ಮಧುಮೇಹಿ ರೋಗಿಗಳೇ ಸದಾ ಎಚ್ಚರವಾಗಿರಿ

ಮಧುಮೇಹಿ ರೋಗಿಗಳೇ ಸದಾ ಎಚ್ಚರವಾಗಿರಿ

LK   ¦    Sep 17, 2018 11:25:11 AM (IST)
ಮಧುಮೇಹಿ ರೋಗಿಗಳೇ ಸದಾ ಎಚ್ಚರವಾಗಿರಿ

ಈಗ ಮಧುಮೇಹ(ಡಯಾಬಿಟಿಸ್) ಮಾಮೂಲಿ ಎನ್ನುವಂತಾಗಿದೆ. ಹೆಚ್ಚಿನವರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮೊದಲೆಲ್ಲ ವಯಸ್ಸಾದವರಲ್ಲಿ ಕಾಣುತ್ತಿತ್ತಾದರೂ ಇದೀಗ ಎಲ್ಲ ವಯಸ್ಸಿನವರನ್ನು ಕಾಡತೊಡಗಿದೆ.

ಬಹಳಷ್ಟು ಮಂದಿಗೆ ಮಧುಮೇಹ ಬಂದಿದೆ ಎಂಬುದು ಗೊತ್ತಾಗುವ ವೇಳೆಗೆ ಉಲ್ಭಣಾವಸ್ಥೆಗೆ ತಲುಪಿದ ಉದಾಹರಣೆಗಳಿವೆ. ಹೀಗಾಗಿ ಯಾರೇ ಆಗಿರಲಿ ಮಧುಮೇಹದ ಪರೀಕ್ಷೆ ಮಾಡಿಕೊಳ್ಳುವುದು ಒಳ್ಳೆಯದು. ಇನ್ನು ಮಧುಮೇಹ ಕಾಯಿಲೆ ಪೀಡಿತರು ಒಂದಷ್ಟು ವೈದ್ಯರ ಸೂಚನೆಗಳನ್ನು ಪಾಲಿಸಿಕೊಂಡು ಅದರಂತೆ ನಡೆದರೆ ಮಧುಮೇಹವನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಕಷ್ಟವೇನಲ್ಲ. ಆದರೆ ನಮ್ಮಲ್ಲಿ ಬಹಳಷ್ಟು ಮಂದಿ ಉದಾಸೀನ ಮನೋಭಾವ ತೋರುವುದು, ಬಾಯಿ ರುಚಿಗೆ ಮಾರು ಹೋಗಿ ಸಿಕ್ಕಿದ್ದೆಲ್ಲವನ್ನು ತಿನ್ನುವುದು, ವ್ಯಾಯಾಮ, ವಾಕಿಂಗ್ ಮಾಡದೆ ನಿರ್ಲಕ್ಷ್ಯ ವಹಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬಾರದೆ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

ಹಾಗೆ ನೋಡಿದರೆ ಈಗ ಮಧುಮೇಹ ಯಾವಾಗ, ಯಾರಿಗೆ ಬೇಕಾದರೂ ಬರಬಹುದಾದ ಕಾಯಿಲೆಯಾಗಿ ಪರಿಣಮಿಸಿದೆ. ನಮ್ಮ ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗುವುದೇ ಮಧುಮೇಹ ಕಾಯಿಲೆಯಾಗಿದೆ. ಮೇಧೋಜಿರಕ ಗ್ರಂಥಿಯು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣಕ್ಕೆ ತಕ್ಕಷ್ಟು ಇನ್ಸುಲಿನ್ ಎಂಬ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಈ ಇನ್ಸುಲಿನ್ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಜೀವಕೋಶಗಳ ಒಳಗೆ ಸೇರಿಸಲು ಸಹಕರಿಸಿ ಶರೀರಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಒಂದು ವೇಳೆ ಮೇಧೋಜಿರಕ ಗ್ರಂಥಿಯ ಮಾಮೂಲಿನ ಕಾರ್ಯಕ್ಷಮತೆ ಕಡಿಮೆಯಾಗಿ ಅಥವಾ ಇನ್ಸುಲಿನ್ ಉತ್ಪಾದನೆ ನಿಂತು ಹೋದರೆ ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ಸಕ್ಕರೆ ಪ್ರಮಾಣ ಹೆಚ್ಚಾಗುವುದೇ ಮಧುಮೇಹ ಕಾಯಿಲೆಯಾಗಿದೆ. ಇದನ್ನು ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಎಂದು ಕರೆಯುತ್ತಾರೆ.

ಮಧುಮೇಹ ತಗುಲಿದರೆ ಮುಗಿಯಿತು. ಅದು ನಮ್ಮ ಶರೀರದ ಮೇಲೆ ನಾನಾ ರೀತಿಯಲ್ಲಿ ಪರಿಣಾಮ ಬೀರಬಹುದು. ಆದ್ದರಿಂದ ಕಾಯಿಲೆಯಿರುವವರು ನಿರ್ಲಕ್ಷ್ಯ ಮಾಡದೆ ಎಚ್ಚರಿಕೆಯಿಂದ ಇರಬೇಕು. ಅಲ್ಲದೆ ವೈದ್ಯರು ಹೇಳಿದ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದನ್ನು ಕಲಿಯಬೇಕು.

