ಗರ್ಭಿಣಿಯರೇ ಆರೋಗ್ಯದತ್ತ ಕಾಳಜಿಯಿರಲಿ

ಗರ್ಭಿಣಿಯರೇ ಆರೋಗ್ಯದತ್ತ ಕಾಳಜಿಯಿರಲಿ

LK   ¦    Nov 03, 2018 05:01:52 PM (IST)
ಗರ್ಭಿಣಿಯರೇ ಆರೋಗ್ಯದತ್ತ ಕಾಳಜಿಯಿರಲಿ

ಗರ್ಭಾವಸ್ಥೆಯ ಸಮಯ ಹೆಣ್ಣಿನ ಜೀವನಾವಧಿಯಲ್ಲಿ ಬಹುಮುಖ್ಯವಾದ ಘಟ್ಟ. ಹೀಗಾಗಿ ಗರ್ಭಾವಸ್ಥೆಯ ದಿನಗಳಲ್ಲಿ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ತಮ್ಮ ಆರೋಗ್ಯದೊಂದಿಗೆ ಮುಂದೆ ಹುಟ್ಟಲಿರುವ ಮಗುವೂ ಆರೋಗ್ಯವಾಗಿರಬೇಕಾದರೆ ಎಚ್ಚರಿಕೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯವಾಗಿದೆ.

ಗರ್ಭಾವಸ್ಥೆಯ ದಿನಗಳು ಮಾಮೂಲಿಯಾಗಿರುವುದಿಲ್ಲ. ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಆರೋಗ್ಯವಾಗಿರಬೇಕಾದರೆ ನಮ್ಮ ಆಹಾರ ಸೇವನೆ ಬಗ್ಗೆಯೂ ಒಂದಷ್ಟು ತಿಳಿದುಕೊಂಡು ಅದರಂತೆ ಶಿಸ್ತನ್ನು ರೂಢಿಸಿಕೊಳ್ಳಬೇಕು. ವೈದ್ಯರ ಸಲಹೆ ಪ್ರಕಾರ ಹೇಳುವುದಾದರೆ ಗರ್ಭಿಣಿಯರಿಗೆ ಕೆಲವೊಮ್ಮೆ ಹೊಟ್ಟೆ ತುಂಬಿದ ಅನುಭವವಾಗಿ ಊಟವೇ ಬೇಡ ಎಂದೆನಿಸಬಹುದು. ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆಲವರು ಊಟವನ್ನೇ ತ್ಯಜಿಸಿ ಬಿಡುತ್ತಾರೆ. ಈ ರೀತಿ ಮಾಡುವುದು ಒಳ್ಳೆಯ ಲಕ್ಷಣವಲ್ಲ. ಬದಲಿಗೆ ಸ್ವಲ್ಪ ಪ್ರಮಾಣದ ಆಹಾರವನ್ನು ಆಗಾಗ್ಗೆ ಸೇವಿಸುವ ಕ್ರಮವನ್ನು ರೂಢಿಸಿಕೊಳ್ಳಬೇಕು.

ಪ್ರತಿನಿತ್ಯ 8ರಿಂದ12 ಲೋಟಗಳಷ್ಟು ನೀರನ್ನು ಕಡ್ಡಾಯವಾಗಿ ಸೇವಿಸಬೇಕು. ಇದರಿಂದ ಮಲವಿಸರ್ಜನೆ ಸರಾಗವಾಗಿ ಸಾಗಲು ಸಾಧ್ಯವಾಗುತ್ತದೆ.

ಗರ್ಭಿಣಿಯರ ಆರೋಗ್ಯಕ್ಕೆ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಅಗತ್ಯ ಇರುವ ಕಾರಣ ಅದು ದೊರೆಯಲು ದಿನಕ್ಕೆ ಕನಿಷ್ಟ 600ಮಿ.ಲೀ.ನಷ್ಟಾದರೂ ಹಾಲು ಕುಡಿಯಬೇಕು. ಗರ್ಭಾವಸ್ಥೆಯಲ್ಲಿದ್ದಾಗ ಮಲಬದ್ಧತೆ ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ಸುಲಭವಾಗಿ ಜೀರ್ಣವಾಗುವ ಆಹಾರಗಳಿಗೆ ಆದ್ಯತೆ ನೀಡಬೇಕು. ಮಸಾಲೆಯುಕ್ತ ಆಹಾರವನ್ನು ದೂರ ಇಡಬೇಕು. ಇದು ಜೀರ್ಣಕ್ರಿಯೆಗೆ ತೊಂದರೆ ನೀಡುವುದಲ್ಲದೆ, ಎದೆಯುರಿಗೂ ಕಾರಣವಾಗಿಬಿಡುತ್ತದೆ. ಆದ್ದರಿಂದ ಉಂಡೆಕಾಳುಗಳು, ಬೇಳೆ, ಸೊಪ್ಪು ತರಕಾರಿಗಳು, ಹಣ್ಣು ಹಂಪಲುಗಳು, ನಾರಿನಂಶ ಇರುವ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.

