ಬೇಸಿಗೆಯಲ್ಲಿ ಕಾಡುವ ಸನ್ ಸ್ಟ್ರೋಕ್!

ಬೇಸಿಗೆಯಲ್ಲಿ ಕಾಡುವ ಸನ್ ಸ್ಟ್ರೋಕ್!

LK   ¦    Apr 26, 2017 09:32:53 AM (IST)

ಈಗಾಗಲೇ ಒಂದಷ್ಟು ಮಳೆಯಾಗಿದ್ದರೂ ಸೂರ್ಯನ ಪ್ರಖರತೆ ಮಾತ್ರ ತಗ್ಗಿಲ್ಲ. ರಾತ್ರಿಯಲ್ಲಿ ಸೆಖೆಯಾದರೆ ಮಧ್ಯಾಹ್ನದ ಉರಿ ಬಿಸಿಲಿಗೆ ನಡೆದಾಡದ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ನಾಲ್ಕು ಹೆಜ್ಜೆ ಹಾಕಿದರೂ ಹತ್ತಾರು ಸಮಸ್ಯೆಗಳು ನಮ್ಮನ್ನು ಕಾಡುವುದಂತು ಸತ್ಯ.

ಬೇಸಿಗೆಯಲ್ಲಿ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಆರೋಗ್ಯದ ಸಮಸ್ಯೆ ಯಾವುದೆಂದರೆ ಅದು ಸನ್ ಸ್ಟ್ರೋಕ್(ಸೂರ್ಯ ಶಾಖಾಘಾತ). ಇದರ ಲಕ್ಷಣ ಬಾಯಾರಿಕೆ, ತಲೆನೋವು, ತಲೆತಿರುಗುವಿಕೆ, ಮಾಂಸ ಖಂಡಗಳ ಸೆಳೆತ, ಅತಿ ಹೆಚ್ಚಾಗಿ ಬೆವರುವುದು, ವಾಕರಿಕೆ ಅಥವಾ ವಾಂತಿ, ತೀವ್ರಗೊಂಡ ಹೃದಯ ಬಡಿತ, ಪ್ರಜ್ಞೆ ತಪ್ಪುವಿಕೆ ಮತ್ತು ಮೂರ್ಛೆ ರೋಗ ಬರುವುದಾಗಿದೆ.

ಬಿಸಿಲಿನ ತಾಪ ಹೆಚ್ಚಿದ್ದ ಸಮಯದಲ್ಲಿ ಹೊರಗೆ ಹೋಗುವವರು ಎಚ್ಚರ ವಹಿಸುವುದು ತುಂಬಾ ಅಗತ್ಯ. ಒಂದು ವೇಳೆ ಸನ್ ಸ್ಟ್ರೋಕ್ ನ ಲಕ್ಷಣಗಳು ಕಂಡು ಬಂದರೆ ಕೂಡಲೇ ಅಂಥವರನ್ನು ತಂಪಾದ ನೆರಳಿರುವ ಜಾಗಕ್ಕೆ ಕರೆದೊಯ್ದು, ಅವರ ಬಟ್ಟೆ, ಪಾದರಕ್ಷೆಗಳನ್ನು ಸಡಿಲಿಸಿ, ತೆಗೆಯಬೇಕು. ಗಾಳಿ ಹಾಕಬೇಕು. ಪೂರ್ಣ ಪ್ರಜ್ಞೆ ಸ್ಥಿತಿಯಲಿದ್ದರೆ ಕುಡಿಯಲು ನೀರು, ಓಆರ್ ಎಸ್, ನಿಂಬೆಹಣ್ಣಿನ ರಸ ಅಥವಾ ನೀರು ಮಜ್ಜಿಗೆಯನ್ನು ನೀಡಬೇಕು. ಈ ಸಂದರ್ಭ ಇತರೆ ಯಾವುದೇ ಮಾತ್ರೆ ಇನ್ನಿತರೆ ಔಷಧಿಯನ್ನು ನೀಡಬಾರದು. ಒದ್ದೆ ಬಟ್ಟೆಯಿಂದ ದೇಹವನ್ನು ನಿಧಾನವಾಗಿ ಒರೆಸಬೇಕು. ಒಮ್ಮೆಲೆ ಅತಿಯಾದ ತಂಪು ಮಾಡಬಾರದು. ಒಂದು ಪ್ರಜ್ಞೆ ಕಳೆದುಕೊಂಡರೆ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.
ಇನ್ನು ಬೇಸಿಗೆಯಲ್ಲಿ ಚರ್ಮ ಕೆಂಪಗಾಗುವುದು, ಬೆವರಿನ ಪ್ರಮಾಣ ಕಡಿಮೆಯಾಗಿ, ದೇಹದ ಉಷ್ಣತೆ ಜಾಸ್ತಿಯಾಗುವುದು, ದೀರ್ಘವಾದ ತೀವ್ರ ಉಸಿರಾಟವಿ ಮೊದಲಾದ  ಲಕ್ಷಣಗಳು ಕಂಡು ಬಂದರೆ ಅಂಥವರು ಉದಾಸೀನ ಮಾಡದೆ ಕೂಡಲೇ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಬೇಸಿಗೆಯಲ್ಲಿ ಕಂಡು ಬರುವ ಸನ್ ಸ್ಟ್ರೋಕ್ ಅನ್ನು ತಡೆಯಲು ಸಾಧ್ಯವಿದ್ದು ಮೊದಲೇ ಮುಂಜಾಗ್ರತೆ ವಹಿಸಿ ಒಂದಷ್ಟು ಕ್ರಮಗಳನ್ನು ನಾವು ಅಳವಡಿಸಿಕೊಳ್ಳುವುದು ಒಳ್ಳೆಯದು.

