ಹುಳುಕು ಹಲ್ಲುಗಳ ಬಗ್ಗೆ ಎಚ್ಚರ!

ಹುಳುಕು ಹಲ್ಲುಗಳ ಬಗ್ಗೆ ಎಚ್ಚರ!

LK   ¦    Oct 03, 2017 02:48:18 PM (IST)
ಹುಳುಕು ಹಲ್ಲುಗಳ ಬಗ್ಗೆ ಎಚ್ಚರ!

ಮುಖದ ಸೌಂದರ್ಯದಿಂದ ಜಗತ್ತನ್ನೇ ಗೆಲ್ಲಿಬಿಡಬಲ್ಲರು ಎನ್ನುವಂತ ಕೆಲವರು ಬಾಯಿಬಿಟ್ಟರೆ ಸೌಂದರ್ಯಕ್ಕೆ ಚ್ಯುತಿ ಎಂಬಂತೆ ಕೊಳಕು ಹಲ್ಲು ಕಾಣಿಸಿಬಿಡುವುದು. ಹುಳುಕು, ಕೊಳಕು ಹಲ್ಲುಗಳು ಮುಖದ ಅಂದಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಮಾರಕ ಎಂಬುದನ್ನು ನಾವು ಮನಗಾಣಬೇಕು.

ಗುಟ್ಕಾ, ಎಲೆಅಡಿಕೆ, ತಂಬಾಕು ಜಗಿಯುವುದರಿಂದ, ಬೀಡಿ, ಸಿಗರೇಟ್ ಸೇದುವುದರಿಂದ ಹಲ್ಲುಗಳು ನೈಜ ಹೊಳಪು ಕಳೆದುಕೊಂಡು ಕಳಾಹೀನವಾಗುತ್ತಿವೆ. ಇಂತಹ ಹಲ್ಲುಗಳು ನೋಡುಗರಿಗೆ ಅಸಹ್ಯ ಹುಟ್ಟಿಸುವುದರೊಂದಿಗೆ ನಮಗೂ ಸಮಸ್ಯೆಯಾಗಿ ಬಿಡುತ್ತವೆ.

ಹಾಗೆ ನೋಡಿದರೆ ಇತರೆ ಅಂಗಗಳಂತೆ ಹಲ್ಲು ಕೂಡ ಬಹುಮುಖ್ಯ. ಇದು ನಮ್ಮ ಮುಖಕ್ಕೆ ಸೌಂದರ್ಯ ನೀಡುವುದಲ್ಲದೆ, ಆಹಾರ ಚೆನ್ನಾಗಿ ಅಗೆದು ತಿನ್ನಲು, ಆರೋಗ್ಯ ಕಾಪಾಡಲು ಅತ್ಯಗತ್ಯ. ಕೆಲವೊಂದು ದುಶ್ಚಟಗಳನ್ನು ಮೈಗೆ ಹತ್ತಿಸಿಕೊಂಡು ಹಲ್ಲುಗಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.

ಸಾಮಾನ್ಯವಾಗಿ ಹಲ್ಲುಗಳು ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಕಂಡು ಬರುತ್ತವೆ. ಕೆಲವರಿಗೆ ಚಿಕ್ಕದಾಗಿ ದಾಳಿಂಬೆ ಹರಳು ಜೋಡಿಸಿಟ್ಟಂತೆ ಕಂಡು ಬಂದರೆ, ಮತ್ತೆ ಕೆಲವರಿಗೆ ಅಗಲವಾಗಿ, ಇನ್ನು ಕೆಲವರಿಗೆ ಉಬ್ಬು, ಮುದ್ದೆಮುದ್ದೆಯಾಗಿರುತ್ತದೆ. ಈ ಎಲ್ಲಾ ಹಲ್ಲುಗಳು ಹೇಗಿವೆ ಎನ್ನುದಕ್ಕಿಂತ ನಾವು ಹೇಗೆ ಇಟ್ಟುಕೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಮುಖದಲ್ಲಿ ಎದ್ದು ಕಾಣುವ ಅಂಗಾಂಗಗಳಲ್ಲಿ ಹಲ್ಲು ಕೂಡ ಒಂದಾಗಿರುವ ಕಾರಣ ಅದನ್ನು ಗಟ್ಟಿ, ಸುಂದರ, ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವೂ ಹೌದು.

ಕೆಲವೊಮ್ಮೆ ನಾವು ಎಷ್ಟೇ ಕಾಳಜಿ ವಹಿಸಿದರೂ ಕೀಟಾಣುಗಳು ಹಲ್ಲುಗಳ ಮೇಲೆ ದಾಳಿ ಮಾಡಿ ಹಲ್ಲನ್ನು ಹುಳುಕು ಮಾಡಿಬಿಡುತ್ತದೆ. ಹಲ್ಲಿನ ಹುಳುಕುರೋಗ ಮನುಷ್ಯರನ್ನು ಕಾಡಿ ಬಿಡುತ್ತದೆ. ಕೆಲವೊಮ್ಮೆ ಇದು ಸಮಸ್ಯೆಯಾಗಿ ಪರಿಣಮಿಸಿ ಹಲ್ಲನ್ನು ಕೀಳುವ ತನಕ ಬಿಡಲಾರದೆ ಕಾಡಿಬಿಡುತ್ತದೆ.

ಹೀಗಾಗಿ ಹುಳುಕನ್ನು ಹೋಗಲಾಡಿಸಿ ಹಲ್ಲನ್ನು ಕಾಪಾಡುವುದು ಕೆಲವೊಮ್ಮೆ ಸವಾಲಿನ ಕೆಲಸವಾಗಿಬಿಡುತ್ತದೆ. ಇಷ್ಟಕ್ಕೂ ಹಲ್ಲನ್ನು ಕಾಡುವ ಸೂಕ್ಷ್ಮ ಜೀವಿ ಸ್ಟ್ರೆಪ್ಟೊಕಾಕಸ್ ಮ್ಯೂಟ್ಯನ್ಸ್ ಸ್ವಲ್ಪ ಎಡವಿದರೂ ಹಲ್ಲನ್ನೇ ಇನ್ನಿಲ್ಲದಂತೆ ಕರಗಿಸಿಬಿಡುತ್ತದೆ.

ಇಷ್ಟಕ್ಕೂ ಈ ಸ್ಟ್ರೆಪ್ಟೊಕಾಕಸ್ ಮ್ಯೂಟ್ಯನ್ಸ್ ಎಂಬ ಸೂಕ್ಷ್ಮ್ಮಾಣು ಜೀವಿ ಮನುಷ್ಯನ ಬಾಯಿ ಮತ್ತು ಜೊಲ್ಲಿನಲ್ಲಿ ಒಂದನೇ ವರ್ಷದಿಂದಲೇ ಗೋಚರಿಸಲಾರಂಭಿಸುತ್ತದೆ. ಬಾಯೊಳಗೆ ಹಲ್ಲು ಮೂಡುವ ಸಮಯಕ್ಕೆ ಸರಿಯಾಗಿ ಬಾಯೊಳಗೆ ಪ್ರವೇಶ ಪಡೆಯುತ್ತದೆ. ಬಾಯಿಯ ಸ್ವಚ್ಛತೆ ಕಡಿಮೆಯಾದರೆ ಈ ಸೂಕ್ಷ್ಮಜೀವಿ ತನ್ನ ಚಟುವಟಿಕೆ ಶುರು ಮಾಡಿಕೊಳ್ಳುತ್ತದೆ.

ಅತಿಯಾದ ಸಕ್ಕರೆ ಅಂಶದ ಕಾಫಿ, ಟೀ ಸೇವನೆ ಒಳ್ಳೆಯದಲ್ಲ. ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಪ್ಲೋರೈಡ್ ಅಂಶ ಕಡಿಮೆ ಇರುವುದು ಹಲ್ಲಿನ ಕಾಯಿಲೆಗಳಿಗೆ ಕಾರಣ. ಸವೆದ ಮುರಿದ ಹಲ್ಲು, ವಕ್ರಹಲ್ಲು ಸಿಕ್ಕಿ ಬೀಳುವ ಜಾಗಗಳಾಗಿದ್ದು, ಅವುಗಳಿಗೆ ಚಿಕಿತ್ಸೆ ಪಡೆದುಕೊಳ್ಳಬೇಕು. ಅತಿಯಾದ ಅಂಟು ಪದಾರ್ಥ ಸೇವನೆ, ಚಾಕಲೇಟ್, ಐಸ್ ಕ್ರೀಮ್ ನಿಂದ ದೂರವಿದ್ದಷ್ಟು ಅನುಕೂಲ.

ಸಿಹಿ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿ ಹಲ್ಲುಗಳಲ್ಲಿ ಆಹಾರ ಪದಾರ್ಥಗಳು ಸಿಕ್ಕಿ ಹಾಕಿಕೊಂಡರೆ ಬಾಯಿಯನ್ನು ಸ್ವಚ್ಛ ಮಾಡಿ ಆಹಾರದ ಕಣಗಳು ಅಲ್ಲಿ ಉಳಿಯದಂತೆ ನೋಡಿಕೊಳ್ಳಬೇಕು. ದಿನಕ್ಕೆರಳು ಅದರಲ್ಲೂ ಮುಕ್ಕಳಿಸಿ, ಬಾಯಿ ಸ್ವಚ್ಛಗೊಳಿಸಿ ಮಲಗುವ ಅಭ್ಯಾಸ ಮಾಡಿಕೊಂಡರೆ ಇನ್ನೂ ಒಳ್ಳೆಯದು.