ಕ್ಷಯರೋಗ ವಿರುದ್ಧ ಜಾಗೃತಿಗಾಗಿ ಸಿದ್ಧಗೊಳ್ಳುತ್ತಿದೆ ಕಿರುಚಿತ್ರ

ಕ್ಷಯರೋಗ ವಿರುದ್ಧ ಜಾಗೃತಿಗಾಗಿ ಸಿದ್ಧಗೊಳ್ಳುತ್ತಿದೆ ಕಿರುಚಿತ್ರ

SK   ¦    Jun 11, 2019 03:48:24 PM (IST)
ಕ್ಷಯರೋಗ ವಿರುದ್ಧ ಜಾಗೃತಿಗಾಗಿ ಸಿದ್ಧಗೊಳ್ಳುತ್ತಿದೆ ಕಿರುಚಿತ್ರ

ಕಾಸರಗೋಡು : ಕ್ಷಯರೋಗ ವಿರುದ್ಧ ಪ್ರತಿರೋಧ ನಡೆಸುವ ಮತ್ತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಿರುಚಿತ್ರವೊಂದು ಸಿದ್ಧಗೊಳ್ಳುತ್ತಿದೆ.

ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ "ಕ್ಷಯರೋಗಂ ನಿಯಂತ್ರಿಕ್ಕಾನ್ ಸಮಯಮಾಯಿ( ಕ್ಷಯರೋಗ ನಿಯಂತ್ರಣಕ್ಕೆ ಸಮಯ ಬಂದಿದೆ)"ಎಂಬ ಹೆಸರಿನಲ್ಲಿ ಈ ಕಿರುಚಿತ್ರ ತಯಾರಾಗುತ್ತದೆ.

ಕ್ಷಯರೋಗ ವಿರುದ್ಧ ಸಾರ್ವಜನಿಕರು ನಡೆಸಬೇಕಾದ ಜಾಗೃತಿಗಳನ್ನು ಸರಳ ರೂಪದಲ್ಲಿ ದೃಶ್ಯಗಳ ಮೂಲಕ ತಿಳಿಹೇಳುವ ಯತ್ನ ಇಲ್ಲಿ ನಡೆಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಳನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ಭಾರತದ ಚಿನ್ನದ ಜಿಂಕೆ ಪಿ.ಟಿ.ಉಷಾ ಅವರೂ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇಂದಿನ ಸ್ಥಿತಿ ಇದೇ ರೀತಿ ಮುಂದುವರಿದರೆ 2022ನೇ ಇಸವಿ ವೇಳೆಗೆ ಜಗತ್ತಿನಲ್ಲಿ 40 ಮಿಲಿಯನ್ ಮಂದಿ ಕ್ಷಯರೋಗ ಬಾಧೆಯಿಂದ ಚಿಕಿತ್ಸೆ ಪಡೆಯಬೇಕಾದ ಭೀತಿಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಇದನ್ನು
p-2 ನಿಯಂತ್ರಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಅಂಗವಾಗಿ ಈ 5 ನಿಮಿಷ ಅವಧಿಯ ಕಿರುಚಿತ್ರ ನಿರ್ಮಾಣಗೊಳ್ಳುತ್ತಿದೆ. ಕೈತೊಳೆಯುವ ಸಹಿತ 8 ವೈಜ್ಞಾನಿಕ ರೀತಿಯ ಪ್ರಕ್ರಿಯೆಗಳನ್ನು ಇಲ್ಲಿ ತಿಳಿಸಲಾಗುತ್ತಿದೆ. ರೋಗಬಾಧೆಯಿರುವವರು ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಬಾರದು. ಧೂಮಪಾನ ಇತ್ಯಾದಿಗಳು ಈ ರೋಗವನ್ನು ಉಲ್ಭಣಾವಸ್ಥೆಗೆ ಒಯ್ಯುತ್ತವೆ. ಇದನ್ನು ತಡೆಯುವಲ್ಲಿ ಯುವಜನತೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಸಂದೇಶಗಳನ್ನು ಚಿತ್ರದಲ್ಲಿ ನೀಡಲಾಗುತ್ತದೆ.

ವಾಯುಜನ್ಯವಾದ ಈ ರೋಗದ ಅಣುಗಳು ರೋಗಬಾಧೆಯಿರುವವರು ಸೀನುವಾಗಲೂ, ಕೆಮ್ಮುವಾಗಲೂ ಹರಡುತ್ತವೆ. ಈ ಸಂದರ್ಭ ಕರವಸ್ತ್ರ ಬಳಸುವುದು ಅನಿವಾರ್ಯ. ಇತ್ಯಾದಿ ವಿಚಾರಗಳನ್ನು ಚಿತ್ರ ನಮಗೆ ತಿಳಿಸುತ್ತದೆ.
ಹೆಲ್ತ್ ಇನ್ ಸ್ಪೆಕ್ಟರ್ ಬಿ.ಅಶ್ರಫ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಜ್ಯೂನಿಯರ್ ಹೆಲ್ತ್ ಇನ್ಸ್ ಸ್ಪೆಕ್ಟರ್ ಆರ್.ವಿನುರಾಜ್, ಷಿನೋಜ್ ಚಾತ್ತಂಗಾಯಿ ಛಾಯಾಗ್ರಹಣ ನಡೆಸಿದ್ದಾರೆ. ಜೆ.ಎಚ್.ಐ.ರಾಜೇಶ್ ಸಂಕಲನಕಾರರಾಗಿದ್ದಾರೆ.ಜೆ.ಎಚ್.ಎ. ಭಾಸ್ಕರನ್ ಸಂಗೀತ ನೀಡಿದ್ದಾರೆ. ಜುಲೈ ತಿಂಗಳ ಮೊದಲ ವಾರ ಈ ಚಿತ್ರ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

ಚಿತ್ರೀಕರಣ ಆರಂಭ ಸಂಬಂಧ ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಿಚ್ ಆನ್ ನಡೆಸಿದರು. ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷ ಅಹಮ್ಮದ್ ಹಾಜಿ, ಪಂಚಾಯತ್ ಸದಸ್ಯ ಮಹಮೂದ್ ತೈವಳಪ್, ವೈದ್ಯಾಧಿಕಾರಿ ಡಾ.ಷಮೀರಾ ತನ್ವೀರ್, ಹೆಲ್ತ್ ಇನ್ಸ್ ಪೆಕ್ಟರರಾದ ಬಿ.ಅಶ್ರಫ್, ಜೆ.ಎಚ್.ಐ.ಗಳಾದ ವಿನುರಾಜ್, ಭಾಸ್ಕರನ್, ಕೆಮರಮ್ಯಾನ್ ಷಿನೋಜ್ ಚಾತಂಗಾಯಿ ಮೊದಲಾದವರು ಉಪಸ್ಥಿತರಿದ್ದರು.