ಕಣ್ಣಿಗೆ ಸ್ವಯಂ ಚಿಕಿತ್ಸೆ ಅಪಾಯಕಾರಿ..ಎಚ್ಚರ ವಹಿಸಿ!

ಕಣ್ಣಿಗೆ ಸ್ವಯಂ ಚಿಕಿತ್ಸೆ ಅಪಾಯಕಾರಿ..ಎಚ್ಚರ ವಹಿಸಿ!

LK   ¦    Nov 13, 2017 01:01:43 PM (IST)
ಕಣ್ಣಿಗೆ ಸ್ವಯಂ ಚಿಕಿತ್ಸೆ ಅಪಾಯಕಾರಿ..ಎಚ್ಚರ ವಹಿಸಿ!

ನಮ್ಮಲ್ಲಿ ಹಿಂದಿನಿಂದಲೂ ನಡೆದು ಬಂದ ಅಭ್ಯಾಸ ಏನೆಂದರೆ ಯಾವುದೇ ಕಾಯಿಲೆ ಇರಲಿ ಮೊದಲಿಗೆ ನಾವು ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತೇವೆ. ಹತ್ತಿರದ ಜನ ಹೇಳುವ ಔಷಧಿಯನ್ನೆಲ್ಲ ಮಾಡಿ ವಾಸಿಯಾಗದಿದ್ದರೆ ಮಾತ್ರ ಆಸ್ಪತ್ರೆಯ ಹಾದಿ ಹಿಡಿಯುತ್ತೇವೆ.

ಕೆಲವೊಮ್ಮೆ ನಮಗೆ ಬಂದಿರಬಹುದಾದ ಕಾಯಿಲೆ ಯಾವುದು ಎಂಬುದು ಗೊತ್ತಿಲ್ಲದೆ ನಮಗೆ ತೋಚಿದ ಔಷಧಿ, ಮಾತ್ರೆ ನುಂಗುತ್ತೇವೆ. ಇದು ಎಷ್ಟು ಅಪಾಯಕಾರಿ ಎಂಬುದು ಕಾಯಿಲೆ ಉಲ್ಭಣವಾದ ಬಳಿಕವಷ್ಟೆ ತಿಳಿಯುತ್ತದೆ. ಈ ವೇಳೆಗೆ ಕಾಲ ಮಿಂಚಿರುತ್ತದೆ. ಪರಿಣಾಮ ಕೆಲವೊಮ್ಮೆ ಜೀವಕ್ಕೂ ಕುತ್ತು ಬರುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.

ಕಾಯಿಲೆ ಬಂದಾಗ ಅದಕ್ಕೆ ಔಷಧಿ, ಸಲಹೆಗಳನ್ನು ನೀಡುವವರು ಬೇಕಾದಷ್ಟು ಮಂದಿ ಸಿಗುತ್ತಾರೆ. ಆದರೆ ಆರೋಗ್ಯ ಹದಗೆಟ್ಟಾಗ ಪಕ್ಕದವರ ಸಲಹೆಗಳನ್ನು, ಸ್ವಯಂ ಚಿಕಿತ್ಸೆಯನ್ನು ಮಾಡಿಕೊಳ್ಳುವುದು ಅಪಾಯಕಾರಿ. ತಮಗೆ ಬಂದಿರುವುದು ಯಾವ ಕಾಯಿಲೆ ಎಂಬುದನ್ನು ಅರಿಯದೆ ತಾವೇ ಸ್ವತಃ ಚಿಕಿತ್ಸೆಗೆ ಮುಂದಾಗುವುದು ಒಳ್ಳೆಯದಲ್ಲ. ಅದರಲ್ಲೂ ಕಣ್ಣಿನ ವಿಚಾರದಲ್ಲಂತು ತುಂಬಾ ಕಾಳಜಿ ವಹಿಸಬೇಕಾಗುತ್ತದೆ.