ವೈದ್ಯರ ಹೇಳುವ ಪ್ರಕಾರ ಕನಿಷ್ಟ 30 ನಿಮಿಷಗಳ ಕಾಲ ವ್ಯಾಯಾಮ, ವಾಯುವಿಹಾರ, ಯೋಗ ಮೊದಲಾದವುಗಳನ್ನು ರೂಢಿಸಿಕೊಳ್ಳಬೇಕು. ಒತ್ತಡದ ಬದುಕಿನಿಂದ ಹೊರ ಬಂದು ಕೆಲವು ಸಮಯವನ್ನು ನಿಶ್ಚಿಂತೆಯಿಂದ ಕಳೆಯಬೇಕು.

ಇದರ ಜತೆಗೆ ಮಧುಮೇಹ ರೋಗದಿಂದ ಬಳಲುವ ರೋಗಿಗಳು ಬಹಳಷ್ಟು ಎಚ್ಚರಿದಿಂದ ಇರುವುದು ಅಗತ್ಯ. ಏಕೆಂದರೆ ಮಧುಮೇಹ ದೇಹದ ಮೇಲೆ, ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದರೆ ಅದು ಕಣ್ಣಿನ ಮೇಲೆಯೂ ಆಗಿ ಕೆಲವೊಮ್ಮೆ ಸೂಕ್ತ ಚಿಕಿತ್ಸೆ ದೊರೆಯದೆ ಹೋದರೆ ದೃಷ್ಠಿ ಕಳೆದುಕೊಂಡು ಅಂಧರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಸಾಮಾನ್ಯವಾಗಿ ಮಧುಮೇಹದ ದುಷ್ಪರಿಣಾಮ ಕಣ್ಣಿನ ಅಕ್ಷಿಪಟದಲ್ಲಾಗುತ್ತದೆ. ಈ ತೊಂದರೆಯನ್ನು ಎರಡು ವಿಧದಲ್ಲಿ ಗುರುತಿಸಲಾಗುತ್ತದೆ.

ಮೊದಲನೆಯದು ಪ್ರಾರಂಭದಲ್ಲಿ ಕಂಡು ಬರುವ ನಾನ್ ಪ್ರಾಲಿಫರೇಟಿವ್. ಎರಡನೆಯದು ತಡವಾಗಿ ಗೋಚರಿಸುವ ಪ್ರಾಲಿಫರೇಟಿವ್ ಆಗಿದೆ.

ನಾನ್ ಪ್ರಾಲಿಫರೇಟಿವ್ ಬಗ್ಗೆ ಹೇಳುವುದಾದರೆ ಇದು ಮಧುಮೇಹದಿಂದ ಬಳಲುವರನ್ನು ಕಾಡುವ ದೃಷ್ಠಿದೋಷದ ಪ್ರಾರಂಭದ ಹಂತ. ಇದರಲ್ಲಿ ರಕ್ತನಾಳಗಳಿಂದ ರಕ್ತಸ್ರಾವವಾಗಿ ಅಕ್ಷಿಪಟಲ ಮಂದವಾಗುತ್ತದೆ.

ಇನ್ನು ಪ್ರಾಲಿಫರೇಟಿವ್ ಎನ್ನುವುದು ನಾನ್ ಪ್ರಾಲಿಫರೇಟಿವ್ ಹಂತವನ್ನು ಮೀರಿದ್ದು, ಇದರಲ್ಲಿ ಕಣ್ಣಿನ ಅಕ್ಷಿಪಟಲದಲ್ಲಿ ಅಸಾಮಾನ್ಯವಾದ ಹೊಸ ರಕ್ತನಾಳಗಳು ಹುಟ್ಟಿಕೊಂಡು ಪದೇ ಪದೇ ಹೆಚ್ಚಿನ ರಕ್ತಸ್ರಾವವಾಗುವುದಲ್ಲದೆ, ಅಕ್ಷಿಪಟಲ ಕಳಚಿ ಮತ್ತು ಕಣ್ಣಿನ ನರ ದುರ್ಬಲಗೊಂಡು ಅಂಧತ್ವ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಅತಿ ಮುಖ್ಯ.

ಮಧುಮೇಹದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಆಗಾಗ್ಗೆ ವೈದ್ಯರನ್ನು ಕಂಡು ರಕ್ತಪರೀಕ್ಷೆ ಸೇರಿದಂತೆ ಹಲವು ತಪಾಸಣೆಗಳನ್ನು ಮಾಡಿಸಿಕೊಳ್ಳುವ ಜತೆಗೆ ಕಣ್ಣಿನಲ್ಲಿ ಸಮಸ್ಯೆ ಕಾಣಿಸಿದರೆ ಕೂಡಲೇ ನೇತ್ರ ತಜ್ಞರ ಸಲಹೆ ಪಡೆಯುವುದು ಅತಿ ಮುಖ್ಯ.