ಜ್ಞಾನ- ಆರೋಗ್ಯ ವೃದ್ಧಿಯಲ್ಲಿ ಒಂದೆಲಗ ಪಾತ್ರ ಅಪಾರ

ಜ್ಞಾನ- ಆರೋಗ್ಯ ವೃದ್ಧಿಯಲ್ಲಿ ಒಂದೆಲಗ ಪಾತ್ರ ಅಪಾರ

LK   ¦    Dec 26, 2017 04:01:12 PM (IST)
ಜ್ಞಾನ- ಆರೋಗ್ಯ ವೃದ್ಧಿಯಲ್ಲಿ ಒಂದೆಲಗ ಪಾತ್ರ ಅಪಾರ

ಹಿಂದಿನ ಕಾಲದವರು ತಮ್ಮ ಸುತ್ತ ಮುತ್ತ ಇರುವ ಜೌಷಧಿಯ ಗಿಡಗಳನ್ನು ದೈನಂದಿನ ಜೀವನದಲ್ಲಿ ಬಳಸಿ ಆರೋಗ್ಯವನ್ನು ಕಾಪಾಡುತ್ತಾ ಬಂದಿರುವುದನ್ನು ನಾವು ಕಾಣಬಹುದು. ಆಗಿನ ಕಾಲದ ಜೌಷಧಿಯ ಸಸ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಒಂದೆಲಗ ಇಂದು ಆರೋಗ್ಯವನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿದೆ. 

ಒಂದೆಲಗ ಎನ್ನುವುದು ಅಪರಿಚಿತ ಸಸ್ಯವೇನಲ್ಲ. ಈ ಸಸ್ಯಗಳು ಮಲೆನಾಡಿನ ಗದ್ದೆಯ ಬದುಗಳಲ್ಲಿ, ಬಯಲಿನಲ್ಲಿ ಹೀಗೆ ಎಲ್ಲೆಂದರಲ್ಲಿ ನೀರಿನಾಸರೆಯಿರುವ ಸ್ಥಳಗಳಲ್ಲಿ ಹರಡಿ ಬೆಳೆಯುತ್ತದೆ. ಪಟ್ಟಣಗಳಲ್ಲಿ ಇತರೆ ಸೊಪ್ಪುಗಳೊಂದಿಗೆ ಒಂದೆಲಗವನ್ನು ಮಾರಾಟ ಮಾಡುವುದನ್ನು ನಾವು ಕಾಣಬಹುದಾಗಿದೆ.

ಉರುಟು ಎಲೆಗಳನ್ನೊಳಗೊಂಡ ಗೊಂಚಲು, ಗಂಟು ಬಳ್ಳಿಗಳಾಗಿ ನೆಲದಲ್ಲಿ ಹರಡಿಕೊಂಡು ಬೆಳೆಯುವ ಇದು ಹುಲ್ಲು ವರ್ಗಕ್ಕೆ ಸೇರಿದೆ ಎಂದು ಹೇಳಲಾಗಿದೆ. ಈ ಗಿಡವನ್ನು ಹಲವರು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ತಿಮರೆ, ಒಂದೆಲಗ, ಸರಸ್ವತಿ ಎಲೆ, ವಲ್ಲಾಡಿ, ಏಕಪಾನಿ, ನುಂಡೂಕ, ಪರ್ಣಿ, ಉರಗೆ, ಬ್ರಾಹ್ಮಿ ಮುಂತಾದವುಗಳು ಇದಕ್ಕಿರುವ ಹೆಸರುಗಳಾಗಿವೆ.

ಒಂದೆಲಗವು ಬುದ್ದಿ ವರ್ಧನಕ್ಕೆ ಅತ್ಯಮೂಲ್ಯ ಗಿಡಮೂಲಿಕೆಯಾದುದರಿಂದ ಜ್ಞಾನದ ಅಧಿದೇವತೆ ಸರಸ್ವತಿಯ ಹೆಸರಾದ ಬ್ರಾಹ್ಮಿ ಎಂಬ ಹೆಸರು ಬಂದಿದೆ. ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿದ್ದರೂ ಹಳ್ಳಿಯಲ್ಲಿನ ಜನರ ನಿತ್ಯದ ಪದಾರ್ಥಗಳಲ್ಲಿ ತರಕಾರಿಯಾಗಿ ಬಳಕೆಯಾಗುತ್ತಿರುವುದು ಕಂಡು ಬರುತ್ತದೆ. ಇದು ಹಲವು ರೋಗಗಳಿಗೆ ಜೌಷಧಿಯು ಎಂದರೆ ಅಚ್ಚರಿಯಾಗದಿರದು.