ಇವತ್ತಿನ ಪರಿಸ್ಥಿತಿಯಲ್ಲಿ ಕಣ್ಣಿಗೆ ಹೆಚ್ಚಿನ ಒತ್ತಡವಾಗುತ್ತಿದ್ದು, ಆಗಾಗ್ಗೆ ಸಮಸ್ಯೆಗಳು ಕಾಣಿಸಬಹುದು. ಏಕೆಂದರೆ ದೈಹಿಕ ಶ್ರಮದ ದುಡಿಮೆಗಿಂತ ಕಣ್ಣು ಮತ್ತು ಮೆದುಳಿಗೆ ಹೆಚ್ಚಿನ ಒತ್ತಡವಾಗುವ ಕೆಲಸವನ್ನೇ ನಾವು ಮಾಡುತ್ತಿದ್ದೇವೆ. ಅಷ್ಟೇ ಅಲ್ಲದೆ ಸದಾ ಕಂಪ್ಯೂಟರ್, ಮೊಬೈಲ್, ಟಿವಿ ಹೀಗೆ ಕಣ್ಣನ್ನು ಅದರತ್ತ ಒಡ್ಡುತ್ತಲೇ ಇರುವುದರಿಂದ ಕಣ್ಣಿಗೆ ವಿಶ್ರಾಂತಿಯೇ ಇಲ್ಲದಂತಾಗಿದೆ.

ಪ್ರಕೃತಿ ನಡುವೆ ಬದುಕುವ ಮಂದಿ ಸಾಮಾನ್ಯವಾಗಿ ಆರೋಗ್ಯವಾಗಿಯೇ ಇರುತ್ತಾರೆ. ಆದರೆ ಆಧುನಿಕ ಬದುಕಿಗೆ ಮಾರು ಹೋಗುತ್ತಿರುವ ಇತ್ತೀಚಿಗಿನ ದಿನಗಳಲ್ಲಿ ನಮ್ಮ ಆರೋಗ್ಯ ಕೂಡ ಸದ್ದಿಲ್ಲದೆ ಕ್ಷೀಣಿಸುತ್ತಿದೆ. ದೇಹ ರೋಗ ರುಜಿನಗಳ ಗೂಡಾಗುತ್ತಿದೆ. ಅದರಲ್ಲೂ ಚಿಕ್ಕ ವಯಸ್ಸಿಗೆ ಕಣ್ಣಿನ ಸಮಸ್ಯೆಗಳು ಕಾಡತೊಡಗಿವೆ.

ಕಣ್ಣು ನೋವು ಎಂದು ಉದಾಸೀನ ತೋರುವುದು ಒಳ್ಳೆಯ ಲಕ್ಷಣವಲ್ಲ. ಏಕೆಂದರೆ ಇವತ್ತು ಕಣ್ಣನ್ನು ಗ್ಲಾಕೋಮಾ ಕಾಡುತ್ತಿರುವುದರಿಂದ ಕಣ್ಣಿಗೆ ಸಂಬಂಧಿಸಿದ ಯಾವುದೇ ತೊಂದರೆ ಕಂಡು ಬಂದರೂ ಸಂಬಂಧಿಸಿದ ಕಣ್ಣಿನ ತಜ್ಞರನ್ನು ಕಂಡು ಚಿಕಿತ್ಸೆ ಪಡೆಯುವುದು ಉತ್ತಮ.

ಹಾಗೆ ನೋಡಿದರೆ ಗ್ಲಾಕೋಮಾದಿಂದ ವ್ಯಕ್ತಿ ಅಂಧನಾಗುತ್ತಾನೆ. ವೈದ್ಯರು ನೀಡುವ ಮಾಹಿತಿ ಪ್ರಕಾರ ಗ್ಲಾಕೋಮಾವನ್ನು ನಿಯಂತ್ರಿಸಬಹುದಂತೆ ಆದರೆ ನಿವಾರಿಸಲು ಸಾಧ್ಯವಿಲ್ಲವಂತೆ.

ಗ್ಲಾಕೋಮಾದ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅಗತ್ಯವಿದೆ. ಈ ರೋಗ ರೋಗಿಯ ಅರಿವಿಗೆ ಬಾರದೆ ಅಂಧತ್ವವನ್ನುಂಟು ಮಾಡುವ ಕಾಯಿಲೆಯಂತೆ. ತಕ್ಷಣಕ್ಕೆ ರೋಗ ಲಕ್ಷಣಗಳು ಕಾಣಿಸಿಕೊಳ್ಳದೆ ಕಣ್ಣಿನ ನರ ಕ್ಷೀಣಿಸಿ ದೃಷ್ಠಿ ಕುಂದಿ ಬಿಡುತ್ತದೆ. ಇದು ಶಾಶ್ವತ ಅಂಧತ್ವಕ್ಕೆ ಕಾರಣವಾಗಿ ಬಿಡುತ್ತಿದೆ. ಏಕೆಂದರೆ ನರ ಕ್ಷೀಣಿಸುವುದರಿಂದ ನಶಿಸಿಹೋದ ದೃಷ್ಠಿಯನ್ನು ಮತ್ತೆ ಪಡೆಯುವುದು ಅಸಾಧ್ಯ. ಆದ್ದರಿಂದ ಗ್ಲಾಕೋಮಾ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು ಎನ್ನುವುದು ವೈದ್ಯರ ಸಲಹೆಯಾಗಿದೆ.

