ಬಿಡುಗಡೆಗೆ ಸಿದ್ಧಗೊಂಡಿದೆ ವಿರುಪಾ ಚಿತ್ರ

ಬಿಡುಗಡೆಗೆ ಸಿದ್ಧಗೊಂಡಿದೆ ವಿರುಪಾ ಚಿತ್ರ

Feb 07, 2018 04:44:18 PM (IST)
ಬಿಡುಗಡೆಗೆ ಸಿದ್ಧಗೊಂಡಿದೆ ವಿರುಪಾ ಚಿತ್ರ

ಮಂಗಳೂರು: ಉದ್ಯಮಿ ಡ್ಯಾಪ್ನಿ ನೀತು ಡಿಸೋಜ ನಿರ್ಮಾಣದ ಪುನೀಕ್ ಶೆಟ್ಟಿ ನಿರ್ದೇಶನದ `ವಿರುಪಾ' ಕನ್ನಡ ಚಿತ್ರ ಈಗಾಗಲೇ ಶೂಟಿಂಗ್ ಬಹುತೇಕ ಪೂರ್ಣಗೊಳಿಸಿ, ಸಂಕಲನ ಹಂತದಲ್ಲಿದೆ. ಶೀಘ್ರದಲ್ಲಿ ಈ ಸಿನೆಮಾ ರಿಲೀಸ್ ಆಗಲಿದೆ ಎಂದು ಚಿತ್ರ ನಿರ್ಮಾಣ ತಂಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

ಮಕ್ಕಳನ್ನೇ ಮುಖ್ಯ ಕಥೆಯನ್ನಿಟ್ಟು ಮಕ್ಕಳ ಮೂಲಕವೇ ನಡೆಸಿದ ಅಪರೂಪದ ಚಿತ್ರವಿದು. ಪ್ರವಾಸೋದ್ಯಮದಲ್ಲಿ ಜಗತ್ತಿನಲ್ಲಿ ಗುರುತಿಸಿಕೊಂಡ ಹಂಪಿಯಲ್ಲಿ ವಿರುಪಾ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಟನಾ ಕೌಶಲ್ಯತೆ ಅರಿಯದ ಮಕ್ಕಳಿಗೆ ಮೊದಲು ನಟನಾ ಚಾತುರ್ಯತೆಯನ್ನು ತಿಳಿಸಿಕೊಟ್ಟು ಆ ಬಳಿಕ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದಲ್ಲಿ ಬರುವ ಪಾತ್ರಧಾರಿಗಳು ಸ್ಥಳೀಯರು ಹಾಗೂ ಕಥೆಯಲ್ಲಿ ಬರುವ ಸನ್ನಿವೇಶವನ್ನು ಸ್ವತಃ ಅನುಭವಿಸಿದವರೇ ಆಗಿದ್ದಾರೆ ಎಂದು ಚಿತ್ರತಂಡ ವಿವರ ನೀಡಿದೆ.

ಹಂಪಿಯ ಅಲ್ಲಿನ ಗೈಡ್, ಅಜ್ಜಿಯ ಪಾತ್ರ, ಹೊಟೇಲ್ ನಲ್ಲಿ ಇರುವ ವಿದೇಶಿಗ ಸೇರಿದಂತೆ ಯಾರೆಲ್ಲಾ ಅಲ್ಲಿ ಜೀವನ ನಿರ್ವಹಿಸುತ್ತಿದ್ದಾರೋ ಅವರನ್ನೇ ಮುಖ್ಯ ಭೂಮಿಕೆಯಲ್ಲಿಟ್ಟು ಸಿನೆಮಾ ಮಾಡಲಾಗಿದೆ. ಹಂಪಿಯ ಸುಂದರ ಹಾಗೂ ಮನಮೋಹಕ ದೇಶ್ಯವನ್ನು ಈ ಸಿನೆಮಾದಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ ಎಂದು ತಿಳಿಸಿದೆ.

ವಿಶೇಷವಾಗಿ ಈ ಸಿನೆಮಾವನ್ನು ಸಿಂಕ್ ಸೌಂಡ್ ಮಾದರಿಯಲ್ಲಿ ಚಿತ್ರೀಕರಿಸಲಾಗಿದೆ. ಹೀಗಾಗಿ ಶೂಟಿಂಗ್ ಮಾಡುವ ಅಲ್ಲಿನ ಧ್ವನಿಯನ್ನೇ ಈ ಸಿನಿಮಾದಲ್ಲಿ ಹಿಡಿದಿಡಲಾಗಿದೆ. ಈಗಾಗಲೇ ಒಂದು ತಿಂಗಳ ಕಾಲ ಹಂಪಿ ಆಸುಪಾಸಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಮುಂದಿನ ಒಂದು ತಿಂಗಳ ಒಳಗೆ ಫ್ರಾನ್ಸ್ ಗೆ ತೆರಳಿ ಕೊನೆಯ ಹಂತದ ಶೂಟಿಂಗ್ ನಡೆಸಲು ತೀರ್ಮಾನಿಸಲಾಗಿದೆ. ಡಿಕ್ಸನ್ ಜಾಕಿ ಡಿಸೋಜ ಅವರು ಕಾರ್ಯಕಾಲ ನಿರ್ಮಾಪಕರಾಗಿದ್ದಾರೆ.

ಅನಂತ್ ರಾಜ್ ಅರಸ್ ಚಿತ್ರದ ಛಾಯಾಗ್ರಹಣ, ಮಹಾವೀರ್ ಸಬಣ್ಣವರ್ ಶಬ್ಧ ಹಾಗೂ ಅವಿನಾಶ್ ಕಾವೂರು ಸಂಕಲನದಲ್ಲಿ ಕೈಜೋಡಿಸಿದ್ದಾರೆ.

More Images