ನಿಮ್ಮ ಕಿಡ್ನಿ ಸ್ವಲ್ಪ ಜ್ವಾಪಾನ..!

ನಿಮ್ಮ ಕಿಡ್ನಿ ಸ್ವಲ್ಪ ಜ್ವಾಪಾನ..!

LK   ¦    Oct 27, 2017 01:42:39 PM (IST)
ನಿಮ್ಮ ಕಿಡ್ನಿ ಸ್ವಲ್ಪ ಜ್ವಾಪಾನ..!

ಮನುಷ್ಯನಿಗೆ ಯಾವಾಗ ಯಾವ ಕಾಯಿಲೆ ಬರುತ್ತೋ ಎಂದು ಹೇಳುವುದು ಅಸಾಧ್ಯ. ಒಂದಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಹೋದರೆ ನಮಗೆ ಅರಿವಿಲ್ಲದಂತೆ ಕೆಲವು ಕಾಯಿಲೆಗಳು ಬರಬಹುದು. ಆದ್ದರಿಂದ ಆರೋಗ್ಯದತ್ತ ಹೆಚ್ಚಿನ ಒತ್ತು ನೀಡಬೇಕು.

ಹಾಗೆ ನೋಡಿದರೆ ಮನುಷ್ಯನನ್ನು ಕಾಡುವ ಕಾಯಿಲೆಗಳ ನಡುವೆ ಕಿಡ್ನಿ ಸಮಸ್ಯೆಯೂ ಒಂದಾಗಿದ್ದು, ಇದರಿಂದ ಬಳಲುತ್ತಾ ಬಹಳಷ್ಟು ಮಂದಿ ಪ್ರಾಣವನ್ನು ಕಳೆದುಕೊಳ್ಳುವ ಸನ್ನಿವೇಶವೂ ಇಲ್ಲದಿಲ್ಲ. ಕಿಡ್ನಿ ತನ್ನ ಕಾರ್ಯವನ್ನು ನಿಲ್ಲಿಸಿದರೆ ಆತನ ಬದುಕು ಮುಗಿದಂತೆಯೇ. ಕಿಡ್ನಿ ಕಸಿ ಮಾಡುತ್ತಾರೆಯಾದರೂ ಅದು ಎಲ್ಲರಿಗೂ ಕೈಗೆಟಕುವ ಚಿಕಿತ್ಸೆಯಲ್ಲ. ಆದ್ದರಿಂದ ಮೊದಲೇ ಆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕೆಲವೊಂದು ಕ್ರಮಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮವಾಗಿದೆ.

ಸಾಮಾನ್ಯವಾಗಿ ಬಹಳಷ್ಟು ಸಂದರ್ಭಗಳಲ್ಲಿ ನಮಗೆ ಕಾಯಿಲೆ ಬರಲು ನಮ್ಮ ಆಹಾರ ಸೇವನೆಯಲ್ಲಿನ ಎಡವಟ್ಟುಗಳು ಕೂಡ ಕಾರಣ ಎಂಬುವುದನ್ನು ಮರೆಯುವಂತಿಲ್ಲ. ಹಾಗಾಗಿ ಮೂತ್ರಾಂಗ ಸಮಸ್ಯೆಗಳು ಕಂಡು ಬಂದಲ್ಲಿ ವೈದ್ಯರು ಹೇಳುವ ಆಹಾರ ಪಥ್ಯವನ್ನು ಮಾಡಿದರೆ ರೋಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಮೂತ್ರಾಂಗದ ಕಾರ್ಯಭಾರವನ್ನು ಕಡಿಮೆ ಮಾಡಿ ಮತ್ತಷ್ಟು ಆಗುವ ಮೂತ್ರಾಂಗ ಹಾನಿಯನ್ನು ತಡೆಯುತ್ತದೆ. ಜತೆಗೆ ದೇಹಕ್ಕೆ ಒಳ್ಳೆಯ ಆಹಾರ ಪೋಷಣೆಯನ್ನು ಮಾಡುತ್ತದೆ.