ಕೆಲವೊಮ್ಮೆ ವಾಂತಿ ಮತ್ತು ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಇಂಥ ಸಂದರ್ಭ ಕೆಲವು ಆರೋಗ್ಯಕ್ಕೆ ಹಿಡಿಸದ ಪದಾರ್ಥಗಳನ್ನು ದೂರ ಇಡಬೇಕು. ಅದರಲ್ಲೂ ಕರಿದ ತಿಂಡಿ, ಸಂಸ್ಕರಿಸಿಟ್ಟ ಪದಾರ್ಥಗಳನ್ನು ಸೇವಿಸದಿರುವುದು ಆರೋಗ್ಯಕ್ಕೆ ಒಳ್ಳೆಯದು.

ಹೆಚ್ಚು ಕಾಫಿ, ಟೀ, ಕೋಕೋ ಕೋಲ ಕುಡಿಯುವುದು, ಚಾಕೋಲೆಟ್ ತಿನ್ನುವುದು ಅಪಾಯಕಾರಿ. ಇವುಗಳಲ್ಲಿರುವ ಕೆಫಿನ್ ದೇಹಕ್ಕೆ ಅಗತ್ಯವಿರುವ ಕಬ್ಬಿಣಾಂಶವನ್ನು ತಡೆದು ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ ಮಾಡುತ್ತದೆ.

ಸಾಕಷ್ಟು ಕ್ಯಾಲೋರಿಯ ಆಹಾರವನ್ನು ಸೇವಿಸಬೇಕು. ಇದರಿಂದ ಗರ್ಭದಾರಣೆಯ ಅವಧಿಯಲ್ಲಿ ಸಾಕಷ್ಟು ಕೊಬ್ಬಿನಾಂಶ ಸಂಗ್ರಹವಾಗಿ ಹೆರಿಗೆ ಬಳಿಕ ಮಗುವಿಗೆ ಹಾಲುಣಿಸುವ ಸಂದರ್ಭ ಉಪಯೋಗಕ್ಕೆ ಬರುತ್ತದೆ. ಊತ ಅಥವಾ ಬಾವು ಸಮಸ್ಯೆ, ಅಧಿಕ ರಕ್ತದೊತ್ತಡ ಇರುವವರು ಹೊರತು ಪಡಿಸಿ ಉಳಿದವರು ಸಾಕಷ್ಟು ಸೋಡಿಯಂ ಅಂಶವುಳ್ಳ ಆಹಾರವನ್ನು ಸೇವಿಸಬೇಕು. ಇದರಿಂದ ಆರೋಗ್ಯ ಹೆಚ್ಚುತ್ತದೆ.

ಇನ್ನು ವಾಕಿಂಗ್, ವ್ಯಾಯಾಮ ಮಾಡುವರು ಅದನ್ನು ಅಡ್ಡಿಯಿಲ್ಲದೆ ಮುಂದುವರೆಸಬಹುದು. ಆದರೆ ಅತಿಯಾಗಿ ಮಾಡಬಾರದು. ದೈಹಿಕ ಶ್ರಮದ ಕೆಲಸ ಮಾಡುವ ಮಹಿಳೆಯರು ತಮಗೆ ಸಿಕ್ಕ ಅವಧಿಯಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಆರೋಗ್ಯದ ಬಗ್ಗೆಯೂ ನಿಗಾವಹಿಸಬೇಕಾಗುತ್ತದೆ.

ಗರ್ಭಾವಸ್ಥೆ ಸಮಯದಲ್ಲಿ ದೂರದ ಪ್ರಯಾಣ, ಪ್ರವಾಸ ಅಷ್ಟೊಂದು ಒಳ್ಳೆಯದಲ್ಲ. ಆಸ್ಪತ್ರೆಗೆ ಸಮೀಪದಲ್ಲೇ ಇರುವುದು, ಆಗಾಗ್ಗೆ ವೈದ್ಯರ ಭೇಟಿ ಮಾಡಿ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

