ಮೊಡವೆ ಮುಖದ ಸೌಂದರ್ಯಕ್ಕೆ ಕಪ್ಪು ಚುಕ್ಕೆ

ಮೊಡವೆ ಮುಖದ ಸೌಂದರ್ಯಕ್ಕೆ ಕಪ್ಪು ಚುಕ್ಕೆ

LK   ¦    Jun 25, 2018 12:15:55 PM (IST)
ಮೊಡವೆ ಮುಖದ ಸೌಂದರ್ಯಕ್ಕೆ ಕಪ್ಪು ಚುಕ್ಕೆ

ಕೆಲವರು ಆಗಾಗ್ಗೆ ಮುಖದ ಮೇಲಿರುವ ಮೊಡವೆಗಳನ್ನು ಚಿವುಟುತಿರುತ್ತಾರೆ. ಇಲ್ಲವೆ ಉಗುರಿನಿಂದ ಕೆರೆಯುತ್ತಿರುತ್ತಾರೆ. ಒಟ್ಟಿನಲ್ಲಿ ಹೆಚ್ಚಿನವರ ಕೈ ಮೊಡವೆಗಳ ಮೇಲೆಯೇ ಇರುತ್ತದೆ. ಇದು ಒಳ್ಳೆಯ ಅಭ್ಯಾಸವಲ್ಲ. ಮೊಡವೆಗಳನ್ನು ಚಿವುಟದೆ ಅದರ ಪಾಡಿಗೆ ಬಿಡದೆ ಅದನ್ನು ಮುಟ್ಟುತ್ತಲೇ ಇರುತ್ತೇವೆ. ಇದು ಕೆಲವೊಮ್ಮೆ ಅಭ್ಯಾಸವಾಗಿ ಬಿಡುತ್ತದೆ. ಕೆಲಸವಿಲ್ಲದೆ ಬಿಡುವು ಇದ್ದಾಗಲೆಲ್ಲ ಅದರತ್ತಲೇ ನಮ್ಮ ಗಮನಹೋಗುತ್ತದೆ.

ಬಹಳಷ್ಟು ಬಾರಿ ಮೊಡವೆಗಳನ್ನು ಉಗುರಿನಿಂದ ಕೆರೆಯುವುದು, ಚಿವುಟುವುದು, ಹಿಸುಕುವುದು ಹೀಗೆ ಮಾಡುವುದರಿಂದ ಅದು ಉಲ್ಭಣಗೊಂಡು ಕಲೆಯಾಗಿ ಮುಖದ ಮೇಲೆ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮೊಡವೆಗಳ ಮೇಲೆ ಕೈಯ್ಯಾಡಿಸುವ ಅಭ್ಯಾಸವನ್ನು ತ್ಯಜಿಸಿದಷ್ಟು ಒಳ್ಳೆಯದು.

ಸಾಮಾನ್ಯವಾಗಿ ಹದಿಹರೆಯದಲ್ಲಿ ಮೊಡವೆಗಳ ಹಾವಳಿ ಜಾಸ್ತಿ. ಈ ಮೊಡವೆಗಳು ಕೂಡ ಮನುಷ್ಯನ ದೇಹ ಮತ್ತು ಆತನಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಹೀಗೆ ಎಲ್ಲವನ್ನು ಅವಲಂಭಿಸಿರುತ್ತದೆ. ಕೆಲವರಲ್ಲಿ ಚಿಕ್ಕದಾಗಿ ಹರಡಿಕೊಂಡಿದ್ದರೆ ಮತ್ತೆ ಕೆಲವರಲ್ಲಿ ಕುರುವಿನಂತೆ ದಪ್ಪದಾಗಿಯೂ ಮೂಡುತ್ತದೆ. ಹದಿಹರೆಯದವರ ಶರೀರದಲ್ಲಿ ಟೆಸ್ಪೊಸ್ಟಿರೋನ್ ಎಂಬ ಹಾರ್ಮೋನ್ ಹೆಚ್ಚಾಗಿ ಜಿಡ್ಡಿನಾಂಶವೂ ಉತ್ಪತ್ತಿಯಾಗುತ್ತದೆ. ಇದರಿಂದ ಚರ್ಮದ ಬ್ಯಾಕ್ಟೀರಿಯಾ ಹೆಚ್ಚಾಗಿ ಮುಖದ ಮೇಲೆ ಮೊಡವೆಗಳು ಮೂಡುತ್ತವೆ. ಇನ್ನು ಸತ್ತ ಚರ್ಮದ ಜೀವಕೋಶಗಳು ಕೂದಲಿನ ರಂಧ್ರವನ್ನು ಆವರಿಸಿ ಅಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವುದರಿಂದಲೂ ಮೊಡವೆಗಳು ಉದ್ಭವವಾಗಲು ಕಾರಣವಾಗುತ್ತವೆ.

