ಕುಡಿಯುವ ನೀರು, ಸೇವಿಸುವ ಆಹಾರದತ್ತ ನಿಗಾವಿರಲಿ...

ಕುಡಿಯುವ ನೀರು, ಸೇವಿಸುವ ಆಹಾರದತ್ತ ನಿಗಾವಿರಲಿ...

LK   ¦    Feb 11, 2019 05:32:07 PM (IST)
ಕುಡಿಯುವ ನೀರು, ಸೇವಿಸುವ ಆಹಾರದತ್ತ ನಿಗಾವಿರಲಿ...

ಕುಡಿಯುವ ನೀರು ಶುದ್ಧವಾಗಿದೆಯೋ? ಆಹಾರವೂ ಶುಚಿಯಾಗಿದೆಯೋ ಎಂಬುದನ್ನು ಮನದಟ್ಟು ಮಾಡಿಕೊಂಡು ಸೇವಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಇನ್ನು ರಸ್ತೆಬದಿಯ ಆಹಾರ ಸೇವನೆಗೆ ಕಡಿವಾಣ ಹಾಕಿ ಶುದ್ಧೀಕರಿಸಿದ ನೀರನ್ನು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ಮನೆಗೆ ಸರಬರಾಜಾಗುವ ನೀರನ್ನು ನೇರವಾಗಿ ಸೇವಿಸುವುದನ್ನು ನಿಲ್ಲಿಸಿ ಕುದಿಸಿ ಆರಿಸಿ ಬಳಿಕ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಇದೆಲ್ಲ ಏಕೆ ಎಂಬ ಪ್ರಶ್ನೆಗಳು ಕಾಡಬಹುದು ಆದರೆ ಅದಕ್ಕೂ ಕಾರಣವಿದೆ. ಬೇಸಿಗೆ ಆರಂಭವಾಗಿದೆ. ಹೀಗಾಗಿ ಸಾಂಕ್ರಾಮಿಕ ರೋಗಗಳು ಸೇರಿದಂತೆ ಹಲವು ಕಾಯಿಲೆಗಳು ನಮ್ಮ ಮೇಲೆ ದಾಳಿ ಮಾಡಬಹುದು. ಅದರಲ್ಲೂ ಫ್ಲೋರೋಸಿಸ್ ಕಾಯಿಲೆ ಬಂದರೆ ನಮ್ಮ ಕಥೆ ಮುಗಿದಂತೆಯೇ. ಆದ್ದರಿಂದ ಅದು ಬರದಂತೆ ಮೊದಲೇ ನಾವು ಜಾಗರೂಕರಾಗಿರುವುದು ಒಳ್ಳೆಯದು.

ಫ್ಲೋರೊಸಿಸ್ ರೋಗವು ನೀರಿನಿಂದ ಮಾತ್ರವಲ್ಲದೆ, ನಾವು ಸೇವಿಸುವ ವಿವಿಧ ಬಗೆಯ ಆಹಾರ ಹಾಗೂ ಕಾರ್ಖಾನೆಗಳು ಉಗುಳುವ ತ್ಯಾಜ್ಯಗಳಿಂದ ಹೆಚ್ಚಾಗಿ ಹರಡುತ್ತದೆ. ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಜಾಸ್ತಿ ಇರುವ ಕಡೆ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದ ಮೂರು ಬಗೆಯ ಕಾಯಿಲೆ ಹರಡುವ ಲಕ್ಷಣ ಗೋಚರವಾಗುತ್ತದೆ. ಹಲ್ಲುಗಳು ಕಂದು ಬಣ್ಣಕ್ಕೆ ತಿರುಗಿ ಸಣ್ಣಸಣ್ಣರಂಧ್ರಗಳು ನಿರ್ಮಾಣವಾಗಬಹುದು. ಮೂಳೆ, ಕೀಲು ನೋವು ಹಾಗೂ ಜಡತ್ವ ಹೆಚ್ಚುವುದು. ಕೈಕಾಲುಗಳ ಊನತೆ ಕಾಣುವುದು ಪ್ರಮುಖ ಲಕ್ಷಣಗಳಾಗಿವೆ.