ಮಾನವನಲ್ಲಿ ಮುಖ್ಯವಾಗಿ ಮೆದುಳಿನ ವಿಕಾರಕ್ಕೆ ಸಂಬಂಧಿಸಿದಂತಹ ರೋಗಗಳಾದ ಮೂರ್ಛೆ, ಮನಸ್ಸಿನ ಅಸ್ಥಿರತೆ, ಸ್ಮರಣ ಶಕ್ತಿಯ ನಾಶ ಹಾಗೂ ಮಾನಸಿಕ ಮುಂತಾದ ರೋಗಗಳನ್ನು ಗುಣಪಡಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಇದರ ಎಲೆಯಲ್ಲಿ ಒಂದು ರೀತಿಯ ಎಣ್ಣೆಯಂತಹ ಸತ್ವವಿರುವುದರಿಂದ ಎಲೆಯನ್ನು ಬಿಸಿಲಿನಲ್ಲಿ ಒಣಗಿಸದೆ ನೆರಳಿನಲ್ಲಿಯೇ ಒಣಗಿಸಿ(ಬಿಸಿಲಿನಲ್ಲಿ ಒಣಗಿಸಿದ್ದೇ ಆದರೆ ಶಾಖಕ್ಕೆ ಎಲೆಯಲ್ಲಿನ ಎಣ್ಣೆಯಂತಹ ಸತ್ವವು ಆರಿಹೋಗುವುದು)ನಂತರ ಕುಟ್ಟಿ ಪುಡಿಮಾಡಿ ಚೂರ್ಣ ರೂಪದಲ್ಲಿ ಉಪಯೋಗಿಸಬೇಕು. ಹೀಗೆ ಉಪಯೋಗಿಸಿದ್ದೇ ಆದಲ್ಲಿ ದಮ್ಮು, ಕಫ ಮುಂತಾದ ಕಾಯಿಲೆಗಳು ವಾಸಿಯಾಗುವುವು. ಮೇಹದ ಹುಣ್ಣು, ಗಂಡಮಾಲೆ, ಕುಷ್ಠರೋಗಗಳ ಮೇಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ರಾತ್ರಿ ವೇಳೆ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ನೀರಿನೊಳಗೆ ಎಲೆಯನ್ನು ಅದ್ದಿ ಮುಂಜಾನೆ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಸ್ವರವನ್ನು ಸುಗಮಗೊಳಿಸುವಲ್ಲಿಯೂ ಇದು ಮಹತ್ವದ ಪಾತ್ರವಹಿಸುತ್ತದೆ.

ಮಕ್ಕಳ ಜ್ವರಕ್ಕೂ ಸಹ ಇದು ಔಷಧಿಯಾಗಿದೆ. ಪೆಟ್ಟು ತಾಗಿದ ಜಾಗದಲ್ಲಿ ಎಲೆಗಳನ್ನಿಟ್ಟರೆ ಉರಿಯಾಗದಂತೆ ತಡೆಯುತ್ತದೆ. ಜೇನಿಗೆ ಸಮ ಪ್ರಮಾಣದಲ್ಲಿ ರಸ ಸೇರಿಸಿ ದಿನಿತ್ಯ ಉಪಯೋಗಿಸಿದ್ದೇ ಆದರೆ ಮೂರ್ಛೆ ರೋಗ ವಾಸಿಯಾಗುತ್ತದೆ ಎಂದು ಹೇಳಲಾಗಿದೆ.

ಸಿದ್ಧಗೊಳಿಸಿದ ಸಾರಸ್ವತ ಚೂರ್ಣದ ಸೇವನೆಯಿಂದ ಬುದ್ಧಿಶಕ್ತಿ ಹಾಗೂ ಸ್ಮರಣ ಶಕ್ತಿಗಳು ವೃದ್ಧಿಯಾಗುತ್ತದೆ. ಒಂದೆಲಗದಲ್ಲಿ ಚರ್ಮ, ಕೂದಲು, ಉಗುರುಗಳನ್ನು ಬೆಳೆಸುವ ಶಕ್ತಿಯಿರುವುದಾಗಿ ಪ್ರಾಣಿಗಳ ಮೇಲೆ ನಡೆಸಿದ ಪರೀಕ್ಷೆಗಳಿಂದ ತಿಳಿದು ಬಂದಿದೆ. ಕಹಿ ವಗರು, ಗುಣಗಳು ಹೇರಳವಾಗಿ ಇರುವುದರಿಂದ ಅಗ್ನಿವರ್ಧಕವೂ, ಕ್ರಿಮಿನಾಶಕವೂ ಆಗಿದೆ. ಉಪ್ಪು ಬೆಣ್ಣೆಯೊಂದಿಗೆ ಅರೆದು ಗಾಯಗಳ ಮೇಲೆ ಲೇಪಿಸಿದ್ದಲ್ಲಿ ಗಾಯ ಶೀಘ್ರವೇ ಗುಣಮುಖವಾಗುವುದು.

ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುವ ಒಂದೆಲಗವನ್ನು ಮಕ್ಕಳಿಗೆ ನೀಡುವುದರಿಂದ ಹಲವು ಉಪಯೋಗವಂತು ಇದ್ದೇ ಇರುತ್ತದೆ