ಆರೋಗ್ಯಕರ ವಾತಾವರಣವಷ್ಟೆ ಆರೋಗ್ಯ ನೀಡಬಲ್ಲದು!

ಆರೋಗ್ಯಕರ ವಾತಾವರಣವಷ್ಟೆ ಆರೋಗ್ಯ ನೀಡಬಲ್ಲದು!

LK   ¦    Jan 11, 2019 11:24:13 AM (IST)
ಆರೋಗ್ಯಕರ ವಾತಾವರಣವಷ್ಟೆ ಆರೋಗ್ಯ ನೀಡಬಲ್ಲದು!

ಬಹಳಷ್ಟು ಸಾರಿ ನಾವು ಅನುಭವಿಸುವ ಆರೋಗ್ಯದ ಸಮಸ್ಯೆಗೆ ನಮ್ಮ ಮನೆ ಮತ್ತು ಮನೆಯ ಸುತ್ತಲಿನ ವಾತಾವರಣವೇ ಕಾರಣವಾಗಿ ಬಿಡುತ್ತದೆ. ಇದು ನಮ್ಮ ಅರಿವಿಗೆ ಬರುವುದೇ ಇಲ್ಲ. ನಾವೆಲ್ಲವರೂ ಸ್ವಚ್ಛತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ಒಂದು ಸ್ವಚ್ಛತಾ ವಾತಾವರಣವನ್ನು ನಮ್ಮ ಮನೆ, ಮನ ಮತ್ತು ಮನೆಯಿಂದ ಹೊರಗೆ ನಿರ್ಮಿಸಿಕೊಳ್ಳುವಲ್ಲಿ ವಿಫಲವಾಗಿ ಬಿಡುತ್ತೇವೆ. ಹೀಗಾಗಿಯೇ ಹಲವು ಆರೋಗ್ಯದ ಸಮಸ್ಯೆಗಳನ್ನು ತಂದುಕೊಳ್ಳುತ್ತೇವೆ. 

ನಾವು ಸುಂದರವಾಗಿ ಮನೆ ಕಟ್ಟಿಸಿ ಅದನ್ನು ಸ್ವಚ್ಛವಾಗಿಡದೆ ಹೋದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ವೇಳೆ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ಸುತ್ತಲಿನ ವಾತಾವರಣ ಸ್ವಚ್ಛವಾಗಿಲ್ಲದೆ ಹೋದರೂ ಪ್ರಯೋಜನವಿಲ್ಲ. ಇಲ್ಲಿ ನಾವೆಲ್ಲರೂ ಆರೋಗ್ಯವಂತರಾಗಿ ಬದುಕಬೇಕೆಂದು ಬಯಸುತ್ತೇವೆ. ಆದರೆ ಕೆಲವೊಮ್ಮೆ ನಮಗೆ ಅರಿವಿಲ್ಲದಂತೆ ಕಾಯಿಲೆಗಳು ಬಂದು ಅಡರಿಕೊಳ್ಳುತ್ತವೆ. ಇದಕ್ಕೆ ಕಾರಣ ಸ್ವಚ್ಛತೆಯ ಕೊರತೆ ಎಂದರೆ ತಪ್ಪಾಗಲಾರದು. 

ಮನೆ ಹೇಗೆಯೇ ಇರಲಿ ಆ ಮನೆಯಲ್ಲಿ ಒಂದು ಒಳ್ಳೆಯ ವಾತಾವರಣ ನಿರ್ಮಿಸಿಕೊಳ್ಳುವುದನ್ನು ನಾವು ಕಲಿಯಬೇಕು. ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಏಕೆಂದರೆ ಸ್ವಚ್ಛತೆಗೆ ಆದ್ಯತೆ ನೀಡದೆ ಹೋದರೆ ಏನು ಮಾಡಿಯೂ ಪ್ರಯೋಜನವಾಗಲಾರದು. ಎಲ್ಲರಿಗೂ ಮನೆ ಎಂಬುದು ಮುಖ್ಯ. ನಾವು ಎಲ್ಲಿಗೆ ಹೋಗಿ ಬಂದರೂ ಮನೆ ತಲುಪಿದ ತಕ್ಷಣ ಹಗುರವಾಗುತ್ತೇವೆ. ಇನ್ನು ಮನೆ ಅರಮನೆಯಾಗಿದ್ದು, ಸ್ವಚ್ಛವೂ ಆಗಿದ್ದು, ಗಾಳಿ ಬೆಳಕು ಯಾವುದಕ್ಕೂ ಕೊರತೆಯಿಲ್ಲದೆ ಎಲ್ಲವೂ ಇದೆ ಎಂಬ ವಾತಾವರಣವಿದ್ದರೂ ಮನೆಗಳಲ್ಲಿರುವ ಮನಸ್ಸುಗಳು ಹೊಂದಾಣಿಕೆಯಾಗದೆ ಹೋದರೆ ಅದರಿಂದಲೂ ಪ್ರಯೋಜನವಿಲ್ಲ. ಮತ್ತು ಎಲ್ಲರೂ ಮಾನಸಿಕವಾಗಿ ನೆಮ್ಮದಿಯಾಗಿರಲು ಸಾಧ್ಯವಿಲ್ಲ. 