ಈ ಕಾಯಿಲೆ ವಾಸಿಮಾಡಲು ಸಾಧ್ಯವಾಗದ ಶಾಶ್ವತ ಕಾಯಿಲೆಯಾಗಿರುವುದರಿಂದ ಪ್ರತಿಯೊಬ್ಬರೂ ಇದರತ್ತ ಎಚ್ಚರ ವಹಿಸುವುದು ಅಗತ್ಯ. ಆದ್ದರರಿಂದ ಎಲ್ಲೆಂದರಲ್ಲಿ ತಿನ್ನುವುದು, ನೀರು ಶುದ್ಧವೇ ಎಂಬುದನ್ನು ಪರಿಶೀಲಿಸದೆ ಕುಡಿಯುವುದನ್ನು ಮಾಡಬಾರದು. ಆದಷ್ಟು ಶುದ್ಧ ನೀರನ್ನೇ ಸೇವಿಸುವುದು ಒಳ್ಳೆಯದು.

ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯಗಳು, ಮಲ ಮೂತ್ರಗಳು ಕೆಲವೊಮ್ಮೆ ನೀರಿನಲ್ಲಿ ಮಿಶ್ರವಾಗಿ ಸಾಂಕ್ರಾಮಿಕ ರೋಗದ ಕೀಟಾಣುಗಳು ನಮ್ಮ ದೇಹವನ್ನು ಸೇರಬಹುದು. ಅಥವಾ ಮೇಲ್ನೋಟಕ್ಕೆ ನೀರು ತಿಳಿಯಾಗಿರುವಂತೆ ಕಂಡುಬಂದರೂ ಅದರಲ್ಲಿರುವ ವೈರಸ್‍ಗಳು ನಮ್ಮ ದೇಹ ಸೇರಿ ಬಾಧಿಸಬಹುದು.

ಇಲ್ಲಿ ಕಾಯಿಲೆ ಬಂದ ಬಳಿಕ ಅದು ನಮಗೆ ಫ್ಲೋರೋಸಿಸ್ ಎಂಬುದು ಗೊತ್ತಾಗುವ ಹೊತ್ತಿಗೆ ಕೆಲವು ಸಮಯ ಹಿಡಿಯಬಹುದು.

ಆದ್ದರಿಂದ ಯಾವುದೇ ಕಾಯಿಲೆಯಿರಲಿ ಅದು ಕಾಣಿಸಿಕೊಂಡ ತಕ್ಷಣವೇ ವೈದ್ಯರ ಬಳಿಗೆ ತೆರಳಿ ಪರೀಕ್ಷೆ ಮಾಡಿ ತನಗೆ ಬಂದಿರುವ ಕಾಯಿಲೆ ಯಾವುದು ಎಂಬುದನ್ನು ಅರಿತುಕೊಳ್ಳುವುದು ಮುಖ್ಯ.ಫ್ಲೋರೋಸಿಸ್ ಕಾಯಿಲೆ ವಾಸಿಯಾಗದ ಕಾಯಿಲೆಯಾಗಿದ್ದು ನಿಯಂತ್ರಣ ಮಾಡಲಷ್ಟೆ ಸಾಧ್ಯವಿರುವುದರಿಂದ ಪ್ರತಿಯೊಬ್ಬರೂ ಇದರತ್ತ ಎಚ್ಚರ ವಹಿಸುವುದು ಅಗತ್ಯ. ಸಾರ್ವಜನಿಕರು ತಾವೇ ಸ್ವತಃ ತಮ್ಮ ಆರೋಗ್ಯ, ಆಹಾರ ಸೇವನೆ ವಿಧ, ಪರಿಸರ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ.

ಬೇಸಿಗೆಯಲ್ಲಿ ಕೇವಲ ಫ್ಲೋರೋಸಿಸ್ ಮಾತ್ರವಲ್ಲ ಜಾಂಡೀಸ್, ವಾಂತಿ ಬೇಧಿ ಸೇರಿದಂತೆ ಹಲವು ರೋಗಗಳು ಕಾಡಬಹುದು ಆದ್ದರಿಂದ ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರುವುದು ಒಳ್ಳೆಯದು.