ಚಳಿಗಾಲದಲ್ಲಿ ಮುಜುಗರ ತರುವ ಚರ್ಮದ ಬಿರುಕು...!

ಚಳಿಗಾಲದಲ್ಲಿ ಮುಜುಗರ ತರುವ ಚರ್ಮದ ಬಿರುಕು...!

B.M.Lavakumar   ¦    Feb 05, 2018 09:49:05 AM (IST)
ಚಳಿಗಾಲದಲ್ಲಿ ಮುಜುಗರ ತರುವ ಚರ್ಮದ ಬಿರುಕು...!

ಈ ಬಾರಿ ಸ್ವಲ್ಪ ಚಳಿ ಜಾಸ್ತಿಯಾಗಿಯೇ ಇದೆ. ಹೀಗಾಗಿ ಅದು ದೇಹದ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಕೆಲವರ ತುಟಿ, ಕಾಲಿನ ಹಿಮ್ಮಡಿ ಒಡೆಯುವುದು, ಚರ್ಮ ಸುಕ್ಕು ಗಟ್ಟುವುದು ಹೀಗೆ ಕೆಲವೊಂದು ತೊಂದರೆಗಳು ಕಾಣಿಸುತ್ತಿದೆ.

ಇದೊಂದು ರೀತಿಯಲ್ಲಿ ಮುಜುಗರವನ್ನುಂಟು ಮಾಡುತ್ತದೆ. ಹೀಗಾಗಿ ಬಹಳಷ್ಟು ಮಂದಿಗೆ ಚಳಿಗಾಲ ಎಂದರೆ ಆತಂಕ ಕಾಡುತ್ತದೆ. ಮುಖಕ್ಕೆ ಎಷ್ಟು ಅಲಂಕಾರ ಮಾಡಿಕೊಂಡರೂ ಚರ್ಮ ಬಿರುಕು ಬಿಟ್ಟು ಅಸಹ್ಯ ಎನಿಸುತ್ತಿದೆ. ಕೆಲವರು ಯಾರಾದರೂ ನೋಡಿ ಬಿಟ್ಟಾರು ಎಂದು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಚಳಿಗಾಲ ಬಂದಾಗ ಮೈಕೈ ಬಿರುಕು ಬಿಡುವುದು ಸಾಮಾನ್ಯ. ಆದರೆ ಕೆಲವರ ದೇಹಕ್ಕೆ ಇದನ್ನೆಲ್ಲ ಸಹಿಸಿಕೊಳ್ಳುವ ಶಕ್ತಿ ಇರುವುದರಿಂದ ತಡೆದುಕೊಂಡರೆ, ಮತ್ತೆ ಕೆಲವರು ಚರ್ಮದ ಬಗ್ಗೆ ಎಚ್ಚರ ವಹಿಸಿ ವೈದ್ಯರು ನೀಡುವ ಕ್ರಮಗಳನ್ನು ಅನುಸರಿಸಿ ಚರ್ಮದ ರಕ್ಷಣೆ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ.

ಚರ್ಮ ಚಳಿಗೆ ಒಡೆಯದಂತೆ ರಕ್ಷಿಸುವ ಸೌಂದರ್ಯವರ್ಧಕ ಉತ್ಪನ್ನಗಳು ಮಾರುಕಟ್ಟೆಗೆ ಬಂದಿದ್ದರೂ ಅವು ಚರ್ಮದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದೆಯೂ ಇರಬಹುದು. ಇದಕ್ಕೆ ನಮ್ಮ ನಿತ್ಯದ ಆಹಾರ ಸೇವನೆಯ ಕ್ರಮವೂ ಕಾರಣ ಇರಬಹುದು. ಹೀಗಾಗಿ ಮೊದಲಿಗೆ ನಾವು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಳಿಕ ಚರ್ಮದ ಕಡೆಗೆ ಕಾಳಜಿವಹಿಸಬೇಕು. ನಾವು ಏನು ಆಹಾರ ಸೇವಿಸುತ್ತೇವೆಯೋ ಅದು ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ಹಸಿ ತರಕಾರಿ, ವಿಟಮಿನ್ ಸಿ ಇರುವ ಹಸಿರು ಎಲೆ  ತರಕಾರಿಯನ್ನು ಆಹಾರದಲ್ಲಿ   ಉಪಯೋಗಿಸಬೇಕು. ಜಂಕ್ ಆಹಾರ, ಕಾಫಿ ಸೋಡಾ ಸೇವನೆ  ಕಡಿಮೆ ಮಾಡಬೇಕು. ಹೆಚ್ಚಿನ ನೀರನ್ನು ಕುಡಿಯಬೇಕು. ಅದರಲ್ಲೂ ಉಗುರು ಬೆಚ್ಚಗಿನ ಬಿಸಿ ನೀರನ್ನು ಪ್ರತಿದಿನ 8 ಲೋಟದಷ್ಟು ಕುಡಿದರೆ ಉತ್ತಮ.

ನಾವು ಬಳಸುವ ಸೋಪು ಸೌಂದರ್ಯ ವರ್ಧಕಗಳಿಂದ ಆರೋಗ್ಯಕರ ತ್ವಚೆ ಕಾಪಾಡಬಹುದಾದರೂ ಕೆಲವೊಂದು ಕ್ರಮಗಳನ್ನು ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುದು ಅಗತ್ಯ.

