ಸಿಗರೇಟ್ ಬಿಡಿ, ಆರೋಗ್ಯವಂತ ಬದುಕು ಕಟ್ಟಿಕೊಳ್ಳಿ!

ಸಿಗರೇಟ್ ಬಿಡಿ, ಆರೋಗ್ಯವಂತ ಬದುಕು ಕಟ್ಟಿಕೊಳ್ಳಿ!

LK   ¦    Jun 18, 2018 03:02:47 PM (IST)
ಸಿಗರೇಟ್ ಬಿಡಿ, ಆರೋಗ್ಯವಂತ ಬದುಕು ಕಟ್ಟಿಕೊಳ್ಳಿ!

ಗೆಳೆಯರೊಂದಿಗೆ ಪಾರ್ಟಿನಲ್ಲಿ ಬೆರೆಯುವಾಗಲೋ ಅಥವಾ ತಮಾಷೆಗೆ, ಖುಷಿಗೆ ಹೀಗೆ ಒಂದೊಂದು ಕಾರಣಕ್ಕೆ ಆರಂಭವಾಗುವ ಕೆಲವು ಚಟಗಳು ಬಳಿಕ ನಮ್ಮನ್ನೇ ಬಲಿತೆಗೆದುಕೊಳ್ಳುತ್ತವೆ.

ಇವತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ, ಬೀಡಿ ಸಿಗರೇಟಿನ ಬೆಲೆ ಗಗನಕ್ಕೇರಿದ್ದರೂ ಅದರ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಅದನ್ನು ಬಿಟ್ಟು ಬದುಕುವವರು ಕಡಿಮೆಯೇ.

ಸಾಮಾನ್ಯವಾಗಿ ಯುವಕರು ಸಿಗರೇಟ್ ಹಿಡಿದುಕೊಂಡು ಕುಳಿತುಕೊಳ್ಳುತ್ತಿರುವ ದೃಶ್ಯಗಳು ಟೀ ಅಂಗಡಿಗಳಲ್ಲಿ ಕಂಡು ಬರುತ್ತಿವೆ. ಕೆಲವರು ಸಿಗರೇಟ್ ಸೇದುವುದೇ ಘನತೆ ಎಂಬಂತೆ ನಡೆದುಕೊಳ್ಳುವುದು ಇದೆ.

ಕೆಲವರನ್ನು ಮಾತನಾಡಿಸಿದರೆ ಸಿಗರೇಟ್ ಸೇದುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಟೆನ್ಷನ್ ದೂರವಾಗುತ್ತದೆ ಎನ್ನುತ್ತಾರೆ. ಮತ್ತೆ ಕೆಲವರು ಖುಷಿಗೆ ಸೇದುತ್ತಿರುವುದಾಗಿ ಹೇಳುತ್ತಾರೆ. ತಮ್ಮ ಸಂಪಾದನೆಯಲ್ಲಿ ಕಾಲು ಭಾಗವನ್ನು ಸಿಗರೇಟಿಗೆ ಸುರಿಯುತ್ತಾರೆ. ಇನ್ನು ಧೂಮಪಾನ ಚಟವನ್ನು ಮೈಗೆ ಅಂಟಿಸಿಕೊಂಡ ವ್ಯಕ್ತಿ ಅದು ಇಲ್ಲದೆ ಹೋದರೆ ವಿಚಿತ್ರವಾಗಿ ವರ್ತಿಸುತ್ತಾನೆ. ಏನೋ ಕಳೆದುಕೊಂಡಂತೆ ಒದ್ದಾಡುತ್ತಾರೆ. ಜತೆಗೆ ಒಂದಕ್ಕೆ ದುಪ್ಪಟ್ಟು ಹಣವನ್ನು ನೀಡಿಯಾದರೂ ಸೇದಿಯೇ ಬಿಡುತ್ತಾನೆ.

