ಯಶಸ್ವಿ 25 ದಿನ ಪೂರೈಸಿದ `ಏಸ'

ಯಶಸ್ವಿ 25 ದಿನ ಪೂರೈಸಿದ `ಏಸ'

Jun 18, 2017 03:13:50 PM (IST)

ಮಂಗಳೂರು: ಯು2 ಸಿನಿಮಾ ಟಾಕೀಸ್ ಲಾಂಛನದಲ್ಲಿ ತಯಾರಾದ ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ಅಜ್ಜಾಡಿ ನಿರ್ಮಿಸಿರುವ ಎಂ.ಎನ್. ಜಯಂತ್ ಚಿತ್ರಕತೆ ನಿರ್ದೆಶನದ ಶೋಭರಾಜ್ ಪಾವೂರು ಕತೆ, ಸಂಭಾಷಣೆ ಬರೆದಿರುವ `ಏಸ' ತುಳು ಚಲನ ಚಿತ್ರವು ಜೂ.19ಕ್ಕೆ ಯಶಸ್ವಿ 25 ದಿನಗಳ ಪ್ರದರ್ಶನವನ್ನು ಪೂರೈಸಿದೆ.

`ಏಸ' ಹೆಸರೇ ಹೇಳುವಂತೆ ಇಲ್ಲಿ ಬದುಕಿಗಾಗಿ ನಾನಾ ವೇಷ ತೊಡುವ ಮನುಷ್ಯರಿದ್ದಾರೆ. ಕೊನೆಯ ಕ್ಷಣದಲ್ಲಿ ಅವರೆಲ್ಲರ ಬಣ್ಣ ಕಳಚಿದಾಗ ಏನಾಗುತ್ತೆ ಅನ್ನೋದೇ ಚಿತ್ರದ ಕಥಾನಕ ಸಿನಿಮಾದಲ್ಲಿ `ಸ್ವರ್ಣಗುತ್ತು'ವಿನಲ್ಲಿ ನಡೆದು ಹೋದ ಘಟನಾವಳಿಯೊಂದರ ಹಿನ್ನೆಲೆ ಮತ್ತು ಮುಂದೆ ನಡೆಯುವ ಘಟನೆಗಳಿಗೆ ಗುತ್ತು ಸಾಕ್ಷಿಯಾಗುವ ಸನ್ನಿವೇಶವನ್ನು ನಿರ್ದೇಶಕರು ಮನಸ್ಸಿಗೆ ಮುಟ್ಟುವ ಹಾಗೆ ಕಟ್ಟಿಕೊಂಡಿದ್ದಾರೆ. ಚಿತ್ರವು ಸಂಪೂರ್ಣ ಫ್ಯಾಮಿಲಿ ಓರಿಯೆಂಟೆಡ್ ಆಗಿದ್ದರೂ ಹೊಟ್ಟೆತುಂಬಾ ನಗೋದಕ್ಕೆ ಕೊರತೆಯಿಲ್ಲ. ಸಿನಿಮಾದಲ್ಲಿ ಕುಸೇಲ್ದರಸೆ ನವೀನ್ ಡಿ.ಪಡೀಲ್ ಡಿಫರೆಂಟ್ ಪಾತ್ರವೊಂದರಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಯಕ್ಷಗಾನ ಕಲಾವಿದನೊಬ್ಬನ ಬದುಕಿನ ಕಥಾನಕ ಚಿತ್ರದಲ್ಲಿದೆ.

ಚಿತ್ರದಲ್ಲಿ ತುಳುನಾಡಿನ ಖ್ಯಾತ ಕಲಾವಿದರು ಬಣ್ಣ ಹಚ್ಚಿದ್ದಾರೆ. ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್ ಹಾಸ್ಯ ದಿಗ್ಗಜರು ಜೊತೆಯಾಗಿ ನಟಿಸಿದ್ದು ಚಿತ್ರದಲ್ಲಿ ತುಳುವಿನ ಖ್ಯಾತ ಕಲಾವಿದರ ದಂಡೇ ಇರಲಿದೆ.

ಚಿತ್ರಕ್ಕೆ ಕಥೆ ಬರೆದು ಸಂಭಾಷಣೆಯ ಜವಾಬ್ದಾರಿಯನ್ನು ಶೋಭರಾಜ್ ಪಾವೂರು ನಿಭಾಯಿಸಿದ್ದು, ಚಿತ್ರಕಥೆಯ ಜೊತೆ ನಿರ್ದೇಶಕರಾಗಿ ಕನ್ನಡ ಕಿರುತೆರೆಯ ಮಂದಿಗೆ ಚಿರಪರಿಚಿತರಾಗಿರುವ ಎಂ.ಎನ್.ಜಯಂತ್ ದುಡಿದಿದ್ದಾರೆ. ಚಿತ್ರದ ಎಡಿಟಿಂಗ್ ಪ್ರದೀಪ್ ಕೆಜಿಎಫ್ ನಿರ್ವಹಿಸಿದ್ದಾರೆ. ಇನ್ನು ಚಿತ್ರಕ್ಕೆ ಖ್ಯಾತ ಕೆಮರಾಮ್ಯಾನ್ ಮೋಹನ್ ಲೋಗನಾಥನ್ ಕೆಮರಾ ಹಿಡಿದಿದ್ದು, ಚಿತ್ರಕ್ಕೆ ಗುರು ಮತ್ತು ಗುರು ಸಂಗೀತ ನೀಡಿದ್ದು, ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ ಪ್ರಕಾಶ್, ಸಂತೋಷ್ ವೆಂಕಿ, ಸುಪ್ರಿಯಾ ಲೋಹಿತ್, ಸಂಗೀತಾ ಬಾಲಚಂದ್ರ, ನಿತಿನ್ ರಾಜ್ ಜೊತೆ ಭೋಜರಾಜ್ ವಾಮಂಜೂರು ಹಾಡಿರುವುದು ವಿಶೇಷವಾಗಿದೆ.

ಚಿತ್ರವನ್ನು ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಅಮೀನ್ ನಿರ್ಮಿಸಿದ್ದು ಚಿತ್ರ ಸೊಗಸಾಗಿ ಮೂಡಿಬಂದಿದೆ. ತುಳು ಚಿತ್ರಪ್ರೇಮಿಗಳನ್ನು ರಂಜಿಸಲು ಏನು ಅಗತ್ಯವೋ ಅದೆಲ್ಲವನ್ನೂ ಚಿತ್ರವು ಒಳಗೊಂಡಿದೆ. ಚಿತ್ರವು ಇದೀಗ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿದೆ ಎಂದು ಶೋಭರಾಜ್ ತಿಳಿಸಿದ್ದಾರೆ. ಚಿತ್ರದಲ್ಲಿ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ, ಸತೀಶ್ ಬಂದಲೆ, ರಂಜನ್ ಬೋಳೂರು, ಸುನಿಲ್ ನೆಲ್ಲಿಗುಡ್ಡೆ, ಭಾರ್ಗವಿ ನಾರಾಯಣ್, ದತ್ತಾತ್ರೇಯ ಕುರಗಟ್ಟಿ, ಭವ್ಯಶ್ರೀ ರೈ, ನಮಿತಾ ಕೂಳೂರು, ರೂಪಾ ವರ್ಕಾಡಿ, ಶಾಂತಿ ಶೆಣೈ ಮತ್ತಿತರರು ನಟಿಸಿದ್ದಾರೆ.