ಮಧುಮೇಹ ಬಂದರೆ ಕಣ್ಣಿಗೆ ತೊಂದರೆಯಾಗುತ್ತಾ?

ಮಧುಮೇಹ ಬಂದರೆ ಕಣ್ಣಿಗೆ ತೊಂದರೆಯಾಗುತ್ತಾ?

LK   ¦    Jan 01, 2018 02:29:05 PM (IST)
ಮಧುಮೇಹ ಬಂದರೆ ಕಣ್ಣಿಗೆ ತೊಂದರೆಯಾಗುತ್ತಾ?

ಬಹಳಷ್ಟು ಮಧುಮೇಹ ರೋಗಿಗಳು ಕೇಳುವ ಪ್ರಶ್ನೆ ಮತ್ತು ಅವರ ಭಯ ಏನೆಂದರೆ ಮಧುವೇಹ ಬಂದರೆ ಕಣ್ಣಿಗೆ ಹಾನಿಯಾಗುತ್ತಾ? ಈ ಪ್ರಶ್ನೆ ಒಂದಷ್ಟು ಭಯವನ್ನು ಹುಟ್ಟು ಹಾಕುವುದಂತು ಸತ್ಯ. ಕೆಲವರು ನನಗೆ ಮಧುಮೇಹ ಬಂದಿದೆ. ಕಣ್ಣೇ ಕಾಣದಾಗುತ್ತಾ ಎಂಬ ಪ್ರಶ್ನೆಗಳನ್ನು ಭಯದಿಂದಲೇ ಕೇಳುತ್ತಾರೆ.

ಅಂತಹವರಿಗೆ ಹೇಳುವುದೇನೆಂದರೆ ಮಧುಮೇಹ ಬಂದ ತಕ್ಷಣ ಕಣ್ಣು ಕಾಣದಾಗುವುದಿಲ್ಲ. ಆದರೆ ಅದರತ್ತ ಗಮನಹರಿಸಿ, ನಿಯಂತ್ರಿಸದೇ ಹೋದರೆ ಮಾತ್ರ ಅಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಮಧುಮೇಹ ರೋಗದಿಂದ ಬಳಲುವರು ಬಹಳಷ್ಟು ಎಚ್ಚರಿಕೆ ವಹಿಸುವುದು ಒಳ್ಳೆಯದು. ಏಕೆಂದರೆ ಹಲವು ರೀತಿಯ ಜೀವನ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಒಂದಷ್ಟು ನೆಮ್ಮದಿಯಿಂದ ಬದುಕಲು ಸಾಧ್ಯವಾಗಲಿದೆ.

ಇಷ್ಟಕ್ಕೂ ಮಧುಮೇಹ ಬಂದರೆ ಕಣ್ಣಿಗೆ ಏಕೆ ತೊಂದರೆಯಾಗುತ್ತದೆ ಎಂಬುದನ್ನು ಗಮನಿಸಿದ್ದೇ ಆದರೆ ಇದಕ್ಕೆ ಹಲವು ಕಾರಣಗಳನ್ನು ನಾವು ಕಾಣಬಹುದಾಗಿದೆ. ಹಾಗೆ ನೋಡಿದರೆ ಮಧುಮೇಹ ರೋಗ ಬಂದಿದ್ದೇ ಆದರೆ ಅಂತಹ ವ್ಯಕ್ತಿಗಳ ದೇಹದ ಮೇಲೆ, ಆರೋಗ್ಯದ ಮೇಲೆ ಅಷ್ಟೇ ಅಲ್ಲ ಕಣ್ಣಿನ ಮೇಲೆಯೂ ಪರಿಣಾಮ ಬೀರುತ್ತದೆ. ಒಂದು ವೇಳೆ ಕಾಳಜಿ ವಹಿಸದೆ ಹಾಗೂ ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆ ಪಡೆಯದೆ ಹೋದರೆ ದೃಷ್ಠಿ ಕಳೆದುಕೊಂಡು ಅಂಧರಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಹಾಗಾದರೆ ಮಧುಮೇಹ ಕಣ್ಣಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಕಾರಣಗಳೇನು? ಗುಣಲಕ್ಷಣಗಳೇನು? ನಿಯಂತ್ರಣ ಹಾಗೂ ಚಿಕಿತ್ಸೆ ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಮೂಡಬಹುದು. ಇದಕ್ಕೆ ವೈದ್ಯರು ನೀಡುವ ಕಾರಣಗಳು ಇಲ್ಲಿವೆ.