ವಿದ್ಯಾರ್ಥಿಗಳು ಈ ಚಟಕ್ಕೆ ಹೆಚ್ಚಾಗಿ ಒಳಗಾಗುತ್ತಾರೆ. ಮುಂದುವರಿದ ಈ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಸಿಗರೇಟ್ ಸೇದುವ ಚಟವನ್ನು ರೂಢಿಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಸಿಗರೇಟ್ ಹೊಗೆ ಶರೀರದೊಳಕ್ಕೆ ಹೋಗಿ ಅದು ಹೆಣ್ಣು ಮಕ್ಕಳ ಮೇಲೆ ಭಾರೀ ಪರಿಣಾಮ ಬೀರುತ್ತದೆ.

ಚಟ ಹತ್ತಿಸಿಕೊಂಡವರಿಗೆ ಅದನ್ನು ಸೇದಿದರೆ ಅದರಿಂದ ಏನೋ ಒಂದು ಮಜಾ ಸಿಗುತ್ತೆ ಎಂಬ ಭ್ರಮೆ ಬಂದು ಬಿಡುತ್ತದೆ. ಇದು ಏಕೆಂದರೆ ಸಿಗರೇಟಿನಲ್ಲಿರುವ ನಿಕೋಟಿನ್ ಮತ್ತೆ ಮತ್ತೆ ಸೇದುವಂತೆ ಮಾಡಿ ಸಿಗರೇಟಿಗೆ ದಾಸರಾಗುವಂತೆ ಮಾಡಿಬಿಡುತ್ತದೆ. ಸಿಗರೇಟ್ ಸೇವನೆಯಿಂದ ಹಲವು ತೊಂದರೆಗಳು ಕಾಣಿಸಬಹುದು.

ಉಸಿರಾಟಕ್ಕೆ ಅಡಚಣೆ, ಕೆಮ್ಮು, ಕಫ, ಶ್ವಾಸಕೋಶದ ತೊಂದರೆ, ಕ್ಯಾನ್ಸರ್, ದೈಹಿಕ ಅಸಮರ್ಥತೆ ಹೀಗೆ ಹತ್ತು ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತದೆ.

ಸಿಗರೇಟ್ ಸೇದುವುದರಿಂದ ತಮ್ಮ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ಆದರೆ ರಿಲ್ಯಾಕ್ಸ್ ಪಡೆಯುವ ಸಲುವಾಗಿ ಮೇಲಿಂದ ಮೇಲೆ ಸಿಗರೇಟ್ ಸೇದಲು ಆರಂಭಿಸುವ ವ್ಯಕ್ತಿ ಕಾಯಿಲೆಯ ಗೂಡಾಗಿ ಸಾವನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಾನೆ.

ಆರೋಗ್ಯವಿದ್ದಾಗ ಅದರ ಹೊಡೆತ ಗೊತ್ತಾಗುವುದಿಲ್ಲ ಒಮ್ಮೆ ಆರೋಗ್ಯ ತಪ್ಪಿದಾಗ ಸಿಗರೇಟ್‍ನ ಚಮತ್ಕಾರ ಗೊತ್ತಾಗಿ ಬಿಡುತ್ತದೆ. ನಮ್ಮ ಕಾಯಿಲೆಯಲ್ಲಿ ಅದರ ಪಾತ್ರ ಎಷ್ಟಿದೆ ಎಂಬುದು ಅರಿವಾಗುತ್ತದೆ. ಕಾಯಿಲೆ ಬಂದು ಅದರಿಂದ ಹೇಗೋ ಬಿಡುಗಡೆಗೊಂಡು ಇನ್ನುಮುಂದೆ ಸಿಗರೇಟ್ ಸಹವಾಸ ಬೇಡಪ್ಪಾ ಎಂದು ಅದನ್ನು ಬಿಟ್ಟವರು ಕೆಲವೊಮ್ಮೆ ಕೆಲವೊಂದು ತೊಂದರೆಗಳಿಂದ ಬಳಲುತ್ತಾರೆ. ಕೆಲವರು ಮಾನಸಿಕವಾಗಿಯೂ ಕುಗ್ಗಿಬಿಡುತ್ತಾರೆ.

ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಇವತ್ತಿನ ದಿನಗಳಲ್ಲಿ ಬೀಡಿ ಸಿಗರೇಟ್ ದುಬಾರಿಯಾಗಿದೆ. ಅದನ್ನು ಬಿಟ್ಟರೆ ಆರೋಗ್ಯ ಮಾತ್ರವಲ್ಲ, ಆರ್ಥಿಕವಾಗಿಯೂ ಸದೃಢರಾಗಲು ಸಾಧ್ಯವಿದೆ. ದುಶ್ಚಟಗಳನ್ನು ಕಲಿಯುವುದು ಸುಲಭ ಆದರೆ ಅದನ್ನು ತ್ಯಜಿಸುವುದು ಕಷ್ಟದ ಕೆಲಸ. ಆದರೆ ಗಟ್ಟಿ ಮನಸ್ಸು ಮಾಡಿ ಅದಕ್ಕೆ ತಿಲಾಂಜಲಿ ಹೇಳುವುದು ಇಂದಿನ ಅನಿವಾರ್ಯತೆಯಾಗಿದೆ. ಬಹಳಷ್ಟು ಮಂದಿ ಇವತ್ತು ಧೂಮಪಾನ ಸೇವನೆ ಬಿಟ್ಟು ಉತ್ತಮ ಆರೋಗ್ಯ ಕಂಡು ಕೊಂಡಿದ್ದಾರೆ.

ತಜ್ಞರು ಹೇಳುವ ಪ್ರಕಾರ ಧೂಮಪಾನ ಮಾಡುವುದನ್ನು ಬಿಟ್ಟರೆ, ಆ ನಂತರ ವಿಟಮಿನ್- ಇ ಮಾತ್ರೆಗಳನ್ನು ಒಂದಷ್ಟು ಪ್ರಮಾಣದಲ್ಲಿ ಸೇವಿಸಬೇಕಂತೆ. ಇದರಿಂದ ಹೃದಯದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲವಂತೆ. ಈ ಸಂಗತಿಯನ್ನು ಅಮೆರಿಕದಲ್ಲಿರುವ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ. ಇ ವಿಟಮಿನ್ ನಿಂದ ಹೃದಯಕ್ಕೆ ಯಾವುದೇ ಸಮಸ್ಯೆ ಉಂಟಾಗದು. ರಕ್ತ ಪ್ರಸಾರ ಸುಗಮವಾಗಿರುತ್ತದೆ ಎಂದು ಅಧ್ಯಯನ ಸಂದರ್ಭದಲ್ಲಿ ಗಮನಿಸಿದ್ದಾರೆ. ಅಲ್ಲದೇ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಶೇ. 19 ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಒಂದು ವಾರದಷ್ಟು ಸಮಯ ಧೂಮಪಾನ ಮಾಡದೆ ಇದ್ದವರಲ್ಲಿ ಶೇ.2.8 ರಷ್ಟು ರಕ್ತ ಪ್ರಸಾರದ ವ್ಯವಸ್ಥೆ ಸುಗಮವಾಗಿರುತ್ತಂತೆ. ವಿಟಮಿನ್ `ಇ' ಯನ್ನು ಗಾಮ ಟೋಕೋಫೆರಾಲ್ ರೂಪದಲ್ಲಿ ಸೇವಿಸಿದರಲ್ಲಿ ಶೇ. 1.5 ರಷ್ಟು ವೃದ್ಧಿ ಕಂಡು ಬಂದ ಸಂಗತಿಯನ್ನು ವಿಜ್ಞಾನಿಗಳು ಜಗತ್ತಿಗೆ ತಿಳಿಸಿದ್ದಾರೆ.

ಈಗಾಗಲೇ ಸಿಗರೇಟ್ ಸೇದುವವರು ಆರೋಗ್ಯ ಸರಿಯಾಗಿಲ್ಲ ಸಮಸ್ಯೆಯಾಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಗಟ್ಟಿ ಮನಸ್ಸು ಮಾಡಿ ಬಿಟ್ಟು ಬಿಡಿ. ಇದರಿಂದ ಒಳ್ಳೆಯ ಆರೋಗ್ಯವಂತ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ.