ಇಂದ್ರಿಯ ಸೆಳೆತದಿಂದ ಆರೋಗ್ಯಕ್ಕೆ ಕುತ್ತು!

ಇಂದ್ರಿಯ ಸೆಳೆತದಿಂದ ಆರೋಗ್ಯಕ್ಕೆ ಕುತ್ತು!

Dec 30, 2016 03:41:24 PM (IST)

ಇಂದ್ರಿಯ ಸೆಳೆತಕ್ಕೂ ನಮ್ಮ ಆರೋಗ್ಯಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಉದ್ಭವಿಸಬಹುದು. ನಮ್ಮ ನಡುವೆ ಇರುವ ಹಲವು ಮಂದಿ ಇಂದ್ರಿಯ ಸೆಳೆತಕ್ಕೊಳಗಾಗಿ ಬದುಕನ್ನೇ ಹಾಳು ಮಾಡಿಕೊಂಡಿರುತ್ತಾರೆ. ನಾವು ಇಂದ್ರಿಯಗಳನ್ನು ಒಳ್ಳೆಯ ವಿಚಾರಕ್ಕೆ ಬಳಸಿಕೊಂಡಾಗ ಮಾತ್ರ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗುತ್ತದೆ. ಬದಲಿಗೆ ಅದರ ಸೆಳೆತಕ್ಕೊಳಗಾಗಿ ಸುಖವಲ್ಲದ ಕ್ಷಣಿಕ ಸುಖದ ಬೆನ್ನೇರಿದರೆ ಒಂದೊಳ್ಳೆ ಬದುಕನ್ನು ಹಾಳು ಮಾಡಿಕೊಂಡು ರೋಗಗ್ರಸ್ತರಾಗಿ ಬದುಕಬೇಕಾಗುತ್ತದೆ.

ಆರೋಗ್ಯವಾಗಿರುವುದೆಂದರೆ ದೈಹಿಕ ವಿಚಾರಕ್ಕೆ ಸಂಬಂಧಿಸಿದಲ್ಲ. ಅದು ಮಾನಸಿಕ ಮತ್ತು ನಡೆನುಡಿಗೂ ಸಂಬಂಧಿಸಿದ್ದಾಗಿದೆ. ನಮ್ಮ ನಡೆನುಡಿ ಮತ್ತೊಬ್ಬರನ್ನು ಆಕರ್ಷಿಸುವಂತಿರಬೇಕು ಅಷ್ಟೇ ಅಲ್ಲ ಮಾದರಿಯಾಗಿರಬೇಕು. ಅದು ಬಿಟ್ಟು ಮಾರು ದೂರ ಹೋಗುವಂತಹ ಬದುಕು ಬದುಕೇ ಅಲ್ಲ.
ಹಾಗೆ ನೋಡಿದರೆ ಮನುಷ್ಯನಾದವನು ಒಂದಲ್ಲಾ ಒಂದು ರೀತಿಯಲ್ಲಿ ಇಂದ್ರಿಯಗಳ ಸೆಳೆತಕ್ಕೆ ಒಳಗಾಗುತ್ತಾನೆ. ಅಷ್ಟೇ ಅಲ್ಲ, ಇಂದ್ರಿಯ ಸುಖ, ಸಂತೋಷ ಹೊಂದಲು ಕಾತರಪಡುತ್ತಾನೆ. ಇದು ಮನುಷ್ಯ ಗುಣ. ಇಂದ್ರಿಯ ಸುಖಗಳನ್ನು ತ್ಯಜಿಸಿ ಬದುಕುವುದು ಅಷ್ಟು ಸುಲಭವಲ್ಲ. ಬಹಳಷ್ಟು ಮಂದಿಗೆ ಇಂದ್ರಿಯಗಳ ಸುಖ, ಸಂತೋಷಗಳ ಮೂಲ ಯಾವುದೆಂಬುವುದೇ ಗೊತ್ತಿಲ್ಲವಾಗಿದೆ.