ಕಿಡ್ನಿಯ ಸಮಸ್ಯೆ ಇರುವವರು ಮುಖ್ಯವಾಗಿ ಶಕ್ತಿ(ಕ್ಯಾಲರಿ), ಪ್ರೊಟೀನ್, ದ್ರವಹಾರ, ಸೋಡಿಯಂ ಹಾಗೂ ಪೊಟ್ಯಾಶಿಯಂ ನಂತಹ ಪೋಷಕಾಂಶಗಳಿರುವ ಆಹಾರವನ್ನು ಮಾರ್ಪಾಡು ಮಾಡಬೇಕಾಗುತ್ತದೆ.

ಶಕ್ತಿ(ಕ್ಯಾಲರಿ) ಇರುವಂತಹ ಪದಾರ್ಥಗಳಾದ ಗ್ಲೂಕೋಸ್, ಸಕ್ಕರೆ, ಪಿಷ್ಟಪದಾರ್ಥಗಳು, ಕೊಬ್ಬು ಮತ್ತು ಎಣ್ಣೆ,(ಮಧುಮೇಹ ಇರುವವರು ಸಂಪೂರ್ಣವಾಗಿ ಸಿಹಿಯನ್ನು ನಿಲ್ಲಿಸಬೇಕು) ಮೊದಲಾದ ಪದಾರ್ಥಗಳನ್ನು ದೂರವಿಡಬೇಕು. ಏಕೆಂದರೆ ಶರೀರಕ್ಕೆ ಅಗತ್ಯವಾದ ಶಕ್ತಿಯನ್ನು ನೀಡಬೇಕಾದ ಕ್ಯಾಲರಿ ಅಂಶ ಶರೀರವನ್ನು ಸೇರಬೇಕಾಗುತ್ತದೆ. ಹೀಗೆ ಸೇರದೆ ಹೋಗಿದ್ದೇ ಆದರೆ ವಿವಿಧ ಅಂಗಾಂಶಗಳೇ ಒಡೆದು ಶಕ್ತಿಯನ್ನು ನೀಡುತ್ತವೆ. ಹೀಗೆ ಆಗಲು ಬಿಡಬಾರದು. ಏಕೆಂದರೆ ಅಂಗಾಂಶಗಳು ಮುಖ್ಯವಾಗಿ ಪ್ರೋಟೀನ್ಯುಕ್ತವಾಗಿದ್ದು ಅವು ಒಡೆದರೆ ಶರೀರದಲ್ಲಿ ಯೂರಿಯಾ ಮತ್ತು ಕ್ರಿಯಾಟಿನಿನ್ ಮಟ್ಟ ಹೆಚ್ಚಾಗಿ ಮೂತ್ರಾಂಗ ಕಾಯಿಲೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಪ್ರೊಟೀನ್ ಹೆಚ್ಚಿರುವ ಆಹಾರಗಳಾದ ಹಾಲು ಮತ್ತು ಹಾಲಿನ ಉತ್ಪನ್ನಗಳು, ಸೋಯಾ ಪದಾರ್ಥಗಳು, ಮಾಂಸಹಾರಗಳು, ಮೊಟ್ಟೆ ಮತ್ತು ಬೇಳೆಕಾಳುಗಳನ್ನು ನಿರ್ಬಂಧಿಸಬೇಕು. ಏಕೆಂದರೆ ಆಹಾರದಲ್ಲಿರುವ ಪ್ರೊಟೀನ್ ಜೀರ್ಣವಾಗಿ ಜೀವದ್ರವ್ಯವಾಗಿ ಶರೀರವನ್ನು ಸೇರುತ್ತದೆ. ಈ ಪ್ರೋಟೀನ್ ಜೀರ್ಣ ಪ್ರಕ್ರಿಯೆಯಲ್ಲಿ ಬಿಡುಗಡೆಯಾಗುವ ಕೊನೆಯ ಪದಾರ್ಥವೆಂದರೆ ಮೂತ್ರ ಪಿಂಡಗಳಿಂದ ವಿಸರ್ಜನೆಗೊಳ್ಳುವ ಯೂರಿಯಾ. ಮೂತ್ರಾಂಗ ಸಮಸ್ಯೆ ಇರುವವರಲ್ಲಿ ಮೂತ್ರಪಿಂಡಗಳು ಸಮರ್ಥವಾಗಿ ಕಾರ್ಯನಿರ್ವಹಿಸದೆ ಯೂರಿಯಾ ಮುಂತಾದ ಪದಾರ್ಥಗಳು ರಕ್ತದಲ್ಲಿ ಸಂಗ್ರಹಗೊಂಡು ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಪ್ರೋಟೀನ್ಯುಕ್ತ ಆಹಾರವನ್ನು ದೂರವಿಡಬೇಕಾಗಿರುವುದು ಡಯಾಲಿಸಿಸ್ ಒಳಗಾಗದೆ ಈಗಷ್ಟೆ ಮೂತ್ರಾಂಗದ ಸಮಸ್ಯೆ ಕಾಣಿಸುತ್ತಿರುವ ರೋಗಿಗಳು ಮಾತ್ರ.