ಕೆಲವರದು ಒಣ ಚರ್ಮವಿರುತ್ತದೆ. ಅಂಥವರು ಹೆಚ್ಚಾಗಿ ಮುಖ ತೊಳೆಯಬಾರದು. ಮಾರುಕಟ್ಟೆಯಲ್ಲಿ ಸಿಗುವ ಉತ್ತಮ ಗುಣಮಟ್ಟದ ಮಾಯಿಶ್ಚರೈಸಿಂಗ್ ಕ್ರೀಮ್ ನ್ನು ಬಳಸಬೇಕು  ಹೀಗೆ ಮಾಡುವುದರಿಂದ ತ್ವಚೆಯ ಮೇಲಿರುವ ಕೊಬ್ಬಿನ ಪದರವನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಅಲ್ಲದೆ ತೇವಾಂಶ ಹಿಡಿದಿಡಲು ಸಾಧ್ಯವಾಗುತ್ತದೆ.

ಮಧ್ಯಾಹ್ನದ ವೇಳೆಯಲ್ಲಿ ಹೊರ ಹೋದಾಗ ಸೂರ್ಯನ ಬಿಸಿಲು ಚರ್ಮದ ಮೇಲೆ ಪರಿಣಾಮ ಬೀರಬಹುದು. ಇದರಿಂದ ರಕ್ಷಣೆ ಪಡೆಯಲು ಸನ್ ಸ್ಕ್ರೀನ್ ಬಳಸಬಹುದು. ಚಳಿಗಾಲದಲ್ಲಿ ತುಂಬಾ ಬಿಸಿ ಇರುವ ನೀರು ಹಿತವೆನಿಸಿದರೂ  ಅದು ಚರ್ಮಕ್ಕೆ ಒಳ್ಳೆಯದಲ್ಲ ಎಂಬುದನ್ನು ಮರೆಯಬಾರದು. ಆದ್ದರಿಂದ ಹೆಚ್ಚು ಬಿಸಿಯಾದ ನೀರನ್ನು ಬಳಸದೆ ಕಡಿಮೆ ಬಿಸಿ ಇರುವ ನೀರನ್ನು ಬಳಸಬೇಕು.

ಸ್ನಾನದ ಮೊದಲು ಕೊಬ್ಬರಿ ಎಣ್ಣೆ ಲೇಪಿಸಿ ಸ್ನಾನ ಮಾಡಿದರೆ ಮೈ ಒಡೆಯುವುದು ಕಡಿಮೆಯಾಗಲು ಸಾಧ್ಯವಾಗುತ್ತದೆ.  ಎಣ್ಣೆಯ ಜೊತೆಗೆ ಬೇವಿನ ಪುಡಿ ಅಥವಾ ಅರಿಶಿನ  ಸೇರಿಸಿ ಹಚ್ಚಿದರೆ ಚರ್ಮದ ನವೆಯನ್ನು ತಡೆಗಟ್ಟಬಹುದು. ಸ್ನಾನದ ನಂತರ ಕ್ರೀಮ್ ಇರುವ ಮಾಯಿಶ್ಚರೈಸಿಂಗ್  ಉಪಯೋಗಿಸಬೇಕು. ತ್ವಚೆಗೆ  ಬರೀ ಲೋಶನ್ ಹಚ್ಚಿದರೆ ಸಾಕಾಗದು. ವಾಲ್ನಟ್  ಕೆನೋಲಾ ಎಣ್ಣೆ, ಆಗಸೇ ಬೀಜವನ್ನು ಹೆಚ್ಚಾಗಿ ಉಪಯೋಗಿಸಬೇಕು. ಹದವಾದ ಬಿಸಿ ನೀರು ಸ್ನಾನ  ಒಳ್ಳೆಯದು. ಆದರೆ ಬಿಸಿ ನೀರಿಗೆ ಕೊಬ್ಬರಿ ಎಣ್ಣೆ ಒಂದು ತೊಟ್ಟು ಹಾಕಿ ಉಪಯೋಗಿಸಬಹುದು.

ಹಿಮ್ಮಡಿ ಒಡೆಯುವುದನ್ನು ತಡೆಯಲು ಬಿಸಿ ನೀರಿಗೆ ಲ್ಯಾವೆಂಡರ್ ತೈಲದ ಎರಡು ಹನಿ  ಸೇರಿಸಿ ಪಾದವನ್ನು ಹತ್ತು ನಿಮಿಷ ಮುಳುಗಿಸಿಡುವುದು. ನಂತರ ಚೆನ್ನಾಗಿ ಉಜ್ಜಿ ತೊಳೆದು ನಿರ್ಜೀವ ಚರ್ಮ ತೆಗೆದು  ಮೆತ್ತನೆಯ ಬಟ್ಟೆಯಿಂದ ಪಾದ ಒರೆಸಿಕೊಳ್ಳಬೇಕು. ವ್ಯಾಸಲಿನ್  ಹಚ್ಚಿ ಸಾಕ್ಸ್ ಧರಿಸಿ ಓಡಾಡುವುದರಿಂದಲೂ ಹಿಮ್ಮಡಿ ಮತ್ತು ಪಾದದ ಬಿರುಕು ತಡೆಯಬಹುದು.

ವಾತಾವರಣ ಬದಲಾದಾಗಲೆಲ್ಲ ಕೆಲವೊಂದು ಪರಿಣಾಮಗಳು ನಮ್ಮ ದೇಹದ ಮೇಲೆ ಆಗುತ್ತಲೇ ಇರುತ್ತದೆ. ಆದರೆ ಅದೆಲ್ಲವನ್ನು ನಾವು ಒಂದಷ್ಟು ಕ್ರಮಗಳ ಮೂಲಕ ಎದುರಿಸಲು ಸಿದ್ಧರಾಗಬೇಕಾಗಿದೆ.