ನಾಲಿಗೆಯಿಂದ ರುಚಿ ತಿಳಿಯುತ್ತದೆ. ಮೂಗಿನಿಂದ ವಾಸನೆ ಗ್ರಹಿಸಬಹುದು. ಅದೇ ರೀತಿ ಇಂದ್ರಿಯಗಳು ರೂಪ, ರಸ, ಗಂಧ, ಶಬ್ದ, ಸ್ಪರ್ಶಗಳ ದ್ವಾರವೂ ಹೌದು. ಇಂದ್ರಿಯಗಳನ್ನು ನಯವಾಗಿ ಅವಶ್ಯಕತೆಗೆ ತಕ್ಕಂತೆ ಬಳಸಬೇಕು. ಯಾರು ಇಂದ್ರಿಯಗಳನ್ನು ಕ್ಷಣಿಕ ಸುಖಕ್ಕೆ ಬಳಸಿಕೊಳ್ಳುತ್ತಾರೋ ಅವರು ತಕ್ಷಣಕ್ಕೆ ಖುಷಿಪಟ್ಟರೂ ಕ್ರಮೇಣ ಮಾನಸಿಕ ಮತ್ತು ದೈಹಿಕ ತೊಂದರೆ ಅನುಭವಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ನಾಲಗೆಯನ್ನು ಸದ್ವಿಚಾರ ಮಾತನಾಡಲು ಬಳಸಬೇಕು. ಬದಲಿಗೆ ಅಶ್ಲೀಲ ಮಾತನಾಡಿದರೆ ಅದರಿಂದ ತೊಂದರೆ ತಪ್ಪಿದಲ್ಲ. ಶಬ್ದಕ್ಕೆ ಜಿಂಕೆ ನಡುಗಿ ನಿಂತರೆ, ಆಗ ಅದು ಬೇಟೆಗಾರನ ಬೇಟೆಗೆ ಬಲಿಯಾಗುತ್ತದೆ. ಅಂದರೆ ಜಿಂಕೆಯು ಶಬ್ದದ ಮೋಹಕ್ಕೆ ತನ್ನ ಪ್ರಾಣವನ್ನು ಕಳೆದುಕೊಂಡಂತಾಯಿತು. ಪತಂಗ ಬೆಳಕಿನ ಮೋಹಕ್ಕೆ ಬಿದ್ದು ಸುಟ್ಟು ಹೋಗುತ್ತದೆ.

ಜಿಂಕೆ, ಪತಂಗ, ಮೀನು, ದುಂಬಿ ಹೀಗೆ ಪ್ರಾಣಿ ಪಕ್ಷಿಗಳು ತಲಾ ಒಂದು ಇಂದ್ರಿಯದ ಸೆಳೆತಕ್ಕೆ ಒಳಗಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತವೆ. ಹೀಗಿರುವಾಗ ಪಂಚೇಂದ್ರಿಯಗಳನ್ನು ಹೊಂದಿರುವ ಮನುಷ್ಯನ ಪಾಡೇನು? ಪಂಚೇಂದ್ರಿಯಗಳ ಸೆಳೆತಕ್ಕೆ ಸಿಲುಕುವ ಮಾನವ ಲೌಕಿಕ ಸುಖಲೋಲುಪತೆಗೆ ಸಿಲುಕಿ ದುಃಖ, ದುಮ್ಮಾನಗಳನ್ನು ತನ್ನಿಂದ ತಾನೇ ತಂದುಕೊಳ್ಳುತ್ತಾನೆ. ಇಂದ್ರಿಯ ಸುಖ ದುಃಖದಿಂದ ಪ್ರಾಪ್ತವಾಗಿದ್ದು, ದುಃಖದಿಂದ ದುಃಖವೇ ದೊರೆಯುತ್ತದೆ. ಆದರೆ ಇದನ್ನು ಅರಿಯದ ನಾವುಗಳು ಇಂದ್ರಿಯಗಳ ಸುಖವೇ ಸುಖವೆಂದು ಭ್ರಮಿಸುತ್ತೇವೆ. ಮನೋಚಂಚಲತೆಗೂ ಇಂದ್ರಿಯಗಳೇ ಕಾರಣವಾಗಿಬಿಡುತ್ತವೆ.

ಇಂದ್ರಿಯಗಳಿಂದಾಗಿ ಮನಸ್ಸು ಚಂಚಲತೆಗೆ ಒಳಗಾಗಿ ತಾತ್ಕಾಲಿಕ ಸುಖ ಪಡೆದರೂ ಅದರಿಂದ ಸಹಿಸಲಾಗದಂತಹ ನೋವು ಇದ್ದೇ ಇರುತ್ತದೆ. ಮನುಷ್ಯನಿಗೆ ವಿವೇಕವಿದೆ. ಏನು ಮಾಡಿದರೆ ಎಂತಹ ಪರಿಣಾಮ ಬೀರಬಹುದು ಎಂಬ ಅರಿವಿದೆ. ಆದರೂ ಕೆಲವೊಮ್ಮೆ ಇಂದ್ರಿಯಗಳ ಸೆಳೆತಕ್ಕೆ ಒಳಗಾಗಿ ವಿವೇಕ ಕಳೆದುಕೊಂಡು ಬಿಡುತ್ತಾನೆ.

ಮನುಷ್ಯ ಇಂದ್ರಿಯ ಸುಖಗಳ ಬೆನ್ನೇರಿ ತನ್ನ ಅಮೂಲ್ಯ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾನೆ. ನಿಜ ಹೇಳಬೇಕೆಂದರೆ ಇಂದ್ರಿಯಗಳು ಭಗವಂತನ ಅನುಪಮ ಕೊಡುಗೆಗಳು, ಉದಾರ ಉಡುಗೊರೆಗಳು, ದೈವಾನುಗ್ರಹ ಸಾಧನೆಗೆ ಪೂರಕ ಸಾಧನಗಳು. ಹೀಗಾಗಿ ಇದನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಂಡು ಆರೋಗ್ಯವಂತ ಬದುಕನ್ನು ಕಟ್ಟಿಕೊಳ್ಳೋಣ ಏನೆನ್ನುತ್ತೀರಾ…