ಈ ಮೊಡವೆಗಳು ಕಪ್ಪು, ಬಿಳಿ ಶಿರ ಮತ್ತು ಕೆಂಪು ಕಲೆಗಳನ್ನು ಹೊಂದಿರುತ್ತವೆ. ಈ ಕಪ್ಪು ಮತ್ತು ಬಿಳಿಶಿರಗಳು ಮೂಡಲು ಕೂಡ ಕಾರಣವಿದೆ. ಅದೇನೆಂದರೆ ಕೆಲವೊಮ್ಮೆ ಕೂದಲಿನ ಕೋಶಿಕಗಳು(ಫಾಲಿಕಲ್ಸ್) ಮುಚ್ಚಿಕೊಂಡು ಬಿಡುವುದರಿಂದಾಗಿ ದೇಹದ ಜಿಡ್ಡು ಚರ್ಮದ ಹೊರಮೈಗೆ ಬರಲಾಗದ ಕಾರಣದಿಂದಾಗಿ ಅಲ್ಲಿಯೇ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಆಗ ಕಪ್ಪು ಶಿರ ಮತ್ತು ಬಿಳಿಶಿರದ ಮೊಡವೆಗಳು ಹೊರಬರುತ್ತವೆ. ಇದನ್ನು ಮೈಕ್ರೋಕಡೆಮನ್ ಎಂದು ಕರೆಯಲಾಗುತ್ತದೆ.

ಕೆಲವೊಮ್ಮೆ ಅಂದದ ಮುಖಕ್ಕೆ ಮೊಡವೆಗಳು ಕಪ್ಪು ಚುಕ್ಕೆಯಂತೆ ಕಾಣುತ್ತವೆ. ಇದರಿಂದ ಕೆಲವರು ಗಾಬರಿಗೊಳ್ಳುತ್ತಾರೆ. ಅಯ್ಯೋ ಹಾಳಾದ ಪಿಂಪಲ್ಸ್ ಬಂತಲ್ಲ ಎಂದು ಗೊಣಗುತ್ತಾರೆ. ತಮಗೆ ತೋಚಿದ ಕ್ರೀಮ್ ಗಳನ್ನೆಲ್ಲ ಬಳಸಿ ಅದು ಬರದಂತೆ ಮಾಡುವ ಪ್ರಯತ್ನ ಮಾಡುತ್ತಾರೆ. ಇಷ್ಟಕ್ಕೂ ಹದಿಹರೆಯದಲ್ಲಿ ಮೊಡವೆಗಳು ಬರುವುದು ಸಾಮಾನ್ಯ. ಅದಕ್ಕಾಗಿ ತಲೆಕೆಡಿಸಿಕೊಳ್ಳುವುದು ಬೇಕಾಗಿಲ್ಲ. ಆದರೆ ಮುಖದಲ್ಲಿ ಮೂಡಿದ ಮೊಡವೆಯನ್ನು ಚಿವುಟುವುದು, ಕೆರೆಯುವುದು ಹೀಗೆ ಮಾಡುವುದು ಒಳ್ಳೆಯದಲ್ಲ. ಅದನ್ನು ಅದರ ಪಾಡಿಗೆ ಬಿಟ್ಟು ಅದರ ತೀವ್ರತೆಯನ್ನು ನೋಡಿಕೊಂಡು ಚರ್ಮ ವೈದ್ಯರನ್ನು ಸಂಪರ್ಕಿಸಿ ಅವರ ಶಿಫಾರಸ್ಸಿನಂತೆ ಔಷಧೋಪಚಾರ ಮಾಡಬೇಕು.

