ಸಂಯಮದೊಂದಿಗಿನ ಛಲದಿಂದ ಕಲಾಸಾಧನೆ:ಮಂಜುನಾಥ ಎನ್

ಸಂಯಮದೊಂದಿಗಿನ ಛಲದಿಂದ ಕಲಾಸಾಧನೆ:ಮಂಜುನಾಥ ಎನ್

Dec 09, 2018 04:38:42 PM (IST)
ಸಂಯಮದೊಂದಿಗಿನ ಛಲದಿಂದ ಕಲಾಸಾಧನೆ:ಮಂಜುನಾಥ ಎನ್

ಉಜಿರೆ: ಕಲಾ ಜಗತ್ತಿನಲ್ಲಿ ಏನಾದರೂ ಸಾಧಿಸಬೇಕೆಂದರೆ ತಾಳ್ಮೆ ಹಾಗೂ ಛಲ ಅತ್ಯಗತ್ಯ ಎಂದು ಬಹುಮುಖ ಪ್ರತಿಭೆ, ಸಂಗೀತ, ಭರತನಾಟ್ಯ, ಯಕ್ಷಗಾನ ಕಲಾವಿದ, ಪ್ರಾಧ್ಯಾಪಕ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ವಸ್ತುಪ್ರದರ್ಶನ ವೇದಿಕೆಯಲ್ಲಿ ತಮ್ಮ ತಂಡದೊಂದಿಗೆ ಭಕ್ತಿ ರಸಮಂಜರಿ ಕಾರ್ಯಕ್ರಮ ಪ್ರಸ್ತುತಪಡಿಸಿದ ಬಳಿಕ ವಿಶೇಷ ಸಂದರ್ಶನದಲ್ಲಿ ಮಾತನಾಡಿ ಜಡತ್ವವನ್ನು ದೂರಗೊಳಿಸಿ ಕಠಿಣ ಪರಿಶ್ರವಿದ್ದರೆ ಕಲೆ ಒಲಿಯುತ್ತದೆ ಎಂದರು.

ಈಗಿನ ಅವಸರದ ಯುಗದಲ್ಲಿ ಭರತನಾಟ್ಯ ಅಥವಾ ಸಂಗೀತ ತರಗತಿಗೆ ಸೇರಿದ ಕೆಲವೇ ದಿನಗಳಲ್ಲಿ ವೇದಿಕೆ ಹತ್ತಬೇಕೆಂಬ ಗುರಿ ಹಲವರಿಗಿರುತ್ತದೆ. ಆದರೆ ಆ ಗುರಿ ತಲುಪಲು ಹಲವು ವರ್ಷಗಳ ಪರಿಶ್ರಮದ ಅಗತ್ಯವಿದೆ. ದಿಢೀರನೆ ಖ್ಯಾತ, ಹೆಸರಾಂತ ಕಲಾವಿದನಾಗಲು ಸಾಧ್ಯವಿಲ್ಲ. ಇತರ ಕಲಾವಿದರ ಕಲೆ ಹಾಗೂ ಪ್ರತಿಭೆಯನ್ನು ಗಮನಿಸುವುದರ ಮೂಲಕ ಸಾಕಷ್ಟು ವಿಷಯಗಳನ್ನು ಕಲಿಯಬಹುದು ಎಂದು ಅಭಿಪ್ರಾಯಪಟ್ಟರು.
ಹಲವು ಕಲೆಗಳ ನಡುವೆ ಶಾಸ್ತ್ರೀಯ ಕಲೆ ತನ್ನದೇ ಆದ ಉತ್ತುಂಗ ಸ್ಥಾನವನ್ನು ಉಳಿಸಿಕೊಂಡಿದೆ. ದೇಶ-ವಿದೇಶದಲ್ಲಿ ಭಾರತೀಯ ಕಲೆಗೆ ಬೆಲೆ ನೀಡುವವರಿದ್ದಾರೆ. ಒಬ್ಬ ಕಲಾವಿದ ಇಷ್ಟಪಟ್ಟು ತನ್ನ ಕಲೆಯನ್ನು ಪ್ರಸ್ತುತಪಡಿಸಿದರೆ ಪ್ರೇಕ್ಷಕರಿಗೆ ರಸಾನುಭವವಾಗುತ್ತದೆ. ಆ ಮೂಲಕ ಕಲೆಯ ಭಾವ ಜನರಿಗೆ ತಲುಪಲು ಸಾಧ್ಯ ಎಂದು ಹೇಳಿದರು.