ಇನ್ನು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ರೋಗಿಗಳು ಪ್ರೋಟೀನ್ಯುಕ್ತ ಆಹಾರವನ್ನು ಸೇವಿಸಬೇಕಾಗುತ್ತದೆ. ಏಕೆಂದರೆ ಡಯಾಲಿಸಸ್ ಸಮಯದಲ್ಲಿ ಹೆಚ್ಚು ಪ್ರೋಟೀನ್ ನಷ್ಟವಾಗುತ್ತದೆ.

ಸೇವಿಸುವ ಆಹಾರದಲ್ಲಿ ಸೋಡಿಯಂ ಹೆಚ್ಚಾದರೂ ಮೂತ್ರಾಂಗ ರೋಗವಿರುವ ರೋಗಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಉಪ್ಪು, ಅಡುಗೆ ಸೋಡಾ, ಚೀಸ್, ಎಲ್ಲಾ ಬಗೆಯ ಹಪ್ಪಳ, ಸಾಸ್, ಜಾಮ್, ಜೆಲ್ಲಿ, ಕೆಚಪ್ ಗಳು, ಸೂಪ್ ಕ್ಯೂಬ್ಸ್, ಚೈನೀಸ್ ಸಾಲ್ಟ್, ಒಣಗಿದ ಮೀನು, ಬೇಕಿಂಗ್ ಪೌಡರ್, ಕ್ಯಾನ್ ನಲ್ಲಿ ಬರುವ ಆಹಾರ ಪದಾರ್ಥಗಳು, ಉಪ್ಪು ಬೆರೆಸಿದ ಚಿಪ್ಸ್, ನಟ್ಸ್, ಬಿಸ್ಕತ್ ಗಳು, ಉಪ್ಪಿನ ಕಾಯಿ, ಮೃದುಪಾನೀಯಗಳು, ಬೋರ್ನವೀಟಾ, ಚಾಕಲೇಟ್, ಡ್ರೈಫ್ರೂಟ್ಸ್, ಪುಡ್ಡಿಂಗ್ ಮಿಕ್ಸ್ ಮೊದಲಾದವುಗಳನ್ನು ಸೇವಿಸಬಾರದು.

ಪೊಟ್ಯಾಶಿಯಂ ಅಂಶವಿರುವ ತರಕಾರಿಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲ ತರಕಾರಿ, ಬೇಳೆಯಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಆದ್ದರಿಂದ ಪೊಟ್ಯಾಶಿಯಂ ಅಂಶವನ್ನು ಪ್ರತ್ಯೇಕಿಸಿ ಸೇವಿಸಬೇಕಾಗುತ್ತದೆ. ವೈದ್ಯರು ನೀಡುವ ಸಲಹೆಯಂತೆ ಆಹಾರ ಸೇವನೆಯಲ್ಲಿ ನಿಗಾ ವಹಿಸಿದ್ದೇ ಆದಲ್ಲಿ ಮೂತ್ರಾಂಗ ರೋಗ ಕಾಣಿಸಿಕೊಂಡು ಬಳಲುತ್ತಿರುವವರು ನಿಯಂತ್ರಣಕ್ಕೆ ತಂದುಕೊಳ್ಳಲು ಸಾಧ್ಯವಿದೆ