ಕೆಲವೊಮ್ಮೆ ಸ್ವಚ್ಛತೆಯಿಲ್ಲದಾಗಲೂ ಮೊಡವೆಗಳು ಬರುವುದುಂಟು ಹೀಗಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮುಖವನ್ನು ಚೆನ್ನಾಗಿ ಆಗಾಗ್ಗೆ ತೊಳೆದು ಜಿಡ್ಡಿನಾಂಶ ಮುಖದಲ್ಲಿರದಂತೆ ನೋಡಿಕೊಳ್ಳಬೇಕು. ಕನಿಷ್ಟ ದಿನಕ್ಕೆ ಮೂರು ಬಾರಿಯಾದರೂ ಶುದ್ಧ ನೀರಿನಿಂದ ಮುಖವನ್ನು ತೊಳೆಯಬೇಕು.

ಒಂದು ವೇಳೆ ವೈದ್ಯರಿಂದ ಔಷಧಿ ಪಡೆದಿದ್ದೇ ಆದರೆ ಅವರು ನೀಡಿದ ಸಲಹೆಗಳನ್ನು ತಪ್ಪದೆ ಅನುಸರಿಸಬೇಕು. ಈಗಾಗಲೇ ಆಧುನಿಕತೆ ತಂತ್ರಜ್ಞಾನಗಳು ಬಂದಿರುವುದರಿಂದ ಅವುಗಳನ್ನು ವಾಸಿಮಾಡುತ್ತಾರೆ. ಆಹಾರ ಸೇವನೆಗೂ ಮೊಡವೆಗಳು ಮೂಡುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆಯಾದರೂ ಕೊಬ್ಬಿನಾಂಶವಿರುವ ಪದಾರ್ಥ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಚಾಕಲೆಟ್ ಗಳ ಅತಿಯಾದ ಸೇವನೆ ಒಳ್ಳೆಯದಲ್ಲ. ಇದು ಮೊಡವೆ ಮೂಡಲು ಸಹಾಯ ಮಾಡುತ್ತವೆ ಎನ್ನಲಾಗುತ್ತಿದೆ.

ಸಾಮಾನ್ಯವಾಗಿ ಎಲ್ಲರೂ ಹದಿಹರೆಯದಲ್ಲಿ ಮೊಡವೆಗಳ ಸಮಸ್ಯೆಯನ್ನು ಎದುರಿಸಿರುತ್ತಾರೆ. ಆದರೆ ಅದನ್ನೇ ಗಂಭೀರವಾಗಿ ಪರಿಗಣಿಸಿ ಹೌಹಾರಬೇಕಾಗಿಯೇನು ಇಲ್ಲ. ಅದು ಸೋಂಕು ರೋಗವಲ್ಲ. ಅದನ್ನು ಒಂದಷ್ಟು ಔಷಧಿ ಉಪಚಾರ, ಸ್ವಚ್ಛತೆಯನ್ನು ಅಳವಡಿಸಿಕೊಳ್ಳುವ ಮೂಲಕ ದೇಹ ಮತ್ತು ಮುಖದ ಬಗ್ಗೆ ಕಾಳಜಿ ವಹಿಸಿದ್ದೇ ಆದರೆ ಮೊಡವೆ ಮುಖದ ಮೇಲೆ ಬಾರದಂತೆ ನೋಡಿಕೊಳ್ಳುವುದು ಕಷ್ಟವೇನಲ್ಲ.