ಸಾಮಾನ್ಯವಾಗಿ ಮಧುಮೇಹದ ದುಷ್ಪರಿಣಾಮ ಕಣ್ಣಿನ ಅಕ್ಷಿಪಟದಲ್ಲಾಗುತ್ತದೆ. ಈ ತೊಂದರೆಯನ್ನು ಎರಡು ವಿಧದಲ್ಲಿ ಗುರುತಿಸಲಾಗುತ್ತದೆ. ಮೊದಲನೆಯದು ಪ್ರಾರಂಭದಲ್ಲಿ ಕಂಡು ಬರುವ ನಾನ್ ಪ್ರಾಲಿಫರೇಟಿವ್(NPDR). ಎರಡನೆಯದು ತಡವಾಗಿ ಗೋಚರಿಸುವ ಪ್ರಾಲಿಫರೇಟಿವ್(PDR) ಆಗಿದೆ.

ನಾನ್ ಪ್ರಾಲಿಫರೇಟಿವ್ ಬಗ್ಗೆ ಹೇಳುವುದಾದರೆ ಇದು ಮಧುಮೇಹದಿಂದ ಬಳಲುವರನ್ನು ಕಾಡುವ ದೃಷ್ಠಿದೋಷದ ಪ್ರಾರಂಭದ ಹಂತ. ಇದರಲ್ಲಿ ರಕ್ತನಾಳಗಳಿಂದ ರಕ್ತಸ್ರಾವವಾಗಿ ಅಕ್ಷಿಪಟಲ ಮಂದವಾಗುತ್ತದೆ.

ಇನ್ನು ಪ್ರಾಲಿಫರೇಟಿವ್ ಎನ್ನುವುದು ನಾನ್ ಪ್ರಾಲಿಫರೇಟಿವ್(NPDR) ಹಂತವನ್ನು ಮೀರಿದ್ದು, ಇದರಲ್ಲಿ ಕಣ್ಣಿನ ಅಕ್ಷಿಪಟಲದಲ್ಲಿ ಅಸಾಮಾನ್ಯವಾದ ಹೊಸ ರಕ್ತನಾಳಗಳು ಹುಟ್ಟಿಕೊಂಡು ಪದೇ ಪದೇ ಹೆಚ್ಚಿನ ರಕ್ತಸ್ರಾವವಾಗುವುದಲ್ಲದೆ, ಅಕ್ಷಿಪಟಲ ಕಳಚಿ ಮತ್ತು ಕಣ್ಣಿನ ನರ ದುರ್ಬಲಗೊಂಡು ಅಂಧತ್ವ ಕಾಣಿಸಿಕೊಳ್ಳುತ್ತದೆ.

ಇನ್ನು ಮಧುಮೇಹ ಅಕ್ಷಿಪಟಲದ ಮೇಲೆ ಪರಿಣಾಮ ಬೀರುವುದರಿಂದ ದೃಷ್ಟಿ ಮಂದವಾಗುತ್ತದೆ. ಇದು ಹೇಗೆ ಎಂಬುವುದಕ್ಕೆ ವೈದ್ಯರು ನೀಡುವ ಕಾರಣಗಳು ಹೀಗಿವೆ.

ಕಣ್ಣಿನಲ್ಲಿರುವ ಮಾಕ್ಯುಲ ಮಂದವಾಗುವುದರಿಂದ ಮಧ್ಯ ದೃಷ್ಠಿಕ್ಷೇತ್ರದಲ್ಲಿ ದೃಷ್ಠಿ ಅಭಾವವಿರುತ್ತದೆ. ಇದರಿಂದ ಸಣ್ಣ ರಕ್ತನಾಳಗಳು ಮುಚ್ಚಿಕೊಂಡು ಮಾಕ್ಯುಲಾದಲ್ಲಿ ಸಾಕಾಗುವಷ್ಟು ರಕ್ತಚಲನೆ ಇಲ್ಲದೆ ಮಾಕ್ಯುಲ ನಿಷ್ಕ್ರಿಯಗೊಳ್ಳುತ್ತದೆ.