ಮನುಷ್ಯ ಕುಟುಂಬ ಜೀವಿಯಾಗಿಯೇ ಬೆಳೆದು ಬಂದಿದ್ದಾನೆ. ಒಂದು ಮನೆಯಲ್ಲಿ ಎಲ್ಲರೊಂದಿಗೆ ಬೆರೆತು ಬದುಕಿ ಬಂದಿದ್ದು, ಇತ್ತೀಚೆಗೆ ಅಂತಹ ಬದುಕು ಕ್ಷೀಣವಾಗುತ್ತಿದೆ. ಹಲವು ಕಾರಣಗಳಿಂದಾಗಿ ಮನೆಯಿಂದ ಹೊರಗೆ ಬದುಕಬೇಕಾದ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಹೊರಗೆ ಹೋದವರು ತಮ್ಮದೆ ಆದ ಸಂಸಾರ ಆರಂಭಿಸುತ್ತಾ ಗಂಡ ಹೆಂಡತಿ ಮಗುವಿನ ಕುಟುಂಬವಾಗಿ ಬಂದು ನಿಂತಿದೆ. ಇಲ್ಲಿ ಇಬ್ಬರೂ ಹೊರಗೆ ಹೋಗಿ ಕೆಲಸ ಮಾಡುವವರಾದರೆ ಅವರು ಹಣವನ್ನು ಎಷ್ಟೇ ಸಂಪಾದಿಸಿದರೂ ಅವರ ಸಮಸ್ಯೆಗಳು ಕೂಡ ಬೆಟ್ಟದಷ್ಟಿರುತ್ತದೆ. ಮಾನಸಿಕವಾಗಿಯೂ ಒತ್ತಡಗಳು ಇವರನ್ನು ಘಾಸಿಗೊಳಿಸುತ್ತಿರುತ್ತದೆ. ಇವು ಒಂದು ರೀತಿಯಲ್ಲಿ ಹೇಳಿಕೊಳ್ಳಲಾಗದ ಬೇರೆಯವರಿಂದಲೂ ಮಾಡಿಸಲಾಗದ ಮತ್ತು ತಾವೇ ಮಾಡಬೇಕಾದವುಗಳಾಗಿವೆ. ಇಲ್ಲಿ ಇಬ್ಬರು ಒಬ್ಬರನ್ನರಿತು ಬದುಕಿದರೆ ಮಾತ್ರ ಸುಖ ಮತ್ತು ನೆಮ್ಮದಿಯನ್ನು ತಂದುಕೊಳ್ಳಲು ಸಾಧ್ಯವಾಗುತ್ತದೆ. 

ಇನ್ನು ಒಂದು ಕುಟುಂಬದಲ್ಲಿದ್ದಾಗ ಯಾರಿಗೆ ಯಾವಾಗ ಬೇಕಾದರೂ ಆರೋಗ್ಯದ ಸಮಸ್ಯೆಗಳು ಅಥವಾ ಇನ್ನಿತರ ಸಮಸ್ಯೆಗಳು ಕಾಡಬಹುದು. ಅಂತಹ ಸಂದರ್ಭದಲ್ಲಿ ಧೈರ್ಯದಿಂದ ಎದುರಿಸುವ ಛಲವನ್ನು ಬೆಳೆಯಿಸಿಕೊಳ್ಳಬೇಕು. ಇಲ್ಲದೆ ಹೋದರೆ ಒಬ್ಬರಷ್ಟೆ ಕಾಯಿಲೆಯಿಂದ ಬಳಲಿದರೆ ಉಳಿದವರು ಹೆದರಿ ಇನ್ಯಾವುದೋ ಸಮಸ್ಯೆಗೆ ದಾರಿ ಮಾಡಿಕೊಡಬಹುದು. ಆದ್ದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ನಾವು ಹೆಚ್ಚಿನ ಗಮನನೀಡಬೇಕಾಗುತ್ತದೆ. ಎಲ್ಲವನ್ನು ಸಮಾನಾಗಿ ಸ್ವೀಕರಿಸುವ ಧೈರ್ಯ ಹೊಂದಿದಾಗ  ಮಾತ್ರ ಸುಖ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. 

ಬಹಳಷ್ಟು ಕಾಯಿಲೆಗಳು ಉಲ್ಭಣವಾಗಲು ನಾವು ಅದಕ್ಕೆ ಭಯಪಡುವುದೇ ಆಗಿದೆ. ಭಯಪಡದೆ ಅದನ್ನು ಎದುರಿಸುವ ಶಕ್ತಿಯನ್ನು ನಾವು ಬೆಳೆಸಿಕೊಂಡಾಗಲಷ್ಟೆ ಎಲ್ಲವನ್ನು ಜಯಿಸಲು ಸಾಧ್ಯವಾಗುತ್ತದೆ.