ಸಾಧ್ಯವಾದಷ್ಟು ಧಾರಾಳವಾಗಿ ಉಪ್ಪು ನೀರು ಸಕ್ಕರೆ ಮಿಶ್ರಿತ ನೀರನ್ನು ಕುಡಿಯಬೇಕು. ಎಳನೀರು, ನೀರು ಮಜ್ಜಿಗೆ, ನಿಂಬೆ ಹಣ್ಣಿನ ರಸ, ಓಆರ್ ಎಸ್ ಹಾಗೂ ಇತರೆ ಹಣ್ಣಿನ ರಸ, ಪಾನಕಗಳನ್ನು ಕುಡಿಯಬೇಕು. ಬರಿ ನೀರಿನ ಬದಲು ದೇಹಕ್ಕೆ ಶಕ್ತಿ ಒದಗಿಸುವ ಪಾನಕಗಳನ್ನು ಆಗಾಗ್ಗೆ ಸೇವಿಸುವುದು ಉತ್ತಮ ಬೆಳಿಗ್ಗೆ 11 ರಿಂದ 3 ತನಕ  ಹೊರಗಡೆ ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸುವುದು, ಅತಿ ವಯಸ್ಸಾದವರು, ಚಿಕ್ಕಮಕ್ಕಳು ಮತ್ತು ರೋಗಿಗಳು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಎಚ್ಚರ ವಹಿಸಿ ಸಾಧ್ಯವಾದಷ್ಟು ನೆರಳಲ್ಲಿರುವುದು ಸೂಕ್ತ.

ಬಿಸಿಲಿನಲ್ಲಿ ಪ್ರಯಾಣ ಮಾಡುವಾಗ ತಪ್ಪದೇ ಛತ್ರಿ ಅಥವಾ ಟೋಪಿ, ಟವಲ್ನ್ನು ತಲೆ ಮೇಲೆ ಧರಿಸಬೇಕು. ದೂರದ ಪ್ರಯಾಣ ಮಾಡುವಾಗ ತಪ್ಪದೇ ನೀರಿನ ಬಾಟಲ್ ಜೊತೆಗಿಟ್ಟುಕೊಳ್ಳಬೇಕು. ಮನೆಯಲ್ಲಿದ್ದಾಗ ಗಾಳಿ ಬೆಳಕು ಮನೆಯೊಳಗೆ ಬರುವಂತೆ ಕಿಟಿಕಿ ಬಾಗಿಲುಗಳನ್ನು ತೆಗೆದಿಡಬೇಕು. ದೇಹದಲ್ಲಿ ಸನ್ ಸ್ಟ್ರೋಕ್ ನ ಲಕ್ಷಣ ಕಾಣಿಸಿಕೊಂಡರೆ ಅಂಥವರು ಒಂದಷ್ಟು ಎಚ್ಚರವಹಿಸುವುದು ಅಗತ್ಯ. ಬಿಗಿಯಾದ ಗಾಢ ಬಣ್ಣದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು, ಬಿಸಿಲಿನಲ್ಲಿ ದೇಹದಂಡನೆಯ ಶ್ರಮದ ಕೆಲಸವನ್ನು ಮಾಡಬಾರದು, ಬಾಯಾರಿಕೆಯಾದಾಗಲೆಲ್ಲ ಕಡ್ಡಾಯವಾಗಿ ನೀರನ್ನು ಹಾಗೂ ಹಣ್ಣಿನ ರಸಗಳನ್ನು ಸೇವಿಸಬೇಕು. ಸೋಡಾ, ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ದೂರವಿಡಬೇಕು.

ಬೆವರನ್ನು ಒರೆಸಲು ಒರಟಾದ ಬಟ್ಟೆಯನ್ನು ಉಪಯೋಗಿಸದೆ, ಮೆದುವಾದ ಹತ್ತಿಬಟ್ಟೆಯನ್ನಿಟ್ಟುಕೊಳ್ಳಬೇಕು. ಕಾಫಿ, ಟೀ ಹಾಗೂ ಆಲ್ಕೋ ಹಾಲ್ ಅಥವಾ ಅತಿ ಸಕ್ಕರೆ ಅಂಶವುಳ್ಳ ಪಾನೀಯಗಳನ್ನು ಹೆಚ್ಚಾಗಿ ಸೇವಿಸಬಾರದು. ಬಿಸಿಯಾದ ಮಸಾಲೆಯುಕ್ತ ಆಹಾರ ಸೇವಿಸಬಾರದು, ಬಿಗಿಯಾದ ಗಾಳಿಯಾಡದ ಪಾದರಕ್ಷೆ ಅಥವಾ ಶೂಗಳನ್ನು ಧರಿಸದೆ ಎಚ್ಚರವಾಗಿರುವುದು ಒಳ್ಳೆಯದು

ಅಡುಗೆ ಮನೆ