ಇನ್ನು ಹೊಸ ದುರ್ಬಲ ರಕ್ತನಾಳಗಳಿಂದ ಹೆಚ್ಚಿನ ರಕ್ತಸ್ರಾವವಾಗುವುದರಿಂದ ದೃಷ್ಠಿ ದೋಷವಾಗಿ ಕಣ್ಣಿಗೆ ಏನೂ ಕಾಣದಂತಾಗುತ್ತದೆ. ಇಷ್ಟೇ ಅಲ್ಲದೆ ಪದೇ ಪದೇ ಉಂಟಾದ ರಕ್ತಸ್ರಾವದಿಂದ ಗಾಯಗೊಂಡ ರಕ್ತನಾಳಗಳು ಕಲೆಭರಿತವಾಗಿ ಅಕ್ಷಿಪಟಲ ಕಳಚಿಕೊಂಡು ಸಂಪೂರ್ಣ ಅಂಧರಾದರೂ ಅಚ್ಚರಿಪಡಬೇಕಾಗಿಲ್ಲ.

ಮಧುಮೇಹ ಅಕ್ಷಿಪಟಲದ ಮೇಲೆ ಪರಿಣಾಮ ಬೀರಿದೆ ಎಂಬುದು ಹೆಚ್ಚಿನವರಿಗೆ ಗೊತ್ತಾಗುವುದಿಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ದೃಷ್ಠಿದೋಷ ಕಡಿಮೆ ಆಗಿರುವುದು ಗಮನಕ್ಕೆ ಬಂದರೂ ಕೆಲವೊಮ್ಮೆ ಯಾವತ್ತಾದರೂ ತೋರಿಸಿದರಾಯಿತು ಎಂಬ ಉದಾಸೀನತೆ ತಾಳುವವರೇ ಹೆಚ್ಚು. ಇಂತಹ ನಿರ್ಲಕ್ಷ್ಯ ಶಾಶ್ವತ ಅಂಧತ್ವಕ್ಕೆ ರೋಗಿಗಳನ್ನು ದೂಡಿಬಿಡುವ ಸಾಧ್ಯತೆ ಹೆಚ್ಚಿರುತ್ತದೆ.

ವೈದ್ಯರು ಮಧುಮೇಹ ಕಣ್ಣಿನ ಮೇಲೆ ಪರಿಣಾಮ ಬೀರಿದೆಯಾ ಎಂಬುವುದನ್ನು ರಕ್ತನಾಳಗಳ ಸ್ಥಿತಿಯನ್ನು ಪರೀಕ್ಷಿಸಿ ಅರಿತುಕೊಳ್ಳುತ್ತಾರೆ. ಇದನ್ನು ಪರೀಕ್ಷಿಸಲು ಪ್ಲೊರೆಸಿನ್ ಉಪಯೋಗಿಸಿ ಚಿತ್ರಗಳನ್ನು ತೆಗೆಯಲಾಗುತ್ತದೆ. ಇನ್ನು ಮಾಕ್ಯುಲಾದ ಮೇಲಿನ ಪರಿಣಾಮ ಕಂಡು ಹಿಡಿಯಲು OCT(Optical Coherences Tomography) ಯನ್ನು ಮಾಡಲಾಗುತ್ತದೆ. ಒಂದು ವೇಳೆ ಕಣ್ಣಿನಪೊರೆಯಿಂದ ಅಕ್ಷಿಪಟಲದ ಪರೀಕ್ಷೆ ಸಾಧ್ಯವಾಗದೆ ಇದ್ದಾಗ B-Scan(Ultrasound Scaning) ಮಾಡಿ ತಿಳಿದುಕೊಳ್ಳಲಾಗುತ್ತದೆ. ಆದ್ದರಿಂದ ಮಧುಮೇಹ ರೋಗಕ್ಕೆ ತುತ್ತಾದವರು ಕಣ್ಣಿನ ತಪಾಸಣೆಯನ್ನೂ ಮಾಡಿಸಿಕೊಳ್ಳುವುದು ಒಳ್ಳೆಯದು