ಡೆಂಗ್ಯೂನಿಂದ ಪಾರಾಗುವುದು ಹೇಗೆ?

ಮನುಷ್ಯನನ್ನು ಕಾಡುವ ಡೆಂಗ್ಯೂನಿಂದ ಪಾರಾಗುವುದು ಹೇಗೆ?

LK   ¦    Jun 04, 2018 11:24:07 AM (IST)
ಮನುಷ್ಯನನ್ನು ಕಾಡುವ ಡೆಂಗ್ಯೂನಿಂದ ಪಾರಾಗುವುದು ಹೇಗೆ?

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಡೆಂಗ್ಯೂ ರೋಗ ಕಾಣಿಸಿಕೊಳ್ಳತೊಡಗಿದೆ. ಮಳೆ ರಭಸದಿಂದ ಬಂದು ಚರಂಡಿ, ಕೊಳಚೆ ತ್ಯಾಜ್ಯಗಳು ಕೊಚ್ಚಿ ಹೋಗಿ ಪರಿಸರ ಶುದ್ಧವಾದರೆ ಕಾಯಿಲೆಗಳ ತೊಂದರೆ ಇರುವುದಿಲ್ಲ. ಆದರೆ ಸಮರ್ಪಕವಾಗಿ ಮಳೆಯಾಗದೆ ಚರಂಡಿಗಳಲ್ಲಿ ನೀರು ಹರಿದು ಹೋಗದೆ ಅಲ್ಲಲ್ಲಿ ನೀರು ನಿಂತುಕೊಂಡಿದ್ದರೆ ಅಂತಹ ಅನೈರ್ಮಲ್ಯದ ಪರಿಸರದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಇವತ್ತು ಜ್ವರ ಕಾಣಿಸಿಕೊಂಡರೆ ಮಾತ್ರೆನೋ, ಕಸಾಯನೋ ಕುಡಿದು ಜ್ವರ ಕಡಿಮೆ ಮಾಡಿಕೊಳ್ಳುವ ಪರಿಸ್ಥಿತಿ ಇಲ್ಲ. ನಮಗೆ ಕಾಣಿಸಿಕೊಂಡ ಜ್ವರ ಯಾವುದು ಎಂಬುದೇ ಮುಖ್ಯವಾಗಿದೆ.

ಏಕೆಂದರೆ ಈಗ ಬೇರೆ ಬೇರೆ ಹೆಸರಿನ ಜ್ವರಗಳು ಮನುಷ್ಯನನ್ನು ಕಾಡುತ್ತಿರುವುದು ಮಾತ್ರವಲ್ಲದೆ ಬಲಿ ತೆಗೆದುಕೊಳ್ಳುತ್ತಿದೆ. ಆದ್ದರಿಂದ ಈಗ ಕಾಣಿಸಿಕೊಳ್ಳುತ್ತಿರುವ ಡೆಂಗ್ಯೂನಿಂದ ರಕ್ಷಣೆ ಪಡೆಯಬೇಕಾದರೆ, ರೋಗ ಬಾರದಂತೆ ತಡೆಯಬೇಕಾದರೆ ಅದರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಂಡು ಅದರಿಂದ ದೂರ ಇರಲು ಬೇಕಾದ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಡೆಂಗ್ಯೂ ರೋಗದ ಬಗ್ಗೆ ಹೇಳುವುದಾದರೆ ಇದು ಈಡಿಸ್ ಈಜಿಪ್ಟೆ ಸೊಳ್ಳೆಗಳಿಂದ ಹರಡುತ್ತದೆ. ಇದನ್ನು ಮೂಳೆಮುರಕ ಅಥವಾ ಬ್ರೇಕ್ಬೋನ್ ಜ್ವರವೆಂದು ಕೂಡ ಕರೆಯಲಾಗುತ್ತದೆ. ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಕ್ಕಳು ಮತ್ತು ವಯಸ್ಕರನ್ನು ಬೇಗ ಬಾಧಿಸುತ್ತದೆ.

ಈಡಿಸ್ ಈಜಿಪ್ಟ್ಟೆ ಎಂಬ ಸೊಳ್ಳೆ ಕಚ್ಚಿದ ಮೂರರಿಂದ ಹದಿನಾಲ್ಕು ದಿನಗಳ ನಂತರ ವ್ಯಕ್ತಿಯಲ್ಲಿ ರೋಗ ಉಲ್ಭಣವಾಗಿ ರೋಗದ ಲಕ್ಷಣಗಳು ಹೊರಗೆ ಕಾಣಿಸಿಕೊಳ್ಳುತ್ತದೆ. ಹೆಣ್ಣು ಸೊಳ್ಳೆಯು ಸೋಂಕಿಗೆ ತುತ್ತಾಗದ ವ್ಯಕ್ತಿಯನ್ನು ಕಚ್ಚಿದಲ್ಲಿ, ಆ ಸೊಳ್ಳೆಯ ಜೊಲ್ಲಿನ ಮೂಲಕ ವೈರಸ್ ವ್ಯಕ್ತಿಯ ದೇಹವನ್ನು ಪ್ರವೇಶಿಸಿ ದೇಹದಲ್ಲಿನ ಬಿಳಿ ರಕ್ತಕಣದೊಂದಿಗೆ ಸೇರಿಕೊಂಡು, ಬಿಳಿ ರಕ್ತ ಕಣಗಳಲ್ಲಿ ದ್ವಿಗುಣಗೊಳ್ಳುತ್ತಾ ಸಾಗುತ್ತದೆ. ಈ ದ್ವಿಗುಣಗೊಳ್ಳುವಿಕೆಯು ಡೆಂಗ್ಯೂ ರೋಗದ ರೋಗ ಲಕ್ಷಣವಾಗಿರುತ್ತದೆ. ಒಮ್ಮೆ ಈ ವೈರಸ್ ಗಳ ಸಂಖ್ಯೆ ಬಿಳಿ ರಕ್ತಕಣಗಳಲ್ಲಿ ಹೆಚ್ಚಾದರೇ, ಲಿವರ್ (ಯಕೃತ್ತು) ಮತ್ತು ಮೂಳೆಯ ಮಜ್ಜೆ (ಬೋನ್ ಮ್ಯಾರೋ) ಮುಂತಾದ ಅಂಗಾಂಶಗಳ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಕೊನೆಗೆ ಇದು ದೇಹದಲ್ಲಿರುವ ಕಿರುತಟ್ಟೆಗಳ ಅಥವಾ ಕಿರುಬಿಲ್ಲೆಗಳ (ಪ್ಲೇಟ್ಲೆಟ್) ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಆಗ ಕಾಯಿಲೆ ಉಲ್ಭಣವಾಗುತ್ತಾ ಹೋಗುತ್ತದೆ.