ತಲೆನೋವು, ಕಣ್ಣುನೋವು, ಆರದ ಕೆಂಪುಕಣ್ಣು,  ಪದೇ ಪದೇ ಬದಲಾಗುವ ಕನ್ನಡಕಗಳು, ಮಧುಮೇಹ, ಬೆಳಕಿನ ಸುತ್ತ ಕಾಮನಬಿಲ್ಲಿನ ಬಣ್ಣದ ಬಳೆಗಳು ಕಾಣಿಸಿಕೊಳ್ಳುವುದು, ದೃಷ್ಠಿ ಕ್ಷೇತ್ರದಲ್ಲಿ ಕಪ್ಪು ಕಲೆಗಳು ಗೋಚರಿಸುವುದು, ದೃಷ್ಠಿದೋಷ, ಕಣ್ಣಿಗೆ ಪೆಟ್ಟು ಬಿದ್ದಿದ್ದರೆ, ಪೊರೆಗೆ ಶಸ್ತ್ರಚಿಕಿತ್ಸೆ ಮಾಡಿಯೂ ಕಣ್ಣು ಕಾಣಿಸದಿರುವುದು ಇದು ಗ್ಲಾಕೋಮಾದ ಲಕ್ಷಣಗಳಾಗಿರಬಹುದು. ಆದ್ದರಿಂದ ಕಣ್ಣಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಣಿಸಿದರೆ ಉದಾಸೀನತೆ ಮಾಡದೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

ವೈದ್ಯರು ಹೇಳುವ ಪ್ರಕಾರ ಗ್ಲಾಕೋಮಾ ಅಧಿಕ ಕಣ್ಣಿನ ಒತ್ತಡದಿಂದ, ಸ್ಟೀರಾಯ್ಡ್ ಉಪಯೋಗಿಸುವುದರಿಂದ, ಕಣ್ಣಿನ ನರಕ್ಕೆ ತೊಂದರೆಯಾಗುವುದರಿಂದ, ವಂಶಪಾರಂಪರ್ಯವಾಗಿಯೂ ಬರುವ ಸಾಧ್ಯತೆ ಇದ್ದು, ಸಾಮಾನ್ಯ ಕಣ್ಣಿನ ಪರೀಕ್ಷೆ  ಜೊತೆಗೆ ಕಣ್ಣಿನ ಒತ್ತಡ ಪರೀಕ್ಷೆ, ಗೋನಿಯೋಸ್ಕೋಪಿ, ಪೆರಿಮೆಟ್ರಿ(ದೃಷ್ಠಿಕ್ಷೇತ್ರ ಪರೀಕ್ಷೆ), ಸಿಸಿಟಿ(ಕೃಷ್ಣಪಟಲದ ಗಾತ್ರದ ಮಾಪನ), ಹೆಚ್ಆರ್ಟಿ, ಜಿಡಿಎಕ್ಸ್, ಓಸಿಟಿ ಮೊದಲಾದ ಪರೀಕ್ಷೆಗಳನ್ನು ಮಾಡಿ ಕಣ್ಣನ್ನು ಕಾಡುತ್ತಿರುವ ಕಾಯಿಲೆ ಗ್ಲಾಕೋಮಾನಾ ಎಂಬುದನ್ನು ಕಂಡು ಹಿಡಿಯುತ್ತಾರೆ.

ಅದು ಏನೇ ಇರಲಿ. ಜನ ಕಣ್ಣಿನ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೆ ಚಿಕ್ಕ ಸಮಸ್ಯೆ ಕಾಣಿಸಿದರೂ ಉದಾಸೀನತೆ ತೋರದೆ ನೇತ್ರತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ಅದನ್ನು ಹೊರತುಪಡಿಸಿ ಸ್ವಯಂ ಚಿಕಿತ್ಸೆಗೆ ಮಾತ್ರ ಕೈ ಹಾಕಬಾರದು ಎಂಬುದು ಮಾತ್ರ ಪ್ರತಿಯೊಬ್ಬರ ನೆನಪಿನಲ್ಲಿರ ಬೇಕಾದ ವಿಚಾರವಾಗಿದೆ