ಸೇಬು ತಿಂದು ಈ ಏಳು ಆರೋಗ್ಯ ಲಾಭ ಪಡಕೊಳ್ಳಿ

ಸೇಬು ತಿಂದು ಈ ಏಳು ಆರೋಗ್ಯ ಲಾಭ ಪಡಕೊಳ್ಳಿ

Oct 12, 2017 02:40:33 PM (IST)
ಸೇಬು ತಿಂದು ಈ ಏಳು ಆರೋಗ್ಯ ಲಾಭ ಪಡಕೊಳ್ಳಿ

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದೆಂಬ ಮಾತಿದೆ. ಆ್ಯಪಲ್ ಯಾನೆ ಸೇಬು ತಿಂದರೆ ಅದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಸೇಬಿನ ಜ್ಯೂಸ್ ಮಾಡಿಕೊಂಡು ಕುಡಿದರೆ ಅದಕ್ಕೆ ಸಕ್ಕರೆ ಹಾಕಿರುವ ಕಾರಣ ಹೆಚ್ಚು ಪರಿಣಾಮಕಾರಿಯಾಗದು. ಕೆಲಸದ ಕಡೆ ಹೆಚ್ಚು ಸಮಯ ವ್ಯಯ ಮಾಡುವವರು ಮಧ್ಯೆ ಸೇಬು ತಿಂದರೆ ಅದರಿಂದ ಹಸಿವು ಕಡಿಮೆಯಾಗುವುದು ಮತ್ತು ದೇಹಕ್ಕೆ ಪೋಷಕಾಂಶಗಳು ಕೂಡ ಸಿಗುವುದು.
ಸೇಬಿನಿಂದ ದೇಹಕ್ಕೆ ಯಾವೆಲ್ಲಾ ಲಾಭಗಳು ಆಗಲಿದೆ ಎಂದು ತಿಳಿಯಿರಿ.

1. ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ
ಸೇಬಿನಲ್ಲಿರುವ ಫ್ರಕ್ಟೋಸ್ ಮತ್ತು ಆ್ಯಂಟಿಆಕ್ಸಿಡೆಂಟ್ ಪಾಲಿಫೆನಾಲ್ಸ್ ಚಯಾಪಚಾಯ ಕ್ರಿಯೆಯನ್ನು ಸುಧಾರಿಸುವುದು ಮತ್ತು ದೇಹವು ಹೀರಿಕೊಳ್ಳುವ ಸಕ್ಕರೆಯನ್ನು ಕಡಿಮೆ ಮಾಡುವುದು. ಇದು ಮಧುಮೇಹವಿರುವವರಿಗೆ ಒಳ್ಳೆಯದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ನಿಯಂತ್ರಣದಲ್ಲಿಡುವುದು.

2. ತೂಕ ಕಳಕೊಳ್ಳಲು ಸಹಕಾರಿ
ಸೇಬಿನಲ್ಲಿರುವ ಪೆಕ್ಟಿನ್ ನಾರಿನಾಂಶವು ದೇಹವು ಅತಿಯಾಗಿ ಆಹಾರದ ಕೊಬ್ಬು ಹೀರಿಕೊಳ್ಳದಂತೆ ನೆರವಾಗುವುದು. ಈ ಗುಣದಿಂದಾಗಿ ಸೇಬು ತಿಂದ ಬಳಿಕ ನಿಮ್ಮ ಹೊಟ್ಟೆಯು ತುಂಬಿದಂತಾಗುವುದು. ಇದು ತೂಕ ಕಳಕೊಳ್ಳಲು ಸಹಕಾರಿ.

3. ಜೀರ್ಣಕ್ರಿಯೆ ಸರಾಗವಾಗಲು
ಪೆಕ್ಟಿನ್ ನಾರಿನಾಂಶದಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ. ಇದು ಕರಗಬಲ್ಲ ನಾರಿನಾಂಶವಾಗಿದ್ದು, ಜೀರ್ಣಕ್ರಿಯೆಗೆ ನೆರವಾಗುವುದು. ಕರಗಬಲ್ಲ ನಾರಿನಾಂಶವಾಗಿರುವ ಪೆಕ್ಟಿನ್ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿರುವ ನೀರನ್ನು ತೆಗೆದು ಜೆಲ್ ನಿರ್ಮಿಸಿ ಜೀರ್ಣಕ್ರಿಯೆ ನಿಧಾನವಾಗಿ ಕರುಳುಗಳ ಮೂಲಕ ಮಲ ಸರಾಗವಾಗಿ ಸಾಗಲು ನೆರವಾಗುವುದು.

4. ಮಲಬದ್ಧತೆ ಮತ್ತು ಭೇದಿಗೆ
ಸೇಬಿನಲ್ಲಿರುವ ಪೆಕ್ಟಿನ್ ಕೇವಲ ಜೀರ್ಣಕ್ರಿಯೆ ಸರಾಗವಾಗಿಸುವುದು ಮಾತ್ರವಲ್ಲದೆ ಕರುಳಿನ ಕ್ರಿಯೆಯನ್ನು ನಿಯಂತ್ರಿಸುವುದು. ದೇಹಕ್ಕೆ ಅಗತ್ಯವಿರುವಂತೆ ಪೆಕ್ಟಿನ್ ಮಲಬದ್ಧತೆ ಮತ್ತು ಭೇದಿ ನಿವಾರಣೆ ಮಾಡುವುದು.

5. ಮೂಳೆಗಳ ರಕ್ಷಣೆಗೆ
ಸೇಬು ಮೂಳೆಗಳನ್ನು ಬಲಗೊಳಿಸುವಲ್ಲಿ ತುಂಬಾ ಪರಿಣಾಮಕಾರಿ ಮತ್ತು ಮೂಳೆಯ ಸಂಪೂರ್ಣ ಆರೋಗ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಫೆವನೈಡ್ ಫ್ಲೋರಿಜಿನ್ ಮೂಳೆ ದುರ್ಬಲತೆ ತಡೆಯುವುದು.

6. ಕೊಲೆಸ್ಟ್ರಾಲ್ ಕಡಿಮೆಗೊಳಿಸುವುದು
ಪೆಕ್ಟಿನ್ ನಾರಿನಾಂಶ ಮತ್ತು ಇತರ ಕೆಲವೊಂದು ಅಂಶಗಳಾದ ಆ್ಯಂಟಿಆಕ್ಸಿಡೆಂಟ್ ಪಾಲಿಫೆನಾಲ್ಸ್ ಗಳು ಅನಾರೋಗ್ಯಕರ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು. ಇದರಿಂದ ಹೃದಯದ ಸ್ನಾಯುಗಳು ಮತ್ತು ರಕ್ತನಾಳಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.

7. ಮೆದುಳಿನ ಶಕ್ತಿ ಹೆಚ್ಚಿಸಲು
ಸೇಬು ಮೆದುಳಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಸೇಬು ಅಸೆಟೈಲ್ಕೋಲಿನ್ ಉತ್ಪತ್ತಿ ಹೆಚ್ಚಿಸುವುದು. ಇದರಿಂದ ನರಕೋಶಗಳು ಮತ್ತು ಮೆದುಳಿನ ಮಧ್ಯೆ ಬಲವಾದ ಸಂಪರ್ಕವಾಗುವುದು. ಇದರಿಂದ ಮೆದುಳಿನ ಶಕ್ತಿ ಹೆಚ್ಚಾಗುವುದು.