ಈ ವೇಳೆ ಕೀಲು ನೋವು, ಸ್ನಾಯು ನೋವು, ಕೆಳಹೊಟ್ಟೆಯಲ್ಲಿ ನೋವು, ವಾಂತಿ ಅಥವಾ ಮಲದಲ್ಲಿ ರಕ್ತ, ತ್ವಚೆಯ ಮೇಲೆ ಸಣ್ಣ ಕೆಂಪು ಚುಕ್ಕೆಗಳು ಕಾಣಿಸಿಕೊಂಡು ವ್ಯಕ್ತಿಯು ಸಂಪೂರ್ಣ ಕುಸಿದು ಬಿಡುತ್ತಾನೆ. ಪದೇ ಪದೇ ಜ್ವರ ಮರುಕಳಿಸುವುದು, ಜ್ವರದ ತಾಪಮಾನವು 104ಡಿಗ್ರಿ ವರೆಗೆ ಏರುವುದು, ಮೈ-ಕೈ ನೋವು ಮತ್ತು ಸ್ನಾಯುಗಳ ಸೆಳೆತ ಎಲ್ಲವೂ ಕಾಣಿಸಿಕೊಳ್ಳುತ್ತದೆ.

ವ್ಯಕ್ತಿಯನ್ನು ಬಾಧಿಸಿರುವುದು ಡೆಂಗ್ಯೂ ಎಂಬುದು ರಕ್ತ ಪರೀಕ್ಷೆಯಿಂದ ಪತ್ತೆ ಹಚ್ಚಲಾಗುತ್ತದೆ. ಕ್ಷಣಕ್ಷಣಕ್ಕೂ ಪ್ಲೇಟ್ಲೆಟ್ ಗಳು ಕಡಿಮೆಯಾಗುವುದು ಕಂಡು ಬಂದರೆ ಅದು ಡೆಂಗ್ಯೂ ಎಂಬುದನ್ನು ಖಾತರಿಪಡಿಸುತ್ತದೆ.

ಡೆಂಗ್ಯೂಗೆ ಚಿಕಿತ್ಸೆ ನೀಡಲಾಗುತ್ತದೆಯಾದರೂ ಕೆಲವೊಮ್ಮೆ ಅವಧಿ ಮೀರಿದರೆ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಹೀಗಾಗಿ ಸೊಳ್ಳೆಗಳಿಂದ ದೂರ ಇರುವುದು ಮತ್ತು ಸೊಳ್ಳೆಗಳು ಉತ್ಪತ್ತಿಯಾಗದಂತಹ ಪರಿಸರ ನಿರ್ಮಾಣ ಮಾಡುವುದು, ಸೊಳ್ಳೆಗಳು ಕಚ್ಚದಂತೆ ಸೊಳ್ಳೆ ನಿವಾರಕ, ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯವಾಗಿದೆ.

ಮನೆಯ ಸುತ್ತ ಚರಂಡಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ, ಬಕೆಟ್, ಟಯರ್, ಎಳನೀರು ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಇರುವ ಪ್ರದೇಶಗಳಲ್ಲಿ ಫಾಗಿಂಗ್ ಮಾಡಬೇಕು.

ಗಪ್ಪಿ ಮೀನನ್ನು ತೊಟ್ಟಿಗಳಲ್ಲಿ ಬಿಡುವುದರಿಂದಲೂ ಸೊಳ್ಳೆಗಳನ್ನು ನಾಶ ಮಾಡಬಹುದಾಗಿದೆ. ಈ ಮೀನುಗಳು ಸೊಳ್ಳೆ ಹಾಗೂ ಸೊಳ್ಳೆಯ ಮೊಟ್ಟೆಯಲ್ಲದೆ ಪಾಚಿಯನ್ನು ತಿನ್ನುವ ಗುಣವನ್ನು ಹೊಂದಿವೆ. ಹೀಗಾಗಿ ಡೆಂಗ್ಯೂ ರೋಗಕ್ಕೆ ಕಾರಣವಾಗುವ ಈಡಿಸ್ ಈಜಿಪ್ಟೆ ಸೊಳ್ಳೆಗಳು ಮೊಟ್ಟೆಯಿಟ್ಟಾಗ ಅವುಗಳನ್ನು ತಿಂದು ನಾಶಮಾಡುತ್ತವೆ. ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಕಡಿಮೆಯಾಗುತ್ತದೆ.

ಒಟ್ಟಾರೆಯಾಗಿ ಇವತ್ತಿನ ಪರಿಸ್ಥಿತಿಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅನಿವಾರ್ಯವಾಗಿದೆ. ಜತೆಗೆ ಕಾಯಿಲೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.