ಇದೀಗ ಭಯ ಪಡುವ ವಿಚಾರ ಏನೆಂದರೆ ಹೆಚ್ಚಿನ ಮಹಿಳೆಯರು ಧೂಮಪಾನ, ಮದ್ಯಪಾನ ಮಾಡುವ ಚಟಗಳು ಹೆಚ್ಚಾಗಿವೆ. ಇದರಿಂದ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರಲಿದ್ದು, ಮಗುವಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ತಂಬಾಕು ಅಗೆಯುವುದು ಅಥವಾ ಬಾಯಲ್ಲಿಟ್ಟುಕೊಳ್ಳುವುದು, ನಶ್ಯೆ ಸೇವಿಸುವುದು ಸಾಮಾನ್ಯವಾಗಿ ಗ್ರಾಮೀಣ ಮಹಿಳೆಯರಲ್ಲಿ ಕಂಡು ಬರುತ್ತದೆ. ಇದು ಮಾರಕವಾಗಿದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಇದನ್ನೆಲ್ಲ ತ್ಯಜಿಸಲೇ ಬೇಕಾಗುತ್ತದೆ. ಏಕೆಂದರೆ ಇದರಿಂದ ಮಗುವಿಗೆ ಅಪಾಯವಾಗುವುದಲ್ಲದೆ, ಗರ್ಭಪಾತ, ಅವಧಿಗೆ ಮೊದಲೇ ಹೆರಿಗೆ, ಮಗುವಿನ ತೂಕ ಕಡಿಮೆಯಾಗುವುದು ಹೀಗೆ ಹಲವು ತೊಂದರೆ ಕಾಣಿಸಿಕೊಳ್ಳುತ್ತದೆ. ಆರೋಗ್ಯಕ್ಕೆ ಯಾವುದು ಮಾರಕ ಎಂದೆನಿಸುತ್ತದೋ ಅದನ್ನು ತ್ಯಜಿಸುವುದೇ ಉತ್ತಮ. ಇದರಿಂದ ಆಕೆಯ ಆರೋಗ್ಯವಲ್ಲದೆ, ಮುಂದೆ ಹುಟ್ಟಲಿರುವ ಮಗು ಕೂಡ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

ಇನ್ನು ಮಹಿಳೆಯರು ತಾವು ಸೇವಿಸುವ ಆಹಾರದ ಬಗ್ಗೆಯೂ ಎಚ್ಚರವಹಿಸಬೇಕು. ಏಕೆಂದರೆ ಆಹಾರದಲ್ಲಿರುವ ಕೆಲವು ಸೂಕ್ಷಾಣು ಜೀವಿಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಈ ಸಂದರ್ಭದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಅತ್ಯಗತ್ಯ.

ಅತಿಯಾಗಿ ಸಕ್ಕರೆ ಸೇವನೆ, ಆಗಾಗ್ಗೆ ಟೀ, ಕಾಫಿ ಸೇವಿಸುವುದು, ಚಾಕೋಲೇಟ್ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿರುವ ಕೆಫೀನ್ ಅಂಶ ಆಹಾರದಲ್ಲಿ ದೊರೆಯುವ ಕಬ್ಬಿಣದ ಅಂಶವನ್ನು ತಡೆಯುವ ಶಕ್ತಿ ಹೊಂದಿರುವುದರಿಂದ ಆರೋಗ್ಯದ ಮೇಲೆ ದುಪ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಇನ್ನು ಚಿಕ್ಕ ಪುಟ್ಟ (ಶೀತ, ತಲೆನೋವು ಹೀಗೆ) ತೊಂದರೆ ಕಾಣಿಸಿಕೊಂಡಾಗ ಮಾತ್ರೆ ಸೇವಿಸುವುದನ್ನು ನಿಲ್ಲಿಸಬೇಕು. ಯಾವುದೇ ಮಾತ್ರೆ ಸೇವಿಸುವ ಮೊದಲು ವೈದ್ಯರ ಸಲಹೆ ಅಗತ್ಯವಾಗಿ ಪಡೆಯಬೇಕು. ಇಲ್ಲದಿದ್ದರೆ ಸೇವಿಸುವ ತಾಯಿಗೂ ಹೊಟ್ಟೆಯಲ್ಲಿರುವ ಮಗುವಿಗೂ ಅಪಾಯ ತಂದೊಡ್ಡಬಹುದು.

ಮೂಢನಂಬಿಕೆಗೆ ಮಾರು ಹೋಗದೆ, ಹೆಚ್ಚಿನ ಪಥ್ಯವೂ ಮಾಡದೆ ಉತ್ತಮ ಆರೋಗ್ಯಕರ ತರಕಾರಿ, ಮೊಟ್ಟೆ, ಹಾಲು ಮುಂತಾದ ಆಹಾರವನ್ನು ಸೇವಿಸುವುದು ಒಳ್ಳೆಯದು. ವ್ಯಾಯಾಮ, ವಾಯುವಿಹಾರ ಮುಂದುವರೆಸಿ ಆದರೆ ತೂಕ ಕಡಿಮೆ ಮಾಡುವ ಇನ್ನಿತರ ಚಟುವಟಿಕೆಯಿಂದ ದೂರವಿರಿ.

ವೈದ್ಯರ ಸಲಹೆ ಪಡೆದು ಗರ್ಭಧರಿಸಿದ 14ರಿಂದ 16 ವಾರಗಳ ಬಳಿಕ ಆರೋಗ್ಯ ವೃದ್ಧಿಸುವ ಮಾತ್ರೆಗಳಾದ ಐರನ್, ಪೋಲೆಟ್(ವಿಟಮಿನ್ ಬಿ9) ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸುವುದು ಒಳ್ಳೆಯದು.

ಗರ್ಭಿಣಿ ಮಹಿಳೆಯರು ಔಷಧಿ ಸೇವಿಸುವುದು ಇರಬಹುದು ಅಥವಾ ಇನ್ನಿತರ ಯಾವುದೇ ಚಟುವಟಿಕೆ ನಡೆಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.