ಹೊಸತಾಗಿ ಕಲಾಕ್ಷೇತ್ರಕ್ಕೆ ಕಾಲಿರಿಸುವವರು ಗುರುಮುಖೇನ ಕಲಿತರೆ ಸೂಕ್ತ ಮಾರ್ಗದರ್ಶನ ಲಭ್ಯವಾಗುತ್ತದೆ. ಕಲಿಕೆ ನಿರಂತರ ಪ್ರಕ್ರಿಯೆಯಾಗಿರುವುದರಿಂದ ಕಲಿಯುವ ಹಂಬಲ ಯಾವತ್ತೂ ಕ್ಷೀಣಿಸಬಾರದು. ಕೇವಲ ಸ್ಪರ್ಧೆ ಅಥವಾ ವೇದಿಕೆಗಳಲ್ಲಿ ಕಲಾ ಪ್ರದರ್ಶನಕ್ಕಾಗಿ ಕಲಿಯುವುದಲ್ಲ. ಬದಲಾಗಿ ಕಲೆಯ ಒಳಾರ್ಥವನ್ನು ತಿಳಿಯಲು ಕಲಿಯಿರಿ ಎಂದರು.

ಜನಪ್ರಿಯತೆ ಗಳಿಸಿರುª ಕಲಾವಿದರು ಮಾತ್ರ ಶ್ರೇಷ್ಠರಲ್ಲ; ಎಲೆಮರೆಕಾಯಿಯಂತಿರುವ ಹಲವು ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ ಅತ್ಯಗತ್ಯ. ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹೇರದೇ, ಮಕ್ಕಳು ತಮಗೆ ಬೇಕಾದ ಕ್ಷೇತ್ರವನ್ನು ಆಯ್ದುಕೊಳ್ಳುವಲ್ಲಿ ಸಹಕರಿಸಬೇಕು ಎಂಬ ಅನಿಸಿಕೆ ವ್ಯಕ್ತಪಡಿಸಿದರು.

ಭರತನಾಟ್ಯ ಹಾಗೂ ಸಂಗೀತ ಒಂದಕ್ಕೊಂದು ಸಂಬಂಧ ಹೊಂದಿರುವ ಕಾರಣ ಎರಡು ಕಲೆಗಳ ಕಲಿಕೆ ಉಪಯುಕ್ತವಾಗಿದೆ. ಮುಂದಿನ ದಿನಗಳನ್ನೇ ಕಲಾಕ್ಷೇತ್ರದಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂಬ ಹಂಬಲವಿದೆಯೆಂದು ಹೇಳಿದರು.

ಕಳೆದ 21 ವರ್ಷಗಳಿಂದ ಭರತನಾಟ್ಯ ಅಭ್ಯಸಿಸುತ್ತಿರುವ ಹಾಗೂ 12 ವರ್ಷಗಳಿಂದ ಸಂಗೀತ ಕಲಿಯುತ್ತಿರುವÀ ಮಂಜುನಾಥ ಎನ್. ಅವರಿಗೆ ತಮ್ಮ ತಾಯಿಯ ಸಂಗೀತ ಹಾಗೂ ಕಲಾಸಕ್ತಿಯೇ ಪ್ರೇರಣೆ. ಮಂಜುನಾಥ್ ಅವರು ಬಾಲಕೃಷ್ಣ ಮಂಜೇಶ್ವರ್, ಸುದರ್ಶನ್ ಎಮ್ ಎಲ್ ಭಟ್ ಹಾಗೂ ವಸುಂಧರಾ ದೊರೆಸ್ವಾಮಿ ಅವರಿಂದ ಭರತನಾಟ್ಯ ಅಭ್ಯಸಿಸಿದ್ದಾರೆ. ಉಂಡೆಮನೆ ಕೃಷ್ಣ ಭಟ್ ಅವರಿಂದ ತೆಂಕುತಿಟ್ಟು ಯಕ್ಷಗಾನ ಕಲಿತಿದ್ದಾರೆ. ಶಾಸ್ತ್ರೀಯ ಸಂಗೀತವನ್ನು ಕಾಂಚನ ನಾರಾಯಣ್ ಭಟ್ ಹಾಗೂ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಅವರಿಂದ ಕಲಿತಿದ್ದಾರೆ.

ಉಪ್ಪಿನಂಗಡಿಯಲ್ಲಿ ಶ್ರೀ ಮಂಜುನಾಥ ನೃತ್ಯ ಕಲಾ ಶಾಲೆಯ ಮೂಲಕ ಭರತನಾಟ್ಯ ತರಗತಿ ನಡೆಸುತ್ತಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿರುವ ಇವರು ಕೇರಳ, ತಮಿಳುನಾಡು, ಮುಂಬೈ ಸೇರಿದಂತೆ ಹಲವೆಡೆ ತಮ್ಮ ಕಲೆಯನ್ನು ಪ್ರಸ್ತುತಪಡಿಸಿದ್ದಾರೆ.